ಪೂಲನ್ ದೇವಿ ಅವರ ಜೀವನವು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಅದು ದೌರ್ಜನ್ಯ, ಜಾತಿ ಪದ್ಧತಿ ಮತ್ತು ಲಿಂಗ ತಾರತಮ್ಯದ ವಿರುದ್ಧದ ಒಂದು ದಾರುಣವಾದ ಹೋರಾಟದ ಚರಿತ್ರೆ.

ಬಾಲ್ಯ ಮತ್ತು ಶೋಷಣೆಯ ಆರಂಭ: ಪೂಲನ್ ದೇವಿ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಗೊರಹಕ್ ಪೂರ್ವ ಗ್ರಾಮದಲ್ಲಿ 1963ರ ಆಗಸ್ಟ್ 10ರಂದು ಒಂದು ಬಡ ಆದಿವಾಸಿ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲೇ ಅನ್ಯಾಯದ ವಿರುದ್ಧ ಸಿಡಿದೆದ್ದ ಗುಣ ಇವರದ್ದಾಗಿತ್ತು. ಕೇವಲ 11ನೇ ವಯಸ್ಸಿನಲ್ಲಿ ತನ್ನ ತಾತನ ಜಮೀನನ್ನು ಕಬಳಿಸಿದ ದೊಡ್ಡಪ್ಪನ ವಿರುದ್ಧ ಧರಣಿ ಕುಳಿತದ್ದು ಇವರ ಮೊದಲ ಪ್ರತಿರೋಧ. ಆದರೆ ಅದೇ ಸಣ್ಣ ವಯಸ್ಸಿನಲ್ಲಿ ತನಗಿಂತ ಮೂರು ಪಟ್ಟು ದೊಡ್ಡವನಾದ ಪುಟ್ಟಿಲಾಲ್ ಎಂಬಾತನೊಂದಿಗೆ ಇವರಿಗೆ ಬಾಲ್ಯ ವಿವಾಹ ಮಾಡಲಾಯಿತು. ಗಂಡನ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೆ ಪೂಲನ್ ಮತ್ತೆ ತವರು ಮನೆಗೆ ಹಿಂತಿರುಗಿದರು.

ಸಾಮಾಜಿಕ ಬಹಿಷ್ಕಾರ ಮತ್ತು ಪೊಲೀಸ್ ದೌರ್ಜನ್ಯ: ಊರಿಗೆ ವಾಪಸಾದ ಪೂಲನ್ ದೇವಿಗೆ ಸಮಾಜ ಗೌರವ ನೀಡಲಿಲ್ಲ. ಬದಲಿಗೆ ‘ಗಂಡ ಬಿಟ್ಟವಳು’ ಎಂಬ ಹಣೆಪಟ್ಟಿ ಹಚ್ಚಿ ಅವಮಾನಿಸಿತು. ಕೂಲಿ ಕೆಲಸಕ್ಕೆ ಹೋದಾಗ ಮೇಲ್ವರ್ಗದ ಭೂಮಾಲೀಕರಿಂದ ಅತ್ಯಾಚಾರದ ಯತ್ನ ನಡೆಯಿತು. ಇದನ್ನು ವಿರೋಧಿಸಿದಕ್ಕೆ ಪಂಚಾಯಿತಿಯಲ್ಲಿ ಇವರನ್ನು ಕ್ರೂರವಾಗಿ ಥಳಿಸಿ ಗ್ರಾಮದಿಂದ ಬಹಿಷ್ಕರಿಸಲಾಯಿತು. ಈ ಮಧ್ಯೆ, ಸುಳ್ಳು ಕಳ್ಳತನದ ಆರೋಪದ ಮೇಲೆ ಪೊಲೀಸರು ಇವರನ್ನು ಬಂಧಿಸಿ, ಠಾಣೆಯಲ್ಲೇ ಸಾಮೂಹಿಕ ಅತ್ಯಾಚಾರವೆಸಗುವ ಮೂಲಕ ಅಮಾನವೀಯವಾಗಿ ನಡೆದುಕೊಂಡರು.

ಚಂಬಲ್ ಕಣಿವೆಯತ್ತ ಪಯಣ: ಸಮಾಜ ಮತ್ತು ಕಾನೂನು ವ್ಯವಸ್ಥೆಯಿಂದ ಜರ್ಜರಿತರಾದ ಪೂಲನ್ ದೇವಿ ಅಂತಿಮವಾಗಿ ಚಂಬಲ್ ಕಣಿವೆಯ ಡಕಾಯಿತರ ತಂಡವನ್ನು ಸೇರಿದರು. ಅಲ್ಲಿಯೂ ಶೋಷಣೆ ತಪ್ಪಲಿಲ್ಲ. ತಂಡದ ಮುಖ್ಯಸ್ಥ ಬಾಬು ಗುಜ್ಜರ್ ಈಕೆಯ ಮೇಲೆ ದೌರ್ಜನ್ಯ ನಡೆಸಿದಾಗ, ಅದೇ ತಂಡದ ವಿಕ್ರಮ್ ಮಲ್ಲ ಆತನನ್ನು ಕೊಂದು ಪೂಲನ್ ದೇವಿಯ ರಕ್ಷಣೆಗೆ ನಿಂತನು. ವಿಕ್ರಮ್ ಮಲ್ಲನೊಂದಿಗೆ ಪ್ರೇಮಪಾಶದಲ್ಲಿ ಸಿಲುಕಿದ ಪೂಲನ್, ಅವರಿಂದ ರೈಫಲ್ ಹಿಡಿಯುವುದನ್ನು ಮತ್ತು ಡಕಾಯಿತಿಯ ತಂತ್ರಗಳನ್ನು ಕಲಿತರು. ನಂತರ ತನ್ನ ಮೇಲೆ ಹಿಂಸೆ ನೀಡಿದ್ದ ಮೊದಲ ಗಂಡ ಪುಟ್ಟಿಲಾಲ್‌ನನ್ನು ಹುಡುಕಿ ಕೊಂದು, ಮಹಿಳೆಯರನ್ನು ಶೋಷಿಸುವವರಿಗೆ ಎಚ್ಚರಿಕೆ ನೀಡಿದರು.

ಬೇಹಮಾಯಿ ಹತ್ಯಾಕಾಂಡ ಮತ್ತು ಸೇಡು: ವಿಕ್ರಮ್ ಮಲ್ಲನ ಹತ್ಯೆಯ ನಂತರ, ಪ್ರತಿಸ್ಪರ್ಧಿ ಗ್ಯಾಂಗ್ ಪೂಲನ್ ದೇವಿಯನ್ನು ಅಪಹರಿಸಿ ಬೇಹಮಾಯಿ ಗ್ರಾಮದಲ್ಲಿ ಮೂರು ವಾರಗಳ ಕಾಲ ದಿಗ್ಬಂಧನದಲ್ಲಿಟ್ಟು ಸಾಮೂಹಿಕ ಅತ್ಯಾಚಾರ ಎಸಗಿತು. ಅಷ್ಟೇ ಅಲ್ಲದೆ, ಇವರನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ವಿಕೃತವಾಗಿ ಸಂಭ್ರಮಿಸಿದರು. ಈ ಅವಮಾನವೇ ಪೂಲನ್ ದೇವಿಯ ಜೀವನದ ಅತಿದೊಡ್ಡ ತಿರುವು. 1981ರ ಫೆಬ್ರವರಿ 14ರಂದು ಪೊಲೀಸ್ ಸಮವಸ್ತ್ರ ಧರಿಸಿ ಬೇಹಮಾಯಿ ಗ್ರಾಮಕ್ಕೆ ಬಂದ ಪೂಲನ್ ದೇವಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದ 22 ಮಂದಿಯನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಂದರು.

ಶರಣಾಗತಿ ಮತ್ತು ರಾಜಕೀಯ ಪ್ರವೇಶ: ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತು. ಆಗಿನ ಉತ್ತರ ಪ್ರದೇಶದ ಸಿಎಂ ವಿ.ಪಿ. ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅಂತಿಮವಾಗಿ 1983ರಲ್ಲಿ ಇಂದಿರಾ ಗಾಂಧಿಯವರ ಸರ್ಕಾರದ ಅವಧಿಯಲ್ಲಿ ಕೆಲವು ಷರತ್ತುಗಳೊಂದಿಗೆ ಪೂಲನ್ ದೇವಿ ಮಧ್ಯಪ್ರದೇಶ ಸರ್ಕಾರದ ಮುಂದೆ ಶರಣಾದರು. 11 ವರ್ಷಗಳ ಜೈಲುವಾಸದ ನಂತರ 1994ರಲ್ಲಿ ಬಿಡುಗಡೆಯಾದ ಇವರು ಸಮಾಜವಾದಿ ಪಕ್ಷವನ್ನು ಸೇರಿದರು. ಮಿರ್ಜಾಪುರ ಕ್ಷೇತ್ರದಿಂದ ಎರಡು ಬಾರಿ ಸಂಸದೆಯಾಗಿ (MP) ಆಯ್ಕೆಯಾದರು. ನಂತರ ಉಮೇದ್ ಸಿಂಗ್ ಅವರನ್ನು ವಿವಾಹವಾಗಿ, ಮನುಸ್ಮೃತಿ ಆಧಾರಿತ ಶೋಷಣೆಯನ್ನು ವಿರೋಧಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

CREATOR: gd-jpeg v1.0 (using IJG JPEG v80), default quality

ದುರಂತ ಅಂತ್ಯ: 2001ರ ಜುಲೈ 25ರಂದು ದೆಹಲಿಯ ತಮ್ಮ ಅಧಿಕೃತ ಬಂಗಲೆಯ ಮುಂದೆಯೇ ಶೇರ್ ಸಿಂಗ್ ರಾಣಾ ಎಂಬಾತನ ತಂಡದಿಂದ ಪೂಲನ್ ದೇವಿ ಹತ್ಯೆಗೀಡಾದರು. ಸಾವಿನ ಕ್ಷಣದಲ್ಲಿ ಅವರು ಹೇಳಿದ ಮಾತುಗಳು ಅತ್ಯಂತ ಮಾರ್ಮಿಕವಾಗಿದ್ದವು:

“ಈ ದೇಶದಲ್ಲಿ ದಲಿತರಾಗಿ ಮತ್ತು ಬಡವರ ಹೊಟ್ಟೆಯಲ್ಲಿ ಮಹಿಳೆಯಾಗಿ ಜನಿಸಬೇಡಿ. ಮುಂದೆಂದೂ ಮತ್ಯಾವ ಜನ್ಮದಲ್ಲೂ ನಾನು ಜನಿಸುವುದಿಲ್ಲ.” ಎಂದು ಹೇಳುತ್ತಾ ಪೂಲನ್ ದೇವಿ ಪ್ರಾಣಬಿಟ್ಟಳು.

Leave a Reply

Your email address will not be published. Required fields are marked *