ಬೇಗ ಮರೆಯುವರು,
ನೆನಪಿರಲೆಂದು
ನೋಟಿನಲ್ಲಿ ಬಂಧಿಸಿದರು
ಹಣವೇ ಮುಖ್ಯ, ಗುಣವಲ್ಲ
ಎಂದು ಸಾರಿ ಹೇಳಿದರು

ಉಸಿರಿಲ್ಲದ ಮಳಿಗೆಗೆ ಇಟ್ಟರು ನಿನ್ನ ಹೆಸರು
ದೇಶ ಕಟ್ಟಲಿದ್ದ ವಿಚಾರ ಈಗೆಲ್ಲಿ ಹೋಯ್ತು
ಬೇಡವೆಂದಿದೆ, ಬೇಕೆನ್ನುವಷ್ಟು ಆವರಿಸಿಕೊಳ್ಳುತ್ತಿದೆ
ಇದು ಕಣ್ಣಿಗೆ ಕಂಡರೂ ಕಾಣದಂತೆ
ಬಂಧಿಸಿದರು ನಿನ್ನ ನೋಟಿನಲ್ಲಿ

ಕೊಲೆ ಅಪರಾಧವಂತೆ
ಕೊಂದವರು ದೇಶಭಕ್ತ ಅಂತೆ
ಕಾನೂನು ಎಲ್ಲರಿಗಿದ್ದರೂ
ಶಿಕ್ಷೆ ಮಾತ್ರ ಬಡವರಿಗಂತೆ
ಕೇಳಿದರೆ ದೇಶದ್ರೋಹಿ ಪಟ್ಟ
ಪ್ರಶ್ನಿಸಿದರೆ ಬಿಳಿ ಅಂಗಿಗೆ ಒಂದು ಅಂಕಿ

ಇಷ್ಟೇ. ಎಷ್ಟು ಮಾಡಿದರೂ
ಕೊನೆಗೆ ಮರೆಯುವರು ನಿನ್ನ
ಹೇಳಿಕೊಳ್ಳಲಷ್ಟೇ ನೀನು ಸರಿ
ಪಾಲಿಸುವುದಕ್ಕಲ್ಲ
ಮತ್ತೆ ಮುಂದಿನ ವರುಷ ಆಚರಣೆಗೆ
ನೋವು ಕೊಡಲು ಸಾಧ್ಯವಿರುತ್ತದೆ

ಹೋಗಿ ಬಾ
ಬಂಧಿ ಆಗದಿರು

  • ಪುವಾ

ಪುವಾ ಎಂಬ ಕಾವ್ಯನಾಮದ ಪುನೀತ್ ವಾಣಿ ಮೂಲತಃ ಬೆಂಗಳೂರಿನವರು. ಜನನ ಜನವರಿ 1, 1997 ರಲ್ಲಿ. ಸಾಹಿತ್ಯ, ರಂಗಭೂಮಿ, ಜಾನಪದ ಕಲೆಗಳು, ಸಿನೆಮಾ ಹಾಗೂ ಸಮಕಾಲೀನ ವಿದ್ಯಾಮಾನಗಳ ಬಗ್ಗೆ ಅತ್ಯಂತ ಆಸಕ್ತಿವುಳ್ಳ ಇವರು ಉತ್ತಮ ಚರ್ಚಾಪಟುವೂ ಕೂಡಾ ಹೌದು. ವೀರಗಾಸೆ ಜಾನಪದ ಕಲಾಪ್ರಕಾರದಲ್ಲಿ ಕಲಾ ಪ್ರದರ್ಶನ ನೀಡುವ ಇವರು ಹಲವು ನಾಟಕಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಕಲೆಗೆ ತೆರೆದುಕೊಂಡಿರುವ ಪುನೀತ್ ಅವರು ಫೀನಿಕ್ಸ್ ಎನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿರುತ್ತಾರೆ. ಪುನೀತ್ ಅವರು ತನ್ನ ತಾಯಿಯ ಹೆಸರಾದ ವಾಣಿ ಯನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಅಭಿವ್ಯಕ್ತಿ ಮಾಡುತ್ತಾರೆ. ಹಾಗೂ ಕಾಲೇಜು ರಂಗಭೂಮಿಯಲ್ಲಿ ಮೂರು ವರ್ಷಗಳ ಕಾಲ ಸಕ್ರಿಯವಾಗಿ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೋಮಾ ಕೋರ್ಸ್ ಅನ್ನು ರಂಗಚಿರಂತನದಿಂದ ಪೂರೈಸಿರುತ್ತಾರೆ. ತಮ್ಮ ಸಾಮಾಜಿಕ ಕಳಕಳಿಯನ್ನು ಸಾಹಿತ್ಯ, ಕಿರುಚಿತ್ರ ಮುಂತಾದ ಸೃಜನಶೀಲ ಮಾರ್ಗಗಳಲ್ಲಿ ವ್ಯಕ್ತಪಡಿಸುವ ಇವರು, ನೀಲಿ ಟಾರ್ಪಲ್ ಮತ್ತು ಜೀವಪರರು ಕವನಗಳ ಮೂಲಕ ಅದನ್ನು ಸಾದರ ಪಡಿಸಿದ್ದಾರೆ. ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

Leave a Reply

Your email address will not be published. Required fields are marked *