ಬೆಂಗಳೂರು: ಕರುನಾಡಿನ ನೆಚ್ಚಿನ ನಟ, ಪವರ್ ಸ್ಟಾರ್ ದಿ. ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಅವರು ಇದೀಗ ಹೊಸ ಉದ್ಯಮವೊಂದಕ್ಕೆ ಕಾಲಿಟ್ಟಿದ್ದು, ತಂದೆಯ ಬಹುದೊಡ್ಡ ಆಸೆಯೊಂದನ್ನು ಈಡೇರಿಸಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗಳಾಗಿರುವ ವಂದಿತಾ ಅವರು, ಸಿನಿಮಾರಂಗದ ಬದಲಾಗಿ ವ್ಯವಹಾರ (Business) ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೌದು, ಅಪ್ಪು ಅವರ ಎರಡನೇ ಪುತ್ರಿ ವಂದಿತಾ ಅವರು ಇದೀಗ ಹೊಸದಾಗಿ ಹೋಮ್ ಬೇಕರಿ (Home Bakery) ಉದ್ಯಮವನ್ನು ಶುರು ಮಾಡಿದ್ದಾರೆ. ಈ ಮೂಲಕ ದೊಡ್ಮನೆ ಅಭಿಮಾನಿಗಳಿಗೆ ಅಪ್ಪು ಮಗಳ ಸಾಧನೆ ಸಂತಸ ತಂದಿದೆ.

ಏನಿದು ‘ನುಕಾಸ್ ಕೆಫೆ’?
ವಂದಿತಾ ಅವರು ಆರಂಭಿಸಿರುವ ಈ ಹೊಸ ಹೋಮ್ ಬೇಕರಿ ಉದ್ಯಮಕ್ಕೆ ‘ನುಕಾಸ್ ಕೆಫೆ’ (Nuka’s Cafe) ಎಂದು ಹೆಸರಿಡಲಾಗಿದೆ. ಈ ಹೆಸರಿನ ಹಿಂದೆಯೂ ಅಪ್ಪನ ಮೇಲಿನ ಅಪಾರ ಪ್ರೀತಿಯಿದೆ. ಪುನೀತ್ ಅವರು ಮುದ್ದಾಗಿ ವಂದಿತಾ ಅವರನ್ನು ‘ನುಕ್ಕಿ’ ಎಂದು ಕರೆಯುತ್ತಿದ್ದರು. ತಂದೆಯು ಪ್ರೀತಿಯಿಂದ ಕರೆಯುತ್ತಿದ್ದ ಅದೇ ನಿಕ್ ನೇಮ್ ಅನ್ನು ಸ್ಪೂರ್ತಿಯಾಗಿಟ್ಟುಕೊಂಡು ವಂದಿತಾ ತಮ್ಮ ಬ್ರ್ಯಾಂಡ್‌ಗೆ ‘ನುಕಾಸ್’ ಎಂದು ನಾಮಕರಣ ಮಾಡಿದ್ದಾರೆ.
ಇದಕ್ಕಾಗಿ ಅವರು ಯಾವುದೇ ಪ್ರತ್ಯೇಕವಾದ ಮಳಿಗೆಯನ್ನು ತೆಗೆದಿಲ್ಲ. ಬದಲಾಗಿ, ಬೆಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿಯೇ ಕುದ್ದು ತಾವೇ ಕೈಯಾರೆ ಬೇಕರಿ ತಿನಿಸುಗಳನ್ನು (Cakes and Bakes) ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ಬಿಸಿನೆಸ್‌ನ ಆಹ್ವಾನ ಪತ್ರಿಕೆಗಳು ಹಾಗೂ ಮಾಹಿತಿ ವೈರಲ್ ಆಗುತ್ತಿವೆ.
ಅಪ್ಪನ ಕನಸು ನನಸು ಮಾಡಿದ ಮಗಳು
ಪುನೀತ್ ರಾಜ್‌ಕುಮಾರ್ ಅವರಿಗೆ ತಮ್ಮ ಮನೆಯವರು ಬೇಕಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಸೆಯಿತ್ತಂತೆ. ಈ ಹಿಂದೆ ಶಿವಣ್ಣನ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಅತ್ಯುತ್ತಮವಾಗಿ ಬೇಕಿಂಗ್ ಮಾಡುತ್ತಿದ್ದಾಗ, ಅದನ್ನೇ ಕಮರ್ಷಿಯಲ್ ಆಗಿ ಉದ್ಯಮವನ್ನಾಗಿ ಮಾಡುವಂತೆ ಅಪ್ಪು ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ಆ ಸಂದರ್ಭದಲ್ಲಿ ಗೀತಾ ಅವರು ಆ ಆಸಕ್ತಿ ತೋರಿರಲಿಲ್ಲ. ಇದೀಗ ಅಪ್ಪನ ಆ ಹಳೆಯ ಆಸೆಯನ್ನು ಪುತ್ರಿ ವಂದಿತಾ ನೆರವೇರಿಸಿದ್ದಾರೆ.
ಅಪ್ಪು ಅವರ ಹಿರಿಯ ಪುತ್ರಿ ಧೃತಿ ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಪದವಿ ಪಡೆದಿದ್ದರು. ಇದೀಗ ಕಿರಿಯ ಮಗಳು ಉದ್ಯಮಶೀಲತೆಯತ್ತ ಹೆಜ್ಜೆ ಹಾಕಿರುವುದು ಅಪ್ಪು ಅಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ. ‘ನುಕಾಸ್ ಕೆಫೆ’ಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.
