ಸಿನಿಮಾ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ಸಮಾಜದ ಕನ್ನಡಿ ಎಂದು ನಂಬಿದವನು ನಾನು. ನಿನ್ನೆ ನಾನು ಫೇಸ್ಬುಕ್ಕಲ್ಲಿ ಪ್ರಶ್ನೆ ಎತ್ತಿದ್ದೆ—”ನಮ್ಮ ಸಿನಿಮಾಗಳು ಮಾಡರ್ನ್ ಕಾಲದ ಜಾತೀಯತೆಯನ್ನು ತೋರಿಸಲು ಯಾಕೆ ಭಯಪಡುತ್ತವೆ? ಹಳೆಯ ಕಾಲದ ಕಥೆಗಳನ್ನೇ ಯಾಕೆ ಆಶ್ರಯಿಸುತ್ತವೆ?” ಎಂದು. ಸಿನಿಮಾ ನೋಡಿದ ಮೇಲೆ ಅನ್ನಿಸಿದ್ದು: ಜಡೇಶ್ ಹಂಪಿ ಅವರು ಹಳೆಯ ಕಾಲದ ಪೋಷಾಕಿನಲ್ಲೇ ಇಂದಿನ ಹಸಿಬಿಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಸಿನಿಮಾದಲ್ಲಿ ತೋರಿಸುವ ಭೂಮಿ ಸಮಸ್ಯೆ, ಮರ್ಯಾದಾಗೇಡು ಹತ್ಯೆ, ಮಡಿ-ಮೈಲಿಗೆಯ ಹೆಸರಲ್ಲಿ ನಡೆಯುವ ಹಲ್ಲೆಗಳು ಕೇವಲ ಇತಿಹಾಸವಲ್ಲ; ಇಂದಿಗೂ ನಮ್ಮ ಹಳ್ಳಿ-ದಿಲ್ಲಿಗಳಲ್ಲಿ ನಡೆಯುತ್ತಿರುವ ಕಹಿ ಸತ್ಯಗಳು. ದೇವದಾಸಿ ಪದ್ಧತಿ ಮತ್ತು ಶಿಕ್ಷಣದ ನಿರಾಕರಣೆಯಂಥ ವಿಚಾರಗಳನ್ನು ನಿರ್ದೇಶಕರು ನಿರ್ಭೀತಿಯಿಂದ ತೆರೆಯ ಮೇಲೆ ತಂದಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವ ಪಂಚಾಯ್ತಿ ಕಟ್ಟೆಯ ನ್ಯಾಯದ ಹೆಸರಿನ ಅಧರ್ಮವನ್ನು ‘ಲ್ಯಾಂಡ್‌ಲಾರ್ಡ್’ ಬೆತ್ತಲೆ ಮಾಡಿದ್ದಾನೆ.

ಇಂಥದ್ದೊಂದು ಜವಾಬ್ದಾರಿಯುತ ಪಾತ್ರವನ್ನು ವಿಜಯ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಹಿಂಸೆಗಿಂತ ಸಂವಿಧಾನ ಮತ್ತು ಅಕ್ಷರ ಮುಖ್ಯ ಎನ್ನುವ ಸಂದೇಶ ರವಾನಿಸುವಲ್ಲಿ ಅವರು ಗೆದ್ದಿದ್ದಾರೆ. ಅವರ ಎರಡು ಶೇಡ್‌ಗಳ ನಟನೆ ಪ್ರಬುದ್ಧವಾಗಿದೆ.

ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ನಟನೆ ಬಗ್ಗೆ ನನಗೆ ಅಷ್ಟಕ್ಕಷ್ಟೇ ಎನಿಸುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಜಡೇಶ್ ಅವರು ನಿಜವಾದ ರಾಜ್ ಬಿ ಶೆಟ್ಟಿಯನ್ನು ಪರಿಚಯಿಸಿದ್ದಾರೆ. ಶೆಟ್ಟರೇ, ನಿಮ್ಮ ತಾಕತ್ತು ಇರುವುದು ಇಂಥ ಪಾತ್ರಗಳಲ್ಲಿ!

ಉಮಾಶ್ರೀ ನಿಜಕ್ಕೂ ನಟರಾಕ್ಷಸಿ. ಇವರು ಬೇರೆ ಭಾಷೆಯಲ್ಲಿದ್ದಿದ್ದರೆ ರಾಷ್ಟ್ರಪ್ರಶಸ್ತಿಗಳು ಇವರ ಮಡಿಲು ತುಂಬುತ್ತಿದ್ದವು. ನಮ್ಮ ಚಿತ್ರರಂಗದ ದುರಂತಕ್ಕೆ ಏನು ಹೇಳೋದು ಬಿಡಿ.
ರಚಿತಾ ರಾಮ್ ಲೇಡಿ ಸೂಪರ್‌ಸ್ಟಾರ್ ಬಿರುದಿಗೆ ತಕ್ಕಂತೆ ಅಭಿನಯಿಸಿದ್ದಾರೆ. ವಿಜಯ್ ಅವರ ಮಗಳು ಕೂಡಾ ತನಗೆ ಕೊಟ್ಟ ಪಾತ್ರವನ್ನು ಮುಗ್ಧತೆಯಿಂದ ನಿಭಾಯಿಸಿದ್ದಾರೆ.

ಸಿನಿಮಾದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದರ ಶಾರ್ಪ್ ಸಂಭಾಷಣೆಗಳು. ಪ್ರತಿಯೊಂದು ಲೈನ್ ಕೂಡ ಕಥೆಯನ್ನೇ ಹೇಳುವಷ್ಟು ಗಂಭೀರವಾಗಿವೆ. ಸಂಗೀತ ಚೆನ್ನಾಗಿದೆ, ಆದರೆ ಅಲ್ಲಲ್ಲಿ ಬಿಜಿಎಂ ಸ್ವಲ್ಪ ಓವರ್‌ಲ್ಯಾಪ್ ಎನಿಸುತ್ತದೆ. ಎಡಿಟಿಂಗ್ ಕಡೆ ಸ್ವಲ್ಪ ಗಮನ ಕೊಟ್ಟಿದ್ದರೆ ಲಾಗ್ ಎನಿಸುವ ದೃಶ್ಯಗಳನ್ನು ಸರಿಪಡಿಸಬಹುದಿತ್ತು.

ಒಬ್ಬ ಬರಹಗಾರನಾಗಿ ‘ಲ್ಯಾಂಡ್‌ಲಾರ್ಡ್’ ಸಿನಿಮಾ ನೋಡಿದ ಮೇಲೆ, ಇಂದಿನ ಜಾತೀಯತೆಯ ಬಗ್ಗೆ ಧೈರ್ಯವಾಗಿ ಮಾತನಾಡುವ ನಿರ್ದೇಶಕರು ಇನ್ನೂ ಇದ್ದಾರೆ ಎಂಬ ಭರವಸೆ ಮೂಡಿದೆ. ಇದು ಜಡೇಶ್ ಹಂಪಿ ಅವರ ಪೆನ್‌ನ ತಾಖತ್ತು ಇಲ್ಲಿದೆ.
ಸದ್ಯಕ್ಕೆ ಸಿನಿಮಾ ನೋಡಿ ನಾನಂತೂ ಸ್ಟನ್ ಆಗಿದ್ದೀನಿ… ಥಟ್ ಅಂತ ಇಷ್ಟು ಮಾತ್ರ ಹೇಳಿದ್ದೀನಿ… ಎಲ್ಲರೂ ತಪ್ಪದೇ ನೋಡಿ.
ವಿ.ಆರ್.ಸಿ.
