ಬೆಂಗಳೂರು: ಬಹುಭಾಷಾ ನಟ ಹಾಗೂ ಹೋರಾಟಗಾರ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರ ಹೆಸರು ಬೆಂಗಳೂರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (Special Intensive Revision – SIR) ಕಾರ್ಯಕ್ರಮದ ವೇಳೆ ತಮ್ಮ ಹೆಸರು ಕೈಬಿಡಲಾಗಿದೆ ಎಂದು ಸ್ವತಃ ಪ್ರಕಾಶ್ ರೈ ಅಸಮಾಧಾನ ಹೊರಹಾಕಿದ್ದಾರೆ.

ಇದು ಒಳ್ಳೆ ಜೋಕ್’ ಎಂದ ಪ್ರಕಾಶ್ ರೈ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್ ರೈ, “ಸ್ನೇಹಿತರೆ, ನಾನು ನಿಮ್ಮೊಂದಿಗೆ ಒಂದು ಜೋಕ್ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಬೆಂಗಳೂರು ಕ್ಷೇತ್ರದಿಂದ ಮತದಾನದ ಹಕ್ಕನ್ನು ಕಳೆದುಕೊಂಡಿರುವ ೬೫ ಲಕ್ಷ ಮತದಾರರಲ್ಲಿ ನಾನೂ ಒಬ್ಬ. ಇದು ಒಳ್ಳೆ ಜೋಕ್ ಅಲ್ವಾ? ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಥಿಯೇಟರ್ ಮಾಡಿದ್ದು ಇದೇ ಕ್ಷೇತ್ರದಲ್ಲಿ. ನಿಮ್ಮ ಮಾಹಿತಿಗಾಗಿ, ನಾನು ಇದೇ ಕ್ಷೇತ್ರದಿಂದ ಎಂಪಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದೆ,” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರದಲ್ಲಿರುವವರಿಗೆ ಪರೋಕ್ಷ ಟಾಂಗ್

ಯಾವಾಗಲೂ ತಮ್ಮ #justasking ಅಭಿಯಾನದ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರಕಾಶ್ ರೈ, “ನಿಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ನಿಮ್ಮ ಅಧಿಕಾರವನ್ನು ಬಳಸಿ ಕೆಲವೇ ಕೆಲವು ನಾಗರಿಕರ ಮತದಾನದ ಹಕ್ಕನ್ನು ನೀವು ಕಸಿದುಕೊಳ್ಳಬಹುದು. ಆದರೆ, ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ನಮ್ಮ ಶಕ್ತಿಯನ್ನು ತಡೆಯಲು ಸಾಧ್ಯವೇ?” ಎಂದು ಪರೋಕ್ಷವಾಗಿ ಆಡಳಿತ ವರ್ಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ತಮ್ಮ ವೋಟರ್ ಐಡಿಯನ್ನು ಮರಳಿ ಪಡೆಯಲು ಯಾವೆಲ್ಲಾ ಪ್ರಕ್ರಿಯೆಗಳನ್ನು ಎದುರಿಸಬೇಕು ಎಂಬುದನ್ನು ನೋಡಲು ತಾನು ಸಿದ್ಧ ಎಂದು ಅವರು ಸವಾಲು ಹಾಕಿದ್ದಾರೆ.

ಹಿನ್ನೆಲೆ ಏನು?

ಕರ್ನಾಟಕದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು (SIR) ಭರದಿಂದ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಮತ್ತು ನಕಲಿ ಮತದಾರರನ್ನು (ASDDO) ಗುರುತಿಸಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಲಕ್ಷಾಂತರ ಜನರ ಹೆಸರು ಈ ಪಟ್ಟಿಯಲ್ಲಿ ಫ್ಲ್ಯಾಗ್ ಆಗಿದ್ದು, ಪರಿಶೀಲನೆ ನಡೆಯುತ್ತಿದೆ.

ಇದಕ್ಕೂ ಮುನ್ನ ಪ್ರಕಾಶ್ ರೈ ಅವರು ತಮಿಳುನಾಡು, ತೆಲಂಗಾಣ ಹಾಗೂ ಕರ್ನಾಟಕ ಸೇರಿ ಒಟ್ಟು ಮೂರು ರಾಜ್ಯಗಳ ನಾಲ್ಕು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತ ಪ್ರಕರಣವೊಂದರಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬೆಂಗಳೂರು ನ್ಯಾಯಾಲಯವೊಂದು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ (NBW) ಕೂಡ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *