ಆಮ್ ಆದ್ಮಿ ಪಾರ್ಟಿಯ ಸಭೆ ಸಮಾರಂಭಗಳಲ್ಲಿ ಹಾರ, ಶಲ್ಯ ಮುಂತಾದವುಗಳಿಗೆ ಅನಗತ್ಯ ವೆಚ್ಚ ಮಾಡುವ ಬದಲು ಆ ಹಣವನ್ನು ಕಾರ್ಯಕರ್ತರು ಸಮಾಜಸೇವೆಗೆ ಬಳಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕರೆ ನೀಡಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಮನವಿ ಮಾಡಿರುವ ಪೃಥ್ವಿ ರೆಡ್ಡಿ, “ಆಮ್ ಆದ್ಮಿ ಪಾರ್ಟಿಯ ಸಭೆ ಸಮಾರಂಭಗಳಲ್ಲಿ ಹಾರ, ಹೂವಿನ ಗುಚ್ಛ, ಶಲ್ಯ, ಪೇಟ, ನೆನಪಿನ ಕಾಣಿಕೆ ಮುಂತಾದವುಗಳಿಗೆ ಖರ್ಚು ಮಾಡುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಇಂತಹ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಆ ಹಣವನ್ನು ನಾವು ಸಮಾಜಸೇವೆ ಬಳಸಬಹುದಾಗಿದೆ. ಸಹಾಯದ ಅಗತ್ಯವಿರುವ ಬಡವರು, ಶೋಷಿತರು, ನೊಂದವವರಿಗೆ ನೆರವಾಗಲು ಈ ಹಣ ಬಳಕೆಯಾಗಬೇಕು. ಆಮ್ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತ ಕೂಡ ಇದನ್ನೇ ಹೇಳುತ್ತದೆ” ಎಂದು ಹೇಳಿದರು,
“ಬೇರೆ ಪಕ್ಷಗಳಿಗೂ ಆಮ್ ಆದ್ಮಿ ಪಾರ್ಟಿಗೂ ಸಾಕಷ್ಟು ವ್ಯತ್ಯಾಸವಿದೆ. ಬೇರೆ ಪಕ್ಷಗಳು ಆಡಂಬರದಲ್ಲಿ ನಂಬಿಕೆ ಹೊಂದಿದ್ದರೆ, ನಾವುಗಳು ಜನಸೇವೆಯಲ್ಲಿ ನಂಬಿಕೆ ಇಡೋಣ. ದೇಶವು ನಿಜವಾಗಿಯೂ ಅಭಿವೃದ್ಧಿ ಹೊಂದಬೇಕಾದರೆ ಎಲ್ಲ ವರ್ಗಗಳ ಜನರೂ ನೆಮ್ಮದಿಯಿಂದ ಬದುಕುವಂತಾಗಬೇಕು. ಆದ್ದರಿಂದ ನಮ್ಮ ತನು, ಮನ, ಧನವನ್ನು ಎಲ್ಲ ಜನಸಾಮಾನ್ಯರ ಏಳಿಗೆಗೆ ಮೀಸಲಿಡೋಣ. ಬೇರೆ ಪಕ್ಷಗಳಿಗೆ ಮಾದರಿಯಾಗುವಂತೆ ಸರಳ ಹಾಗೂ ಶಿಸ್ತಿನಿಂದ ಸಭೆ ಸಮಾರಂಭಗಳನ್ನು ನಡೆಸೋಣ” ಎಂದು ಪಕ್ಷದ ಕಾರ್ಯಕರ್ತರಿಗೆ ಪೃಥ್ವಿ ರೆಡ್ಡಿ ಕರೆ ನೀಡಿದರು.