ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆಯಲ್ಲಿ ಗಂಭೀರ ನಿಯಮ ಉಲ್ಲಂಘನೆ ಹಾಗೂ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ 35 ಬೂತ್ ಮಟ್ಟದ ಅಧಿಕಾರಿಗಳಿಗೆ (BLO – Booth Level Officers) ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಶೋಕಾಸ್ (ಕಾರಣ ಕೇಳಿ) ನೋಟಿಸ್ ಜಾರಿ ಮಾಡಿದ್ದಾರೆ.

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲಿಸದೆ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮನೆ ಮನೆ ಸಮೀಕ್ಷೆ ನಡೆಸದ ಆರೋಪ: ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ, ಬಿಎಲ್‌ಒಗಳು ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ಭೇಟಿ ನೀಡಿ, ಕುಟುಂಬದ ಸದಸ್ಯರ ವಿವರಗಳನ್ನು ಖುದ್ದಾಗಿ ಪರಿಶೀಲಿಸಿ ಎಸ್‌ಐಆರ್ ನಮೂನೆಗಳನ್ನು (Enumeration Forms) ಭರ್ತಿ ಮಾಡಿಕೊಳ್ಳಬೇಕು. ಆದರೆ, ನೋಟಿಸ್ ಪಡೆದಿರುವ 35 ಬಿಎಲ್‌ಒಗಳು ನಿಯಮಗಳನ್ನು ಗಾಳಿಗೆ ತೂರಿ, ಮನೆ ಮನೆಗೆ ಹೋಗುವ ಬದಲಿಗೆ ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು ಅಥವಾ ತಮ್ಮ ಸ್ವಂತ ಕಚೇರಿ/ಮನೆಗಳಲ್ಲೇ ಕುಳಿತು ನಮೂನೆಗಳನ್ನು ಭರ್ತಿ ಮಾಡುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು.

ಖಾಲಿ ಫಾರಂಗಳಿಗೆ ಸಹಿ ಪಡೆದ ದೂರು: ಕೆಲವೆಡೆ ಮತದಾರರಿಗೆ ಫಾರಂ ಭರ್ತಿ ಮಾಡಲು ಅವಕಾಶ ನೀಡದೆ, ಕೇವಲ ಒಂದು ಪ್ರತಿಯನ್ನು ನೀಡಿ ಖಾಲಿ ಫಾರಂಗಳ ಮೇಲೆಯೇ ಸಹಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು. ಈ ಕುರಿತು ವಿರೋಧ ಪಕ್ಷಗಳ ನಾಯಕರು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿ, ಅಕ್ರಮ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು, ಕರ್ತವ್ಯ ಲೋಪ ಎಸಗಿದ ಬಿಎಲ್‌ಒಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ನಿಗದಿತ ಅವಧಿಯೊಳಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *