ಬೆಂಗಳೂರು: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗುಂಡಿನ ದಾಳಿ ಮತ್ತು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, “ತನಿಖೆ ಹಳ್ಳ ಹಿಡಿದಿದೆ” ಎಂಬ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಆರೋಪಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಟುವಾದ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರು ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಮತ್ತು ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್: ನಮ್ಮ ಪೊಲೀಸರು ಯಾವುದೇ ಪ್ರಕರಣವನ್ನು ಭೇದಿಸುವ ಸಾಮರ್ಥ್ಯ ಹೊಂದಿದ್ದಾರೆ. ವಿರೋಧ ಪಕ್ಷದವರನ್ನು ಕೇಳಿಕೊಂಡು ನಾವು ತನಿಖೆ ನಡೆಸುವುದಿಲ್ಲ, ಎಂದು ಹೇಳುವ ಮೂಲಕ ಇಲಾಖೆಯ ಸ್ವತಂತ್ರ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಯಾರನ್ನು ಯಾವಾಗ ಬಂಧಿಸಬೇಕು ಎಂಬುದು ಪೊಲೀಸರಿಗೆ ತಿಳಿದಿದೆ, ಅದರಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಬಿಜೆಪಿ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಾವುದೇ ಪ್ರಕರಣವನ್ನು ಸಿಬಿಐಗೆ ವಹಿಸಬಾರದು ಎಂದು ಸಚಿವ ಸಂಪುಟ ಈಗಾಗಲೇ ತೀರ್ಮಾನಿಸಿದೆ. ಕೋರ್ಟ್ ಆದೇಶವಿದ್ದರೆ ಮಾತ್ರ ಅಂತಹ ನಿರ್ಧಾರ ತೆಗೆದುಕೊಳ್ಳುತ್ತೇವೆ, ಸದ್ಯಕ್ಕೆ ಅದರ ಅಗತ್ಯವಿಲ್ಲ” ಎಂದು ಪರಮೇಶ್ವರ್ ಈ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ.

Leave a Reply

Your email address will not be published. Required fields are marked *