ಬೆಂಗಳೂರು (17-02-2023): ಇಂದು ಮಂಡನೆಯಾದ ರಾಜ್ಯ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ಯಾವುದೇ ನಿರೀಕ್ಷೆಗಳು ಮತ್ತು ಬೇಡಿಕೆಗಳು ಘೋಷಣೆಯಾಗಿಲ್ಲ. ಇದರಿಂದ ಅಸಮಾಧಾನಗೊಂಡಿರುವ ನೌಕರರು ಹೋರಾಟದ ಮುನ್ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕೃರಣೆ ಮಾಡಬೇಕು, ಆ ನಿಟ್ಟಿನಲ್ಲಿ ಈ ಬಜೆಟ್ ನಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಮಾಡುವ ಸಂಬಂಧ ಘೋಷಣೆ ಮಾಡಬಹುದು ಎಂಬುದು ರಾಜ್ಯ ಸರ್ಕಾರಿ ನೌಕರರ ನಿರೀಕ್ಷೆಯಾಗಿತ್ತು. ಒಂದುವೇಳೆ ವೇತನ ಆಯೋಗ ಜಾರಿಯಾಗುವುದು ತಡವಾದಲ್ಲಿ ಈ ಬಜೆಟ್ ನಲ್ಲಿ ನೌಕರರಿಗೆ ಮಧ್ಯಂತರ ಪರಿಹಾರ ಘೋಷಣೆಯಾಗಬಹುದು ಎಂಬುದು ನೌಕರರ ನಿರೀಕೆಯಾಗಿತ್ತು. ಆದರೆ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಯಾವುದೇ ಘೋಷಣೆಗಳು ಆಗಿಲ್ಲದಿರುವುದು ನೌಕರರ ವಲಯದಲ್ಲಿ ತೀವ್ರ ನಿರಾಸೆಯುಂಟು ಮಾಡಿದೆ.
ಎನ್.ಪಿ.ಎಸ್ ರದ್ಧತಿ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಿಲ್ಲ!
ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದ್ದ ನೂತನ ಪಿಂಚಣಿ ರದ್ಧತಿ ಮತ್ತು ಹಳೆ ಪಿಂಚಣಿ ಜಾರಿಗೆ ಸಂಬಂಧಿಸಿದಂತೆ ಸಿಎಂ ಯಾವುದೇ ನಿರ್ಧಾರ ಪ್ರಕಟಿಸಿಲ್ಲದಿರುವುದು ಸಹ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ವಿವಿಧ ರಾಜ್ಯಗಳಲ್ಲಿ ನೌಕರರಿಗೆ ಕಂಟಕವಾಗಿರುವ ನೂತನ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮೌನಕ್ಕೆ ಜಾರಿದೆ.
ಹೋರಾಟದ ಮುನ್ಸೂಚನೆ ನೀಡಿದ ನೌಕರರು!
ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರ ಯಾವುದೇ ಬೇಡಿಕೆಗಳನ್ನು ಪರಿಗಣಿಸದೆ ಕಡೆಗಣಿಸಿರುವ ರಾಜ್ಯ ಸರ್ಕಾರದ ವಿರುದ್ಧ ನೌಕರರ ಸಂಘಟನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆಯಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿಯವರು ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಲಾಗುವುದು. ಬಜೆಟ್ ಹೊರತಾಗಿಯೂ ಮುಖ್ಯಮಂತ್ರಿಗಳು ಸಮಸ್ತ ರಾಜ್ಯ ಸರ್ಕಾರಿ ನೌಕರರ ಆಶೋತ್ತರಗಳನ್ನು ಈಡೇರಿಸುತ್ತಾರೆ ಎಂಬ ಭರವಸೆಯಿದೆ. ನಂತರವೂ ಸರ್ಕಾರದ ಕಡೆಯಿಂದ ಯಾವುದೇ ಘೋಷಣೆಗಳು ಆಗದಿದ್ದಲ್ಲಿ ಮುಂದಿನ ಹೋರಾಟಗಳ ಬಗ್ಗೆ ಮಂಗಳವಾರದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬಜೆಟ್ ನಂತರದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರ ವೇತನ ಪರಿಷ್ಕೃರಣೆ ಸಂಬಂಧ ಏಳನೇ ವೇತನ ಆಯೋಗವು ವರದಿ ನೀಡಿದ ಕೂಡಲೇ ಅದರ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಗ್ ಕನ್ನಡ ನ್ಯೂಸ್ ಡೆಸ್ಕ್