ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಕರಾವಳಿ ಭಾಗದ ಅಭಿವೃದ್ಧಿ ಮತ್ತು ಯುವಜನತೆಗೆ ಉದ್ಯೋಗ ಸೃಷ್ಟಿಯ ಕುರಿತು ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕರಾವಳಿ ಪ್ರದೇಶವು ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದು,ಇಲ್ಲಿ ಅಭಿವೃದ್ದಿ ಮಾಡುವುದರಲ್ಲಿ ಬಿಜೆಪಿ ಸರ್ಕಾರ ಸೋತಿದೆ.ಗೋವಾ, ಕೇರಳ ರೀತಿಯಲ್ಲಿ ಅಭಿವೃದ್ದಿ ಮಾಡಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಸುಂದರವಾದ ಸಮುದ್ರ ತೀರಗಳು ಮತ್ತು ದೇವಸ್ಥಾನಗಳಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಲು ಅವಕಾಶವಿದೆ. ಮಂಗಳೂರು ಬಂದರಿನ ಆಧುನೀಕರಣದಿಂದ ರಫ್ತು ಮತ್ತು ಆಮದು ವ್ಯವಹಾರ ಹೆಚ್ಚಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದಿದ್ದಾರೆ.
ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಐಟಿ ಕಂಪನಿಗಳನ್ನು ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಮಂಗಳೂರು ಮತ್ತು ಉಡುಪಿಗೆ ತರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ.
ಸ್ಥಳೀಯ ಕೌಶಲ್ಯಾಭಿವೃದ್ಧಿ: ಕರಾವಳಿಯ ಯುವಕರು ಶಿಕ್ಷಣವಂತರಾಗಿದ್ದರೂ ಉದ್ಯೋಗಕ್ಕಾಗಿ ಹೊರರಾಜ್ಯ ಅಥವಾ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಸ್ಥಳೀಯವಾಗಿಯೇ ತಾಂತ್ರಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟ ಮತ್ತು ಕರಾವಳಿಯ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು.ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಪರಿಸರಕ್ಕೆ ಹಾನಿಯಾಗದಂತೆ ಗುರುತಿಸುವುದು ಮುಖ್ಯವಾಗಿದೆ.
