ಮೈಸೂರು : ಯಾಮಾರಿದರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಬರುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಚುನಾವಣಾ ಪ್ರಚಾರಗಳು ಭರದಿಂದ ಸಾಗಿದ್ದು, ಕಾಂಗ್ರೆಸ್ ನೇತಾರರು ಈ ಸಲ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆಂಬ ಆತ್ಮವಿಶ್ವಾಸವನ್ನ ವ್ಯಕ್ತಪಡಿಸುತ್ತಿರುವುದನ್ನು ಕಂಡು ಬೆದರಿದಂತೆ ಕಂಡುಬಂದಿರುವ ಬಿಜೆಪಿಗರು ವಿವಾದಾತ್ಮಕ ಹೇಳಿಕೆಗಳನ್ನು ನೀಡತೊಡಗುತ್ತಿದ್ದಾರೆ. ಮೊನ್ನೆ ಸಚಿವ ಅಶ್ವತ್ಥ ನಾರಾಯಣ ಟಿಪ್ಪುವನ್ನು ಹೊಡೆದಂತೆ ಸಿದ್ದರಾಮಯ್ಯನನ್ನು ಹೊಡೆದುಹಾಕಬೇಕು ಎಂದಿದ್ದರು. ಇದೀಗ ಸಂಸದ ಪ್ರತಾಪ್ ಸಿಂಹ ಒಂದು ಹೆಜ್ಜೆ ಮುಂದೆಹೋಗಿ, ಕಾಂಗ್ರೆಸ್ ಸರ್ಕಾರವನ್ನು ತಾಲಿಬಾನ್‌ಗೆ ಹೋಲಿಸಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ʼಬಿಜೆಪಿ ಕಾರ್ಯಕರ್ತರು ಹೀಗೇ ಕೈಕಟ್ಟಿಕೊಂಡು ಕುಳಿತರೆ ಸಿದ್ದರಾಮಯ್ಯ ತನ್ನ ನೇತೃತ್ವದಲ್ಲಿ ತಾಲಿಬಾನ್ ಸರ್ಕಾರವನ್ನ ಅಧಿಕಾರಕ್ಕೆ ತರಲಿದ್ದಾರೆ. ಆದ್ದರಿಂದ ಬಿಜೆಪಿ ತನ್ನ ಅಧಿಕಾರವನ್ನು ಹಾಗೆಯೇ ಉಳಿಸಿಕೊಳ್ಳಲು ಶ್ರಮಿಸಬೇಕು.ʼ ಎಂದು ತೀವ್ರವಾದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯನ ಆಡಳಿತಾವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿದ್ದವು. ಆ ಹತ್ಯೆಗೀಡಾದವರ ಮನೆಗಳಿಗೆ ಹೋಗಿ ಪರಿಹಾರವನ್ನು ನೀಡುವ ಮನಸ್ಸು ಅವರ ಪಕ್ಷಕ್ಕೆ ಇಲ್ಲ, ಈಗ ಸಿಎಂ ಆಗಲು ತುದಿಗಾಲಲ್ಲಿ ನಿಂತಿದ್ದಾರೆ ಆದ್ದರಿಂದ ಬಿಜೆಪಿ ಕಾರ್ಯಕರ್ತರು ಜಾಗರೂಕತೆಯಿಂದ ಇರಬೇಕೆಂದು ಹೇಳಿದ್ದಾರೆ.