ಬಹುಶಃ ತೀರ ಕೆಲವರಿಗಷ್ಟೇ ಭಾರತದ ಇತಿಹಾಸದಲ್ಲಿ ನಡೆದ ಈ ಘನಘೋರ ಹತ್ಯಾಕಾಂಡದ ಬಗ್ಗೆ ತಿಳಿದಿದೆ. 2002 ಗುಜರಾತ್ ಹತ್ಯಾಕಾಂಡ, ಸಿಖ್ ಸತ್ಯಾಕಾಂಡ, ಕಂಬಾಲಪಲ್ಲಿ, ಕೈರ್ಲಾಂಜಿ ಹೀಗೆ ಇನ್ನೂ ಹಲವಾರು ಹತ್ಯಾಕಾಂಡಗಳ ಬಗ್ಗೆ ಮಾತನಾಡುವ ಹಲವರು ಬಾಯಿತಪ್ಪಿಯೂ ಈ ಹತ್ಯಾಕಾಂಡದ ಬಗ್ಗೆ ಮಾತನಾಡುವುದಿಲ್ಲ.‌ ಅದೇ ಮರಿಜ್ಹಪಿ ಹತ್ಯಾಕಾಂಡ. ಸುಮಾರು 10000 ಮಹಿಳೆಯರು, ಮಕ್ಕಳು, ವೃದ್ದರು, ಯುವಕರನ್ನು ಕ್ರೂರವಾಗಿ ಹತ್ಯೆ ಮಾಡಿದ ರಕ್ತಚರಿತ್ರೆಯು ಇಂದಿಗೂ ಬಹಳಷ್ಟು ಜನರಿಗೆ ತಿಳಿದಿರುವುದೇ ಇಲ್ಲ. ಪ್ರಗತಿಪರ, ಬುದ್ದಿಜೀವಿಗಳು, ಗಾಂಧೀವಾದಿಗಳು ಎನಿಸಿಕೊಂಡವರ ಬಾಯಲ್ಲಂತೂ ಮರಿಜ್ಹಪಿ ಎಂಬ ಪದವೇ ಹೊರಬರುವುದಿಲ್ಲ ಅಥವಾ ಅಂತಹಾ ಘಟನೆಯೇ ನಡೆದಿಲ್ಲ ಎನ್ನುವಷ್ಟು ಸಮಾಧಾನವಾಗಿ ವರ್ತಿಸುತ್ತಿರುತ್ತಾರೆ. ಇಷ್ಟಕ್ಕೂ ಹತ್ತು ಸಾವಿರ ದಲಿತರನ್ನು ನಿರ್ದಯವಾಗಿ ಕೊಲ್ಲುವಷ್ಟು ಅವರು ಮಾಡಿದ ಅಪರಾಧವಾದರೂ ಏನು?

ಈ ಹತ್ಯಾಕಾಂಡ ನಡೆದದ್ದಾದರೂ ಏಕೆ?

ಬ್ರಿಟೀಷರ ಅಧೀನದಲ್ಲಿದ್ದ ಭಾರತ ದೇಶವು ಸ್ವತಂತ್ರಗೊಳ್ಳುವ ಮೊದಲೇ ವಿಭಜನೆಗೆ ಮುಂದಾಯಿತು. ಭಾರತವು ಮೂರು ಭಾಗಗಳಾಗಿ ಭಾರತ ಮತ್ತು ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ( ಬಾಂಗ್ಲಾದೇಶ)ವಾಗಿ ವಿಭಜನೆಯಾಯಿತು. ಆಗ ಪಾಕಿಸ್ತಾನದಲ್ಲಿದ್ದ ಮುಸ್ಲೀಮೇತರರು ಭಾರತಕ್ಕೆ ಹಾಗೂ ಪಾಕಿಸ್ತಾನಕ್ಕೆ ಹೋಗಬಯಸುವ ಮುಸಲ್ಮಾನರು ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದರು. ಅದೇ ರೀತಿ ಇಂದಿನ ಬಾಂಗ್ಲಾದೇಶದಿಂದ ಹಲವಾರು ಮುಸ್ಲೀಮೇತರರು ಭಾರತಕ್ಕೆ ವಲಸೆ ಬಂದರು. ಈಗಲೂ ಬರುತ್ತಲೇ ಇದ್ದಾರೆ. ಅವರಲ್ಲಿ ಬಹುಸಂಖ್ಯಾತರು ನಮೋ ಶೂದ್ರರಾಗಿದ್ದರು. 1960ರಲ್ಲಿ ಅತೀ ಹೆಚ್ಚು ಅನಕ್ಷರಸ್ಥ ದಲಿತರು ಭಾರತವೇ ನಮ್ಮ ತಾಯಿನಾಡು ಎಂದು ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದರು. ಅಂತವರನ್ನು ಶರಣಾರ್ಥಿಗಳೆಂದು ಸ್ವೀಕರಿಸಿದರೇ ಹೊರೆತೂ ಭಾರತೀಯರೆಂದು ಪರಿಗಣಿಸಲೇ ಇಲ್ಲ. ಹೀಗೆ 1960ರಲ್ಲಿಯೇ ಸುಮಾರು 1.50 ಲಕ್ಷ ಜನರು, ಅದರಲ್ಲಿ ಬಹುಸಂಖ್ಯಾತ ದಲಿತರು ವಲಸೆ ಬಂದರು. ಇದೇ ಸಮಯದಲ್ಲಿ ಕೆಲವು ಶ್ರೀಮಂತ ಮೇಲ್ವರ್ಗದವರು ಕೂಡಾ ವಲಸೆ ಬಂದರು. ಅವರಿಗೆ ಮಾತ್ರ red carpet ರತ್ನಗಂಬಳಿ ಹಾಕಿ ಸ್ವಾಗತಿಸಿದ ಸರ್ಕಾರಗಳು ಬಡವರು ಅದರಲ್ಲಿಯೂ ದಲಿತರಿಗೆ ಯಾವ ಸ್ವಾಗತವೂ ಇಲ್ಲ, ಆಶ್ರಯವೂ ಇಲ್ಲದೇ ಇವರನ್ನು ದಂಡಕಾರಣ್ಯಗಳಿಗೆ ನೂಕಿದರು.

ಹೊಸ ಮಾತೃಭೂಮಿಗಾಗಿ ತಡಕಾಡಿದ ದಲಿತರಿಗೆ ಸಿಕ್ಕಿದ್ದು ದಂಡಕಾರಣ್ಯವೆಂಬ ಕಾಡು. ಎರಡು ಮೂರು ದಿನಕ್ಕೆ ಒಮ್ಮೆ ಸರ್ಕಾರ ಕಳಿಸುವ ಆಹಾರಕ್ಕಾಗಿ ಕಾಯುವಾಗಲೇ ಎಷ್ಟೋ ಜನರು ಮರಣಿಸಿದರು. ಕೆಲವರು ಕಾಡು ಪ್ರಾಣಿಗಳ ದಾಳಿಗೆ ಬಲಿಯಾದರು. ಕಾಡುಪ್ರಾಣಿಗಳಿಂದ ತಮ್ಮ ಪ್ರಾಣ ಕಾಪಾಡಿಕೊಳ್ಳಲು ರಾತ್ರಿ ಬೆಂಕಿಯನ್ನು ಹೊತ್ತಿಸಿಕೊಂಡು ಕಾವಲು ಕಾದರು. ಹೀಗೆ ಸುಮಾರು ವರ್ಷಗಳು ತಮ್ಮದು ಎನ್ನುವ ಒಂದಡಿ ಜಾಗವಿಲ್ಲದೇ ಪರದಾಡಿದರು. ಇವರ ಗೋಳು ಯಾವ ಸರ್ಕಾರಿಗಳಿಗೂ ಕೇಳಲಿಲ್ಲ, ಯಾವ ಪರಿಹಾರವೂ ಸಿಗಲಿಲ್ಲ. ಆದರೆ ಅವರಲ್ಲಿ ಬದುಕಬೇಕೆಂಬ ಒಂದೇ ಒಂದು ಛಲ ಇನ್ನೂ ಅವರನ್ನು ಜೀವಂತವಾಗಿಟ್ಟಿತ್ತು. ಇವರಲ್ಲಿ ಕೆಲವರು ಕಲ್ಕತ್ತಾ ನಗರದಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿದ್ದರು. ಆದರೆ ಮರಳಿ ತನ್ನವರ ಬಳಿಗೆ ಹೋಗೋಣವೆಂದರೆ ತಮ್ಮದು ಎಂಬ ಒಂದು ಊರು ಕೂಡಾ ಅವರ ಬಳಿ ಇರಲಿಲ್ಲ. ಭಾರತವೇ ನಮ್ಮ ತಾಯ್ನಾಡು ಎಂದು ಬಂದವರಿಗಾಗಿ ಮಿಡಿಯುವ ಒಂದು ಹೃದಯವೂ ಅವರಿಗೆ ಸಿಗಲೇ ಇಲ್ಲ.

ಇಂತಹುದೇ ಸಂಧರ್ಭದಲ್ಲಿ 1977ರಲ್ಲಿ ಪ.ಬಂಗಾಳದ ಚುನಾವಣೆಯು ಆರಂಭವಾಗುತ್ತದೆ. CPI ಪಕ್ಷದ ಮುಖಂಡರಾದ ರಾಮ್ ಚಟರ್ಜಿಯು ವಲಸೆ ಬಂದಿರುವ ದಲಿತರ ಶಿಬಿರಗಳಿಗೆ ತೆರಳಿ “ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಶರಣಾರ್ಥಿಗಳನ್ನು ಪ.ಬಂಗಾಳದಲ್ಲಿ ಶಾಶ್ವತವಾಗಿ ನೆಲೆ ನೀಡಲಾಗುವುದು. 5 ಕೋಟಿ ಪ.ಬಂಗಾಳದ ಜನರ 10 ಕೋಟಿ ಕೈಗಳು ನಿಮ್ಮನ್ನು ಸ್ವಾಗತಿಸುತ್ತಿವೆ” ಎಂದು ಸಿನಿಮಾ ಹೀರೋ ರೀತಿ ಡೈಲಾಗ್ ಹೇಳುತ್ತಾರೆ. ಇದನ್ನು ಕೇಳಿದ ದಲಿತರು ಸಂತೋಷದಿಂದ ಕುಣಿದಾಡಿದರು. ಅಲ್ಲದೇ ಕಮ್ಯುನಿಸ್ಟ್ ಪಕ್ಷ ನಮ್ಮದು ನಮ್ಮಂತವರಿಗಾಗಿಯೇ ಕಮ್ಯುನಿಸ್ಟರು ಇರುವುದು ಎಂದು ಸಂತೋಷಗೊಳ್ಳುತ್ತಾರೆ. 1977ರಲ್ಲಿ CPI ಪಕ್ಷ ಪ.ಬಂಗಾಳದಲ್ಲಿ ಅಧಿಕಾರಕ್ಕೆ ಬರುತ್ತದೆ. ಕಾಮ್ರೇಡ್ ಜ್ಯೋತಿ ಬಸು ಮುಖ್ಯಮಂತ್ರಿಯಾಗುತ್ತಾರೆ. ಇಲ್ಲಿಂದ ಕಮ್ಯುನಿಸ್ಟ್ ನಾಯಕರ ನಿಜವಾದ ಮುಖ ಬಯಲಾಗುತ್ತದೆ.

ನಿರಾಶ್ರಿತ ವಲಸಿಗರ ಮುಖಂಡಾದ ಸತೀಶ್ ಮಂಡಲ್ ಅವರು ಮುಖ್ಯಮಂತ್ರಿಯಾದ ಜ್ಯೋತಿ ಬಸುರವರನ್ನು ಭೇಟಿಯಾಗುತ್ತಾರೆ. ಆಗ ಜ್ಯೋತಿ ಬಸುರವರು ನೇರವಾಗಿಯೇ “ನಮ್ಮ ಸರ್ಕಾರ ನಿಮಗೆ ಯಾವುದೇ ರೀತಿಯ ಸಹಾಯ ಮಾಡಲಾಗದು. ಸುಂದರ್ ಬನ್ ಕಾಡುಗಳಲ್ಲಿ ಒಂದು ಕಡೆ ನೀವೇ ಜಾಗ ನೋಡಿಕೊಳ್ಳಿ” ಎಂದು ಹೇಳುತ್ತಾರೆ. ಅದಕ್ಕೆ ಸತೀಶ್ ಮಂಡಲ್ ರವರು “ನೀವು ಬಂಗಾಳದ ಮಹಾನ್ ನಾಯಕರು. ತಾವು ದಯವಿಟ್ಟು ನಮ್ಮ ಮೇಲೆ ದಾಳಿ ಮಾಡದಂತೆ ತಮ್ಮ ಪೋಲಿಸ್ ಇಲಾಖೆಗೆ ಹೇಳಿ” ಎಂದಾಗ ಸಿಡಿಮಿಡಿಗೊಂಡ ಜ್ಯೋತಿ ಬಸುರವರು “ನಾನು ಏನು ಮಾಡಬೇಕು ಹೇಗೆ ವರ್ತಿಸಬೇಕು ಎಂದು ನಿನ್ನಿಂದ ಕಲಿಯಬೇಕಾ? ಏನು ಮಾಡಬೇಕೆಂದು ನನಗೆ ಗೊತ್ತಿದೆ ನೀನು ಹೋಗು” ಎಂದು ಗದರಿಸಿ ಕಳಿಸುತ್ತಾರೆ. ಅಧಿಕಾರ ಬಂದ ತಕ್ಷಣ ಅಹಂ ಹೇಗೆ ತಲೆಗೇರುತ್ತದೆ ಎಂದು ಗಮನಿಸಿ.‌ ಜ್ಯೋತಿ ಬಸುರವರ ಮಾತಿಗೆ ಸರಿಯೆಂದು ಸುಮಾರು 200-300 ದೋಣಿಗಳಲ್ಲಿ ಕಮ್ಯುನಿಸ್ಟ್ ನಾಯಕರು ತೋರಿಸಿದ ಹಲವಾರು ಜಾಗಗಳಲ್ಲಿ ದಲಿತ ವಲಸಿಗರು ನೆಲೆಸುತ್ತಾರೆ. ಅದೇ ರೀತಿ ಸುಮಾರು 15000 ಜನರು ಮರಿಜ್ಹಪಿ ಎಂಬ ಸಣ್ಣ ದ್ವೀಪಕ್ಕೆ ಬರುತ್ತಾರೆ.

ಮರಿಜ್ಹಪಿ ದ್ವೀಪವು ಸಂಪೂರ್ಣವಾಗಿ ಪೊದೆಗಳಿಂದ ಕೂಡಿದಂತಹಾ ನಿರುಪಯುಕ್ತ ಮರಗಿಡಗಳಿಂದ ತುಂಬಿದಂತಹಾ ಜಾಗವಾಗಿತ್ತು. ಸಾವಿರಾರು ಜನರು ಆ ದ್ವೀಪಕ್ಕೆ ಕಾಲಿಟ್ಟಾಗ ‘ಗಗನಯಾತ್ರಿಗಳು ಹೊಸಾ ಗ್ರಹಕ್ಕೆ ಕಾಲಿಟ್ಟಂತೆ’ ಅನುಭವವಾಯಿತು ಎಂದು ಹೇಳುತ್ತಾರೆ. ಇಷ್ಟು ವರ್ಷಗಳು ಒಂದು ಸ್ವಂತ ನೆಲೆಯಿಲ್ಲದೇ ಪರದಾಡುತ್ತಿದ್ದ ಜನರಿಗೆ ಬಹುದಿನಗಳ ಬಯಕೆಯಾಗಿದ್ದ ಮಾತೃಭೂಮಿ ಲಭಿಸಿದಂತಾಯಿತು. ದಶಕಗಳ ಅಲೆದಾಟದ ಅನುಭವವೋ, ನೋವೋ ಏನೋ ಅವರಿಗೆ ಮರಿಜ್ಹಪಿಯನ್ನು ಮಾದರಿಯಾಗಿಸಬೇಕು ಎಂಬ ಛಲ ಅವರಲ್ಲಿ ಮೂಡಿಬಂತು. ಮುಂದೆ ಇದೇ ಅವರಿಗೆ ಮುಳುವಾಗುತ್ತದೆ ಎಂದು ಕೂಡಾ ಅವರಿಗೆ ಗೊತ್ತಿರಲಿಲ್ಲ.

ಸ್ವಂತ ಅರ್ಥಿಕ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳಾಗಿದ್ದು ಕಮ್ಯುನಿಸ್ಟರಿಗೇಕೆ ಅಪರಾಧವಾಗಿ ಕಂಡಿತು!

ಕೆಲವೇ ತಿಂಗಳುಗಳಲ್ಲಿ ಮರಿಜ್ಹಪಿ ಬದಲಾಗತೊಡಗಿತು. ಮರಿಜ್ಹಪಿ ಬದಲಿಗೆ ಅದನ್ನು “ನೇತಾಜಿ ನಗರ್” ಎಂದು ಹೆಸರು ಬದಲಾಯಿಸಿಕೊಂಡರು. ಕಲ್ಕತ್ತಾ ನಗರದಲ್ಲಿ ವಾಸಿಸುತ್ತಿದ್ದ ಇತರ ವಲಸಿಗರಿಗೆ ತಮ್ಮ ಅಗತ್ಯತೆಗಳನ್ನು ತಿಳಿಸಿ ಸಹಾಯ ಕೋರಿದರು. ಅವರು ಈ ನೇತಾಜಿ ನಗರ್ ಎಂಬ ಮರಿಜ್ಹಪಿಗೆ ಎಲ್ಲಾ ಅಗತ್ಯ ವಸ್ತುಗಳನ್ನು, ಹಣವನ್ನೂ ಒದಗಿಸಿಕೊಟ್ಟರು. ತಮ್ಮಲ್ಲಿರುವ ಅತ್ಯಲ್ಪ ಸಂಪನ್ಮೂಲಗಳಿಂದಲೇ ಕೆಲಸ ಆರಂಭಿಸಿದರು. ಕೆಲವು ಅನಕ್ಷರಸ್ಥ ಜನರು ಎಷ್ಟು ಬುದ್ದಿವಂತರಾಗಿದ್ದರೆಂದರೆ ಊರು ಹೇಗಿರಬೇಕು ಎಂದು ಒಂದು ನೀಲಿನಕಾಶೆಯಂತೆ ಯೋಜನೆಯನ್ನು ಸಿದ್ದಪಡಿಸಿದರು. ಅದಕ್ಕೆ ತಕ್ಕಂತೆ ದೊಡ್ಡ ದೊಡ್ಡ ರಸ್ತೆಗಳು, ಶಾಲೆ, ಆಸ್ಪತ್ರೆಗಳನ್ನು ಅಲ್ಲಿ ಸಿಗುವ ವಸ್ತುಗಳಿಂದಲೇ ಕಟ್ಟಿದರು. ಅದೇ ರೀತಿ ಶುಬ್ರತಾ ಚಟರ್ಜಿ ಎಂಬ ವಿದೇಶದಿಂದ ಆಗಮಿಸಿದ್ದ ಇಂಜನಿಯರ್ ಸಹಾ ಇವರಿಗೆ ಸಹಾಯ ಮಾಡತೊಡಗಿದರು. ನೇತಾಜಿ ನಗರದಲ್ಲಿ ಕುಡಿಯುವ ನೀರು ಉಪ್ಪಾಗಿದ್ದ ಕಾರಣ tube well ಕೊಳವೆ ಬಾವಿಯನ್ನು ಮಾಡಿಸುತ್ತಾರೆ. ಇನ್ನು ಕುಡಿಯುವ ನೀರಿಗೂ ಪರದಾಡುವ ಅಗತ್ಯವಿರಲಿಲ್ಲ. ಇಲ್ಲಿದ್ದ ಜನರೆಲ್ಲಾ ಯಾರು ಅವರಿಗೆ ಏನು ತಿಳಿದಿತ್ತು ಎಂದು ತಿಳಿಯುವುದು ಬಹಳ ಮುಖ್ಯ. ಪ್ರಮುಖವಾಗಿ ಇವರು ಅಸ್ಪೃಶ್ಯ ಸಮುದಾಯದವರು ಆದರೆ ಇವರಲ್ಲಿ ಹಲವರು ಕುಶಲಕರ್ಮಿಗಳಾಗಿದ್ದರು. ಮಡಿಕೆ, ಕಬ್ಬಿಣ, ಕಮ್ಮಾರಿಕೆ, ಬಡಿಗರು, ರೈತಾಪಿಗಳು, ಮೀನುಗಾರರು, ಚಮ್ಮಾರಿಕೆ ಇನ್ನೂ ಹಲವಾರು ರೀತಿಯ ಕುಶಲಕರ್ಮಿಗಳನ್ನು ಹೊಂದಿರುವ ದೊಡ್ಡ ಸಮೂಹವಾಗಿತ್ತು. ಹಾಗಾಗಿ ಇವರ ಇಷ್ಟು ವರ್ಷಗಳ ಅಲೆದಾಟದ ಪರಿಣಾಮವೋ ಅಥವಾ ಅನುಭವವೋ ಇವರಿಗೆ ಒಂದು ಪ್ರದೇಶವನ್ನು ಹೇಗೆ ಕಟ್ಟಬೇಕು ಎಂಬ ಚಾಣಾಕ್ಷತೆ ಮತ್ತು ಪ್ರತಿಭೆ ಇತ್ತು. ಕಮ್ಯುನಿಸ್ಟ್ ಭಾಷೆಯಲ್ಲಿ ಹೇಳಬೇಕೆಂದರೆ ಅಪ್ಪಟ ಕಾರ್ಮಿಕರು.

ಕೇವಲ 7 -8 ತಿಂಗಳಲ್ಲಿ ಮರಿಜ್ಹಪಿ ಎಂಬ ಪೊದೆಗಳಿಂದ ಕೂಡಿದ್ದ ಪ್ರದೇಶ ನೇತಾಜಿ ನಗರ ಎಂಬ ಸ್ವಾವಲಂಬಿ ನಗರವಾಗಿತ್ತು. ಸರ್ಕಾರದಿಂದ ಒಂದು ರೂಪಾಯಿಯೂ ಸಹಾಯ ಪಡೆಯದೆ ಅವರೇ ಅಚ್ಚಯಕಟ್ಟಾದ ಮನೆಗಳನ್ನು ನಿರ್ಮಿಸಿದರು. ಅಗಲವಾದ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ, ಶಾಲೆ, ಆಸ್ಪತ್ರೆ, ಅಂಗಡಿ ಮಳಿಗೆಗಳು, ಬೇಕರಿ ಮತ್ತು ಸಿಹಿ ಪದಾರ್ಥಗಳ ಅಂಗಡಿಗಳನ್ನು ಸ್ಥಾಪಿಸಿಕೊಂಡರು. ಮಳೆ ನೀರನ್ನು ಸಂಗ್ರಹಿಡುವ ಹೊಂಡಗಳನ್ನೂ ನಿರ್ಮಿಸಿದ್ದರು. ಉದ್ಯಮಶೀಲತೆ ಎಷ್ಟರ ಮಟ್ಟಿಗೆ ಬೆಳೆದಿತ್ತೆಂದರೆ, ಸ್ವತಃ ಅವರೇ ಸಣ್ಣ ಸಣ್ಣ ಕುಂಟೆಗಳನ್ನು ನಿರ್ಮಾಣ ಮಾಡಿಕೊಂಡು ಸೀಗಡಿ (prawns) ಸಾಕಿ ಮಾರಾಟ ಮಾಡುತ್ತಿದ್ದರು. ಸ್ವತಃ ಅವರೇ ಸಣ್ಣ ದೋಣಿಗಳನ್ನು ನಿರ್ಮಾಣ ಮಾಡುವ ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಬೀಡಿ ತಯಾರಿಸುವ ಕಾರ್ಖಾನೆಯೂ ಇತ್ತು. ಅವರದೇ ದುಡ್ಡಿನಿಂದ ಔಷಧ ಮಳಿಗೆ ಮತ್ತು ಒಬ್ಬ ವೈದ್ಯನನ್ನೂ ನಿಯೋಜಿಸಿದ್ದರು. ಜೊತೆಗೆ ಒಂದು ಉತ್ತಮ ಗ್ರಂಥಾಲಯವೂ ಮಾಡಿದ್ದರು. ಇನ್ನೂ ಎಷ್ಟರ ಮಟ್ಟಿಗೆ ಸ್ವಾಲಂಬಿಯಾಗಿದ್ದರೆಂದರೆ ತಾವು ಬೆಳೆಸಿದ ಸೀಗಡಿಯನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿಗಾಗಿ ಪ.ಬಂಗಾಳದ ಸರ್ಕಾರಕ್ಕೆ ಮನವಿಯನ್ನು ನೀಡುತ್ತಾರೆ. 15000 ನಿರಾಶ್ರಿತ ಅನಕ್ಷರಸ್ಥ ದಲಿತರಿಂದ ಆರಂಭವಾದ ನೇತಾಜಿ ನಗರ 40000 ಜನಸಂಖ್ಯೆಯುಳ್ಳ ಮಾದರಿ ನಗರವಾಗಿ ಮಾರ್ಪಟ್ಟಿತ್ತು.

ಇದನ್ನೂ ಓದಿ: ಪಾಲಿಟ್‌ ಬ್ಯೂರೋ ಪ್ರಾಯೋಜಕತ್ವದ 19.20.21

ನಿಜಕ್ಕೂ ಇದೊಂದು ಅದ್ಬುತವಾಗಿತ್ತು. ಏಕೆಂದರೆ ಕೇವಲ 7-8 ತಿಂಗಳುಗಳಲ್ಲಿ ವಲಸಿಗರು, ಅನಕ್ಷರಸ್ಥ ಅದರಲ್ಲೂ ದಲಿತರು ಸರ್ಕಾರದಿಂದ ಯಾವ ಸಹಾಯವನ್ನೂ ಪಡೆಯದೇ ತಮ್ಮದೇ ಆದ ಅರ್ಥಿಕ ಸ್ವಾವಲಂಬಿ ನಗರವನ್ನು ಕಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಭಾರತಕ್ಕೆ ಈ ನೇತಾಜಿ ನಗರ ಮಾದರಿಯಾಗಬೇಕಿತ್ತು. ಆದರೆ ನಾವು ಕಾರ್ಮಿಕರ ಪರ ಎನ್ನುವ ಕಮ್ಯುನಿಸ್ಟ್ ರಾದ ಜ್ಯೋತಿ ಬಸು ಸರ್ಕಾರಕ್ಕೆ ಇದೊಂದು ಸವಾಲಿಗೆ ಕಂಡಿತು. ಏಕೆಂದರೆ ಸರ್ಕಾರವೇ ಇವರನ್ನು ಭಾರವೆಂದು, ಯಾವ ಸಹಾಯವೂ ಮಾಡದೆ ಮೂಲೆಗಿಟ್ಟರೂ, ಇವರೇ ಸ್ವಂತ ಅರ್ಥಿಕ ಚಟುವಟಿಕಗಳನ್ನು ಮಾಡಿ ಸ್ವಾವಲಂಬಿಗಳಾಗಿದ್ದು ಕಮ್ಯುನಿಸ್ಟರ ಪಾಲಿಗೆ ನುಂಗಲಾರದ ತುತ್ತಾಗಿ ಕಂಡಿತು. ಇದೇ ಜ್ಯೋತಿ ಬಸುರವರನ್ನು ಅತ್ಯಂತ ಕ್ರೂರ ಮತ್ತು ಅಮಾನವೀಯ ಕ್ರೌರ್ಯವನ್ನು ಮಾಡುವಂತೆ ಮಾಡಿತು.

ಕಮ್ಯುನಿಸ್ಟರ ರಕ್ತದಾಹದ ಅಧ್ಯಾಯ ಆರಂಭ!

ಮೊದಲಿಗೆ ಜ್ಯೋತಿ ಬಸು ನೇತೃತ್ವದ CPI ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ ನಿರಾಶ್ರಿತರನ್ನು ಕೂಡಲೇ ಪ.ಬಂಗಾಳದಿಂದ ಹೊರಹಾಕಬೇಕು. ಬಲವಂತವಾಗಿಯಾದರೂ ಸರಿ, ಬಲ ಪ್ರದರ್ಶನದಿಂದಾರೂ ಸರಿ ಎಂದು ಒಕ್ಕೊರಲ ಅಭಿಪ್ರಾಯದಿಂದ ತೀರ್ಮಾನಿಸುತ್ತಾರೆ. 1979ರ ಜನವರಿಯ 24ನೇ ತಾರೀಖು ಕೊನೆಯ ವಾರದಲ್ಲಿ ಮರಿಜ್ಹಪಿಯ ನೇತಾಜಿ ನಗರದ ನಿರ್ನಾಮಕ್ಕೆ ಮುಖ್ಯಮಂತ್ರಿ ಜ್ಯೋತಿ ಬಸು ಆದೇಶ ಹೊರಡಿಸಿದರು. ಇದರಂತೆ ಪೋಲಿಸರು ಮತ್ತು ಪ್ಯಾರಾ ಮಿಲಿಟರಿಯ ಪಡೆಗಳು ಮರಿಜ್ಹಪಿಯನ್ನು ಸುತ್ತುವರಿದವು. ಎಂತಹಾ ಕ್ರೂರತೆ ಮತ್ತು ಕುತಂತ್ರದಿಂದ ಆರಂಭವಾಯಿತೆಂದರೆ. ಮೊದಲಿಗೆ ಸ್ವತಃ ಪೋಲಿಸರೇ ಕಮ್ಯುನಿಸ್ಟ್ ಬೆಂಬಲಿತ ಗೂಂಡಾಗಳನ್ನು ನೇಮಿಸಿಕೊಂಡರು. ಈ ಗೂಂಡಾಗಳೇ ಹೇಳುವಂತೆ ಪೋಲಿಸರೇ ಸ್ವತಃ ದುಡ್ಡುಕೊಟ್ಟು ಮರಿಜ್ಹಪಿಯ ದಲಿತರ ಮೇಲೆ ಆಕ್ರಮಣ ಮಾಡಲು ಪ್ರೇರೇಪಿಸಿದರು. ಮರಿಜ್ಹಪಿಯ ಸುತ್ತಲೂ IPC 144 section ಜಾರಿಗೊಳಿಸಿ, ಯಾರೂ ಹೊರಗಾಗಲಿ, ಒಳಗಾಗಲಿ ಹೋಗದಂತೆ ನಿರ್ಬಂಧಿಸುತ್ತಾರೆ. ಮೊದಲಿಗೆ ರಾತ್ರಿಯ ಹೊತ್ತು ಮರಿಜ್ಹಪಿ ದ್ವೀಪಕ್ಕೆ ಹೋಗಿ ಕುಡಿಯುವ ನೀರಿನ ಕೊಳವೆ ಬಾವಿಗೆ ಮತ್ತು ಸೀಗಡಿಗಳನ್ನು ಸಾಕುವ ಕುಂಟೆಗಳಲ್ಲಿ ವಿಷವನ್ನು ಹಾಕುತ್ತಾರೆ. ಈ ನೀರು ಕುಡಿದು ಸುಮಾರು 13 ಮಕ್ಕಳು ಸಾಯುತ್ತಾರೆ. ದ್ವೀಪವನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿ ಯಾರೂ ಹೊರಗಾಗಲೀ ಒಳಗಾಗಲಿ ಹೋಗದಂತೆ ನಿರ್ಬಂಧಿಸುತ್ತಾರೆ. ಅಲ್ಲಿ ಏನಾಗುತ್ತಿದೆ ಎಂಬ ಸಣ್ಣ ಸಂಗತಿಯೂ ಹೊರಗಿನ ಪ್ರಪಂಚಕ್ಕೆ ತಿಳಿಯದಂತೆ ನಿರ್ಬಂಧಿಸುತ್ತಾರೆ. ಆಹಾರ ಸಾಮಗ್ರಿಗಳು, ಔಷದಗಳು ಕೂಡಾ ಸಿಗದಂತೆ ಮಾಡುತ್ತಾರೆ. ಸುಮಾರು ದಿನಗಳು ಹಸಿವಿನಿಂದ ಬಳಲುವಂತೆ ಮಾಡುತ್ತಾರೆ.

ಎಷ್ಟರ ಮಟ್ಟಿಗೆ ಎಂದರೆ ” ಹಸಿವನ್ನು ತಾಳಲಾರದೆ ಮರಿಜ್ಹಪಿಯ ಜನರು ಹುಲ್ಲನ್ನು ಕಿತ್ತು ತಿನ್ನುತ್ತಾರೆ”. ಹೀಗೆ ಹಸಿವು ತಾಳಲಾರದೆ ಅವರೇ ಹೊರಗೆ ಬರುವಂತೆ ಮಾಡಿ, ದಡಕ್ಕೆ ಬಂದವರನ್ನು ಇದೇ ಪೋಲಿಸರು ನಿರ್ದಾಕ್ಷಿಣ್ಯವಾಗಿ ಗುಂಡುಹಾರಿಸಿ ಕೊಲ್ಲುತ್ತಾರೆ. ಹೀಗೆ ಅಲ್ಲಿಂದ ಪಾರಾಗಲು ಪ್ರಯತ್ನಿಸಿ ಗುಂಡೇಟಿಗೆ ಬಲಿಯಾದವರನ್ನು ಪೋಲೀಸರು ನೇಮಿಸಿದ್ದ ಸುಫಾರಿ ಗೂಂಡಾಗಳು ತಮ್ಮ ದೋಣಿಗಳಲ್ಲಿ ರಾಶಿ ರಾಶಿ ಶವಗಳನ್ನು ಹೊತ್ತುಕೊಂಡು ಸಮುದ್ರದ ಆಳಕ್ಕೆ ಎಸೆಯುತ್ತಾರೆ. ಇನ್ನೂ ಕೆಲವರು ಈ ಶವಗಳನ್ನು ಹುಲಿ ಸಂರಕ್ಷಣೆಗಿದ್ದ ಮೀಸಲು ಅರಣ್ಯಕ್ಕೆ ಒಯ್ದು ಹುಲಿಗಳಿಗೆ ಆಹಾರವಾಗಿ ಎಸೆಯುತ್ತಾರೆ.

ಇಲ್ಲಿಗೆ ಈ ಕಮ್ಯುನಿಸ್ಟ್ ಸರ್ಕಾರ ಪ್ರಾಯೋಜಿತ ಪೋಲಿಸರ ಮತ್ತು ಸುಫಾರಿ ಗೂಂಡಾಗಳ ಕೃತ್ಯ ನಿಲ್ಲುವುದಿಲ್ಲ. 1979 ಜನವರಿ 29ರಂದು ರಾತ್ರಿ ಮರಿಜ್ಹಪಿ ಎಂಬ ನೇತಾಜಿ ನಗರಕ್ಕೆ ಪೋಲಿಸರು ಮತ್ತು ಗೂಂಡಾಗಳು ನುಗ್ಗುತ್ತಾರೆ. ತಮ್ಮಲ್ಲಿರುವ ಬಂದೂಕುಗಳಿಂದ ಎಡೆಬಿಡದೆ ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸುತ್ತಾರೆ. ಅವರ ಮನೆಗಳಿಗೆ ಬೆಂಕಿಯನ್ನು ಹಾಕುತ್ತಾರೆ. ಇದರಿಂದ ತಪ್ಪಿಸಿಕೊಂಡು ಪರಾರಿಯಾಗಲು ದ್ವೀಪದ ಹೊರಗೆ ಬಂದರೆ ಅಲ್ಲಿಯೂ ಇದೇ ಪೋಲಿಸರು ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ. ನೂರಾರು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲ್ಲುತ್ತಾರೆ. ಎಳೆ ಮಕ್ಕಳು ಎಂಬ ಕರುಣೆಯೂ ಇಲ್ಲದೇ ತಲೆ ಕತ್ತಿರಿಸಿ, ಗುಂಡು ಹಾರಿಸಿ ಕೊಲ್ಲುತ್ತಾರೆ. ರಾಶಿ ರಾಶಿ ಬಿದ್ದ ಹೆಣಗಳನ್ನು ನೋಡಿ ಮೃಗಗಳಂತೆ ಖುಷಿ ಪಡುತ್ತಾರೆ. ಅರ್ಧ ಸುಟ್ಟ ಮಕ್ಕಳ ಶವಗಳನ್ನು ಕಂಡ ತಂದೆ ತಾಯಿಯರ ಆಕ್ರಂಧನಕ್ಕೆ ಮರುಗುವ ಹೃದಯಗಳೇ ಅಲ್ಲಿ ಇರಲಿಲ್ಲ. ಇಷ್ಟು ನಡೆಯುತ್ತಿದ್ದರೂ ಹೊರಗಿನ ಪ್ರಪಂಚಕ್ಕೆ ಏನು ನಡೆಯುತ್ತಿದೆ ಎಂಬ ಮಾಹಿತಿಯೇ ಇರುವುದಿಲ್ಲ ಎಂದರೆ ಕಮ್ಯುನಿಸ್ಟರ ಉದ್ದೇಶ ದಲಿತರನ್ನು ಓಡಿಸುವುದಾಗಿತ್ತೇ? ಅಥವಾ ಸಾಯಿಸುವುದಾಗಿತ್ತೇ ? ಯೋಚಿಸಿ.

ಈ ಸರ್ಕಾರಿ ಪ್ರಾಯೋಜಿತ ಹಂತರ ಕ್ರೌರ್ಯ ಎಷ್ಟರ ಮಟ್ಟಿಗಿತ್ತೆಂದರೆ ಕೆಲವು ಮಹಿಳೆಯರು ಸ್ವತಃ ತಾವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಈ ಕ್ರೌರ್ಯದಿಂದ ಪಾರಾದ ಕೆಲವರು ಅಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳನ್ನು ತಡೆಯಲು ಹೈಕೋರ್ಟಿನ ಮೊರೆ ಹೋಗುತ್ತಾರೆ. ವಿಷಯ ರಾಜ್ಯಾದ್ಯಂತ ಹಬ್ಬಿತು. ಆಗ ನ್ಯಾಯಾಲಯದ ಆದೇಶದಂತೆ ಪೋಲಿಸ್ ಪಡೆಯನ್ನು ಹಿಂಪಡೆದು ಆಹಾರ, ನೀರು, ಚಿಕಿತ್ಸೆ ಮತ್ತು ಔಷಧಿಗಳು ಸರಬರಾಜು ಆದವು. ಅಷ್ಟರಲ್ಲಿ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದಷ್ಟು ಭೀಕರ ಹತ್ಯಾಕಾಂಡವೊಂದು ನಡೆದುಬಿಟ್ಟಿತು. ಕಮ್ಯುನಿಸ್ಟ್ ಸರ್ಕಾರ ಮತ್ತು ಪೋಲಿಸರು ನ್ಯಾಯಾಲಯದ ಆದೇಶ ಬರುವ ಮುಂಚೆ ಕನಿಷ್ಟ ಒಬ್ಬ ಪತ್ರಕರ್ತನಾಗಿ, ಸಹಾಯಕರನ್ನಾಗಲಿ ಕಾಲಿಡದಂತೆ ತನ್ನ ಅಧಿಕಾರ ದುರುಪಯೋಗ ಮಾಡಿ ತಡೆದಿತ್ತು. ಅಲ್ಲಿ ಬದುಕುಳಿದವರು ಹೇಳುವಂತೆ ಪತ್ರಕರ್ತರು ಮರಿಜ್ಹಪಿಗೆ ಬರುವ ಮೊದಲೇ ಸಾವಿರಾರು ಸಂಖ್ಯೆಯಲ್ಲಿ ಹತ್ಯೆಯಾಗಿದ್ದವರ ಶವಗಳನ್ನು ಲಾರಿಗಳಲ್ಲಿ ಸರಕುಗಳಂತೆ ತುಂಬಿಕೊಂಡು ಸಾಗಿಸಿಬಿಟ್ಟರು‌. ಈ ಹತ್ಯಾಕಾಂಡದಲ್ಲಿ ಸುಮಾರು ಹತ್ತು ಸಾವಿರಕ್ಕಿಂತಲೂ ಅಧಿಕ ದಲಿತರು ಹತ್ಯೆಯಾದರು. ಇವರಲ್ಲಿ ಅತ್ಯಾಚಾರಕ್ಕೊಳಗಾಗಿ ಸತ್ತ ಹೆಣ್ಣು ಮಕ್ಕಳು, ವೃದ್ದರು, ಮಕ್ಕಳು, ಯುವಕರ ಕುಟುಂಬಸ್ಥರು ಇಂದಿಗೂ ಅವರನ್ನು ನೆನೆದು ಕಣ್ಣೀರು ಹಾಕುವುದರ ಜೊತೆಗೆ ಕಮ್ಯುನಿಸ್ಟರ ಅಮಾನವೀಯ ಕ್ರೌರ್ಯಕ್ಕೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.

ಇಷ್ಟಕ್ಕೇ ಇದು ನಿಲ್ಲಲಿಲ್ಲ!

ಬದಲಿಗೆ ಇದೇ ಕಮ್ಯುನಿಸ್ಟ್ ಸರ್ಕಾರದ ಚೇಲಾಗಳು ಮರಿಜ್ಹಪಿಯಲ್ಲಿ ಇದ್ದವರು ವಲಸಿಗರಲ್ಲ, ಉಗ್ರವಾದಿ ಟೆರರಿಸ್ಟ್ ಗಳು ಎಂದು ಅಪಪ್ರಚಾರ ಮಾಡುತ್ತಾರೆ.‌ ಹೇಗಿದೆ ನೋಡಿ ಈ ಮನುವಾದಿ ಕಮ್ಯುನಿಸ್ಟರ ಕುತಂತ್ರ, ಮಾನವೀಯತೆ ಎಂಬುದು ಇವರಲ್ಲಿ ಸಾಸಿವೆ ಕಾಳಷ್ಟು ಕೂಡಾ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿಂದ ಆರಂಭವಾದ ಕಮ್ಯುನಿಸ್ಟರ ಮನುವಾದಿ ದಾಳಿಗಳು ಇಂದಿಗೂ ನಿಂತಿಲ್ಲ. ಎಲ್ಲೆಲ್ಲಿ ಕಮ್ಯುನಿಸ್ಟ್ ಆಡಳಿತ ಇತ್ತೋ ಅಲ್ಲೆಲ್ಲಾ ಸ್ವತಃ ಕಮ್ಯುನಿಸ್ಟರೇ ಫ್ಯುಡಲ್ ಜಾತಿವಾದಿಗಳಂತೆ ದಲಿತರ ಮೇಲೆ ದಾಳಿಗಳನ್ನು ಮಾಡಿದ್ದಾರೆ. ಕೇರಳದಲ್ಲಿ ಚಿತ್ರಲೇಖ ಎಂಬ ದಲಿತ ಮಹಿಳೆ ತನ್ನ ಕುಟುಂಬ ನಿರ್ವಹಣೆಗೆ ಆಟೋ ಚಾಲಕಿಯಾಗಿ ದುಡಿಯುವುದನ್ನು ಸಹಿಸದ ಇದೇ ಕಮ್ಯುನಿಸ್ಟರು ಆಕೆಯ ಆಟೋವನ್ನು ನಿರ್ದಾಕ್ಷಿಣ್ಯವಾಗಿ ಸುಟ್ಟುಹಾಕಿ ಆಕೆಯ ಮೇಲೆ ದಾಳಿ ಮಾಡುತ್ತಾರೆ. ಆಗ ದಾಳಿ ಮಾಡಿದವರ ಪರ ನಿಂತವರು ಕೂಡಾ ಇದೇ ಕಮ್ಯುನಿಸ್ಟರು. ಹೀಗೆ ಹಲವಾರು ಘಟನೆಗಳು ಕಮ್ಯುನಿಸ್ಟರ ಆಂತರಿಕ ಮನುವಾದವನ್ನು ಬಹಿರಂಗಪಡಿಸುತ್ತಲೇ ಇದೆ.

ಆಟೋರಿಕ್ಷಾ ಚಾಲಕಿ, ದಲಿತ ಮಹಿಳೆ ಚಿತ್ರಲೇಖಾ

ಸಿರಿಯಾ, ಪಾಲಿಸ್ಟೇನ್, ಗಾಜಾದಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳು, ಹತ್ಯಾಕಾಂಡಗಳ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ನಾವೇನೂ ಮಾಡಲಾಗದಿದ್ದರೂ ಕನಿಷ್ಠ ಅಲ್ಲಿ ನಡೆದ ಘಟನೆಯ ಮಾಹಿತಿ ನಮಗೆ ಲಭ್ಯವಾದ್ದರಿಂದ ನಾವು ಈ ಘಟನೆಗಳನ್ನು ಕನಿಷ್ಠ ಪಕ್ಷ ವಿರೋಧಿಸುತ್ತಿದ್ದೇವೆ. ಆದರೆ ಇದೇ ಕಮ್ಯುನಿಸ್ಟರು ತಮ್ಮ ನಾಯಕ ಜ್ಯೋತಿ ಬಸು ಸರ್ಕಾರ ದಲಿತರ ಹತ್ಯಾಕಾಂಡ ಮಾಡಿಸಿದ್ದನ್ನು ಎಂದಾದರೂ ಪ್ರಶ್ನಿಸಿದ್ದೀರ? ಕನಿಷ್ಠ ನಿಮ್ಮ ಪಾಲಿಟಿ ಬ್ಯೂರೋ ಸಭೆಗಳಲ್ಲಿ ಇದರ ಬಗ್ಗೆ ಒಂದೇ ಒಂದು ಮಾತಾದರೂ ಮಾತನಾಡಿದ್ದೀರ? ಮಾತನಾಡುವುದೂ ಇಲ್ಲ ಬಿಡಿ. ಏಕೆಂದರೆ ಹೆಸರಿಗಷ್ಟೇ ಕಮ್ಯುನಿಸಂ ಒಳಗಿರುವುದು ಜಾತಿಯಿಸಂ.‌ ಈ ಜಾತಿವಾದಿಗಳು ಹೊರಗೆ ಸಂಘಪರಿವಾರ, ಕಾಂಗ್ರೆಸ್, ಕಮ್ಯುನಿಸ್ಟ್ ಎಂದು ಹೊಡೆದಾಡುತ್ತಾರಷ್ಟೆ. ಆದರೆ ಒಳಗೆ ಅಂತರಾಳದಲ್ಲಿ ಮನುವಿನ ಕೂಸಾಗಿರುತ್ತಾರೆ.

ಲಾಲ್ ಸಲಾಂ ಎನ್ನುವ ದಲಿತರೇ ಎಚ್ಚರ!

ಪ್ರಪಂಚದಲ್ಲಿ ನಾವೇ ಸಾಚಾವಾದಿಗಳು, ನಮ್ಮದೇ ಶ್ರೇಷ್ಠ ಎನ್ನುವ ಕಮ್ಯುನಿಸ್ಟರೇ ನಿಮ್ಮ ಜೊತೆಯಲ್ಲಿ ಬಂದೂಕು ಹಿಡಿದು ಸತ್ತವರಲ್ಲಿ ದಲಿತ, ಹಿಂದುಳಿದವರೇ ಹೆಚ್ಚು. ಮಾರ್ಕ್ಸ್, ಮಾವೋ, ಲೆನಿನ್, ಸ್ಟಾಲಿನ್ ಬಗ್ಗೆ ದಲಿತರಿಗೆ ಪುಂಕಾನು ಪುಂಕವಾಗಿ ಬೋಧಿಸಿದ ತಾವು ಎಂದಾದರೂ ಮರಿಜ್ಹಪಿಯಲ್ಲಿ ಕಮ್ಯುನಿಸ್ಟರೇ ಮಾಡಿಸಿದ ಹತ್ಯಾಕಾಂಡದ ಬಗ್ಗೆ ಅಪ್ಪಿತಪ್ಪಿಯಾದರೂ ಹೇಳಿದ್ದೀರ? ಲಾಲ್ ಸಲಾಂ ಹೇಳುವ ದಲಿತರೇ ನೆನಪಿಡಿ ಕಮ್ಯುನಿಸ್ಟರಿಗೆ ಪರಾವಲಂಭಿಗಳಾದ ದಲಿತರ ಅಗತ್ಯವಿದೆಯೇ ಹೊರೆತೂ ಸ್ವಾವಲಂಬಿ, ಸ್ವಾಭಿಮಾನಿ ದಲಿತರೆಂದರೆ ಎಂದಿಗೂ ಒಪ್ಪಿಗೆಯಾಗುವುದಿಲ್ಲ. ಇದೇ ಕಾರಣಕ್ಕೆ ಬಾಬಾಸಾಹೇಬ್ ಅಂಬೇಡ್ಕರರನ್ನು ಕೂಡಾ ಒಪ್ಪುವುದಿಲ್ಲ. ಇಂದು ಬಾಬಾಸಾಹೇಬ್ ಅಂಬೇಡ್ಕರರನ್ನು ಸರ್ವ ಸಮುದಾಯಗಳೂ ಅಪ್ಪಿಕೊಳ್ಳುತ್ತಿರುವ ಏಕೈಕ ಉದ್ದೇಶದಿಂದ ಕಮ್ಯುನಿಸ್ಟರು ಒಪ್ಪಿಕೊಳ್ಳುತ್ತಿದ್ದಾರೆ ಅಷ್ಟೇ.

ಲೇಖಕ: ಜನಾ ನಾಗಪ್ಪ

ಕರ್ನಾಟಕದಲ್ಲಿ ಒಂದು ಬಹು ವಿಶಿಷ್ಟ ಪಂಗಡವೊಂದಿದೆ ಇದು ಮೂಲತಃ ಕಮ್ಯುನಿಸ್ಟ್. ಆದರೆ ಓಟು ಹಾಕಿಸುವುದು ಕಾಂಗ್ರೆಸಿಗೆ‌. ಇವರೇ ಪ್ರಗತಿಪರ ಕಮ್ಯುನಿಸ್ಟ್ ಗಾಂಧೀವಾದಿಗಳು. ಇವರ ಜೊತೆಗಿರುವವರೆಲ್ಲರೂ ಒಂದೇ ರೀತಿ ಎಂದು ಹೇಳಲಾಗದು. ಆದರೆ ಜೊತೆಗಿದ್ದವರ ಸ್ಪಷ್ಟತೆಯನ್ನು ಕೂಡಾ ಕಲ್ಮಶಗೊಳಿಸುವ ನಾಜೂಕು ವೀರರು. ಕೆಂಪು ಜಂಡಾ ಹಿಡಿದ ದಲಿತರೇ ಲಾಲ್ ಸಲಾಂ ಎನ್ನುವ ಮೊದಲು ಮರಿಜ್ಹಪಿ ದಲಿತರ ರಕ್ತದ ಕಲೆಯಿಂದಲೇ ನೀವು ಹಿಡಿದಿರುವ ಬಾವುಟ ಕೆಂಪಾಗಿದೆ ಎಂದು.
ಜೈ ಭೀಮ್

3 thoughts on “ಮರಿಜ್ಹಪಿ ಹತ್ಯಾಕಾಂಡಕ್ಕೆ 46 ವರ್ಷ! – ಸ್ವಾವಲಂಬಿ, ಸ್ವಾಭಿಮಾನಿ ದಲಿತರ ಮಾರಣಹೋಮಕ್ಕೆ ಮುನ್ನುಡಿ ಬರೆದ ಕಮ್ಯುನಿಸಂ!”
    1. ನಿಮ್ಮ ಈ ಲೇಖನಕ್ಕೆ ಆಧಾರ ಏನು, ಇದನ್ನು ನೀವು ಎಲ್ಲಿಂದ ರೆಫರೆನ್ಸ್ ಆಗಿ ಪಡೆದಿದ್ದೀರ, ಇದಕ್ಕೆ ಸಂಭಂದಿಸಿದ ಐತಿಹಾಸಿಕ ಧಾಖಲೆಗಳೇನಾದರು ಇವೆಯಾ?

Leave a Reply

Your email address will not be published. Required fields are marked *