ಅರಿವೇ ಕಂಡಾಯ
ಡಾ. ಪ್ರಕಾಶ್ ಮಂಟೇದ ಅವರು ಬಿಗ್ ಕನ್ನಡ ವೆಬ್ಸೈಟ್ನಲ್ಲಿ ಬರೆದ ಅಂಕಣ ಬರಹಗಳ ಸಂಕಲನವಾಗಿದೆ. ಇದು ಸಮಕಾಲೀನ ಸವಾಲುಗಳನ್ನು ಅದರಲ್ಲೂ ಮುಖ್ಯವಾಗಿ ಜಾತಿ ಕಾರಣದಿಂದ ಹುಟ್ಟಿಕೊಂಡ ಅಸಮಾನತೆಯ ಸಂಕೀರ್ಣ ತಲ್ಲಣಗಳನ್ನು ಪ್ರಶ್ನಿಸುವ ಕೃತಿ. ಇಲ್ಲಿರುವ ಲೇಖನಗಳು ಲೇಖಕರು ಅನುಭವಿಸಿ ಅರಿತ, ಕಂಡು ತಿಳಿದುಕೊಂಡ ಸಾಮಾಜಿಕ ಬದುಕಿನ ದಾರುಣ ಕಥನವನ್ನು ಹೇಳುತ್ತವೆ. ಇವು ಅನುಭವಗಳಿಂದ ಗಳಿಸಿದ ಪರಿಹಾರದ ಬೆಳಗುಗಳು. ಈ ಕೃತಿ ಒಂದು ರೀತಿಯಲ್ಲಿ ಪ್ರಕಾಶ್ ಮಂಟೇದ ಅವರ ಅನುಭವ ಕಥನ. ಪ್ರಬಂಧಗಳ ಮಧುರತೆ ಲೇಖನಗಳ ವೈಚಾರಿಕತೆ ಆತ್ಮಕಥನದ ಅನುಭವಜನ್ಯತೆಗಳ ಛಾಯೆಯನ್ನು ಕಾಣಬಹುದು.
ಅನಕ್ಷರತೆಯಿಂದ ಅಜ್ಞಾನ, ಅಜ್ಞಾನದಿಂದ ಮೌಢ್ಯ, ಮೌಢ್ಯ ಗಳಿಂದ ಶೋಷಣೆ, ಶೋಷಣೆಯಿಂದ ಬದುಕು ದಾರುಣ. ಇದಕ್ಕೆಲ್ಲ ಉತ್ತರ ‘ಅರಿವಿನ ಕಂಡಾಯ’. ಅದನ್ನು ಅಂಬೇಡ್ಕರ್ ಹೇಳಿದಂತೆ ಶಿಕ್ಷಣದಿಂದ ಮಾತ್ರ ಸಂಪಾದಿಸಲು ಸಾಧ್ಯ ಎಂಬುದನ್ನು ಎತ್ತಿ ಹಿಡಿಯುವ ಈ ಕೃತಿ ಸಮಾಜದ ಆತ್ಮಸಾಕ್ಷಿಗೆ ಲೇಖಕರು ಹಾಕಿದ ಪ್ರಶ್ನೆಯಾಗಿದೆ. ಮನುಷ್ಯತ್ವ, ಮಾನವೀಯತೆ, ಜೀವಪರತೆಯನ್ನು ಮೀರಿ ಈ ಜಾತಿ ಎಂಬ ಪೆಡಂಭೂತ ಸಾಮಾಜಿಕ ಬದುಕನ್ನು ಆವರಿಸಿಕೊಂಡು ಉಂಟು ಮಾಡಿರುವ ಅಸಮಾನತೆಯ ಬಿಕ್ಕಟ್ಟುಗಳಿಗೆ ಸೂಕ್ಷ್ಮಜ್ಞತೆಯಿಂದ ಮುಕ್ತಿ ಹೊಂದಲು ಇಲ್ಲಿನ ಲೇಖನಗಳು ಪ್ರಯತ್ನಿಸುತ್ತವೆ.
ಇಲ್ಲಿರುವ ಲೇಖನಗಳನ್ನು ನಾವು ವೈಯಕ್ತಿಕ ನೆಲೆಯಲ್ಲಿ ನೋಡುವಂತಿಲ್ಲ. ಇವು ಪ್ರಕಾಶ್ ಮಂಟೇದ ಅವರ ಸ್ವಾನುಭವಗಳಿಂದ ಹುಟ್ಟಿದರೂ ಸಮಾಜದ ಒಂದು ಭಾಗವಾಗಿ ಸಾರ್ವತ್ರಿಕತೆಯನ್ನು ಸಂಕೇತಿಸುತ್ತವೆ. ವೈಯಕ್ತಿಕ ನೆಲೆಯಿಂದ ಸಾಮಾಜಿಕವಾಗುವ ಶಕ್ತಿ ಸಾಹಿತ್ಯಕ್ಕೆ ಇದ್ದಾಗ ಮಾತ್ರ ಅದು ಜನಪರ ಸಾಹಿತ್ಯವಾಗುತ್ತದೆ. ಆ ಗುಣ ಈ ಲೇಖನಗಳಿಗಿವೆ. ಅವು ಸಮಾಜಮುಖಿಯಾಗಿ ಚಲಿಸಿವೆ. ಈ ಕೃತಿ ಪ್ರಕಾಶ್ ಮಂಟೇದವರ ಅವರ ಬಾಲ್ಯ, ಶಾಲಾ ದಿನಗಳು, ಕಾಲೇಜು ದಿನಗಳು, ಯೌವ್ವನ,ಊರಿನ ವಾತಾವರಣ, ಪರಿಸರ, ವೃತ್ತಿ ಬದುಕು ಒಳಗೊಂಡಂತೆ ಸಮಾಜದಲ್ಲಿ ಅವರು ಅನುಭವಿಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದುಕಿನಲ್ಲಿನ ಅಸ್ಪೃಶ್ಯತೆಯ ಕ್ರೂರ ಕಥನವಿದು. ಇಲ್ಲಿ ಲೇಖಕರು ಎಲ್ಲೂ ಅಸಹಾಯಕರಂತೆ
ಬಿಂಬಿತರಾಗಿಲ್ಲ. ಆರ್ಥಿಕ ಸಂಕಷ್ಟ, ತಿರಸ್ಕಾರ, ತಾತ್ಸಾರ ಭಾವದಲ್ಲೂ ತಾಯಿ ತುಂಬಿದ ಸ್ವಾಭಿಮಾನದ ಚಿಂತನೆಗಳು ಇವರು ಸಮಾಜವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವಂತೆ ಮಾಡಿವೆ. ಈ ವಿವರಣೆಗಳು, ಹುಟ್ಟಿಕೊಂಡ ಚಿಂತನೆಗಳು ಕೇವಲ ಅನುಭವಗಳ ಚೌಕಟ್ಟಿಗೆ ಮಾತ್ರ ಸೇರಿಲ್ಲ. ಅದರಾಚೆಗೆ ಇವರನ್ನು ರೂಪಿಸಿದ್ದು ವ್ಯಾಪಕ ಅಧ್ಯಯನ, ಸಾಹಿತ್ಯ ಕೃತಿಗಳ ಓದು, ನ್ಯಾಯಿಕ ಹೋರಾಟಗಳು, ಜಾನಪದ ಕಲೆಗಳು, ಪ್ರಭಾವ ಬೀರಿದ ವ್ಯಕ್ತಿತ್ವಗಳು, ನಾಟಕಗಳು, ಕ್ರಾಂತಿ ಗೀತೆಗಳು, ಜೀವಪರ ಚಿಂತನೆಗಳು ಇವರ ಬರಹದ ಮೇಲೆ ಗಾಢವಾದ ಪ್ರಭಾವವನ್ನು ಬೀರಿವೆ.
ಈ ಕೃತಿಯ ಮುಖ್ಯವಾದ ಹಂಬಲ ಮಾನವ ಬದುಕಿನ ಸಂಕೀರ್ಣತೆಯನ್ನು ವೈಚಾರಿಕ ಪ್ರಜ್ಞೆಯ ಮೂಲಕ ಅಂತ್ಯಗೊಳಿಸುವುದು. ತನ್ಮೂಲಕ ತನ್ನ ಸಮುದಾಯದ ಅಳ ಳನ್ನು, ಈ ಸಮಾಜದ ಕೌರ್ರ್ಯವನ್ನು ಬಯಲು ಮಾಡುವುದು. ಇಲ್ಲಿನ ಲೇಖನಗಳು ಮಂಟೇದ ಅವರ ಹೋರಾಟ ಮತ್ತು ಚಳುವಳಿಯ ಬಲದಿಂದ ಹುಟ್ಟಿಕೊಂಡ ಬರಹಗಳಾಗಿವೆ.
ಈ ಕೃತಿಯ ಶೀರ್ಷಿಕೆ ‘ಅರಿವೇ ಕಂಡಾಯ’ ನಮ್ಮ ಒಳ ಹೊರಗಿನ ಅರಿವಿನ ಬಗ್ಗೆ ತಾತ್ವಿಕ ಪ್ರಶ್ನೆಯನ್ನು ಎತ್ತುತ್ತದೆ. ಜಾತಿ ಆಚರಣೆಯ ಪ್ರತಿರೋಧವಾಗಿ ಅಕ್ಷರ ಕ್ರಾಂತಿಯನ್ನ ಮೂಡಿಸಿದೆ. ಬದುಕಿನ ಒಳ ಸತ್ಯವನ್ನು ಹುಡುಕುತ್ತಲೇ ಸತ್ಯ ಮಿಥ್ಯಗಳ ಅರಿವನ್ನು ಮೂಡಿಸಲು ಈ ಕೃತಿ ಎಚ್ಚರಿಸುತ್ತದೆ. ನಮ್ಮ ಅಸ್ತಿತ್ವವನ್ನು ಸರಿಯಾಗಿ ಗ್ರಹಿಸಲು ಕರೆ ಕೊಡುತ್ತವೆ. ಕೇವಲ ಕಣ್ಣನೋಟದಿಂದ ಮಾತ್ರವಲ್ಲದೆ ಮನಸ್ಸಿನ ಕಣ್ತೆರೆದು ನೋಡಲು ಒತ್ತಾಯಿಸುತ್ತವೆ.
ಇಲ್ಲಿರುವ 18 ಲೇಖನಗಳು ಸಮಕಾಲೀನ ಬಿಕ್ಕಟ್ಟು ಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇಲ್ಲಿ ಬಿಡುಗಡೆ ಎಂದರೆ ಪಲಾಯನವಾದವಲ್ಲ. ಸವಾಲುಗಳು ಮತ್ತು ಸಂಘರ್ಷಗಳಿಂದ ವಿಮೋಚನೆ. ಅದು ಸಾಧ್ಯವಾಗಲು ಶೋಷಿತರು ಸೂಕ್ಷ್ಮ ಮತ್ತು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು. ಸಾಮಾಜಿಕ ಅಸಮಾನತೆ, ಅಸ್ಪೃಶ್ಯತಾ ಆಚರಣೆ, ಕೆಳವರ್ಗದ ಹಕ್ಕುಗಳ ಹತ್ತಿಕ್ಕುವಿಕೆ, ಸಮುದಾಯದ ನೋವು ಸಂಕಟಗಳಿಗೆ ಶೋಷಿತರ ಅರಿವಿನ ಕೊರತೆಯೇ ಕಾರಣಗಳು. ತಲ್ಲಣಗಳು,ತಾಕಲಾಟಗಳು, ತಾಪತ್ರಯಗಳು ಬಲವಂತದ ಏರಿಕೆಗಳು. ಈ ಸಮಾಜ ವಿಧಿಸಿದ ನಿಕೇತನಗಳ ಕೂಸುಗಳು ಎಂದು ಅರ್ಥೈಸುತ್ತವೆ. ಬದುಕಿನ ಸತ್ಯ ಸಂಗತಿಗಳ ಮೇಲೆ ಸಮಾಜದ ಗಮನವನ್ನು ಸೆಳೆದು ಅಕ್ಷರವೆಂಬ ಅಸ್ತ್ರದಿಂದ ಎಲ್ಲಾ ಬಿಕ್ಕಟ್ಟುಗಳಿಗೆ ಪರಿಹಾರದ ದಾರಿಯನ್ನು ಹುಡುಕುವ ಅಕ್ಷರ ಕ್ರಾಂತಿಯಿದು. ಅರಿವಿನ ರೂಪಕವಾಗಿ ಅಂಬೇಡ್ಕರ್ ಕೃತಿಯ ಲೇಖನಗಳಲ್ಲಿ ಓದುವರನ್ನು ಆವರಿಸಿಕೊಳ್ಳುತ್ತಾರೆ.
ಇಲ್ಲಿ ‘ಧರೆಗೆ ದೊಡ್ಡವರ ಕಂಡಾಯ’, ‘ಧೂಪದ ಬಟ್ಟಲ ಸಾಮ್ರಾಣಿ’, ‘ಯಶೋದಮ್ಮ ಎಂಬ ಜನಾಧಿಕಾರದ ಗುಬ್ಬಿಗೂಡು’, ‘ಅಪ್ಪನ ಅಂಬೇಡ್ಕರ್ ಸಂಘವು ಮತ್ತು ಟಚ್ಚಬಲ್ ಎಸ್ಸಿಗಳ ಅಸ್ಪೃಶ್ಯತೆಯೂ’, ‘ನಿರಂಕುಶ ತತ್ವದ ಕುವೆಂಪು’, ‘ಭೂಸ ಚಳುವಳಿ 50’ ‘ಜನರ ಕೂಗಿಗೆ ಕವನವಾದ ಕವಿ ಸಿದ್ದಲಿಂಗಯ್ಯ’, ‘ಸರ್ವೋದಯದ ಕನವರಿಕೆಗಳು’, ‘ಕನಕಪ್ರಜ್ಞೆ ಮತ್ತು ಪ್ರತಿಮೆ’, ‘ಗುಂಡ್ಯ ಜನಜಾಗೃತಿ’ ಸೇರಿದಂತೆ ಒಟ್ಟು 18 ಲೇಖನಗಳಿದ್ದು ವ್ಯಕ್ತಿ, ವಿಚಾರ, ಸಾಮಾಜಿಕ ಬದುಕು, ಸಾಮಾಜಿಕ ಸ್ಥಿತಿಗತಿಗಳು, ಶೋಷಣೆಯ ಕರಾಳ ರೂಪಗಳು, ಜಾಗೃತಿ ಚಳುವಳಿಗಳು, ಸಿದ್ಧ ಮಾದರಿಯ ಜಾತಿ ಕ್ರೌರ್ಯಗಳ ಪ್ರತಿರೋಧ, ಅಸಮಾನತೆಯ ವಿಮೋಚನೆ, ವೈಚಾರಿಕ ಪ್ರಜ್ಞೆಯ ತುರ್ತು, ಸಾಮಾಜಿಕ ಹೋರಾಟಗಾರರ ಜೀವಪರತೆ, ಶೋಷಣೆಯ ವಿಮುಕ್ತಿಯ ಅಸ್ತ್ರವಾಗಿ ಸಾಹಿತ್ಯದ ಪಾತ್ರ, ಕಂಡಾಯ ಹೊತ್ತ ಜನ ಪರಂಪರೆಯ ಹರಿಕಾರರ ಸಾಧನೆ ಮತ್ತು ಸವಾಲುಗಳನ್ನು ಈ ಕೃತಿ ಅಡಗಿಸಿಕೊಂಡಿದೆ.
ಲಂಕೇಶರು ಹೇಳಿದಂತೆ “ಬರಹ ಅಥವಾ ಅನುಭವ ನಿರೂಪಣೆ ಎಂಬುದು ಕೇವಲ ಲೇಖಕರ ಖಾಸಗಿ ಡೈರಿಯ ವಿವರಗಳಂತಿರಬಾರದು” ಎಂಬ ಅರಿವಿರುವ ಪ್ರಕಾಶ್ ಮಂಟೇದ ಅವರು ತನ್ನ ಅನುಭವಗಳಲ್ಲಿ ತನ್ನ ಸಮುದಾಯದ ನೋವು ಸಂಕಟ ಯಾತನೆಗಳನ್ನ ಕಟ್ಟಿಕೊಡುವ ದಾರಿಯಲ್ಲಿ ಕ್ರಮಿಸಿದ್ದಾರೆ. ಅರಿವಿನ ಕಂಡಾಯದ ಮೂಲಕ ಬದುಕಿಗೆ ಭರವಸೆ ತುಂಬಿಕೊಳ್ಳಲು ಜನರನ್ನು ಪ್ರೇರೇಪಿಸುವ ಅರಿವಿನ ಬೀಜವನ್ನು ಬಿತ್ತ ಹೊರಟಿದ್ದಾರೆ.
ಇಂದು ಕಾನೂನಿನ ರಕ್ಷಣೆಯ ಅವಕಾಶಗಳು ಮತ್ತು ಶಿಕ್ಷಣ ಸಾಮಾಜಿಕ ಶೋಷಣೆಯ ಕರಾಳತೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿದೆ ಎಂಬುದನ್ನು ಅಲ್ಲಗಳೆಯುವ ಮಂಟೇದ ಅವರು “ಜಾತಿ ದೌರ್ಜನ್ಯ ತಣ್ಣಿಗೆ ಬುಸುಗುಟ್ಟುವ ಹಾವಿನಂತೆ ಊರುಗಳಲ್ಲಿ ಅಂದಿಗಿಂತಲೂ ಇಂದು ಜೋರಾಗಿಯೇ ಇದೆ” ಎಂದು ವಿಶ್ಲೇಷಿಸುತ್ತಾರೆ. ಇದೆ
ವೆಲ್ಲವುಗಳಿಂದ ಮುಕ್ತವಾಗಲು ಅನುಸರಿಸಬೇಕಾದ ಕ್ರಮಗಳನ್ನು ‘ಧರೆಗೆ ದೊಡ್ಡವರ ಕಂಡಾಯ’ ಲೇಖನದಲ್ಲಿ ಹೀಗೆ ಕಟ್ಟಿಕೊಡುತ್ತಾರೆ.
“ಅಕ್ಷರವನ್ನು ನಾವು ಮುಟ್ಟಿದಾಗ, ಅದು ನಮ್ಮಂತಹವರನ್ನು ಮುಟ್ಟಿದಾಗ ಹುಟ್ಟುವ ಸಂವೇಧನೆ ಮತ್ತು ಪ್ರಜ್ಞೆ ಬಗ್ಗೆ ಈಗಾಗಲೇ ನಮ್ಮ ಹಿರಿಕರು ಸಾನೇನೆ ಹೇಳಿ ಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಆಕ್ರೋಶದ ನುಡಿಗಟ್ಟಿನಲ್ಲಿ ಅಥವಾ ಆ ನೋಟದ ಸ್ಪರ್ಶದ ತಲ್ಲಣದ ಆವೇಗಲ್ಲಾಗಲಿ ಮಾತನಾಡಿದರೆ ಅದು ತೀರ ರಿಪೀಟೆಡ್ ಅನ್ಸುತ್ತೆ. ಆದರೀಗ ಆ ಹಿಂದಲ ದಾರಿ ಹಿಡಿದು ಮುಂದಲ ದಾರಿಯತ್ತಾ ಕ್ರಮಿಸಬೇಕಿದೆ. ಇದು ಅನಿವಾರ್ಯವೂ ಕೂಡ ಆಧುನಿಕ ಅಕ್ಷರ ಪ್ರಜ್ಞೆಯ ವಿರೋಧಾ ಬಾಸಗಳ ದಲಿತರ ದ್ವಿದಳನ ಕ್ರಿಯೆಯ ಜೊತೆಗೆ ಈ ಅಕ್ಷರ ತಂದ ತಲ್ಲಣಗಳ ಸ್ವರೂಪವನ್ನು ಏಕವಾಗಿ ವಿವರಿಸಲಾಗದು” ಎನ್ನುವರು.
ರಾಜಕೀಯವಾಗಿ ಸಾಮಾಜಿಕವಾಗಿ ಜನಕಾವ್ಯ ಪರಂಪರೆಯ ಚಳುವಳಿಗೆ ಕಾರಣರಾದ ಕವಿ ಡಾ. ಸಿದ್ದಲಿಂಗಯ್ಯನವರ ವೈಚಾರಿಕ ಸಂಘಟನೆ ಮತ್ತು ಜನರಲ್ಲಿ ಮೂಡಿಸಿದ ಲೋಕ ಪ್ರಜ್ಞೆಯ ಕ್ರಾಂತಿಕಾರಕ ಸಾಹಿತ್ಯವನ್ನು ಚರ್ಚಿಸಿದ್ದಾರೆ. ಅಜ್ಞಾತ ಜನಾಂಗಗಳ ಮಾತಾಗಿ ಹೊಸ ಕಾಲದ ಎಚ್ಚರವಾಗಿ ಇವರ ಕಾವ್ಯ ಸ್ಪೋಟಗೊಂಡಿದೆ ಎಂದು ವಿಶ್ಲೇಷಿಸುತ್ತಾರೆ. ಇಲ್ಲಿ ಲೇಖಕರು ಸಿದ್ದಲಿಂಗಯ್ಯನವರ ದಲಿತ ಸಾಹಿತ್ಯ ನಮ್ಮ ಸಮಾಜದ ಹೊಸ ಧನಿಯಾಗಿ ನೊಂದವರ ನೋವಿನ ಅಭಿವ್ಯಕ್ತಿಯ ಮಾಧ್ಯಮವಾಗಿ ಪ್ರಕಟಗೊಂಡಿದೆ ಎಂಬುದನ್ನು ಪರಿಕರಗಳಿಟ್ಟು ನಿರೂಪಿಸುತ್ತಾ ಹೋಗಿದ್ದಾರೆ. ತುಂಬಾ ಗಂಭೀರವಾದ ಸಂಕೀರ್ಣ ವಿಷಯವನ್ನು ಸರಳವಾಗಿ ದಕ್ಕುವಂತೆ ಇರುವ ನಿರೂಪಣಾ ಶೈಲಿ ಗಪದ್ಯದ ಹೊಸ ಮಾದರಿಯಲ್ಲಿದೆ.
“ಕಂಡಾಯ ಅನಾದಿ ಕಾಲದಿಂದಲೂ ದ್ವನಿ ಇಲ್ಲದ ಜನಕ್ಕೆ ಲೋಕಕಟ್ಟಿಕೊಟ್ಟಿದೆ. ಕಾಲದ ಉಗ್ರ ಕತ್ತಿಯ ಹೊಡೆತಗಳಾಚೆಗು ತಮ್ಮನ್ನು ತಾವೇ ಕಾಯ್ದುಕೊಂಡ ಜನರು ಬೂದಿ ಮುಚ್ಚಿದ ಕೆಂಡದಂತೆ ಕಾಪಿಟ್ಟ ಅರಿವು ಚರಿತ್ರೆಯ ಕುರುಹುಗಳ ಒಟ್ಟು ಮೊತ್ತವೇ ಈ ಕಡ್ಡಾಯ” ಎಂಬುದಾಗಿ ಲೇಖಕರು ಈ ಕೃತಿಯ ಒಟ್ಟಾಶಯವನ್ನು ಹಿಡಿದಿಟ್ಟಿದ್ದಾರೆ.
‘ಯಶೋದಮ್ಮ ಎಂಬ ಜನಾಧಿಕಾರದ ಗುಬ್ಬಿಗೂಡು’ ಲೇಖನವೂ ತೀರ್ಥಹಳ್ಳಿಯ ಮೂಲೆಯ ಹಳ್ಳಿಯಲ್ಲಿ ದಲಿತಳು ಮತ್ತು ಹೆಣ್ಣು ಎಂಬ ಸಾಮಾಜಿಕ ಪ್ರತ್ಯೇಕತೆಯನ್ನು ಮೀರಿ ಪ್ರಜಾಸತ್ತಾತ್ಮಕ ಅವಕಾಶದಿಂದ ಅಧಿಕಾರವನ್ನು ಪಡೆದು ಲೋಕ ಜ್ಞಾನದಿಂದ ಪಂಚಾಯಿತಿ ಅಧ್ಯಕ್ಷೆಯಾಗಿ ಅಧಿಕಾರ ನಡೆಸಿದ ಯಶೋದಮ್ಮಳ ಶಕ್ತಿಯನ್ನು ಸ್ವಾತಂತ್ರ್ಯ ಮತ್ತು ಸ್ತ್ರೀ ಹಕ್ಕಿನಡಿ ಚರ್ಚಿಸಿದ್ದಾರೆ. ಬಹಳ ಮುಖ್ಯವಾಗಿ ಆ ಪ್ರದೇಶದಲ್ಲಿನ ಜಾತಿತಾರತಮ್ಯಕ್ಕೆ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಮ ಸಮಾಜದ ಕನಸು ಕನಸಾಗೆ ಉಳಿಯುವುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.
‘ಧೂಪದ ಬಟ್ಟಲ ಸಾಮ್ರಾಣಿ’ ಲೇಖನವು ಬದುಕಿನೊಳಗಿನ ಮೌನವಾದ ದಮನ, ಬಡತನದ ವಾಸ್ತವತೆ, ಜಾತಿ ಕ್ರೌರ್ಯಗಳ ಅಟ್ಟಹಾಸ, ಮಾನವಿಯತೆ, ಅಂತಃಕರಣದ ಕುಸಿತವನ್ನು ರೂಪಕಾತ್ಮಕವಾಗಿ ಅನಾವರಣಗೊಳಿಸಿದ್ದಾರೆ. ಸೂಕ್ಷ್ಮ ಬರಹ ಮತ್ತು ಕಲುಷಿತವಾದ ಸಾಮಾಜಿಕ ವಾಸ್ತವತೆಯನ್ನು ತೆರೆದಿಡುವ ಸಂವೇಧನಾಶೀಲ ಬರಹವಿದು. ಸಮಾಜದ ಅಂಚಿನ ಸಮುದಾಯಗಳ ಬದುಕಿನ ಸ್ಥಿತಿಗತಿಗಳನ್ನು ಧೂಪದ ಬಟ್ಟಲಂತೆ ಸಮೀಕರಿಸಿ ಅವರ ಕನಸು, ಶ್ರಮ, ನಂಬಿಕೆ, ನಿರೀಕ್ಷೆ, ಆಕಾಂಕ್ಷೆಗಳು ಸಾಮ್ರಾಣಿಯಂತೆ ಉರಿದು ಹೋಗಿ ಹೊರ ಸೂಸುವ ಹೊಗೆಯಂತೆ ಜೀವನ ಸಂಕಷ್ಟದಲ್ಲಿ ಸಿಲುಕುವುದನ್ನು ಲೇಖನ ಗಂಭೀರವಾಗಿ ಚರ್ಚಿಸಿದೆ.
ಈ ಕೃತಿಯ ಮತ್ತೊಂದು ಪ್ರಮುಖ ಲೇಖನ ‘ಕನಕ ಪ್ರಜ್ಞೆ ಮತ್ತು ಪ್ರತಿಮೆ’. ಕನಕ ಜಯಂತಿ ಬಂದಾಗ ಪ್ರತಿಮಾರಾಧನೆ ಮಾಡುವುದನ್ನು ಟೀಕಿಸುವ ಲೇಖಕರು ಕನಕನನ್ನು ಜಾತಿ ಧರ್ಮದ ಎಲ್ಲೆಗಳನ್ನು ದಾಟಿದವನು. ಅವನನ್ನು ಜಾತಿಯಿಂದ ಆಚೆಗೆ ತಂದು ಹರಿಬಕ್ತಿ ಕೇಂದ್ರೀತವಾದ ಭಕ್ತ ಶ್ರೇಷ್ಠ ಎಂಬ ಪರಿಮಿತಿಯನ್ನು ದಾಟಿಸಿ ಕನಕ ನಿಜವಾಗಿ ಯಾರು ಎಂದು ಹುಡುಕಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಕನಕನು ಕನ್ನಯ್ಯ ಸೇರಿರಬಹುದು ಎಂದು ಹೇಳಲು ಹಲವಾರು ಅಂಶಗಳನ್ನು ಮುಂದಿಡುತ್ತಾ ಅದರ ಬಗ್ಗೆ ಸಾಂಸ್ಕೃತಿಕ ಅಧ್ಯಯನಗಳಾಗಬೇಕೆಂದು ಆಶಿಸುತ್ತಾರೆ. ರಾಜಕೀಯ ಅಸ್ಮಿತೆಯ ಕನಕನಾಗಬಾರದೆಂದು ಹೇಳುತ್ತಾರೆ. ಕನಕನ ಕಾಲ ಮುಗಿದಿಲ್ಲ. ಅವನು ಇಂದಿಗೂ ನಮ್ಮ ಸಮಾಜದಲ್ಲಿ ಪ್ರತಿನಿಧಿಯಾಗಿದ್ದಾನೆ. ಅಸ್ಪೃಶ್ಯತೆಯಿಂದ ದೇವಾಲಯದ ಹೊರಗೆ ನಿಂತು ಚೆನ್ನಕೇಶವನನ್ನು ಪ್ರಾರ್ಥಿಸಿದಂತೆ, ಜಾತಿದೇಗುಲಗಳನ್ನು ಬಿಟ್ಟು ಬಯಲಿಗೆ ಬರಲು ಕರೆಕೊಟ್ಟಂತೆ ಇಂದಿಗೂ ಜನ ಜಾತಿ ಕುಲದ ಶೋಷಣೆಯನ್ನು ನಿಲ್ಲಿಸಿ ಜೀವಪರತೆಯಿಂದ ಕಾಣಿರಿ ಎಂದು ಕರೆ ಕೊಡುವ ಪರಿಸ್ಥಿತಿ ಜೀವಂತವಾಗಿರುವುದನ್ನು ತುಂಬಾ ವಿಷಾದದಿಂದ ತಣ್ಣನೆಯ ಆಕ್ರೋಶದಿಂದ ವಿಡಂಬಿಸಿದ್ದಾರೆ.
ವಿವೇಕಾನಂದರು, ಕುವೆಂಪು ಅವರುಗಳ ಹೊಸ ಓದಿಗೆ ಕರೆ ಕೊಡುತ್ತಾರೆ. ಅವರ ಚಿಂತನೆಗಳನ್ನ ಸರಿಯಾಗಿ ಗ್ರಹಿಸುವ ಕ್ರಮವನ್ನು ಅರಿಯಬೇಕೆಂದು ಗ್ರಹಿಸಬೇಕಾಗಿರುವ ಅಗತ್ಯವನ್ನು ಒತ್ತಿ ಹೇಳುತ್ತಾರೆ.
ಇಡೀ ಕೃತಿ ಇದ್ದಯುದ್ದಕ್ಕೂ ದಲಿತರ ಹೋರಾಟದ ಬದುಕು, ಚಳುವಳಿಗಳು, ಬಂಡಾಯ ಮತ್ತು ಪ್ರಗತಿಪರ ಸಾಹಿತಿಗಳು ಬಂದು ಹೋಗುತ್ತಾರೆ. ಮಂಟೇದ ಅವರ ಅರಿವಿನ ಕಂಡಾಯವನ್ನು ರೂಪಿಸಿದ ಅವರ ಊರುಕೇರಿಗಳ ಅರಿವನ್ನು ಕಂಡಾಯಗೊಳಿಸಿದ ಸಾಮೂಹಿಕ ವೇಗ ವಿವೇಕವನ್ನು ತುಂಬಲು ಪ್ರಯತ್ನಿಸಿದ್ದಾರೆ. ಇವರನ್ನು ರೂಪಿಸಿದ ಮಂಟೇಸ್ವಾಮಿ ಪರಂಪರೆ ಪರಿಕಲ್ಪನೆಗಳ ರೂಪಕ ಜಗತ್ತನ್ನ ತನ್ನ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ. ಹಾದಿಗುಂಟ ಇವರ ಬದುಕನ್ನು ಪ್ರಭಾವಿಸಿದ ಸ್ಥಳ, ವ್ಯಕ್ತಿ ಸಮೂಹಗಳನ್ನ ಸ್ಮರಿಸಿಕೊಳ್ಳುವರು. ಅವರಿಗೆ ಕಂಡಾಯದ ಶಕ್ತಿ ತುಂಬಿದ ಕಂಡಾಯ ಹೊತ್ತು ಜನ ಪರಂಪರೆಯ ಹರಿಕಾರರನ್ನು ಅತ್ಯಂತ ಪ್ರೀತಿಯಿಂದ ನೆನೆಯುವರು. ಕಂಡಾಯ ಕೃತಿ ದಲಿತ ಲೇಖಕನ ಆತ್ಮಕಥನ ಅಥವಾ ಅನುಭವ ಕಥನದ ಅನುಭೂತಿಯನ್ನು ನೀಡುತ್ತಾ ದಮನಿತರಿಗೆ ಸಮುದಾಯ ಹಾಗೂ ಅವರು ಬೆಳೆಸಿಕೊಳ್ಳಬೇಕಾದ ಕಂಡಾಯವನ್ನು ಅರ್ಪಿಸುತ್ತಾ ಸಾಗಿದ್ದಾರೆ.
