ತಿರುವನಂತಪುರಂ: ಕೇರಳ ರಾಜಕಾರಣದಲ್ಲಿ ಇಂದು (ಮೇ 27, 2026) ಮುಂಜಾನೆಯಿಂದಲೇ ಭಾರಿ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಕಂಪನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ನಿವಾಸಗಳು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ತಿರುವನಂತಪುರಂನ ಬೇಕರಿ ಜಂಕ್ಷನ್‌ನಲ್ಲಿರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ನಿವಾಸ, ಕಣ್ಣೂರಿನ ಸ್ವಂತ ಮನೆ, ಅವರ ಮಗಳು ವೀಣಾ ಟಿ ಮತ್ತು ಅಳಿಯ (ಮಾಜಿ ಸಚಿವ) ಪಿ.ಎ. ಮೊಹಮ್ಮದ್ ರಿಯಾಸ್ ಅವರ ಕೋಝಿಕ್ಕೋಡ್ ನಿವಾಸ ಸೇರಿದಂತೆ ಹಲವೆಡೆ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ಕೈಗೊಂಡಿದೆ. ದಾಳಿ ವೇಳೆ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರಿಂದ ಇಡಿ ಅಧಿಕಾರಿಗಳು ಪ್ರಾಥಮಿಕ ಹೇಳಿಕೆಯನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ದಾಳಿಗೆ ಕಾರಣವೇನು? (CMRL ಮಾಸಿಕ ಪಾವತಿ ಹಗರಣ)

ಈ ಇಡಿ ದಾಳಿಯ ಹಿಂದೆ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ಟಿ ಮಾಲೀಕತ್ವದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಎಂಬ ಈಗ ಮುಚ್ಚಲ್ಪಟ್ಟಿರುವ ಐಟಿ ಕಂಪನಿಯ ವ್ಯವಹಾರಗಳ ಕೈವಾಡವಿದೆ. ಖಾಸಗಿ ಗಣಿಗಾರಿಕೆ ಮತ್ತು ರಾಸಾಯನಿಕ ಕಂಪನಿಯಾದ CMRL, ಯಾವುದೇ ರೀತಿಯ ಐಟಿ ಸೇವೆಗಳನ್ನು ಪಡೆಯದೆಯೇ 2017 ರಿಂದ 2020ರ ಅವಧಿಯಲ್ಲಿ ವೀಣಾ ಅವರ ಕಂಪನಿಗೆ ನಿಯಮಬಾಹಿರವಾಗಿ ಸುಮಾರು 1.72 ಕೋಟಿ ರೂಪಾಯಿಗಳನ್ನು ಮಾಸಿಕ ಕಂತುಗಳ ರೂಪದಲ್ಲಿ ಪಾವತಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಣಕಾಸು ಅಕ್ರಮದ ಬಗ್ಗೆ ಈಗಾಗಲೇ ಗಂಭೀರ ವಂಚನೆ ತನಿಖಾ ಕಚೇರಿ (SFIO) ಕೂಡ ತನಿಖೆ ನಡೆಸುತ್ತಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಆಕ್ಷನ್!

ಈ ಪ್ರಕರಣದಲ್ಲಿ ಇಡಿ ತನಿಖೆಯನ್ನು ಪ್ರಶ್ನಿಸಿ ಮತ್ತು ಜಾರಿಯಾಗಿದ್ದ ಸಮನ್ಸ್‌ಗಳನ್ನು ರದ್ದುಗೊಳಿಸುವಂತೆ ಕೋರಿ CMRL ಕಂಪನಿಯು ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ನಿನ್ನೆಯಷ್ಟೇ (ಮೇ 26) ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಇಡಿ ತನಿಖೆಗೆ ಸಂಪೂರ್ಣ ಹಸಿರು ನಿಶಾನೆ ನೀಡಿತ್ತು. ಹೈಕೋರ್ಟ್ ಆದೇಶ ಹೊರಬಿದ್ದ 24 ಗಂಟೆಗಳ ಒಳಗಾಗಿಯೇ ಇಡಿ ಅಧಿಕಾರಿಗಳು ಮುಂಜಾನೆ ಲಗ್ಗೆ ಇಟ್ಟಿರುವುದು ಕೇರಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಸಿಪಿಎಂ ಪ್ರತಿಭಟನೆ, ರಾಜಕೀಯ ವಾಗ್ದಾಳಿ

ಇಡಿ ದಾಳಿಯ ಸುದ್ದಿ ಹರಡುತ್ತಿದ್ದಂತೆ ಕಣ್ಣೂರು ಮತ್ತು ತಿರುವನಂತಪುರಂನಲ್ಲಿರುವ ಪಿಣರಾಯಿ ವಿಜಯನ್ ಅವರ ನಿವಾಸಗಳ ಮುಂದೆ ಸಿಪಿಎಂ (CPI-M) ಕಾರ್ಯಕರ್ತರು ಜಮಾಯಿಸಿ ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವ ಸಿಪಿಎಂ ನಾಯಕರು, ಇದು ಕೇಂದ್ರದ ಬಿಜೆಪಿ ಸರ್ಕಾರ ನಡೆಸಿರುವ ರಾಜಕೀಯ ಪ್ರೇರಿತ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದಾಳಿಯಿಂದಾಗಿ ಕೇರಳದಾದ್ಯಂತ ತೀವ್ರ ರಾಜಕೀಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *