ಪುಣೆ: ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ವ್ಯಾಪ್ತಿಯ ಮೋಶಿ ಎಂಬಲ್ಲಿ ಭಾರಿ ಮಳೆಯ ನಡುವೆ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ಭೀಕರ ದುರಂತದಲ್ಲಿ ಸುಮಾರು 15 ರಿಂದ 16 ಮಂದಿ ಅವಶೇಷಗಳಡಿ ಸಿಲುಕಿರುವ ಆತಂಕ ಎದುರಾಗಿದೆ.
ಸ್ಥಳೀಯ ಸಂಸ್ಥೆಯ ಪರವಾಗಿ ಕಸ ಸಂಸ್ಕರಣೆ ಮಾಡುವ ಖಾಸಗಿ ಕಂಪನಿಯೊಂದರ ಆಡಳಿತ ಕಚೇರಿಯಾಗಿ ಈ ಮೂರು ಅಂತಸ್ತಿನ ಕಟ್ಟಡವನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತಕ್ಕೆ ಕಾರಣವೇನು? ಪಿಂಪ್ರಿ ಚಿಂಚ್ವಾಡ್ ಮಹಾನಗರ ಪಾಲಿಕೆಯ ಮೋಶಿ ಕಸದ ಡಿಪೋ (Moshi Garbage Depot) ಪಕ್ಕದಲ್ಲೇ ಈ ಆಡಳಿತ ಕಚೇರಿ ಇತ್ತು. ಕಳೆದ ಕೆಲವು ದಿನಗಳಿಂದ ಪುಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ತೀವ್ರತೆಗೆ ಅಲ್ಲೇ ಇದ್ದ ಬೃಹತ್ ಕಸದ ಗುಡ್ಡ (Legacy Waste Mound) ಸಡಿಲಗೊಂಡು, ಏಕಾಏಕಿ ಪಕ್ಕದ ಮೂರು ಅಂತಸ್ತಿನ ಕಟ್ಟಡದ ಮೇಲೆ ಕುಸಿದು ಬಿದ್ದಿದೆ. ಕಸದ ರಾಶಿಯ ಭಾರ ತಡೆಯಲಾರದೆ ಇಡೀ ಕಟ್ಟಡ ಧರಾಶಾಹಿಯಾಗಿದೆ ಎಂದು ಪಾಲಿಕೆ ಕಮಿಷನರ್ ವಿಜಯ್ ಸೂರ್ಯವಂಶಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ: ಘಟನೆ ನಡೆದ ವೇಳೆ ಕಚೇರಿಯಲ್ಲಿ ಕಂಪನಿಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ಸ್ಥಳೀಯ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳ ಹಾಗೂ ಕಸದ ರಾಶಿಯ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಜೆಸಿಬಿ ಸೇರಿದಂತೆ ಭಾರಿ ಯಂತ್ರೋಪಕರಣಗಳನ್ನು ಬಳಸಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚಿದ ಆತಂಕ: ಪುಣೆಯಲ್ಲಿ ಮುಂಗಾರು ಮಳೆ ಮುನ್ಸೂಚನೆಗಿಂತಲೂ ಅಧಿಕವಾಗಿ ಸುರಿಯುತ್ತಿದ್ದು, ಹವಾಮಾನ ಇಲಾಖೆ ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರಿ ಮಳೆಯ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸಲ್ಪ ಅಡ್ಡಿಯಾಗುತ್ತಿದೆಯಾದರೂ, ಕಸದ ರಾಶಿಯನ್ನು ಸರಿಸಿ ಒಳಗಿರುವವರನ್ನು ಬದುಕಿಸಲು ರಕ್ಷಣಾ ಪಡೆಗಳು ತೀವ್ರ ಶ್ರಮಿಸುತ್ತಿವೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
