ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ‘ಕೇಶವ ಕೃಪಾ’ದಿಂದ ಕರೆಗಳು ಬರುತ್ತಿವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಸದನದಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಹಿಡಿದುಕೊಂಡ ಬಿಜೆಪಿ, ರಾಜ್ಯಪಾಲರಿಗೆ ಯಾರ ಫೋನ್ ಬರುತ್ತಿದೆ ಎಂಬುದು ನಿಮಗೆ ತಿಳಿಯುತ್ತಿದೆ ಎಂದರೆ ನೀವು ಅವರ ಫೋನ್ ಟ್ಯಾಪ್ ಮಾಡುತ್ತಿದ್ದೀರಾ? ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದರು.
ಗೃಹ ಸಚಿವರು ಈ ಆರೋಪವನ್ನು ತಳ್ಳಿಹಾಕುತ್ತಾ, “ನಾವು ರಾಜ್ಯಪಾಲರ ಫೋನ್ ಕದ್ದಾಲಿಸುವ ಅಗತ್ಯವಿಲ್ಲ, ಅಂತಹ ಕೆಲಸವನ್ನು ನಮ್ಮ ಸರ್ಕಾರ ಎಂದೂ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ರಾಜಕೀಯ ಪ್ರೇರಿತ ಆರೋಪ ಎಂಬುದು ಅವರ ವಾದ.
ರಾಜ್ಯಪಾಲರಂತಹ ಉನ್ನತ ಸಾಂವಿಧಾನಿಕ ಹುದ್ದೆಯ ಮೇಲೆ ನಿಗಾ ಇಡುವುದು ದೊಡ್ಡ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ವಿವಾದವು ಸರ್ಕಾರ ಮತ್ತು ರಾಜಭವನದ ನಡುವಿನ ಸಂಬಂಧವನ್ನು ಇನ್ನಷ್ಟು ಹದಗೆಡಿಸಬಹುದು ಎನ್ನಲಾಗಿದೆ.
ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿತ್ತು. ಈ ಇತಿಹಾಸವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
