ಈ ದೇಶದ ಮೇಲ್ವರ್ಗದ ಧಾರ್ಮಿಕತೆ ಸೃಷ್ಟಿಸುವ ಮುಗ್ಧತೆ, ಉದಾತ್ತತೆ ಇದೆಲ್ಲದರ ಒಟ್ಟು ಮೊತ್ತವು ಮನುಷ್ಯರನ್ನು ಸಂಕುಚಿತವಾಗಿರುವ ಜಾತಿ ವ್ಯವಸ್ಥೆಯಿಂದ ಮುಕ್ತಿಗೊಳಿಸಲಾರದು. ಅದರಲ್ಲೂ ಮೇಲ್ಜಾತಿಗಳ ಈ ಧಾರ್ಮಿಕತೆ ಎಂಬುದೇ ತೀರ ಸಂಕುಚಿತ ಕೊಂಡ ಹುಲುಗರ ಸಂತೆ ಇದ್ದ ಹಾಗೆ. ವಿಪರ್ಯಾಸವೆಂದರೆ,
ಚರಿತ್ರೆಯಲ್ಲಿ ಧಾರ್ಮಿಕವಾಗಿ ಈ ಮಾನವೀಯವಾದ ಈ ತರದ ನಿರೀಕ್ಷೆ ಹಾಗೂ ಅಪೇಕ್ಷೆಗಳನ್ನು ಇಟ್ಟುಕೊಂಡೆ ಬಾಬಾ ಸಾಹೇಬರು ಕಾದು ನೋಡಿ ನಿರಾಶೆಗೊಂಡು ಆನಂತರ ಹಿಂದೂ ಧರ್ಮವನ್ನು ತ್ಯಜಿಸಿದರು ಎಂಬುದು. ಒಂದು ಅಸ್ಕಲಿತವಾದ ಮಾನವೀಯ ಪ್ರವಾಹವೂ ಹಿಂದುಗಳು ಎಷ್ಟೇ ಧಾರ್ಮಿಕರಂತೆ ತೋರಿದರೂ ಖಂಡಿತ ಇವರೊಳಗೆ ಸೃಷ್ಟಿಯಾಗದು. ಇದನ್ನು ಬಾಬಾ ಸಾಹೇಬರು ಸ್ವತಹ ಮನಗಂಡೇ ಈ ಹಿಂದೂ ಧರ್ಮವನ್ನು ತ್ಯಜಿಸಿದರು. ಈ ಚಾರಿತ್ರಿಕ ಎಚ್ಚರ ಮತ್ತು ಅರಿವು ಈ ಮಾದರ ಚನ್ನಯ್ಯ ಸ್ವಾಮೀಜಿಗೆ ಏಕೆ ಇಲ್ಲ.
ಈ ಮೇಲು ಜಾತಿಗಳ ಧಾರ್ಮಿರಲ್ಲಿ ಕೇವಲ ಧಾರ್ಮಿಕ ಸಮಯಚಾರದ ಅಭಿನಯಕ್ಕೆ ಮಾತ್ರವಾಗಿ ಆಚಾರವು ಏರ್ಪಡುತ್ತದೆ. ಇವರ ಧಾರ್ಮಿಕ ವರ್ತನೆ ವಾಸ್ತವವಾದ ಸಾಮಾಜಿಕ ನಡವಳಿಕೆಯಾಗಿ ಖಂಡಿತ ಬದಲಾಗದು. ಕುಲಾಚಾರವೇ ಬೇರೆ ದೈವ್ಯಾಚಾರವೇ ಬೇರೆ ಎಂದು ಇಬ್ಬಂದಿತನ ಅನುಸರಿಸುವ ಈ ಮೇಲು ಜಾತಿಗಳ ಧಾರ್ಮಿಕ ವರ್ತನೆಗಳು ಬೇಷರತ್ತಾಗಿ ಮಾನವತೆಯನ್ನ ಪ್ರಕಟಿಸುವುದಿಲ್ಲ. ಹಾಗಾಗಿ ಇದರ ಅರಿವು ಮತ್ತು ಅದರ ಆಳ ಅಗಲಗಳನ್ನು ಬಲ್ಲ ಈ ಸ್ವಾಮೀಜಿ ದಲಿತರ ವಿರುದ್ಧ ಕಟುವಾಗಿ ನಡೆದುಕೊಳ್ಳುವ ಈ ಸಮಾಜವನ್ನು ಎಷ್ಟು ಈಸಿಯಾಗಿ ನಂಬುತ್ತಾರಲ್ಲ.
ಬೇಕಾದರೆ ಇವರು ಮೇಲು ಜಾತಿಗಳ ಮನೆ ಮನೆಗೆ ಹೋಗಿ ಜಾತಿ ವಿನಾಶದ ಕಾರ್ಯಕ್ರಮ ಹಮ್ಮಿಕೊಳ್ಳಲಿ. ಈ ಕುರಿತು ಧಾರ್ಮಿಕ ಸಂವಾದವನ್ನು ರೂಪಿಸಲಿ ಬೇಕಾದರೆ. ಆಗ ಇವರ ಅಖಂಡ ಸ್ವಾಮೀಜಿತನ ಪ್ರಕಟವಾಗುತ್ತದೆ. ಇದನ್ನು ಮಾಡದೆ ಈ ಮೇಲು ಜಾತಿಗಳ ಲಿಪ್ಸ್ ಸಿಂಪಥಿಯ ಆಚರಣೆಗಳಿಗೆ ಮಾರುಹೋಗುವುದು ಇವರ ದೌರ್ಬಲ್ಯವನ್ನು ತೋರುತ್ತದೆ. ಇವರ ಬುದ್ಧಿ, ಜ್ಞಾನ ಮತ್ತು ಪ್ರಯೋಗದ ಆತುರಗಳು ಖಂಡಿತ ಈ ಸಮಾಜಕ್ಕೆ ರಚನಾತ್ಮಕ ಬದಲಾವಣೆ ತರಲಾರವು.
ಈ ಉದಾತ್ತತೆಯ ಸೋಗಿನ ಮೇಲ್ಜಾತಿಗಳ ಧಾರ್ಮಿಕತೆಯು ವೃತಕೋಸ್ಕರ ದಲಿತರಿಗೆ ಜನಿವಾರ ಹಾಕುವ, ಹಬ್ಬ ಹರಿದಿನಗಳ ಆಚರಣೆಗೋಸ್ಕರ್ ಒಂದು ದಿನ ದಲಿತರನ್ನು ಮುಟ್ಟಿಸಿ ಕೊಳ್ಳುವಂತೆ ಮಾಡುತ್ತದೆಯೇ ಹೊರತು, ಇದು ದಲಿತ ದಲಿತೇತರ ಎಂಬ ಸಾಮಾಜಿಕ ತಾರತಮ್ಯದ ಗಡಿಗಳನ್ನು ನಿರ್ನಾಮ ಮಾಡುವುದಿಲ್ಲ. ಆದ್ದರಿಂದಲೇ ತೀರಾ ಸುಸಂಸ್ಕೃತೀಯ ಧಾರ್ಮಿಕರಂತೆ ತೋರಿದರೂ ಇವರ ಧಾರ್ಮಿಕತೆಯು ಜಾತಿ ವಾಸನೆಯ ನಯವಂಚನೆಯಿಂದ ಕೂಡಿರುತ್ತದೆ ಎಂಬುದು ಅಲ್ಲಗೆಳೆಯಲಾಗದ ಸತ್ಯವಾಗಿದೆ.
ಆದ್ದರಿಂದ, ಈ ಮೇಲುಜಾತಿಗಳ ಈ ನಂಬಿಕೆ ಆಚರಣೆಗಳು ಕೇವಲ ಸಾಂದರ್ಭಿಕವಾಗಿರುತ್ತವೆಯೇ ಹೊರತು, ತೀರಾ ಬದಲಾಗಿ ಮಾನವೀಯವಾಗಿ ಕಣ್ಣು ತೆರೆಯುವ ಹಾಗೆ ಈ ಮೇಲ್ಜಾತಿಗಳ ಧಾರ್ಮಿಕತೆ ರಚನಾತ್ಮಕ ಪರಿಣಾಮ ಬೀರದು.
ಹಾಗೆ ನೋಡಿದರೆ ಹಿಂದೂ ಧರ್ಮದ ಒಳಗಿನ ಜಾತೀಯತೆ ಅನಾಚಾರ ಇವುಗಳನ್ನು ಸುಧಾರಿಸಲು ಹೊರಟ ಗಾಂಧಿ ಕೊನೆಗೆ ಕೊಲೆಯಾದರು. ಮತ್ತೆ ಸನಾತನತೆಯ ನೆಪದಲ್ಲಿ ಈಗ ನಡೆಯುತ್ತಿರುವ ಈ ಧಾರ್ಮಿಕರ ಉಗ್ರ ಹರಚಾಟಗಳ ಸನ್ನಿವೇಶಗಳು ಈ ಮೇಲ್ಜಾತಿಗಳ ಧಾರ್ಮಿಕತೆಯ ಸ್ವರೂಪ ಹೇಗಿದೆ ಎಂಬುದನ್ನು ನಮಗೆ ಸಾಕ್ಷಿಕರಿಸುತ್ತಿವೆ. ಹಾಗಾಗಿ ಈ ಮೇಲು ನೋಟದ ಧಾರ್ಮಿಕ ನಡವಳಿಕೆಗಳು ಸಾಮಾಜಿಕವಾಗಿ ದಲಿತರ ಒಡನಾಟವನ್ನು ಸಹಜವಾಗಿ ಅಪೇಕ್ಷಿಸಲಾರವು. ಯಾಕೆ ಈ ಬಗೆಯ ನಿರಾಶೆ ಎಂದು ಕೆಲವರು ಪ್ರವಚನ ಮಾಡಬಹುದು. ಆದರೆ ಇಂಥವರು ಇವತ್ತು ದಲಿತರ ಮೇಲೆ ನಡೆಯುತ್ತಿರುವ ಹಲ ಬಗೆಯ ದೌರ್ಜನ್ಯ, ದಮನದ ಸನ್ನಿವೇಶಗಳನ್ನು ತಮ್ಮ ಕಣ್ಣೆದುರಿಗೆ ತಂದುಕೊಂಡು ಮಾತಾಡುವ ಧೈರ್ಯ ತೋರುವರೆ. ಇವೆಲ್ಲವೂ ಎಷ್ಟು ಹಿಪೋಕ್ರಟಿಕ್ ಆಗಿವೆ ಎಂಬುದರ ಅವಲೋಕನ ನಡೆಯಬೇಕಿದೆ. ಇದು ಈ ದಲಿತ ಸ್ವಾಮೀಜಿಗೆ ಗೊತ್ತಾಗುವುದಿಲ್ಲವೇ. ಮತ್ತೆ ಈ ಸ್ವಾಮೀಜಿಗಳನ್ನ ಹಿಂದೂ ಸ್ವಾಮೀಜಿಗಳ ರೀತಿ ಸಾರ್ವಜನಿಕವಾಗಿ ಖಂಡಿತವಾಗಿಯೂ ಈ ಸಮಾಜ ನೆನೆದು ಗೌರವಿಸದು ಮತ್ತೆ ಹಾಗೆ ನೋಡೋದು ಕೂಡ. ಆದರೂ ಮುಂದೆ ಈ ಸ್ವಾಮೀಜಿ ಮೇಲ್ ಜಾತಿಗಳಿಗೆ ಹಾಸ್ಯಾಸ್ಪದ ವ್ಯಕ್ತಿಯಾದರೂ ಆಶ್ಚರ್ಯವವೇನಲ್ಲ. ಈಗಾಗಲೇ ದಲಿತ ರಾಜಕಾರಣಿಗಳು ತಮ್ಮ ತಮ್ಮ ಪಕ್ಷದ ಗುಲಾಮಗಿರಿ ಒಪ್ಪಿಕೊಂಡು ಬಫೂನ್ಗಳಾಗಿರುವಂತೆ, ಮೇಲು ಜಾತಿ ಜನಗಳ ಧಾರ್ಮಿಕತೆಯನ್ನು ಒಪ್ಪಿ ಇವರು ಧಾರ್ಮಿಕವಾಗಿ ದುರ್ಬಲ ವ್ಯಕ್ತಿಯಾಗುವುದು ಖಂಡಿತ, ಹಾಗೂ ಇದು ವಿಪರ್ಯಾಸಕರ ಬೆಳವಣಿಗೆ.
ಹಾಗೆ ನೋಡಿದರೆ ಈ ದಲಿತ ಅಕ್ಷರಸ್ಥ ವರ್ಗ ಹೀಗೆ ಮೇಲು ಜಾತಿಗಳ ಬಫುನ್ಗಳಾಗುವುದರಲ್ಲಿಯೇ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ ಎಂಬ ಪೇಲವ ಸ್ಥಿತಿಗೆ ಒಳಗಾಗಿದೆ ಎಂಬುದೇ ಹೇಯಕರ ಸಂಗತಿ. ಈ ಸಾಲಿನಲ್ಲಿ ದಲಿತ ಸಾಹಿತಿಗಳು, ಸ್ವಾಮೀಜಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಸೇರಿ ಹೋಗಿದ್ದಾರೆ ಎಂಬುದೇ ಅರಗಿಸಿಕೊಳ್ಳಲಾಗದ ಸತ್ಯ.
[…] […]