ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲ ಎಂಬ ವಾಸ್ತವವನ್ನು ಮನವರಿಕೆ ಮಾಡುವಲ್ಲಿ ರಾಜ್ಯದ ಅಧಿಕಾರಿಗಳು ತೀವ್ರ ಪ್ರಯತ್ನ ಪಟ್ಟರಾದರೂ, ಸಮಿತಿಯು ಕರ್ನಾಟಕದ ವಾದವನ್ನು ತಳ್ಳಿಹಾಕಿ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದೆ.
ಕರ್ನಾಟಕದ ವಾದವೇನಿತ್ತು? ಸಭೆಯಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ಅಧಿಕಾರಿಗಳು, ಪ್ರಸ್ತುತ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. “ರಾಜ್ಯದ ರೈತರ ಬೆಳೆಗಳಿಗೆ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕಿದೆ. ಹೀಗಿರುವಾಗ, ಪ್ರಸ್ತುತ ಇರುವ ಕಠಿಣ ಸನ್ನಿವೇಶದಲ್ಲಿ ತಮಿಳುನಾಡಿಗೆ ಹೆಚ್ಚುವರಿ ಕಾವೇರಿ ನೀರು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ” ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರು.
ಆದರೆ, ರಾಜ್ಯದ ಈ ಯಾವುದೇ ವಾದಗಳನ್ನು ಮಾನ್ಯ ಮಾಡದ ಸಮಿತಿಯು, ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲೇಬೇಕು ಎಂದು ಆದೇಶ ಹೊರಡಿಸಿದೆ.
ಮುಂದಿನ ಹೆಜ್ಜೆ ಏನು? ಪ್ರಾಧಿಕಾರದ ಮೊರೆ ಹೋದ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಈ ಶಿಫಾರಸನ್ನು ಇದೀಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಪ್ರಶ್ನಿಸಲು ಹಾಗೂ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, “ಸಮಿತಿಯ ನಿರ್ಧಾರದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಕಾನೂನು ತಜ್ಞರು ಹಾಗೂ ಜಲಸಂಪನ್ಮೂಲ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
ಪ್ರಾಧಿಕಾರದ ನಿರ್ಧಾರವೇ ಅಂತಿಮ ಸಿಡಬ್ಲ್ಯುಆರ್‌ಸಿ (CWRC) ಮಾಡಿರುವ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ (CWMA) ಪ್ರಶ್ನಿಸಲು ಅವಕಾಶವಿದೆ. ಆದರೆ, ಅಂತಿಮವಾಗಿ ಪ್ರಾಧಿಕಾರ ತೆಗೆದುಕೊಳ್ಳುವ ನಿರ್ಧಾರವೇ ಶಾಸನಬದ್ಧವಾಗಿರುತ್ತದೆ. ಒಂದು ವೇಳೆ ಮೇಲ್ಮನವಿಯ ವಿಚಾರಣೆ ನಡೆಸುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದರೆ, ಆಗ ಕರ್ನಾಟಕ ಅನಿವಾರ್ಯವಾಗಿ ನೀರು ಬಿಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ.
