ಅಕ್ಟೋಬರ್ ಒಂದನೇ ತಾರೀಖಿನ ಸರ್ವೊತ್ತು
ಕಣ್ಣು ಬಿಟ್ಟೆ
ಎದೆಯ ಮೇಲೆ ಕುಳಿತ ಆಕೃತಿಯೊಂದು
ಮಿದುಳಿನ ಒಳಗೆ ಕೈಯ್ಯಾಡಿಸುತ್ತಿತ್ತು
ಮರಗಟ್ಟಿದಂತ ಕಾಲಿಗೆ
ಎಣ್ಣೆ ಸವರಿ ನೀವುತ್ತಿತ್ತು
ಯಾಕೆ ಬಟ್ಟೆ ತೊಟ್ಟಿಲ್ಲ? ಕತ್ತಲೆಂದೇ?
ಇಲ್ಲ ಮಗೂ,
ಹಗಲೂ ನಾನು ಬೆತ್ತಲೆಯೇ
ಆರಾಮಾಗಿ ಮಲಗು ಎಂದಿತು
ಎದ್ದು ಕುಳಿತು ತಲೆಯೆತ್ತಿದೆ
ಗೋಡೆಗೆ ನೇತಾಕಿದ ಗೋಲ್ಡು ಫ್ರೇಮಿನ
ಅಂಬೇಡ್ಕರರ ಚಿತ್ರ ನಗುತ್ತಿತ್ತು
ಕಣ್ಣುಚ್ಚಿದೆ, ತಲೆಯನ್ನು ಸವರುತ್ತಾ
ಎದ್ದೇಳು ಮಗೂ ಬೆಳಗಾಯಿತು ಎಂದಿತು
ಅಯ್ಯೋ ಇನ್ನೂ ಕತ್ತಲು ಎಂದೆ
ನನ್ನವರಿಗೆ ಬೆಳಗಾಗುವುದಿಲ್ಲ ಬಿಡು
ಮುಖದಲ್ಲಿ ವಿಷಾದದ ಗೆರೆಗಳಾದವು
ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು?
ಓದಿ ನೀರು ಕುಡಿಯಲು ಬಂದಾಗ
“ಕಣ್ಣು ಮಂಜಾದಾಗ ಕನ್ನಡಕ
ನಿತ್ರಾಣವಾದಾಗ ಕೋಲು
ಮನುಷ್ಯನಿಗೆ ಅಗತ್ಯ”
ಹಾಡುತ್ತಾ ಕುಣಿಯುತ್ತಿದ್ದ ಮಗಳ
ಕಾಲ್ಗೆಜ್ಜೆಯಲ್ಲೊಂದು ಉದುರಿ
ಅಂಗಳದತ್ತ ಹೋಗುತ್ತಿತ್ತು