ಇದು ಹಾಟ್ ಸ್ಪಾಟ್ -2 ಎಂಬ ತಮಿಳು ಸಿನಿಮಾದ ದೃಶ್ಯ. ಹಿರಿಯ ನಟ ಮುತ್ತುಪಾಂಡಿ ಭಾಸ್ಕರ್ ಅವರ ಈ ಅದ್ಭುತ ಡೈಲಾಗ್ ಅನ್ನು ಕನ್ನಡಕ್ಕೆ ಅನುವಾದಿಸಿ ಸಂಭಾಷಣೆ ರೂಪದಲ್ಲಿ ಕೆಳಗೆ ನೀಡಿದ್ದೇನೆ.
“ಎಲಾ ಹುಚ್ಚರೇ… ಇನ್ನೂ ಎಷ್ಟು ವರ್ಷಗಳವರೆಗೆ ಹೀಗೆಯೇ ಇರುತ್ತೀರಿ? ನಾವು ಹೀಗಿರೋದಕ್ಕೆ ಏನು ಕಾರಣ ಗೊತ್ತಾ? ಗುಲಾಮಗಿರಿ!
ನಮಗೆ ಯಾವಾಗಲೂ ಯಾರಾದರೊಬ್ಬರಿಗೆ ಗುಲಾಮರಾಗಿ ಇರಬೇಕು. ಮೊದಲು ರಾಜರಿಗೆ, ಆಮೇಲೆ ಬಿಳಿಯರಿಗೆ (ಬ್ರಿಟಿಷರಿಗೆ), ಈಗ ರಾಜಕೀಯ ನಾಯಕರು, ಜಾತಿ ನಾಯಕರು, ಸಿನಿಮಾ ಹೀರೋಗಳು, ಕ್ರಿಕೆಟ್ ಆಟಗಾರರು… ಹೀಗೆ ಯಾರಾದರೊಬ್ಬರಿಗೆ!
ಯಾರದ್ದೋ ಬಗ್ಗೆ ಹೆಮ್ಮೆಯಿಂದ ಮಾತನಾಡಿ, ಅವನನ್ನು ಹೊಗಳಿ, ಅವನಿಗಾಗಿ ಜಗಳ ಆಡಿ, ಕಡೆಗೂ ಒಂದು ಗುಲಾಮ ನಾಯಿ ತರಹ ಸಾಯುತ್ತೀರಲ್ಲಾ…
ಆದರೆ ಅವನಿಗೆ? ನಾವ್ಯಾರು ಅಂತ ಕೂಡ ಗೊತ್ತಿರಲ್ಲ!
ಗೊತ್ತಿಲ್ಲದೆ ಕೇಳ್ತೀನಿ… ನಾವು ದುಡ್ಡು ಕೊಟ್ಟು ಸಿನಿಮಾ ನೋಡುವುದರಿಂದ ತಾನೇ ಅವನು ಆ ಮಟ್ಟದಲ್ಲಿ (ಶ್ರೀಮಂತನಾಗಿ) ಇದ್ದಾನೆ? ಹಾಗಾದರೆ ಯಾರು ಮಾಲೀಕರು (ಬಾಸ್)? ನಾವೇ ತಾನೇ?
ನಾವು ಸುಡುವ ಬಿಸಿಲಿನಲ್ಲಿ ನಿಂತಿರುತ್ತೇವೆ… ಅವನು ಎಸಿ ಕಾರಿನಲ್ಲಿ ನಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು, ನಿನ್ನನ್ನು ಆ ನಾಯಿಗಿಂತ ಕೇವಲವಾಗಿ ನೋಡಿಕೊಂಡು ಹೋಗುತ್ತಲೇ ಇರುತ್ತಾನೆ. ನೀನು? ಅವನ ಕಾರಿನ ಹಿಂದೆ “ವಾಳ್ಗ ವಾಳ್ಗ” (ಜಯವಾಗಲಿ) ಎಂದು ಹುಚ್ಚನಂತೆ ಕೈ ತಟ್ಟಿಕೊಂಡು ಓಡುತ್ತೀಯಾ.
ಏನ್ರೀ ಉಪ್ಪು ಹಾಕಿ ತಾನೇ ಊಟ ಮಾಡ್ತೀರಾ? ನಿಮಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಯೋಚನೆ ಮಾಡಿ ನೋಡಿ.
ನೀವು ಅಭಿಮಾನಿಯಾಗಿರುವ ಯಾವನಾದರೂ ಒಬ್ಬ ನಟ, ಇನ್ನೊಬ್ಬ ನಟನಿಗೆ ಅಭಿಮಾನಿಯಾಗಿ, ಅವನಿಗೆ ಕಟೌಟ್ ಇಟ್ಟು, ಹಾಲಿನ ಅಭಿಷೇಕ ಮಾಡಿ ತನ್ನ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನಾ? ಅವನು ನಟಿಸಿ, ಸಂಪಾದಿಸಿ ಕಾರು-ಬಂಗಲೆ ಅಂತ ಹೋಗ್ತಾನೇ ಇದ್ದಾನೆ.
ಆದರೆ ನೀನು? ಒಂದು ದಿನ ಮಳೆ ಬಂದರೆ ಸಾಕು, ಮನೆಯೊಳಗೆ ನೀರು ನುಗ್ಗಿ, ಇರೋದಕ್ಕೆ ಜಾಗ ಇಲ್ಲದೆ ನಡು ರಸ್ತೆಯಲ್ಲಿ ಬಂದು ನಿಲ್ಲುತ್ತೀಯಾ. ಆಗ ನೀನು ಅಭಿಮಾನಿಯಾಗಿರುವ ಯಾವನಾದರೂ ಬಂದು ನಿನ್ನನ್ನು ತನ್ನ ಮನೆಯೊಳಗೆ ಸೇರಿಸಿಕೊಳ್ಳುತ್ತಾನಾ?
ಬರೀ ಸಿನಿಮಾದಲ್ಲಿ, ಸ್ಟೇಜ್ ಮೇಲೆ ಮಾತ್ರ ‘ನಿಮ್ಮ ಕಾಲಿಗೆ ಚಪ್ಪಲಿಯಾಗಿ ಇರುತ್ತೇನೆ’ ಎಂದು ಡೈಲಾಗ್ ಹೊಡೆಯುತ್ತಾರೆ. ಆದರೆ ನಿಜವಾಗಿ ನೀನು ಸಹಾಯ ಎಂದು ಅವನ ಮನೆ ಬಾಗಿಲಿಗೆ ಹೋಗಿ ನಿಂತರೆ, ಅದೇ ಚಪ್ಪಲಿಯಲ್ಲಿ ಹೊಡೆದು ಓಡಿಸುತ್ತಾನೆ! ಚಪ್ಪಲಿಯಲ್ಲೇ ಹೊಡಿತಾನೆ!
ನಮಗೆ ಯಾವಾಗಲೂ ಯಾರನ್ನಾದರೂ ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಲೇ ಇರಬೇಕು. ‘ಅಯ್ಯೋ ಧೋನಿ ಬೇರೆ ಲೆವೆಲ್’, ‘ಸಚಿನ್ ದೇವರು’, ‘ಅವರ ಪ್ಯಾಂಟ್ ಅವರೇ ಹಾಕೊಳ್ತಾರೆ, ಅವರ ಊಟ ಅವರೇ ತಿಂತಾರೆ.. ಅವರ ತಿಕ ಅವರೇ ತೊಳ್ಕೋತಾರೆ.’ ಥೂ ನಿನ್ನ!!
ಎಲೈ… ಯಾವನೂ, ಯಾವನಿಗಿಂತಲೂ ದೊಡ್ಡವನಲ್ಲ!
ಸಾವಿರ ವರ್ಷಗಳ ಹಿಂದೆ ಇದ್ದವನ ಹತ್ತಿರ ಹೋಗಿ ‘ಇವರೇ ಸಚಿನ್, ದೊಡ್ಡ ಲೆಜೆಂಡ್’ ಎಂದು ಹೇಳಿದರೆ, ಅವನು ‘ಯಾರು ಇವನು?’ ಎಂದು ಕೇಳುತ್ತಿದ್ದ.
ಕ್ರಿಕೆಟ್ ಅಂದರೆ ಏನು ಎಂದೇ ಅವನಿಗೆ ಗೊತ್ತಿರಲ್ಲ.
ಅದು ನಾವಾಗಿಯೇ ಸೃಷ್ಟಿ ಮಾಡಿಕೊಂಡಿರುವ ಒಂದು ಆಟ, ಅಷ್ಟೇ. ನಾವು ಸೃಷ್ಟಿಸಿದ ಆಟವನ್ನು ಒಬ್ಬ ಚೆನ್ನಾಗಿ ಆಡುತ್ತಿದ್ದಾನೆ ಅಂದರೆ, ಅವನು ಆಟವನ್ನು ಚೆನ್ನಾಗಿ ಆಡುತ್ತಿದ್ದಾನೆ ಎಂದರ್ಥ, ಅಷ್ಟೇ! ಅದಕ್ಕಾಗಿ ಅವನನ್ನು ತಕ್ಷಣವೇ ಲೆಜೆಂಡ್, ದೇವರು ಅಂತೆಲ್ಲಾ ತಲೆ ಮೇಲೆ ಹೊತ್ತುಕೊಂಡು ಮೆರೆಸುವುದು ಮೂರ್ಖತನ ಅಲ್ವಾ?
ಒಬ್ಬನ ಪ್ರಾಣವನ್ನು ಯಾರು ಕಾಪಾಡುತ್ತಾರೋ… ಅವನೇ ಹೀರೋ! ನಾಲ್ಕು ಜನ ಹಸಿದವರಿಗೆ ಅನ್ನ ಹಾಕಿದನಲ್ಲ… ಅವನೇ ಹೀರೋ! ತಾನು ಓದಿಲ್ಲ ಅಂದರೂ, ಹತ್ತು ಮಕ್ಕಳು ಓದಲು ಶಾಲೆ ಕಟ್ಟಿಸಿದನಲ್ಲ… ಅವನೇ ಹೀರೋ!
ಉಳಿದಿದ್ದೆಲ್ಲಾ… ಏನೇನೂ ಇಲ್ಲ (ಶೂನ್ಯ)!”
ಸಿನಿಮಾದಲ್ಲೂ ಈತರ ಸತ್ಯ ಹೇಳೋಕೆ ನಿರ್ದೇಶಕನಿಗೆ, ನಟನಿಗೆ ಖಂಡಿತವಾಗಿ ಧೈರ್ಯ ಬೇಕು. ಬರೆದ ಪುಣ್ಯಾತ್ಮನಿಗೆ ಶರಣು… 🙏
~ವಿ.ಆರ್.ಸಿ.
