ಚಿತ್ತೆ ಮಳೆಯು ದೋ ಎಂದು ಸುರಿದಿತ್ತು. ಮಳೆಯ ರಭಸಕ್ಕೆ ಕೆರೆ ಕುಂಟೆಗಳೆಲ್ಲಾ ತುಂಬಿ ಹೋಗಿದ್ದವು. ಕೆರೆಗಳಲ್ಲಿ ಮೆಳೆ ಮೀನು, ಏಡಿಗಳು, ಕಪ್ಪೆಗಳು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದವು. ದೊಡ್ಡ ಮರಗಳೇ ಧರೆಗೆ ಉರುಳಿ ಬಿದ್ದಿದ್ದವು! ಆ ಮರಗಳಲ್ಲಿ ವಾಸವಾಗಿದ್ದ ಪಕ್ಷಿಗಳು ನೆಲೆ ಕಳೆದುಕೊಂಡು ದಿಕ್ಕೆಟ್ಟಿದ್ದವು. ಹೆಣ್ಣು ನಾಯಿಗಳು ಬೆದೆಗೆ ಬಂದಿದ್ದು, ಅವುಗಳ ಹಿಂದೆ ಗಂಡು ನಾಯಿಗಳು ಮೆರವಣಿಗೆ ಹೊರಟಿದ್ದವು. ಅವುಗಳೆಲ್ಲೇ ಪೈಪೋಟಿ ಕೂಡಾ ಏ‍ರ್ಪಟ್ಟಿತ್ತು. ಹೊಲಗಳಲ್ಲಿ ಗರಿಕೆ ಹುಲ್ಲು, ಅಣ್ಣೆ ಸೊಪ್ಪು, ಅಡಿಕೆ ಸೊಪ್ಪು, ದಗ್ಗಲಿ ಸೊಪ್ಪು ಹೀಗೆ ನಾನಾ ರೀತಿಯ ಸೊಪ್ಪುಗಳು ಬೆಳೆಯಲು ಈ ಮಳೆಯು ನೆರವಾಗಿತ್ತು. ಇಂತಹ ಸಮಯದಲ್ಲಿ ಹೊಸಹಳ್ಳಿಯ ನಿಸರ್ಗ ನವ ಚೈತನ್ಯ ಪಡೆದುಕೊಂಡು, ತನ್ನನ್ನು ತಾನು ಹಸಿರು ಗಿಡಮರಗಳಿಂದ ಸಿಂಗರಿಸಿಕೊಂಡು ನಳ ನಳಿಸುತ್ತಿತ್ತು. ಇಂಥ ಒಂದು ಊರಲ್ಲಿ ಸಾದಪ್ಪನೆಂಬ ವ್ಯಕ್ತಿಯಿದ್ದ, ಇವನು ಸಾಕಷ್ಟು ಮಾಗಿದ ಅನುಭವ, ಅತ್ಯುತ್ತಮ ಪರಿಣಿತಿ, ಕೌಶಲ್ಯ ಹೊಂದಿದ ಉತ್ತಮ ಬಡಗಿಯಾಗಿ ಸುತ್ತ-ಮುತ್ತಲಿನ ಹತ್ತು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದ.

ಅಂದು ಬಡಗಿ ಸಾದಪ್ಪ ಬೆಳ್ಳಂ ಬೆಳಿಗ್ಗೆ ಐದು ಗಂಟೆಗೆ ಎದ್ದು, ಮೂರು ಮೈಲಿ ದೂರದ ಸರ್ಜಾಪುರದ ಸಂತೆಗೆ ನಡೆದುಕೊಂಡು ಹೋಗಿ, ಎರಡು ಕೆ.ಜಿ. ನಮ್‌ ಮಾಂಸ ತಂದಿದ್ದ. ಇನ್ನೇನು ಆತ ಆ ಮಾಂಸವನ್ನು ಚಿಕ್ಕ ಚಿಕ್ಕದಾಗಿ ತುಂಡು ಮಾಡುತ್ತಿದ್ದಾಗ….! ರಾಮಾಂಜಿಯು ಬಾಗಿಲನ್ನು ದಬ ದಬ ಅಂತ ಒಂದೇ ಸಮನೆ ಬಡಿದು, “ಬಿರಿನ ಬಾಗಿಲು ತೆಗಿ ದೊಡ್ಡಪ್ಪೋ” ಅಂತ ಕರೆದ. ರಾಮಾಂಜಿಯ ದೊಡ್ಡಪ್ಪ ಬಂದು ಬಾಗಿಲು ತೆಗೆದು, “ಯಾಕೋ ರಾಮಾಂಜಿ ಇಷ್ಟೊತ್ತಿಗೆ ಎದ್ದೆ? ಇನ್ನ ಸ್ವಲ್ಪೊತ್ತು ಮಲ್ಕಳ್ಳಕ್ಕಿಲ್ವ”..! ಅಂದ. ಅದಕ್ಕೆ ರಾಮಾಂಜಿ, “ನೀನು ಸರ್ಜಾಪುರದ ಸಂತೆಕ್ಕೋಗಿ ನಮ್‌ ಮಾಂಸ ತಂದಿದ್ದಿಯ ಅಂತ ನಮ್ಮಮ್ಮ ಹೇಳಿದ್ಲು ಅದ್ಕೆ ಬಿರೀನ ಎದ್ದು ಬಿಟ್ಟೆ ದೊಡ್ಡಪ್ಪ” ಅಂದ. “ಸರಿ ಬಾ, ಬಾಡೆಸರು ಮಾಡಾಣ, ನಿಂಕ ಮಾಂಸ ಬೆಂದ್‌ ಮೇಲೆ ಸಪ್ಪೆ ಬಾಡು ಹಾಕ್‌ ಕೊಡ್ತೀನಿ ತಿನ್ನುವಂತೆ” ಅಂದ ಸಾದಪ್ಪ. “ಸಪ್ಪೆ ಬಾಡ..? ಹಂಗದ್ರೆ ಏನ್‌ ದೊಡ್ಡಪ್ಪ?” ಕುತೂಹಲದಿಂದ ಕೇಳಿದ. “ಹೂ಼ .. ನಾನ್‌ ಮಾಡ್ತೀನಿ, ನೀನ್‌ ನೋಡ್ತಿರು, ನಿಂಗೆ ಗೊತ್ತಾಗ್ತದೆ” ಅಂದ ಸಾದಪ್ಪ. “ಸರಿ ದೊಡ್ಡಪ್ಪ” ಅಂತ ಸುಮ್ಮನೆ ಹೋಗಿ ಕೂತ್ಕೊಂಡ ರಾಮಾಂಜಿ. ಸಾದಪ್ಪ ಮಾಂಸನ ಕೂಯ್ದು ಕೂಯ್ದು ಹಾಕ್ತಿದ್ದನ್ನು ಕಂಡ ರಾಮಾಂಜಿ ಆಶ್ಚರ್ಯದಿಂದ ಕೇಳಿದ, “ದೊಡ್ಡಪ್ಪೋ ಇದೇನು? ಏನೇನೋ ಅಯ್ತೆ ಮಾಂಸದ್‌ ಜೊತ್ಗೆ” ಅಂದ. “ಹೂ಼ ಮಗ ಇದು ಶರ್ಬಿ, ಇದು ಪಚ್ಚಿ, ಇದು ಗುಂಡ್ಗೆ, ಇದು ಹೀಲ್ಗೆ, ಇದು ದೊಮ್ಮೆ, ಇದು ಮಾಂಸಖಂಡ” ಅಂತ ಅವುಗಳ ಪರಿಚಯ ಮಾಡಿಕೊಟ್ಟ ಸಾದಪ್ಪ. ಅದೇ ಮೊದ್ಲು ಅವುಗಳ ಹೆಸರು ಕೇಳಿದ್ದ ರಾಮಾಂಜಿ ತನ್ನ ದೊಡ್ಡಪ್ಪ ಹೇಳಿದ್ದಕ್ಕೆಲ್ಲಾ ತಲೆಯಾಡಿಸಿದ.

ಕಟ್‌ ಮಾಡಿದ್‌ ಮೇಲೆ ಚೆನ್ನಾಗಿ ತೊಳೆದು ಸಾರು ಮಾಡಲು ಅಣಿಯಾದ ಸಾದಪ್ಪ. ಆ ಬಾಡಿನ ಸಾರಿಗೆ ಬೇಕಾದ ಕಾರದ ಪುಡಿ, ಟಮೋಟ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಇವುಗಳನ್ನ ಹದವಾಗಿ ಕೂಯ್ದು ಒಂದು ಕಡೆ ಇಟ್ಟುಕೊಂಡ. ನಂತರ ಒಲೆ ಮೇಲೆ ಮಡಿಕೆ ಇಟ್ಟು ಸ್ವಲ್ಪ ನೀರು ಹಾಕಿ ಚೆನ್ನಾಗಿ ತೊಳೆದಿದ್ದ ಮಾಂಸವನ್ನ ಮಡಿಕೆಗೆ ಹಾಕಿದ, ಆಮೇಲೆ ಕೂಯ್ದು ಕೊಂಡಿದ್ದ ಮಾಂಸವನ್ನು ಮಡಿಕೆಗೆ ಹಾಕಿದ. ಒಲೆಯೊಳಗೆ ಬೆಂಕಿ ಹಚ್ಚಿ, ಒಳ್ಳೆಯ ಚಕ್ಕೆ ಸೌದೆ ಉರಿಯೋಕೆ ಇಟ್ಟಿದ್ದ. ಬೆಂಕಿಯ ಜ್ವಾಲೆಗಳು ಭುಗಿಲೆದ್ದು ಮಡಿಕೆಯ ಸುತ್ತಲೂ ಹರಡಿಕೊಂಡು ಧಗಧಗಿಸಿ ಉರಿಯುತ್ತಿತ್ತು. ಒಂದು ಗಂಟೆ ಒಂದೇ ಸಮನೆ ದೊಡ್ಡ ಉರಿಯಲ್ಲಿ ಮಾಂಸ ಬೇಯುತ್ತಿತ್ತು. ರಾಮಾಂಜಿ ಅಲ್ಲೇ ಕೂತ್ಕೊಂಡು ಎಲ್ಲಾ ನೋಡ್ತಿದ್ದ. ಅಷ್ಟರಲ್ಲಿ ಅವನ ದೊಡ್ಡಪ್ಪ ಹೊರಗಿಂದ ಒಳಗೆ ಬಂದ, ಆಮೇಲೆ ಒಂದು ತಟ್ಟೆ ತಗೊಂಡು ಒಲೆ ಮೇಲೆ ಬೇಯ್ತಿದ್ದ ಮಡಿಕೆ ಮುಚ್ಚಳ ತೆಗೆದು, ಮಾಂಸ ಬೆಂದಿದೆಯೇ ಎಂದು ನೋಡಿದ. ಆಮೇಲೆ ತಟ್ಟೆ ತಗೊಂಡು ಅದರಲ್ಲಿ ಸೂಪು ರಸಂನ ಊಯ್ದು… ಅದರ ಜೊತೆಗೆ ಸ್ವಲ್ಪ ಸಪ್ಪೆ ಬಾಡನ್ನೂ ಹಾಕಿದ. “ಬಾರೋ ರಾಮಾಂಜಿ, ತಗೋ… ಬಿಸಿ ಬಿಸಿ ರಸಂನ್ನ ಕುಡಿ, ಆಮೇಲೆ ಈ ಸಪ್ಪೆ ಬಾಡು ತಿನ್ನು” ಅಂದ. ರಾಮಂಜಿಯೂ ಹೂ಼ಗುಟ್ಟಿ ತಟ್ಟೆ ತಗೊಂಡು ತಿನ್ನೋಕೆ ಕೂತ್ಕೊಂಡ..

ಸಾಂದರ್ಭಿಕ ಚಿತ್ರ

ಮೊದಲ ಬಾರಿ ಸಪ್ಪೆ ಬಾಡು ರಸಂನ ರುಚಿ ಸವಿಯೋ ಕಾತುರ ತಡೆಯೋಕೆ ಆಗದೆ ರಾಮಾಂಜಿ, ಬಿಸಿ ಬಿಸಿ ರಸಂನ ಕುಡಿಯೋಕೆ ಶುರುಮಾಡಿದ. ಕುಡಿಯುವ ರಭಸದಲ್ಲಿ ಸ್ವರ್-ಸ್ವರ್‌ ಅನ್ನೋ ಶಬ್ದ ರಾಮಾಂಜಿಯ ಕಿವಿಯಲ್ಲಿ ಝೇಂಕರಿಸುತ್ತಿತ್ತು. ಒಂದೆರಡು ಗುಟುಕು ಸೂಪು ರಸಂ ಕುಡಿದ, “ಅಬ್ಬಬ್ಬಾ.. ಏನ್‌ ರುಚಿ ಅಯ್ತೆ..? ಹಸಿ ಮೆಣಸಿನ ಘಾಟು, ಬೆಳ್ಳುಳ್ಳಿಯ ಘಮಲು, ಕೊತ್ಮಿರಿ ಸೊಪ್ಪನ ಪರಿಮಳ… ಆಹಾ! ಸಖತ್ತಾಗೈತೆ ದೊಡ್ಡಪ್ಪೋ”…. ಅಂತ ಅನ್ಕೊಂಡು, ಸೂಪು ರಸಂನ ಪೂರ್ತಿ ಕುಡಿದು ಮುಗಿಸಿದ್ಮೇಲೆ, ಈಗ ಸಪ್ಪೆ ಬಾಡಿನ ಸರದಿ. ಹದವಾಗಿ ಬೆಂದಿದ್ದ ಮಾಂಸದ ತುಂಡುಗಳನ್ನ ಬಾಯಿಗೆ ಇಟ್ಟುಕೊಂಡು, “ಒಳ್ಳೆ ಊವ ಇದ್ದಂಗೆ ಐತೆ ದೊಡ್ಡಪ್ಪೋ” ಅಂತ ಚಪ್ಪರಿಸಿಕೊಂಡು, ಚಪ್ಪರಿಸಿಕೊಂಡು ತಿಂದ ರಾಮಾಂಜಿ. ಆಮೇಲೆ ಅವನ ದೊಡ್ಡಪ್ಪ ಇನ್ನೊಂದು ತಟ್ಟೆಗೆ ಎರಡು ಗಂಟು ಮೂಳೆ ಹಾಕ್ಕೊಂಡು, ಗ್ಲಾಸಲ್ಲಿ ಸ್ವಲ್ಪ ಸಾರಾಯಿ ತಗೊಂಡು ಬಂದ. ರಾಮಾಂಜಿ ಅವನ ದೊಡ್ಡಪ್ಪನ ತಟ್ಟೆನೇ ನೋಡ್ತಿದ್ದ… ಬಿಸಿ ಬಿಸಿ ಹೊಗೆ ಮೇಲಕ್ಕೆ ಹೋಗ್ತಿತ್ತು… ಗಂಟು ಮೂಳೆ ಎತ್ತುಕೊಂಡ್‌ ತಪ್‌ ಅಂತ ತಟ್ಟೆ ಮೇಲೆ ಒಂದು ಏಟು ಹಾಕ್ದ.. ಮೂಳೆ ಒಳಗಿಂದ ತುಪ್ಪ ದಪ್‌ ಅಂತ ಬಿತ್ತು..! “ತಗೋ ಮಗ ತಿನ್ನು.. ಇದನ್ನ ನಾವ್‌ ತಿನ್ಬೇಕು ಮಗ ಇದೇ ನಮಗ್‌ ಶಕ್ತಿ, ಯುಕ್ತಿ!” ಅಂದ. “ದೊಡ್ಡಪ್ಪ.. ಈ ಮಾಂಸ ತಿಂದ್ರೆ ಮನ್ಷ ಮಂದ ಆಯ್ತರಂತೆ..? ಮುಂದೆ ಓದು ತಲೆಗೆ ಅಂತ್ತಲ್ವಂತೆ ಹೌದಾ..?” ಅಂದ ರಾಮಾಂಜಿ. “ಯಾವ್‌ ಬೋಳಿಮಗನೋ ನಿಂಕ ಹಂಗ್‌ ಹೇಳಿದ್ದು..? ನಾವೆಲ್ಲ ಹುಟ್ಟಿದಾಗಿಂದ ತಿನ್ಕೊಂಡು ಬಂದಿಲ್ಲಾ, ಏನಾಗೈತೆ ? ನಂಕ್ ಬುದ್ದಿ ಇಲ್ಲಾನಾ? ನೋಡು, ಹತ್ತಾರು ಹಳ್ಳಿಯ ರೆಡ್ಡಿಗರೂ, ಗೌಡರೂ, ಅಗಸರು, ಕುರುಬರು, ನಮ್ಮೋರು ಎಲ್ಲರೂ ಬರ್ತಾರೆ ನನ್ನತ್ರ, ಬಡಗಿ ಕೆಲಸ ಮಾಡಿಸ್ಕೊಂಡು ಹೋಗ್ತಾರೆ ಮತ್ತೇ! ಹಂಗೆಲ್ಲಾ ಏನೂ ಇಲ್ಲ ಮಗ ಅವರ ಮಾತನ್ನ ಕೇಳೋಕೆ ಹೋಗಬೇಡ, ಇದು ನಮ್‌ ಮಾಂಸ, ನಮ್‌ ಸಂಸ್ಕೃತಿ, ನಮ್‌ ಆಚಾರ ಇದನ್ನ ಬಿಡಬಾರದು” ಅಂತ ಬುದ್ದಿ ಹೇಳಿದ ಮೇಲೆ, ರಾಮಾಂಜಿಯ ತಲೆ ಒಳಗಿಂದ ತಿನ್ನಬಾರದು ಅನ್ನೋದನ್ನ ತೆಗೆದುಹಾಕಿ, ತಿನ್ನೋದು ಬಿಡಬಾರದೆಂದುಕೊಂಡ. ರಾಮಾಂಜಿ ಮುಂದೆ ಓದಿ ದೊಡ್ಡ ಕೆಲಸಕ್ಕೆ ಹೋದರೂನೂ, ನಮ್‌ ಮಾಂಸ ತಿನ್ನೋದ್‌ ಬಿಡೊಲ್ಲ ಅಂತ ಮನಸ್ಸಲ್ಲೇ ಅಂದ್ಕೊಂಡ.

ಯುಗಾದಿ ವರ್ಷತೊಡುಕು ಪ್ರಸಂಗ

ಒಂದ್ಸಾರಿ ಉಗಾದಿ ಹಬ್ಬದ ʻವರ್ಷದೊಡುಕುʼ ದಿನ. ಆ ಊರಿನ ಓಣಿಲಿ ಊರೊರೆಲ್ಲಾ ಸೇರ್ಕೊಂಡು ಮಾಂಸ ಕೂಯ್ತಿದ್ರು, ಒಂದು ದೊಡ್ಡ ರಾಶಿಯ ಮಾಂಸ ಬಿದ್ದಿತ್ತು. ಆ ಊರಿನ ಬಾಡ್‌ ಪೆಷಲಿಸ್ಟ್ ಸಾರಾಯಿ ಪಾಪಣ್ಣ ಬೆಳಿಗ್ಗೆ ಬೆಳಿಗ್ಗೇನೆ ಕುಡಿದು ಮಾಂಸನಾ ಕೂಯ್ತಾ ಕುಂತಿದ್ದ. ಇನ್ನೂ ಉಳಿದೋರಿಗೆ ಬೇರೆ ಬೇರೆ ಕೆಲಸನ ಹೇಳ್ಕೊಂಡ್‌ ಸರ್ದಾರ್‌ ಪಾಪರಾಯುಡು ಡೈಲಾಕ್‌ಗಳ್ನ ಹೇಳುತ್ತಿದ್ದ, “ಲೋ ಎಂಟ್ರಾಣ ಆಯ್ತೆನೋ ಕೂಯ್ದಿದ್ದು? ಬಾ ಇಲ್ಲಿ ಈ ಗೋಣಿ ಚೀಲದ್‌ ಮೇಲೆ ಬಿದ್ದಿರೋ ಮೂಳೆಗಳನ್ನ ಒಂದ್ ಬೋಗುಣಿಕ್ಕಾಕು, ಅಗೋ ಆ ಪಚ್ಚಿ ಕರ್ಳು ಎಲ್ಲನೂ ಒಂದು ಗೋಣಿಗ್‌ ತುಂಬ್ಕೊ. ಆ ಊರು ಮುಂದೆ ಕುಂಟೆಕ್ ಹೋಗಿ ತೊಳಕೊಂಡ್‌ ಬರಾನ” ಅಂದ. “ಅಗೋಳೋ… ಲೇ ಮರ್ರೆಪ್ಪ ಆ ರಕ್ತನಾ ಮುಚ್ಚಿಡೋ ನೊಣಗಳು ಮುಸರ್‌ತ್ತದೆ” ಅಂದ ಪಾಪಣ್ಣ. ಮರಿಯಪ್ಪನು ಬೋಗುಣಿ ತುಂಬ ಹಿಡ್ಕೊಂಡಿದ್ದ ರಕ್ತನಾ ಅರಳೆಲೆಯಿಂದ ಮುಚ್ಚಿ ನೊಣಗಳನ್ನು ಓಡಿಸ್ತಿದ್ದ. “ಲೇ ತೋಟ್ಗ ಅಗೋ ಚರ್ಮನಾ ಒಂದು ಗೋಣಿಕ್ ಹಾಕು, ನಾಳೆ ಸರ್ಜಾಪುರಕ್ಕೆ ಹೋಗಿ ಆ ಸಾಬ್ರು ಖಲೀಲ್‌ಣ್ಣಕ ಹಾಕಣ” ಅಂದ. ತೋಟಪ್ಪನು “ಹೂ಼ ಸರಿ ಅಣ್ಣೋ” ಅಂತ ಆ ಚರ್ಮನ ಒಂದು ಗೋಣಿ ಒಳಕ್ಕ ಹಾಕ್ದ. ಪಾಪಣ್ಣ ಮತ್ತೆ ಅವನಿಗೆ “ಅದಕ್ಕ… ಸ್ವಲ್ಪ ಉಪ್ಪು ಸವರಿ, ಈರುಳ್ಳಿ ಬೆಳ್ಳುಳ್ಳಿ ಮೆಣಸಿನಕಾಯಿ ಒಂದೆರಡು ಕರಿ (ಇದ್ದಿಲು) ಅದರೊಳಕ್ಕಾಕೊ, ಹೋಗೊ ದಾರಿಲಿ ಯಾವನಾ ದರಿದ್ರದವು ಬಂದ್ಬಿಟ್ಟವು” ಅಂದ.

ಸಾಂದರ್ಭಿಕ ಚಿತ್ರ

ಸುಮಾರು ಒಂದೆರಡು ಗಂಟೆ ಈ ಕರುಳು ಪಚ್ಚಿ ಚಿದರೆ ಎಲ್ಲಾನೂ ಕಿಲೀನಾಗಿ ತೊಳೆದು ಮಕ್ಕರಿಗೆ ಹಾಕೊಂಡು ಓಣಿಗೆ ಬಂದ್ರು. ಅಷ್ಟರಲ್ಲಿ ಉಳಿದವರೆಲ್ಲಾ ಮಾಂಸನ್ನೆಲ್ಲಾ ಒಂದು ದೊಡ್ಡ ಗುಡ್ಡೆ ರೀತಿಲಿ ರಾಶಿ ಮಾಡಿದ್ರು. “ಲೇ ಸೀನ, ನಂಜ ಆಯ್ತೆನ್ರೋ ಕೂಯ್ದಿದ್ದು”? ಅಂದ ಪಾಪಣ್ಣ. “ಹೂ಼ ಆಯ್ತು ಬಣ್ಣೋ” ಅಂದ ನಂಜಪ್ಪ. ಮಾಂಸವನ್ನು ಎಲ್ಲಾ ಮನೆಗಳಿಗೂ ಹಂಚೊಕೆ ಗುಡ್ಡೆ ಮಾಡಿತ್ತಿದ್ರು, ಅದನ್ನ ಹಳ್ಳಿ ಕಡೆ ಗುಡ್ಡೆ ಮಾಂಸ ಅಂತಾರೆ. ಎಲ್ಲ ಮನೇಗಳ್ಗೆ ಸರಿಸಮನಾಗಿ ಎಲ್ಲ ತರದ ಬಾಡು, ಶರಬಿ, ಕರುಳು, ಪಚ್ಚಿ, ಚಿದಿರೆ, ಗುಂಡ್ಗೆ, ಹೀಲ್ಗೆ, ಅಂತ ಎಲ್ಲನೂ, ಎಲ್ಲರ್ಕು ಸಿಕ್ಕೋ ತರ ಗುಡ್ಡೆ ಮಾಂಸಕ್ಕೆ ಭಾಗ ಹಾಕ್ತಾರೆ, ಆಮೇಲೆ ಎಲ್ಲರ ಮನೆಗಳಿಗೆ ಸಮಾನವಾಗಿ ಹಂಚುತ್ತಾರೆ.

ಗುಡ್ಡೆ ಮಾಂಸ ತಗೊಂಡೋಗೋಕೆ ಮುನಿಗಿರಮ್ಮ, ಪಾಪಮ್ಮ, ಮುನಿಯಮ್ಮ, ಈರಮ್ಮ, ಗೌರಮ್ಮ ಬಂದಿದ್ರು. “ಲೋ ಪಾಪಣ್ಣ ಇದೇನ್‌ ಮಾಂಸ ಕಡಿಮೆ ಕಾಣ್ತದೇ, ನಮ್ಮ ಗುಡ್ಡೆನಾಗ” ಅಂದ್ಳು ಪಾಪಮ್ಮ. “ಹೂ಼ ಅಕ್ಕೋ ಜೀವ ಇನ್ನಾ ಎಳೇದು ಅದ್ಕೆ ಮಾಂಸ ಬಲ್ತಿಲ್ಲ, ಅಂಗಾಗಿ ಮಾಂಸ ಕಡಿಮೆ ಕಾಣ್ತಿದೇ” ಅಂದ ಪಾಪಣ್ಣ. ಒಂದು ಗಂಟೆ ಒಳಗೆ ಎಲ್ಲಾರಿಗೂ ಭಾಗ ಮಾಡಿ, ಮಾಂಸನ ಹಂಚಿದ ಅವನು, “ಬಿರಿನಾ ಬಿರಿನಾ ಬಂದು ತಗೊಂಡೊಗಿ ಸಾರ್‌ ಮಾಡ್ಕೊಂಡ್‌ ತಿನ್ರಿ” ಅಂದ ಆ ಪಾಪಣ್ಣ. ಎಲ್ಲರೂ ತಲೆ ಆಡಿಸ್ತಾ ಅವರವರ ಭಾಗದ ಗುಡ್ಡೆ ಮಾಂಸವನ್ನ ತೆಗೆದುಕೊಂಡು ಹೋಗಿ ಸಾರ್‌ಗೆ ರೆಡಿ ಮಾಡ್ತಿದ್ದರು. ಅವತ್ತು ಅವರ ಮನೆಗಳ್‌ ಸುತ್ತ ಮುತ್ತ ಘಮ ಘಮಿಸುವ ಬಾಡ್‌ ಸಾರ್‌ನ ವಾಸನೆ ಅಂಗೇ ಸ್ವರ್ಗ ಲೋಕಕ್ಕೆ ಹೋಗ್ತಿತ್ತಿದ್ದನ್ನ, ಸರಾಯಿ ಕುಡ್ಕೊಂಡ್‌ ಸಪ್ತ ಸ್ವರದಲ್ಲಿ ಹಾಡ್‌ತ್ತಿದ್ದ ಪಾಪಣ್ಣ. ಇವತ್ತಿಗೂ ಕಣ್ಣ ಮುಂದೆ ಆ ಊರಿನ ಈ ದೃಶ್ಯಗಳು ಬರ್ತಿತ್ತದೆ.

ಒಣಬಾಡಿನ ಪ್ರಸಂಗ

ರಾಮಾಂಜಿ ಅವನ ತಾಯಿಯನ್ನು ಒಂದು ದಿನ “ಅಮ್ಮ…. ನೀನು ನಮ್ಮ ಬಾಡಲ್ಲಿ ಏನೇನು ಅಡುಗೆ ಮಾಡಿದ್ದೀಯ..? ಯಾವ ತರದ ಸಾರು, ಅಡುಗೆಯನ್ನ ಬಹಳ ಇಷ್ಟ ಪಟ್ಟವ್ರೆ ಅಪ್ಪ?” ಅಂತ ಕೇಳ್ದ. ಅದಕ್ಕೆ ಅವರಮ್ಮ, “ನಮ್ಮ ಮಾಂಸದಲ್ಲಿ ಎರಡ್ಮೂರು ತರ ಸಾರು ಮಾಡಿದೀನಿ, ಗೊಜ್ಜು ತರ ಗಟ್ಟಿಯಾಗಿ ಸಾರು ಮಾಡಿದೀನಿ, ಮಾಂಸಾನಾ ಕೂಯ್ದು ಒಣಗಿಸಿ, ಒಣ ಬಾಡು ಆದ ಮೇಲೆ ಆ ಬಾಡನ್ನು ಹಿದಿಕಿದ ಅಥವಾ ಚಿದಿಕಿದ ಅವರೆ ಬೇಳೆ ಜೊತೆ ಸಾಂಬಾರು ಮಾಡಿದೀನಿ, ಇದನ್ನು ತಿಂತ ಇದ್ದರೆ, ಆಹಾ..! ಚೆನ್ನಾಗಿರುತ್ತೆ!” ಅಂದಳು. ಮಂದುವರೆಸುತ್ತ, “ಹೂ಼ ನಮ್ಮಜ್ಜಿ ಗುಳ್ಳಮ್ಮ ಅಂತ ಇದ್ಲು, ಅವಮ್ಮ ನಮ್ಮಾಂಸ ತಂದು, ಸಣ್ಣ ಸಣ್ಣದಾಗಿ ಪೀಸುಗಳು ಮಾಡಿ ಅದಕ್ಕೆ ಉಪ್ಪು ಖಾರ ಹಾಕಿ, ಒಣಗಿಸಿ ಅದನ್ನ ಒಂದು ಬಾನೆಯಲ್ಲಿ ಇಡುತ್ತಿದ್ಳು. ನಾವು ಹಸಿವಾದಾಗ ತಿನ್ನೋಕೆ ಏನಾನ ಕೊಡು ಅಂದರೆ, ಆ ಬಾನೆ ಒಳಗಿಂದ ಕೈ ಹಾಕಿ ಮಾಂಸದ ತುಂಡುಗಳನ್ನ ಎತ್ತಿ ಅದನ್ನ ಹದವಾಗಿ ಸುಟ್ಟು ಕೊಡುತ್ತಿದ್ಲು. ಅದು ಸಕತ್ತಾಗಿರೋದು ಮಗ” ಅಂದಳು. ಮತ್ತೆ ಮುಂದುವರೆಸುತ್ತ, “ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮಾಂಸನಾ ತಂದು, ಕೆಂಪು ಖಂಡಗಳನ್ನ ಸಣ್ಣದಾಗಿ, ಉದ್ದುದ್ದಾಗಿ ಕೂಯ್ದು ಅದನ್ನ ಒಲೆ ಹತ್ತಿರ ನೇತಾಕ್ತ ಇದ್ರು, ಇಲ್ಲಂದ್ರೆ ಮನೆ ಮೇಲೆ ಹಾಕಿತಿದ್ವಿ. ಅದು ಚೆನ್ನಾಗಿ ಒಣಗಿದ ಮೇಲೆ ಸುಟ್ಟಕೊಂಡೂ, ಸಾರ್ ಮಾಡ್ಕೊಂಡು ತಿಂತ್ತಿದ್ವಿ” ಅಂತ ಹೇಳುವ ಮಾತಿನ ಮಧ್ಯೆಯೆ ರಾಮಾಂಜಿ, ”ಅಮ್ಮ ಅದು ಒಳ್ಳೆ ಸಿರಿಯಲ್‌ ಸೆಟ್‌ ಹಾಕ್ದಂಗೆ ಹಾಕಿರ್ತಾರೆ ಅದೇ ಅಲ್ವೇನಮ್ಮ”? ಅಂದ ನಗುತ್ತಾ. “ಹೌದಪ್ಪ ಅದೇ ಅಂದಳು” ಅವರಮ್ಮ.

ತಾತನ ಕೋಟು ಮತ್ತು ರುಮಾಲು

ರಾಮಾಂಜಿ, ಅವರಮ್ಮನನ್ನು ಅವನ ತಾತನ ಬಗ್ಗೆ ಕೇಳಿದ. “ಸ್ವಲ್ಪ ಯೋಚಿಸಿ ನಿಮ್ಮ ತಾತ ಮೀಸೆ ಚಿಕ್ಕ ಮುನಿಯಪ್ಪನು, ಒಂದು ಜಲ್ಲಿ ಮಂಕರಿ ಮಾಂಸ ಗಂಟುಮೂಳೆ ತಂದು, ಅದನ್ನ ಒಂದು ಸಾರ್ತಿ ಸಾರು ಮಾಡ್ಸಿತ್ತಿದ್ದ. ಒಂದೊಂದು ಸಾರಿ ಒಣಗಿಸಿತ್ತಿದ್ದ”, ಅಂತೇಳಿ ಒಂದು ಪ್ರಸಂಗವನ್ನ ಹೇಳಿದಳು. ಅದೇನೆಂದರೆ, “ಒಂದು ಸಾರಿ ನಿಮ್ಮ ತಾತ ಮತ್ತು ನಿಮ್ಮ ದೊಡ್ಡಪ್ಪ, ನಮ್ಮಾಂಸ ತಂದು ಹೆಂಡದ ಜೊತೆಗೆ ಸುಮಾರು ಐದಾರು ಕೆ.ಜಿ ಯಷ್ಟನ್ನ ಇಬ್ಬರೆ ತಿಂದು ಬಿಟ್ಟಿದ್ದರು! ಗಂಟು ಮೂಳೆಗಳೆಂದರೆ ನಿಮ್ಮ ತಾತನಿಗೆ ಬಲು ಇಷ್ಟ, ಯಾವತ್ತೆ ಮಾಂಸ ತಂದರೂನು ಮರೀದೆ ಒಂದೆರಡು ಗಂಟು ಮೂಳೆಗಳನ್ನ ಹಾಕಿಸ್ಕೊಂಡು ಬರ್ತಿದ್ದ. ಅದನ್ನ ಚೆನ್ನಾಗಿ ಉಪ್ಪು ಖಾರ, ಹಾಕಿ ಚೆನ್ನಾಗಿ ಬೇಯಿಸಿ ಅದರ ರಸನ ಕುಡಿತಿದ್ದ, ಮತ್ತೆ ಮಕ್ಕಳಿಗೆ ಕುಡಿಯೋಕ್‌ ಕೊಡ್ತಿದ್ದ. ಗಂಟು ಮೂಳೆ ಒಳಗಿನ ತುಪ್ಪನಂತು ಮರಿದೆ ಎಲ್ಲಾ ಮಕ್ಕಳಿಗೂ ಕುಟ್ಟಿ ಕೊಡ್ತಿದ್ದ! ನಿಮ್ಮ ತಾತ ಸಾಯೋವಾಗ ನೀನು ೪-೫ ತಿಂಗಳು ಮಗು, ನಿನ್ನ ಕೈಲಿ ನೂರು ರುಪಾಯಿ ನೋಟು ಮಡಗಿ ಚೆನ್ನಾಗಿ ಓದಿ ದೊಡ್ಡವನಾಗು ಅಂತ ಆಶೀರ್ವಾದ ಮಾಡಿ ಸತ್ತೋದ.“ ಅಂತ ಒಂದು ಕ್ಷಣ ಸುಮ್ಮನಾಗಿ ಮತ್ತೆ ಮುಂದುವರೆದು, “ನಿಮ್ಮ ತಾತ ಯಾವಾಗಲೂ ಮಗ್ಗದಲ್ಲಿ ದುಪಡಿ, ರಗ್ಗು, ನೇಯ್ದು, ಸಂತೆಗಳಲ್ಲಿ ಮಾರಿ ಬರ್ತಿದ್ದ. ನಿಮ್ಮ ತಾತನಿಗೆ ರಗ್ಗು ದುಪಟಿ ನೇಯ್ದು, ನೇಯ್ದು, ಕೈ ಬೆರಳೆಲ್ಲ ಸೊಟ್ಟಗಾಗಿದ್ದವು. ಮತ್ತೆ ನಿಮ್ಮ ತಾತ ಸಂತೆಗೆ ಹೋಗುವಾಗಾಗಲಿ ಬೇರೆ ಎಲ್ಲಿಗೆ ಪಯಾಣ ಹೋಗುವಾಗಾಗಲಿ, ತಪ್ಪದೇ ಕೋಟು ಪಂಚೆ ರುಮಾಲು ಹಾಕ್ಕೊಂಡು ಹೋಗ್ತಿದ್ದ. ಇದು ಸಮಾಜದಾಗ ನಮಗೆ ಗೌರವ ಕೊಡ್ತಾದೆ ಅಂತ ಹೆಳ್ತಿದ್ದ. ನೀನು ಮುಂದೆ ಚೆನ್ನಾಗಿ ಓದಿ ಒಳ್ಳೆ ದೊಡ್ಡ ಆಫಿಸರ್‌ ಆಗಬೇಕು ಮಗ” ಅಂತ ಅವರಮ್ಮ ಹೇಳಿದ್ದು, ರಾಮಾಂಜಿಗೆ ಈಗಲೂ ಆ ದೃಶ್ಯ ಕಣ್ಣೀರು ತರಿಸುತ್ತದೆ.

ಬಿಡಲೊಲ್ಲದ ಬಾಡಿನ ಪರಂಪರೆ

ರಾಮಾಂಜಿ ಓದಿ ಒಳ್ಳೆಯ ಕೆಲಸಕ್ಕೇನೋ ಸೇರಿದ. ಆದರೆ ಅವನು ಪ್ರತಿವಾರ ಪ್ರತಿಸಾರಿ ತಿನ್ನುತ್ತಿದ್ದ ಅವನ ಮಾಂಸ, ಬರ್ತಾ ಬರ್ತಾ ತಿನ್ನೋದು ಕಡಿಮೆ ಆಗೋಯ್ತು. ಆಗಂತ ಪೂರ್ತಿಯಾಗಿ ನಿಲ್ಲಿಸಿಲ್ಲ. ಆಗಾಗ ತಿಂತ ಇದ್ದಾನೆ ಮತ್ತು ಅವನ ಮಕ್ಕಳಿಗೂ ಆ ಪರಂಪರೆಯನ್ನು ಮುಂದುವರೆಸುತ್ತಿದ್ದಾನೆ. ಮಕ್ಕಳಿಗೆ ಈಗ ಆ ಪರಂಪರೆ ಬಗ್ಗೆ ಗೊತ್ತಿಲ್ಲ, ಮುಂದೆ ಅವರೆ ತಿಳಿಯಲಿ ಅನ್ನೊದು ಅವನ ವಾದ. ರಾಮಾಂಜಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವನಿಗೆ ಆಗಾಗ ವರ್ಗಾವಣೆ ಆಗುತ್ತಿತ್ತು. ಹೀಗೆ ಪ್ರತಿಬಾರಿ ವರ್ಗಾವಣೆಗೊಂಡು ಯಾವುದೇ ಊರಿಗೆ ಹೋದರೂ ಮೊದಲು ಅವನಿಗೆ ಕೇಳುತ್ತಿದ್ದ ಪ್ರಶ್ನೆ “ನೀವು ವೆಜ್ಜಾ? ನಾನ್‌ವೆಜ್ಜಾ?” ಅಂತ. ಆಗ ಮೊದ ಮೊದಲು ಅವನಿಗೆ ಮುಜುಗರ ಅನಿಸೋದು. ನಂತರ ಈ ಕೀಳರಿಮೆ ಕಡಿಮೆ ಆಗ್ತಾ ಹೋಯ್ತು, ಇದಕ್ಕೆ ಕಾರಣ “ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ವಿಚಾರಧಾರೆ” ಅಂತ ಹೇಳ್ಕೊಂಡ ಒಂದು ಪ್ರಸಂಗ ಈ ರೀತಿಯಿದೆ;

ರಾಮಾಂಜಿ ಒಂದು ದಿನ ಒಬ್ಬ ಸ್ನೇಹಿತನ ಬಳಿ ಚರ್ಚಿಸುತ್ತಿದ್ದ, ಆಕಸ್ಮಿಕವಾಗಿ ಅವರ ಮಾಂಸದ ವಿಚಾರ ಪ್ರಸ್ತಾಪ ಆಯ್ತು, “ನನಗೆ ಚಿಕ್ಕಂದಿನಿಂದಲೂ ʻನಮ್ಮಾಂಸʼ ತಿನ್ನುವ ರೂಢಿಯಿದೆ, ಅದಕ್ಕೊಂದು ಪರಂಪರೆಯಿದೆ. ನನ್ನ ಮಕ್ಕಳಿಗೂ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಆಸೆಯಿದೆ. ಅವರಿಗೂ ತಿನ್ನುವ ರೂಢಿ ಆಗಿದೆ” ಅಂದ. ಅದಕ್ಕೆ ಅವನ ಸ್ನೇಹಿತ “ಸಾರ್‌ ನೀವು ಬುದ್ದಿಸ್ಟ್‌ ಅಲ್ವ? ನೀವು ಹೇಗೆ ಮಾಂಸ ತಿಂತೀರಿ?” ಎಂದು ಪ್ರಶ್ನಿಸಿದ. “ಬುದ್ಧ ಮಾಂಸ ತಿನ್ನಬಾರದೆಂದು ಎಲ್ಲಿ ನಿಷೇಧ ಹೇರಿದ್ದಾರೆ ಹೇಳು?” ಎಂದು ಕೇಳಿದ. ಅದಕ್ಕೆ ಅವನ ಸ್ನೇಹಿತ “ಅಲ್ಲ, ಬುದ್ಧ ಅಹಿಂಸವಾದಿಯಾಗಿರೋದರಿಂದ, ಕೊಲ್ಲಬಾರದೆಂದು ತನ್ನ ಪಂಚಶೀಲದಲ್ಲಿ ಹೇಳಿರುವುದರಿಂದ ಸಾಮಾನ್ಯವಾಗಿ ಬುದ್ದಿಸ್ಟ್‌ಗಳು ಮಾಂಸ ತಿನ್ನುವುದಿಲ್ಲವಲ್ಲ”? ಎಂದು ಅವನಿಗೆ ತಿಳಿದಿದ್ದ ರೀತಿಯಲ್ಲಿ ಸ್ನೇಹಿತನಿಗೆ ಹೇಳಿದ. “ನೋಡು ಗೆಳೆಯ ಇದು ತುಂಬ ತಪ್ಪು ಅಭಿಪ್ರಾಯ, ಬುದ್ಧರು ಎಲ್ಲೂ ಮಾಂಸಹಾರ ನಿಷಿದ್ದವೆಂದು ಹೇಳಿಲ್ಲ, ಬದಲಾಗಿ ಮಾಂಸಹಾರ ಸ್ವೀಕಾರಾರ್ಹವೆಂದು ಸ್ಪಷ್ಟವಾಗಿ ಹೇಳಿದ್ದಾರೆ” ಎನ್ನುತ್ತ, ಬುದ್ಧರು ಮತ್ತು ದೇವದತ್ತರ ಜೊತೆ ನಡೆದ ಘಟನೆಯನ್ನು ಅವನ ಸ್ನೇಹಿತನಿಗೆ ವಿವರಿಸಿದ, ಅದು ಹೀಗಿದೆ…

“ದೇವದತ್ತ, ಬಿಕ್ಕುಗಳಿಗೆ ಮಾಂಸಹಾರ ಸೇವನೆ ಕೂಡದೆಂದು, ಜೊತೆಗೆ ಇನ್ನೂ ಹಲವಾರು ರೀತಿಯಲ್ಲಿ ಕಠಿಣ ನಿಯಮಗಳನ್ನು ಹಾಕಬೇಕೆಂದು” ಬುದ್ಧರಿಗೆ ಹೇಳುತ್ತಾನೆ. ಅದಕ್ಕೆ ಬುದ್ಧರು, ದೇವದತ್ತನ ಈ ನಿಲುವನ್ನು ಕಟುವಾಗಿ ಟೀಕಿಸಿ, ವಿಮರ್ಶಿಸಿ ನಿರಾಕರಿಸುತ್ತಾರೆ. ಇನ್ನೊಮ್ಮೆ ರಾಜ ಅಜಾತ ಶತ್ರು ಬುದ್ಧರನ್ನು ಕಂಡು ಒಂದು ಪ್ರಶ್ನೆಯನ್ನು ಕೇಳುತ್ತಾನೆ. ಅದೇನೆಂದರೆ, “ನಿಮ್ಮ ಪ್ರವಚನಗಳಿಗೆ ಮನಸೋತ ಸೈನಿಕರು, ಸೇನಾಧಿಪತಿಗಳು ತಮ್ಮ ವೃತ್ತಿಗಳನ್ನು ತೊರೆಯುತ್ತಿದ್ದಾರೆ. ಅದಕ್ಕೆ ಕಾರಣ ಪಂಚಶೀಲದ ಮೊದಲ ತತ್ವ ಪ್ರಾಣ ಹತ್ಯೆಯನ್ನು ಮಾಡುವುದಿಲ್ಲ ಎಂಬ ನಿಯಮವಾಗಿದೆ. ಇದರಿಂದ ಸೈನಿಕರು ಅಪರಾಧಿಗಳನ್ನು, ದರೋಡೆಕೋರರನ್ನು ಕೊಲೆಗಡುಕರನ್ನು ದಂಡಿಸದೇ ಬಿಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ, ಇದಕ್ಕೆ ಪರಿಹಾರವೇನು?” ಅಂದ. ಇದಕ್ಕೆ ಬುದ್ಧರು ತುಂಬ ಸುಂದರವಾದ ಉತ್ತರವನ್ನು ನೀಡಿದ್ದಾರೆ, “ರಾಜಾ ಸರಿಯಾಗಿ ಕೇಳಿಸಿಕೊ, ರಾಜನಾದವನು ಕಾನೂನು ಬದ್ದವಾಗಿ ಆಡಳಿತ ನೀಡಬೇಕು, ಅವಶ್ಯ ಬಿದ್ದಾಗ ತನ್ನ ರಾಜ್ಯದ ಜನರ ಮಾನ ಪ್ರಾಣ ರಕ್ಷಣೆಗಾಗಿ ಯುದ್ಧವನ್ನು ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜನಾದವನು ಅಪರಾಧಿಗಳನ್ನು ದಂಡಿಸಬೇಕು, ಶಿಕ್ಷಿಸಬೇಕು, ಅವಶ್ಯವಿದ್ದಾಗ ಗಲ್ಲು ಶಿಕ್ಷೆಗೂ ಗುರಿ ಮಾಡಬೇಕು” ಎನ್ನುತ್ತಾನೆ. “ಇದರಿಂದ ಪಂಚಶೀಲದ ಉಲ್ಲಂಘನೆಯಾಗುವುದಿಲ್ಲವೇ?” ಎನ್ನುತ್ತಾನೆ ರಾಜ. ಬುದ್ಧರು “ನನ್ನ ಪಂಚಶೀಲದ ಮೊದಲ ಶೀಲ ನಿಂತಿರುವುದು ಕೇವಲ ಕೊಲ್ಲಬೇಡಿ ಎಂಬುದರ ಮೇಲಲ್ಲ, ಬದಲಾಗಿ ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಬದುಕುವ ಅವಕಾಶಗಳನ್ನು ನಿರ್ಮಿಸಿ, ಎಲ್ಲರಿಗೂ ಬದುಕಿನ ಸಾರ್ಥಕತೆಯ ಬಗ್ಗೆ ತಿಳಿಸಿಕೊಡಿ, ಆಗ ಅವರಾಗಲಿ, ನೀವಾಗಲೀ ಯಾರನ್ನೂ ಯಾರೂ ಕೊಲ್ಲುವ ಪ್ರಮೇಯವೇ ಬರುವುದಿಲ್ಲ” ಎಂದರು. ಇಲ್ಲಿ ಕೊಲ್ಲುವುದಕ್ಕಿಂತ ಪ್ರೀತಿಸುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಿರುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿರುವುದನ್ನು ರಾಮಾಂಜಿ ಅವನ ಸ್ನೇಹಿತನಿಗೆ ತಿಳಿಸಿಕೊಟ್ಟ.

ಮುಂದುವರೆದು ರಾಮಾಂಜಿ ಅವನ ಸ್ನೇಹಿತನಿಗೆ, “ಇದರಿಂದ ನಮಗೆ ತಿಳಿಯುವುದೇನೆಂದರೆ ಅವಶ್ಯಕವಿದ್ದಾಗ ಕೊಲ್ಲುವ ಸ್ವಾತಂತ್ರ್ಯವನ್ನು, ಬುದ್ಧರು ಮಾನವರಿಗೆ ಬಿಟ್ಟಿದ್ದಾರೆ, ಏಕೆಂದರೆ ಮನುಷ್ಯನು ಬುದ್ದಿಜೀವಿ, ಕೊಲ್ಲಬೇಕೊ ಬೇಡವೋ? ಎಂಬುದನ್ನು ತನ್ನ ಬುದ್ದಿಶಕ್ತಿಯಿಂದ ಯೋಚಿಸಿ ನಿರ್ಧಾರ ಮಾಡಬೇಕೆಂಬುದೇ ಈ ಮಾತಿನ ಅರ್ಥವೇ ಹೊರತು, ಕೊಲ್ಲಲೇಬಾರದು ಎಂಬುದಲ್ಲ. ಇದು ಪ್ರಕೃತಿಗೆ ವಿರುದ್ಧವಾದ ತತ್ವ ಕೂಡ. ನಿಸರ್ಗದಲ್ಲಿರುವ ಪ್ರಾಣಿ ಪಕ್ಷಿಗಳು ಬಹುತೇಕ ಮಾಂಸಹಾರಿ ಜೀವಿಗಳೇ ಆಗಿವೆ. ಹಾಗಾಗಿ ಬುದ್ಧರು ಈ ನಿಸರ್ಗದ ನಿಯಮಕ್ಕೆ ವಿರುದ್ದವಾಗಿ ಬೋಧಿಸಿರಲಾರರೆಂಬುದು ಅಷ್ಟೇ ಕಟು ಸತ್ಯ. ಬುದ್ಧರ ಅಹಿಂಸಾ ತತ್ವವನ್ನು ನಾವು ತಪ್ಪಾಗಿ ಗ್ರಹಿಸಿದ್ದೇವೆ. Will to kill and need to kill ಇದರ ನಡುವಿನ ವ್ಯತ್ಯಾಸವನ್ನು ನಾವು ಅರಿತುಕೊಂಡರೆ, ಬುದ್ಧರು ಮಾಂಸಹಾರದ ವಿರೋಧ ಮಾಡಲಿಲ್ಲವೆಂಬುದನ್ನು ನಾವು ಗ್ರಹಿಸಬಹುದು. ಈ ಜಗತ್ತಿನಲ್ಲಿ ಯಾವುದೇ ಮನುಷ್ಯ ತನಗೆ ಇಷ್ಟವಾದ ಆಹಾರವನ್ನು ತಿನ್ನುವ ಹಕ್ಕನ್ನು ಹೊಂದಿದ್ದಾನೆ. ಯಾವ ಆಹಾರವೂ ಕೀಳಲ್ಲ, ಯಾವ ಆಹಾರವೂ ಮೇಲಲ್ಲ ಅಥವಾ ಶ್ರೇಷ್ಠವಲ್ಲ, ಮಾನವತೆಯಿರುವ ಯಾರಾದರೂ ಇದನ್ನ ಅನುಮೋದಿಸುತ್ತಾರೆ. ಸಮ್ಮಾಸಂಬುದ್ಧರು ಆಹಾರದ ವಿಚಾರದಲ್ಲಿ ತುಂಬ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿದ್ದಾರೆ. ಭಿಕ್ಷೆ ರೂಪದಲ್ಲಿ ಸಿಗುವ ಮಾಂಸಹಾರವೂ ಸ್ವೀಕಾರ್ಹವೆಂದು ಮಾನವರೆಲ್ಲರ ಆಹಾರದ ಹಕ್ಕನ್ನು ಎತ್ತಿ ಹಿಡಿದಿದ್ದಾನೆ. ಬೋಧಿಸತ್ವ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರು ಇದನ್ನ ಪುನಸ್ಕರಿಸಿದ್ದಾರೆ, ಇನ್ನೂ ನಾವು ನೀವು ಈ ವಿಚಾರದಲ್ಲಿ ತುಂಬ ಯೋಚಿಸುವಂತದೇನಿಲ್ಲ… ನಮ್ಮ ಆಹಾರ ನಮ್ಮ ಹಕ್ಕು, ನಮ್ಮ ಆಹಾರ ನಮ್ಮ ಐಡೆಂಟಿಟಿ, ನಮ್ಮ ಆಹಾರ ನಮ್ಮ ಘನತೆ” ಅಂತ ರಾಮಾಂಜಿ ಅವನ ಸ್ನೇಹಿತನಿಗೆ ಬಿಡಿಸಿ ಹೇಳಿದ. ಅದಕ್ಕೆ ಅವನ ಸ್ನೇಹಿತನೂ ತಲೆಯಾಡಿಸಿದ.

Leave a Reply

Your email address will not be published. Required fields are marked *