ತಿರುವನಂತಪುರಂ: ಫುಟ್ಬಾಲ್ ಜ್ವರದಿಂದ ಬಳಲುತ್ತಿರುವ ಕೇರಳದಲ್ಲಿ, ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಸೋಮವಾರ (ಜುಲೈ 20) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ರಜೆ ಘೋಷಣೆಗೆ ಕಾರಣವೇನು? ಭಾನುವಾರ ಮಧ್ಯರಾತ್ರಿ (ಭಾರತೀಯ ಕಾಲಮಾನ 12:30ಕ್ಕೆ) ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಪ್ರತಿಷ್ಠಿತ ಫೈನಲ್ ಪಂದ್ಯ ನಡೆಯಲಿದ್ದು, ಪಂದ್ಯ ಮುಗಿಯುವ ಹೊತ್ತಿಗೆ ಬೆಳಗಿನ ಜಾವವಾಗಲಿದೆ. ತಡರಾತ್ರಿಯವರೆಗೆ ಎಚ್ಚರಿದ್ದು ಪಂದ್ಯ ವೀಕ್ಷಿಸುವ ವಿದ್ಯಾರ್ಥಿಗಳಿಗೆ ಸೋಮವಾರ ಬೆಳಗ್ಗೆ ತರಗತಿಗಳಿಗೆ ಹಾಜರಾಗುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಜನಪ್ರತಿನಿಧಿಗಳಿಂದ ರಜೆಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಸಚಿವ ಎನ್. ಶಂಶುದ್ದೀನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹರ್ಷ ವ್ಯಕ್ತಪಡಿಸಿ, “ಈಗ ಖುಷಿಯಾಯಿತೇ ಮಕ್ಕಳೇ?” ಎಂದು ಪೋಸ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದ್ದರೂ, ಮೊದಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ (CMO) ಸ್ಪಷ್ಟಪಡಿಸಿದೆ. ಮೊದಲೇ ನಿಶ್ಚಯಿಸಿರುವ ಸಮಯದಂತೆಯೇ ಪರೀಕ್ಷೆಗಳು ನಡೆಯಲಿವೆ.

ಫುಟ್ಬಾಲ್ ಪ್ರೇಮಿಗಳ ಸಂಭ್ರಮ: ಕೇರಳದಲ್ಲಿ ಫುಟ್ಬಾಲ್ ಎಂದರೆ ಜನರಿಗೆ ಅಚ್ಚುಮೆಚ್ಚು. ಸರ್ಕಾರದ ಈ ನಿರ್ಧಾರವನ್ನು ಫುಟ್ಬಾಲ್ ಅಭಿಮಾನಿಗಳು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳು ಸ್ವಾಗತಿಸಿವೆ. ರಾಜ್ಯದಾದ್ಯಂತ ಅಭಿಮಾನಿ ಸಂಘಗಳು ಹಾಗೂ ಕ್ಲಬ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಪಂದ್ಯ ವೀಕ್ಷಣೆಗಾಗಿ ಬೃಹತ್ ಎಲ್ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ, ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಸಜ್ಜಾಗಿವೆ.

Leave a Reply

Your email address will not be published. Required fields are marked *