ಕೊಳತ್ತೂರ್: ವಿಜಯ್ ಡಿಎಂಕೆಯನ್ನು ಮುಗಿಸಲು ಹೊಸ ಪಕ್ಷವೊಂದನ್ನು ಕಟ್ಟಿದ್ದಾರೆ ಎಂದು ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ಪರೋಕ್ಷವಾಗಿ ವಿಜಯ್ರವರನ್ನು ಟೀಕಿಸಿರುವುದು ತಿಳಿದುಬಂದಿದೆ.
ನೂತನ ಪಕ್ಷವನ್ನು ಕಟ್ಟುವವರೆಲ್ಲರೂ ಡಿಎಂಕೆಯನ್ನು ಮುಗಿಸುವ ಉದ್ದೇಶದಿಂದಿರುತ್ತಾರೆ. ಯಾಕೆಂದರೆ ಡಿಎಂಕೆ ಅಭಿವೃದ್ದಿಯಾಗುವುದನ್ನು ನೋಡಲು ಅವರಿಂದಾಗುವುದಿಲ್ಲವೆಂದು ಕೊಳತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ನೀಡಿದ ಹೇಳಿಕೆಯನ್ನು “ಎಎನ್ಐ” ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೊಳತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಸ ಪಕ್ಷ ಕಟ್ಟಿದವರಿಗೆ ನಾನು ಹೇಳಲು ಬಯಸುವುದಿಷ್ಟೇ, ನಾಲ್ಕು ವರ್ಷಗಳಿಂದ ನಮ್ಮ ಸರ್ಕಾರ ಮಾಡಿರುವ ಸಾಧನೆಯನ್ನು ನೋಡಿ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದೇ ನಮ್ಮ ಉದ್ದೇಶ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡು ಆ ವಿಷಯಗಳಿಗೆ ಪ್ರತ್ಯುತ್ತರ ನೀಡುತ್ತಾ ಸಮಯವನ್ನು ಹಾಳು ಮಾಡುವುದಿಲ್ಲ. ಈ ವಿಚಾರಗಳ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲವೆಂದು ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.