“ನನ್ನ ಕಥೆಗಳನ್ನು ನಿಮಗೆ ಸಹಿಸಲು ಸಾಧ್ಯವಿಲ್ಲವೆಂದಾದರೆ ಈ ಕಾಲವೇ ಸಹಿಸಲು ಅರ್ಹವಾದುದಲ್ಲ!”

(ಅಗರ್ ಮೇರೇ ಅಫ್ಸಾನೋಂಕೋ ಆಪ್ ಬರ್ದಾಷ್ತ್ ನಹೀ ಕರ್ ಸಕ್ತೇ ತೋ ಯೇ‌ ಜ಼ಮಾನಾ ಹೀ ನ ಕಾಬಿಲೇ ಬರ್ದಾಷ್ತ್ ಹೇ)

ಇವತ್ತು (ಜನವರಿ 18) ಉರ್ದು ಸಣ್ಣಕಥೆಗಳ ಅನಭಿಷಿಕ್ತ ದೊರೆ ಸಾದತ್ ಹಸನ್ ಮಂಟೋ ಮೃತಪಟ್ಟ ದಿನ.‌

ತನ್ನದೇ ಆದ‌ ಮಂಟೋವಾದವನ್ನು ಹುಟ್ಟುಹಾಕಿದ ಈ ಕಥೆಗಾರ ಬದುಕಿದ್ದು ಕೇವಲ 42 ವರ್ಷ ಏಳುತಿಂಗಳು ಮಾತ್ರ. ಆದರೆ ಈತ ಸಾಧಿಸಿದ್ದು ಅಪಾರ. ಮಿರ್ಜ಼ಾಗಾಲಿಬ್ ಚಲನಚಿತ್ರ ಸೇರಿದಂತೆ 10 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಕಥೆ ಸಂಭಾಷಣೆ ಬರೆದು, ಸ್ವತಃ ಕೆಲವು ಚಲನಚಿತ್ರಗಳಲ್ಲೂ ನಟಿಸಿದ.‌ 250ಕ್ಕೂ ಮಿಕ್ಕಿ ಕಥೆಗಳನ್ನು ಬರೆದು 22 ಸಂಕಲನಗಳನ್ನು ಪ್ರಕಟಿಸಿದ, ಆತನ ಮೆಚ್ಚಿನ‌ ಬಾಂಬೆ ನಗರದಲ್ಲಿ ಸುತ್ತಾಡಿ ಅಲ್ಲಿನ ಚಿತ್ರತಾರೆಯರ (ಗಂಜೇ ಫರಿಸ್ಥೆ!) ಬದುಕಿನ ಚಿತ್ರಗಳ ಬಗ್ಗೆ ‘ಮೀನಾ ಬಝಾರ್’ ಎಂಬ ಅಪೂರ್ವ ವ್ಯಕ್ತಿ ಚಿತ್ರಗಳನ್ನು ಹೊರತಂದ. ವಿಕ್ಟರ್ ಹ್ಯೂಗೋ, ಮಾಕ್ಸಿಂ ಗೋರ್ಕಿ ಮೊದಲಾದವರ ನಾಟಕ -ಕಥೆಗಳನ್ನು ಉರ್ದುವಿಗೆ ಅನುವಾದಿಸಿದ , ಅಸಂಖ್ಯಾತ ರೇಡಿಯೋ ನಾಟಕಗಳನ್ನೂ ಬರೆದ.‌ ಜಗತ್ತಿನಲ್ಲಿಯೇ ಅಪೂರ್ವವೆನಿಸಿದ ಭಾರತ ಪಾಕಿಸ್ತಾನದ ವಿಭಜನೆಯ ದುಃಸ್ವಪ್ನಗಳ ನಗ್ನನರ್ತನವಿರುವ ‘ಕಪ್ಪುಗೆರೆಗಳು’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ.‌

ತನ್ನ ಪ್ರತಿಗಾಮಿತನವೂ ಸದಾ ಸಿಡಿದೇಳುತ್ತಿದ್ದ ಪಾದರಸದಂತಹ ವ್ಯಕ್ತಿತ್ವದಿಂದಾಗಿಯೂ ಎಲ್ಲರಿಂದಲೂ ಬಹಿಷ್ಕೃತನಾದ. ಆದರೂ ಯಾರನ್ನೂ ದ್ವೇಷಿಸಲಿಲ್ಲ.

ಮಂಟೋನ ಚರಮಗೀತೆ

ಜಗದ ಬಳಪದ‌ ಮೇಲೆ‌

ಎರಡೆರಡು ಸಲ‌ ಬರೆಯಲಾದ

ಅಕ್ಷರವಲ್ಲ‌‌ ನಾನು

ಓ‌‌ ದೇವರೇ ಕಾಲವೇಕೆ ನನ್ನನ್ನು

ಒರೆಸಿ ಹಾಕಿತು !

ಮಿರ್ಜ಼ಾ ಗಾಲಿಬನ ಈ ಕವಿತೆಯನ್ನು ಅತೀ ಹೆಚ್ಚು ಸಲ‌‌ ಬಳಸಿದ್ದು , ಗಾಲಿಬನಂತೆಯೇ ವಿಲಕ್ಷಣವಾಗಿ ಬದುಕಿದ್ದ ಉರ್ದು ಸಣ್ಣಕಥೆಗಳ ಸರದಾರ ಸಾದತ್ ಹಸನ್‌ ಮಂಟೋ. ಗಾಲಿಬನಂತೆಯೇ ಮಂಟೋ ಕೂಡಾ ತನ್ನ ಚರಮಗೀತೆಯನ್ನು ತಾನೇ ಬರೆದಿಟ್ಟಿದ್ದ.‌ ಗಾಲಿಬನ ಮರಣಾ ನಂತರ ಆತನ ಇಚ್ಛೆಯಂತೆಯೇ ಆ ಕವಿತೆಯನ್ನು ಆತನ‌‌ ಸಮಾಧಿ‌ಗಲ್ಲಿನ‌ ಮೇಲೆ‌ ಬರೆಸಲಾಯಿತು.

ಮಂಟೋ ತನ್ನ‌ ಚರಮಗೀತೆಯನ್ನು ಈ ರೀತಿ ಬರೆದಿದ್ದ , “ಪರಮ ದಯಾಮಯನಾದ ದೇವನ ಹೆಸರಿನಲ್ಲಿ , ಇಲ್ಲಿ‌ ಮಲಗಿಹನು ಸಾದತ್ ಹಸನ್ ಮಂಟೋ ಮತ್ತು ಆತನ ಜೊತೆಗೆ ಮಲಗಿಹವು ಸಣ್ಣ ಕಥೆಗಳನ್ನು ಬರೆಯುವ ಕಲೆಯ ಸಕಲ‌ ಗೂಢ ರಹಸ್ಯಗಳು… ರಾಶಿ ರಾಶಿ‌ ಮಣ್ಣಿನ ಕೆಳಗೆ ಆತ ಚೋಧ್ಯದಿಂದ‌ ಮಲಗಿಹನು, ಯಾರು ಅತೀ ದೊಡ್ಡ ಸಣ್ಣ ಕಥೆಗಾರರು ಈ ಈರ್ವರ‌ ನಡುವೆ : ತಾನೇ ಅಥವಾ ಆ ದೇವನೇ?”

-ಸಾದತ್ ಹಸನ್‌ ಮಂಟೋ, 18 ಆಗಸ್ಟ್ 1954

ಈ‌ ಬರಹ ಬರೆದು ಐದು ತಿಂಗಳ ನಂತರ(18 ಜನವರಿ 1955) ಮಂಟೋ ಮರಣ ಹೊಂದಿದ. ಆ ಸಮಯದಲ್ಲಿ ಆತ ಬರೆದಿದ್ದ ಚಿತ್ರಕಥೆ ‘ಮಿರ್ಜಾ ಗಾಲಿಬ್’ ಭಾರತದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.‌‌‌ ಸ್ವತಃ ಭಾರತದ ಪ್ರಧಾನಿ‌ ನೆಹರೂ ಆ ಚಿತ್ರವನ್ನು ವೀಕ್ಷಿಸಿದ್ದರು, ದೆಹಲಿಯಲ್ಲಿ ಸ್ವರ್ಣ ಕಮಲ ಪ್ರಶಸ್ತಿಯನ್ನೂ ನೀಡಲಾಗಿತ್ತು. ಆದರೆ ಮಂಟೋ‌ ಮಾತ್ರ ಚಿಕಿತ್ಸೆಗೂ ಕಾಸಿಲ್ಲದೆ ಲಾಹೋರಿನ ಮೆಯೋ ಆಸ್ಪತ್ರೆಯಲ್ಲಿ ಮಕಾಡೆ‌ ಮಲಗಿದ್ದ. ಅತಿಯಾದ ಕುಡಿತದ‌ ಚಟದಿಂದಾಗಿ ಲಿವರ್ ಸಿರೋಸಿಸ್‌ಗೆ ಒಳಗಾಗಿದ್ದ ದೇಶದ‌ ಮಹಾನ್‌ ಕಥೆಗಾರನಿಗೆ ಔಷದಿ ರೂಪದಲ್ಲಿ‌ ಒಂದಿಷ್ಟು ವಿಸ್ಕೀ ನೀಡಲು ಪಾಕಿಸ್ತಾನ ಸರಕಾರ ಅನುಮತಿಸಿತ್ತು.‌( ಇದಕ್ಕೂ ಕೂಡಾ ಲಂಚ‌ ನೀಡಬೇಕಾಗಿ ಬಂತು ಎಂದು‌ ಬೇರೊಂದು ಲೇಖನದಲ್ಲಿ‌ ಸ್ವತಃ ಮಂಟೋ‌ ಬರೆದಿದ್ದಾನೆ).

ಮಂಟೋ ಒಮ್ಮೆ ಹೀಗೆ ಬರೆದಿದ್ದ : “ಪ್ರೀಯ ದೇವರೇ, ಜಗದೊಡೆಯನೇ, ಪರಮ ದಯಾಳು‌ ಮತ್ತು ಕರುಣಾಮಯನೇ, ಪಾಪಕೂಪದಲ್ಲಿ ಮುಳುಗೆದ್ದು ಮೊಣಕಾಲೂರಿ‌ ನಿನ್ನ ಪರಮ ಸಿಂಹಾಸನದ ಮುಂದೆ ಮೊಣಕಾಲೂರಿ ಶರಣಾಗಿ‌ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಆ ಗುಲಾಮ್ ಹಸನನ ಮಗ ಪುಣ್ಯಾತ್ಮ‌ ಹಸನ್‌ ಸಾದತ್ ಮಂಟೋ ನನ್ನು ಕರೆಸಿಕೋ ತಂದೇ.

ಆತನನ್ನು‌ ಕರೆಸಿಕೋ ದೇವರೇ, ಆತ ಸುಗಂಧವನ್ನು ತೊರೆದು ಕೊಚ್ಚೆಯ ಹಿಂದೆ ಓಡಿದ. ಬೆಳಗನ್ನು ದ್ವೇಷಿಸಿ ಕಗ್ಗತ್ತಲ ನರಕವನ್ನು ಪ್ರೀತಿಸಿದ. ನಾಗರೀಕತೆಯ ಬಗ್ಗೆ ಆತನಿಗೆ ತಿರಸ್ಕಾರವಲ್ಲದೆ ಇನ್ನೇನೂ ಇಲ್ಲ ಆದರೆ ನಗ್ನತೆಯನ್ನೂ ನಿರ್ಲಜ್ಜತನವನ್ನೂ ಧೇನಿಸಿದ.‌ ಸಿಹಿಯನ್ನು ದ್ವೇಷಿಸಿ ತನ್ನ ಬದುಕಿಗೆ ಕಹಿಯಾದ‌ ಹಣ್ಣನ್ನು‌ ನೀಡಿದ. ಗೃಹಿಣಿಯರನ್ನು ಕಣ್ಣೆತ್ತಿಯೂ ನೋಡದ ಆತ ವೇಶ್ಯೆಯರ ಸಂಗದಲ್ಲಿ ಸಪ್ತ ಸ್ವರ್ಗಗಳನ್ನು ಅನುಭವಿಸಿದ. ಹರಿದಾಡುವ ನೀರಿನ ಬಳಿಯೂ ಸುಳಿಯದೆ ನಿಂತ ಕೊಚ್ಚೆಯಲ್ಲಿ ಈಜಾಡಿದ. ಎಲ್ಲಿ ಜನರು ಅಳುತ್ತಿದ್ದರೋ ಅಲ್ಲಿ ಆತ ನಗುತ್ತಿದ್ದ, ಎಲ್ಲಿ‌ ಜನರು ನಗುತ್ತಿದ್ದರೋ ಅಲ್ಲಿ ಆತ ಅಳುತ್ತಿದ್ದ. ಶೈತಾನನ ದೆಶೆಯಿಂದ ಕಪ್ಪಾದ ಅನಿಷ್ಟ ಮುಖಗಳನ್ನು ಪ್ರೀತಿಯಿಂದ ತನ್ನ ಮೃದುಹಸ್ತದಿಂದ ತೊಳೆದು ಶುಚಿಗೊಳಿಸುತ್ತಿದ್ದ. ಆತ ನಿನ್ನನ್ನೆಂದಿಗೂ ಹಿಂಬಾಲಿಸಲಿಲ್ಲ ಬದಲಿಗೆ ಅಂದು ನಿನ್ನನ್ನು ದಿಕ್ಕರಿಸಿ ಧರೆಗೆ ಬಿದ್ದ ಆ ಶಪಿತ ದೇವತೆ, ಆ ಶೈತಾನನನ್ನೇ ಎಲ್ಲೆಲ್ಲಿಯೂ ಹಿಂಬಾಲಿಸಿದ.”

ಮಂಟೋ ಮರಣ ಶಯ್ಯೆಯಲ್ಲಿ‌ ಮಲಗಿರುವಾಗ ಆತನ‌ ಮಾತುಗಳು ನಿಜವಾದವು.‌ ದೇವತೆಗಳು ಆತನ ನೆರವಿಗೆ ಧಾವಿಸಲಿಲ್ಲ.‌ ಮಂಟೋನಿಗೆ ಯಾರ ಬಳಿಯೂ‌‌ ಕೈಚಾಚದೆ ಅತ್ತ್ಯುತ್ತಮ‌ ಚಿಕಿತ್ಸೆ‌‌ ನೀಡಲು ಪತ್ನಿ ಸಫಿಯಾ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ಕುಟುಂಬಿಕರಂತೆ ಯಾರೋ ಅಪರಿಚಿತರು ಬೇಟಿ ಕೊಟ್ಟಿದ್ದರು.‌ ಅರೇ ! ಅದು ಹೀರಾ‌ಮಂಡಿಯ ಕುಖ್ಯಾತ ತವಾಯಕ್‌ಗಳು, ವೇಶ್ಯೆಯರು ಮತ್ತು ತಲೆಹಿಡುಕರಲ್ಲವೇ? ಇಲ್ಲಿ ಅವರಿಗೇನು‌ ಕೆಲಸ? ಮಹಾನ್ ಉರ್ದು ಕಥೆಗಾರ ಮರಣ ಶಯ್ಯೆಯಲ್ಲಿ ಮಲಗಿರುವಾಗ !! ಯಾರೋ ಓಡೋಡಿ ಹೋಗಿ ನೋಡುವಾಗ ಅವರು ಹೊರಟು ಹೋಗಿಯಾಗಿತ್ತು.‌ ಮಂಟೋನ‌ ತಲೆ‌ದಿಂಬಿನ ಕೆಳಗೆ ನೋಟಿನ ಕಂತೆಗಳಿದ್ದವು. ಮಂಟೋ‌ನ‌ ಕಥೆಯ ಪಾತ್ರಗಳೇ ಕಥೆಗಾರನ ಬಳಿಗೆ ಧಾವಿಸಿ ಬಂದಿದ್ದವು.

‌‌‌‌‌ ಮಂಟೋ ಜಗದ ಸಕಲ ರೀತಿಯ ಕೃತಕತೆ ಮತ್ತು ಮುಖವಾಡಗಳನ್ನು ದಿಕ್ಕರಿಸುತ್ತಲೇ ಮರಣ ಹೊಂದಿದ. ಆತನ ಶವಯಾತ್ರೆಯಲ್ಲಿ ಸೇರಿದ ಜನಸಾಗರ ಮಹಾನ್‌ ಕಥೆಗಾರ ಹೇಗೆ ತಳಮಟ್ಟದ ಜನರ ಹೃದಯ ಸಾಮ್ರಾಟನಾಗಿದ್ದ ಎಂಬುದನ್ನು ಮತ್ತೊಮ್ಮೆ ನೆನಪಿಸಿತು.‌ ಮಂಟೋ ಬಿರುದು ಬಾವಲಿಗಳನ್ನು ದ್ವೇಷಿಸಿದ್ದ.‌ ಸರಕಾರಿ ಪ್ರಶಸ್ತಿಗಳನ್ನಂತೂ ಪರಮ ಅಪಮಾನವೆಂದೇ ಪ್ರತಿಪಾದಿಸಿದ್ದ.

Manto with his wife Safia

“ನನ್ನ ಮರಣದ ನಂತರ ಒಂದು ವೇಳೆ ಆಕಾಶವಾಣಿ ಮತ್ತು ಗ್ರಂಥಾಲಯಗಳ ಬಾಗಿಲುಗಳು ನನ್ನ ಬರಹಗಳು ಮತ್ತು ಕಥೆಗಳಿಗೋಸ್ಕರ, ಕವಿ ಇಕ್ಬಾಲರ ಕವಿತೆಗಳಿಗೆ ನೀಡಿದ ಸ್ಥಾನಮಾನದಂತೆಯೇ ತೆರೆದುಕೊಂಡಲ್ಲಿ ನನ್ನ ಆತ್ಮವು ಅಶಾಂತಿಯಿಂದ ಕಂಗೆಟ್ಟು ಅಲೆದಾಡಬಹುದು. ನನ್ನ ಈ ಪ್ರಕ್ಷೋಭೆಗೊಂಡ ಮನಃಸ್ಥಿತಿಯಲ್ಲಿಯೂ, ನನ್ನನ್ನು ಇಲ್ಲಿ ಯಾವ ರೀತಿ ನಡೆಸಿಕೊಳ್ಳಲಾಗಿದೆಯೋ ಅದರಿಂದ ನಾನು ತೃಪ್ತನಾಗಿದ್ದೇನೆ. ಸರಕಾರಿ ಮಾನ್ಯತೆಯೆಂಬ ಆ ಕೊಳೆಯುವಿಕೆಯಿಂದ ದೇವರು ನನ್ನನ್ನು ರಕ್ಷಿಸಲಿ, ಅದು ಸಮಾಧಿಯಲ್ಲಿಯೂ ನನ್ನ ಎಲುಬುಗಳನ್ನು ಕಿತ್ತು ತಿನ್ನಬಹುದು.

ನನ್ನ ನೋವೇನೆಂದರೆ, ನನ್ನನ್ನು ಪ್ರಗತಿಪರನೆಂದು ಗುರುತಿಸಿದ್ದ ಕಾಲವೊಂದಿತ್ತು, ನಂತರ ನನ್ನನ್ನು ಪ್ರತಿಗಾಮಿಯೆಂದು ಕರೆಯಲಾಯಿತು. ಈಗ ಮತ್ತೊಮ್ಮೆ ಈ ಹಿಂದೆ ನನ್ನ ಬಗ್ಗೆ ಅವರದೇ ಆದ ತೀರ್ಪು ನೀಡಿದ್ದ ಸರಕಾರದವರು ನನ್ನನ್ನು ಪ್ರಗತಿಪರ ಎಂದು ಗುರುತಿಸತೊಡಗಿದ್ದಾರೆ, ಅಂದರೆ, ಒಬ್ಬ ಕೆಂಪು, ಕಮ್ಯೂನಿಸ್ಟ್. ಕೆಲವು ಸಮಯಗಳ ಹಿಂದೆ ಅಸಹನೆಯಿಂದ ನಾನೊಬ್ಬ ಅಶ್ಲೀಲ ಬರಹಗಾರನೆಂದು ಮೊಕದ್ದಮೆಯನ್ನೂ ದಾಖಲಿಸಿದ್ದರು. ಅದೇ ಸರಕಾರ ತನ್ನ ಸರಕಾರಿ ಜಾಹೀರಾತುಗಳಲ್ಲಿ ಸಾದತ್ ಹಸನ್ ಮಂಟೋ ದೇಶದ ಮಹಾನ್ ಕಥೆಗಾರ, ಸಣ್ಣ ಕಥೆಗಳ ಮಹಾನ್ ಲೇಖಕ, ಆತ ವಿಭಜನೆಯ ಸಂಧಿಗ್ದ ಸನ್ನಿವೇಶಗಳಲ್ಲಿಯೂ ತನ್ನ ಲೇಖನಿಯನ್ನು ಕೆಳಗಿಡಲಿಲ್ಲ ಎಂದೂ ಘೋಷಣೆ ಮಾಡುತ್ತದೆ.

ನನಗಿರುವ ಚಿಂತೆಯೆಂದರೆ, ಅದನ್ನು ಯೋಚಿಸುವಾಗಲೇ ಎದೆ ನಡುಗುತ್ತದೆ, ಒಂದಲ್ಲ ಒಂದು ದಿನ ಈ ಮತಿಗೆಟ್ಟ ಸರಕಾರ ನನ್ನ ಸಮಾಧಿಯ ಮೇಲೊಂದು ಪ್ರಶಸ್ತಿಯನ್ನು ತಂದಿಡುವುದಂತೂ ದಿಟ, ಹಾಗೇನಾದರೂ ಆದಲ್ಲಿ ಅದು ನಾನು ನಂಬಿರುವ ಬದ್ಧತೆಗೇ ಒಂದು ದೊಡ್ಡ ಅವಮಾನವಾಗಲಿದೆ “.

ಮಂಟೋ‌ನ ಮರಣಾನಂತರ ಆತನ‌ ಇಚ್ಛೆಯಂತೆ ಆತನ‌ ಚರಮಗೀತೆಯನ್ನು ಸಮಾಧಿಯ ಮೇಲೆ‌ ಬರೆಸಲು ಕುಟುಂಬಿಕರಿಗೆ ಧೈರ್ಯ ಬರಲಿಲ್ಲ. ಆದಕಾರಣ ಇಂದಿಗೂ ಮಂಟೋನ‌ ಸಮಾಧಿಯಲ್ಲಿ ಆ ಬರಹಗಳಿಲ್ಲ. ಬದಲಿಗೆ ಈ ಬರಹಗಳಿವೆ.‌ ಅದರಲ್ಲಿ‌ ಗಾಲಿಬನ ಕವಿತೆಯ ಸಾಲುಗಳೂ ಇವೆ.

“ಇಲ್ಲಿ ಮಂಟೋ ಮಲಗಿದ್ದಾನೆ, ಆತ ಜಗದ ಬಳಪದ‌‌ ಮೇಲೆ ತಪ್ಪಾಗಿ ಬರೆಯಲಾದ ಅಕ್ಷರವಾಗಿರಲಿಲ್ಲ”

ಆದರೂ ಕಾಲವು ಮಂಟೋನನ್ನು ಒರೆಸಿ ಹಾಕಿತು ಆದರೆ ಮಂಟೋನ ಅಕ್ಷರಗಳನ್ನು ಒರೆಸಿ ಹಾಕಲು‌ ಕಾಲಕ್ಕೆ ಸಾಧ್ಯವಾಗಲಿಲ್ಲ. ಇಂದಿಗೂ ಮಂಟೋ ಜಗತ್ತಿನ ಮಹಾನ್‌ಕಥೆಗಾರನಾಗಿಯೇ ಮುಂದುವರಿಯುತ್ತಿದ್ದಾನೆ.‌ ಪಾಕಿಸ್ತಾನ ಹೈಕೋರ್ಟ್ ನಿಷೇದ ಪಡಿಸಿದ್ದ ಥಂಡಾ ಗೋಶ್ತ್‌ ಕಥೆ ಈಗ ಅಲ್ಲಿ‌ ಮತ್ತೆ ಮತ್ತೆ ಪ್ರಕಟಗೊಳ್ಳುತ್ತಲೇ ಇದೆ.‌ ಸರಕಾರ ಮಂಟೋನ‌ ಅಂಚೆ ಚೀಟಿ ಬಿಡುಗಡೆಗೊಳಿಸಿದೆ‌ ಹಾಗೆಯೇ ಅತ್ತ್ಯುನ್ನತ ನಾಗರೀಕ ಪ್ರಶಸ್ತಿಯನ್ನೂ ಮಂಟೋನಿಗೆ ಮರಣೋತ್ತರವಾಗಿ ನೀಡಿದೆ.‌ ಮಂಟೋನ ಅಕ್ಷರಗಳು ಗ್ರಸ್ತ ಸಮಾಜಕ್ಕೆ ಮತ್ತು ಸರಕಾರಗಳಿಗೆ ಕಹಿ ಔಷದಿಗಳಾಗಿ‌ ಮತ್ತೆ‌ ಮತ್ತೆ ಬಳಕೆಯಾಗುತ್ತಲೇ ಇವೆ.

ಗಾಲಿಬನ ಕವಿತೆಯ ಮೂಲಕವೇ ಹೇಳುವುದಾದರೆ ಮಂಟೋ ಸಾಹಿಬ್ ತುಜೆ ಹಮ್ ವಲೀ ಸಮಜ್ತೇ ಅಗರ್ ತುಮ್ ಬಾದಾಕ್ವಾರ್ ನ‌ ಹೋತೆ – ಮಂಟೋ ಸಾಬ್ ನೀನು ಸಂತನಾಗುತ್ತಿದ್ದೆ, ಈ ಅಮಲೊಂದಿಲ್ಲದಿರುತ್ತಿದ್ದರೆ…

-ಪುನೀತ್ ಅಪ್ಪು

ಲೇಖಕರು ಅನುವಾದಕರು ಮತ್ತು ವಕೀಲರು

Leave a Reply

Your email address will not be published. Required fields are marked *