ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಹುಟ್ಟೂರು ಉಡುಪಿಯಲ್ಲಿ ಇಂದು ಅತ್ಯಂತ ಅದ್ದೂರಿ ಮತ್ತು ಭಾವುಕ ಸ್ವಾಗತ ಕೋರಲಾಯಿತು.ಬಿಗ್ ಬಾಸ್ ಮನೆಯಲ್ಲಿ 100ಕ್ಕೂ ಹೆಚ್ಚು ದಿನಗಳ ಕಾಲ ಅದ್ಭುತವಾಗಿ ಆಡಿ, ಲಕ್ಷಾಂತರ ಅಭಿಮಾನಿಗಳ ಮನಗೆದ್ದ ರಕ್ಷಿತಾ, ಇಂದು ಮೊದಲ ಬಾರಿಗೆ ಉಡುಪಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಇಡೀ ನಗರವೇ ಹಬ್ಬದ ವಾತಾವರಣದಲ್ಲಿ ಮುಳುಗಿತ್ತು.
ಉಡುಪಿಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ರಕ್ಷಿತಾ ಅವರನ್ನು ಮೆರವಣಿಗೆ ಮಾಡಲಾಯಿತು. ಅಭಿಮಾನಿಗಳು ಜೈಕಾರ ಹಾಕುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಕರಾವಳಿಯ ಸಾಂಪ್ರದಾಯಿಕ ಚೆಂಡೆ ವಾದನದೊಂದಿಗೆ ರಕ್ಷಿತಾ ಅವರನ್ನು ಬರಮಾಡಿಕೊಳ್ಳಲಾಯಿತು. ಮುತ್ತೈದೆಯರು ಆರತಿ ಎತ್ತಿ ಮಗಳಂತೆ ಸ್ವಾಗತಿಸಿದರು.
ರಕ್ಷಿತಾ ಶೆಟ್ಟಿಗೆ ಬಂಗುಡೆ ಮತ್ತು ಭೂತಾಯಿ ಮೀನುಗಳೆಂದರೆ ಅಚ್ಚುಮೆಚ್ಚು. ಅವರು ಆಗಾಗ ತಮ್ಮ ವ್ಲಾಗ್‌ನಲ್ಲಿಯೂ ಕೂಡಾ ಮೀನಿನ ಅಡುಗೆಗಳನ್ನು ಮಾಡುವ ವಿಡಿಯೋ ಮಾಡಿದ್ದಾರೆ. ಮೀನು ಮಾರುವ ಮಾರುಕಟ್ಟೆ ಹೋಗಿ ಮಹಿಳೆಯರ ಜೊತೆ ಮಾತನಾಡಿ ಮೀನನ್ನು ಕೊಂಡುಕೊಳ್ಳುತ್ತಿದ್ದರು. ಬಿಗ್ ಬಾಸ್ ಮನೆಗೂಮ ಕೂಡಾ ಮೀನುಗಾರರನ್ನು ಕರೆತಂದು ಅವರ ಜೀವನದ ಶೈಲಿಯ ಬಗ್ಗೆ ಕರ್ನಾಟಕದ ಜನತೆಗೆ ತಿಳಿಸಬೇಕೆನ್ನುವ ಬೇಡಿಕೆಯನ್ನಿಟ್ಟಿದ್ದರು. ಈದೇ ಕಾರಣಕ್ಕಾಗಿ ಅಭಿಮಾನಿಯೊಬ್ಬರು ರಕ್ಷಿತಾ ಕೈಗೆ ಮೀನನ್ನು ಕೊಟ್ಟಿದ್ದರು.
ರಕ್ಷಿತಾ ಶೆಟ್ಟಿ ತನ್ನ ಹುಟ್ಟೂರಿಗೆ ಬರುವ ವಿಚಾರವನ್ನು ತಿಳಿದ ನೂರಾರು ಜನ ಅಭಿಮಾನಿಗಳು ಹೆಜಮಾಡಿ ಟೋಲ್ ಗೇಟಿನಲ್ಲಿ ಜಮಾಯಿಸಿದ್ದರು. ತದನಂತರ ರಕ್ಷಿತಾ ಶೆಟ್ಟಿಯ ವಾಹನದ ಜೊತೆಗೆ ಅಭಿಮಾನಿಗಳು ಕೂಡಾ ಮೆರವಣಿಗೆ ಮಾಡುತ್ತಾ ಹೋಗಿದ್ದಾರೆ.
ಮೆರವಣಿಗೆಯ ಉದ್ದಕ್ಕೂ ರಕ್ಷಿತಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಹಸ್ತಲಾಘವ ಮಾಡಲು ಅಭಿಮಾನಿಗಳು ಮುಗಿಬಿದ್ದರು.
ಅಭಿಮಾನಿಗಳ ಪ್ರೀತಿಯನ್ನು ಕಂಡು ಕಣ್ಣಾಲಿಗಳು ಒದ್ದೆಯಾದ ರಕ್ಷಿತಾ, “ನಾನು ಬಿಗ್ ಬಾಸ್ ಟ್ರೋಫಿ ಗೆಲ್ಲದಿದ್ದರೂ ಪರವಾಗಿಲ್ಲ, ನಿಮ್ಮೆಲ್ಲರ ಪ್ರೀತಿಯನ್ನು ಗೆದ್ದಿದ್ದೇನೆ. ನನ್ನ ಈ ಗೆಲುವು ಕೇವಲ ನನಗಲ್ಲ, ನನ್ನನ್ನು ಬೆಳೆಸಿದ ಕರಾವಳಿ ಜನತೆಗೆ ಅರ್ಪಣೆ” ಎಂದು ಸಂತಸ ಹಂಚಿಕೊಂಡರು.
