ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಕಲಿ ಮೆಡಿಸಿನ್ ಮತ್ತು ಅವಧಿ ಮುಗಿದ ಔಷಧಿಗಳ ಜಾಲವನ್ನು ಬೇರು ಸಹಿತ ಕಿತ್ತೆಸೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಬಿಡದಿ ಬಳಿ ಪತ್ತೆಯಾದ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧ ಜಾಲದ ಬೆನ್ನತ್ತಿರುವ ಸರ್ಕಾರ, 6 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಇದೀಗ ಈ ಅಂತರರಾಜ್ಯ ದಂಧೆಯ ಮೂಲವನ್ನು ಹುಡುಕಿಕೊಂಡು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದಂಧೆಯ ಹಿಂದಿನ ಕರಾಳ ಸತ್ಯ

ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಕಡಿಮೆ ಬೆಲೆಯ ಹಾಗೂ ಅವಧಿ ಮುಗಿದ ಔಷಧಿಗಳನ್ನು ತಂದು, ಅದಕ್ಕೆ ಪ್ರತಿಷ್ಠಿತ ಮಲ್ಟಿ-ನ್ಯಾಷನಲ್ ಕಂಪನಿಗಳ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು.

  • ಕಾರ್ಯಾಚರಣೆ ಎಲ್ಲಿ?: ಬಿಡದಿ ಸಮೀಪದ ಕುರುಬರ ಕರೇನಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದಾಗ ಈ ಬೃಹತ್ ಜಾಲ ಬೆಳಕಿಗೆ ಬಂದಿದೆ.
  • ಬಂಧನ ಮತ್ತು ಜಪ್ತಿ: ದಾಳಿಯಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ನಕಲಿ ಔಷಧಿಗಳು, ರಿ-ಪ್ಯಾಕಿಂಗ್ ಯಂತ್ರಗಳು ಹಾಗೂ ಲೇಬಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಐಸಿಯು ರೋಗಿಗಳ ಜೀವದ ಜೊತೆ ಚೆಲ್ಲಾಟ!

ಯಾವುದೇ ಪರವಾನಗಿ ಇಲ್ಲದ ಈ ಫಾರ್ಮ್‌ಹೌಸ್‌ನಲ್ಲಿ, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುವ ರೋಗಿಗಳಿಗೆ, ನ್ಯುಮೋನಿಯಾ ಹಾಗೂ ಇತರೆ ಗಂಭೀರ ಸೋಂಕುಗಳಿಗೆ ಬಳಸುವ ದುಬಾರಿ ಆಂಟಿಬಯೋಟಿಕ್ಸ್ ಮಾತ್ರೆಗಳನ್ನೇ ನಕಲಿಯಾಗಿ ಸಿದ್ಧಪಡಿಸಲಾಗುತ್ತಿತ್ತು. ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಬಳಸುವ ಮೆಡಿಸಿನ್ ಕೂಡ ನಕಲಿಯಾಗಿರುವುದು ಸಾರ್ವಜನಿಕರು ಹಾಗೂ ವೈದ್ಯಕೀಯ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮುಂದಿನ ತನಿಖೆಯ ಹಾದಿ

ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ರಚನೆಯಾಗಿರುವ SIT ತಂಡವು ತನಿಖೆಯನ್ನು ಚುರುಕುಗೊಳಿಸಿದೆ. ಈ ನಕಲಿ ಔಷಧಿಗಳು ಈಗಾಗಲೇ ಯಾವೆಲ್ಲಾ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು ಹಾಗೂ ರೋಗಿಗಳಿಗೆ ಸರಬರಾಜಾಗಿದೆ ಎಂಬುದರ ಬಗ್ಗೆ ವ್ಯಾಪಕ ತನಿಖೆ ನಡೆಯುತ್ತಿದೆ. ಅಲ್ಲದೆ, ಈ ದಂಧೆಯ ಹಿಂದಿರುವ ಪ್ರಮುಖ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದೆ.

Leave a Reply

Your email address will not be published. Required fields are marked *