ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಚರ್ಚೆಯಲ್ಲಿರುವ ವಿಷಯ ಎಡಗೈ – ಬಲಗೈ! ಬರೀ ಎಡಗೈ (ಮಾದಿಗ) ಮತ್ತು ಬಲಗೈ (ಹೊಲೆಯ) ಬಗ್ಗೆ ಈ ಕೈ ಕಮಲಗಳಿಗೆ ಇಷ್ಟು ಕಾಳಜಿ ಹುಟ್ಟಿರುವುದೇ ಆಶ್ಚರ್ಯ. ಏಕೆಂದರೆ ಮೀಸಲು ಕ್ಷೇತ್ರಗಳಲ್ಲಿ sc/st ಬಿಟ್ಟು ಬೇರೆ ಯಾರೂ ಸ್ಪರ್ಧಿಸುವ ಹಾಗಿಲ್ಲ. ಹಾಗಾಗಿ ಅಂತಹ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂದು ಚರ್ಚೆಗಳು ನಡೆದಾಗ ಅಲ್ಲಿ ಎಡಗೈ – ಬಲಗೈ, ದುಡ್ಡು, ಪ್ರತಿಷ್ಟೆ, ಭವಿಷ್ಯ ಹೀಗೆ ಎಲ್ಲವನ್ನೂ ಪರಿಗಣಿಸಿ ಟಿಕೆಟ್ ನೀಡುತ್ತಾರೆ. ಇದೇ ವಾಸ್ತವ. ಆದರೆ ವಿಪರ್ಯಾಸವೆಂದರೆ ಇಲ್ಲಿಯವರೆಗೂ ಇದೇ ಎಡಗೈ – ಬಲಗೈ ಎಂಬ ಹೊಲೆಮಾದಿಗರನ್ನು ಶೋಷಣೆ ಮಾಡಿದ ಸಮುದಾಯಗಳು ಇಂದು ಎಂಪಿ ಟಿಕೆಟ್ ವಿಷಯದಲ್ಲಿ ಎಡಗೈ ಬಲಗೈ ಎಂದು ಅದೇನೋ ಸಾಮಾಜಿಕ ನ್ಯಾಯದ ಬಗ್ಗೆ ವಕಾಲತ್ತು ವಹಿಸುವಂತೆ ಮಾತನಾಡುತ್ತಿದ್ದಾರೆ. ಆದರೆ ಇದೇ ಸಮುದಾಯದ MLAಗಳು ದಲಿತರ ಮೇಲೆ ದೌರ್ಜನ್ಯ ಮಾಡುವಾಗ ಎಡಗೈ ಬಲಗೈ ನೋಡಲಿಲ್ಲ, ಅತ್ಯಾಚಾರಗಳು ನಡೆದಾಗ ಎಡಗೈ ಬಲಗೈ ನೋಡಲಿಲ್ಲ, ಅವರ ಜಮೀನುಗಳನ್ನು ಕಬಳಿಸಿದಾಗ ಎಡಗೈ ಬಲಗೈ ನೋಡಲಿಲ್ಲ, ಹತ್ಯೆಗಳ ಮಾರಣಹೋಮಗಳು ಮಾಡಿದಾಗ ಎಡಗೈ ಬಲಗೈ ನೋಡಲಿಲ್ಲ. In fact ಇಂತಹ ಘಟನೆಗಳಾದಾಗ ಶೋಷಣೆ ಮಾಡಿದ feudal ಜಾತಿಗಳೆಲ್ಲಾ ಪಕ್ಷಾತೀತವಾಗಿ ಕೊಲೆಗಡುಕರಿಗೇ ಬೆಂಬಲವಾಗಿದ್ದರು ಎಂಬುದು ಅಪ್ಪಟ ಸತ್ಯ. ಆದರೆ ಇಂದು ಇಂತಹ feudal ಶಾಸಕರೇ ಎಡಗೈ ಬೇಡ ಬಲಗೈ ಸಮುದಾಯಕ್ಕೆ ಎಂಪಿ ಟಿಕೆಟ್ ಕೊಡಿ ಎಂದು ಹೇಳುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು?
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಒಂದು ಇತಿಹಾಸ ಗಮನಿಸಿ
ಕೋಲಾರ ಮೀಸಲು ಕ್ಷೇತ್ರ ಆದಾಗಿನಿಂದಲೂ ಎಡಗೈ ಸಮುದಾಯದ ಕೆ.ಹೆಚ್. ಮುನಿಯಪ್ಪನವರೇ 35 ವರ್ಷಗಳ ಕಾಲ ಸಂಸದರಾಗಿ ಗೆದ್ದಿದ್ದಾರೆ. ಇವರು ಎಡಗೈ ಸಮುದಾಯಕ್ಕೆ ಸೇರಿದ್ದಾರೆಯೇ ಹೊರೆತೂ ಇವರು ಗೆದ್ದ ನಂತರ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಏನಾದರೂ ಮಾಡಿದ್ದಾರೆ ಎಂದು ನೋಡಿದರೆ ಶೂನ್ಯ. ಆದರೆ ಇವರು ಮೇಲೆತ್ತಿರುವುದು, ಬೆಂಬಲಿಸಿರುವುದು, ಸಹಾಯ ಮಾಡಿರುವುದೆಲ್ಲಾ ಒಕ್ಕಲಿಗ ಸಮುದಾಯಕ್ಕೇ ಹೊರೆತೂ ಮತ್ಯಾರಿಗೂ ಅಲ್ಲ. ಏಕೆಂದರೆ ಪ್ರೀತಿಯಿಂದ ಇದೇ ಪ್ರಬಲ ಜಾತಿಗಳನ್ನು “ಬಿತ್ತನೆ ಬೀಜಗಳು” ಎಂದು ಹೊಸದಾಗಿ ನಾಮಕರಣ ಮಾಡಿದ ಕೀರ್ತಿ ಕೆ.ಹೆಚ್. ಮುನಿಯಪ್ಪನವರಿಗೇ ಸಲ್ಲಬೇಕು. ಜೊತೆಗೆ ಇವರದೇ ಸ್ವಂತ ಕುಟುಂಬಕ್ಕೆ ಬಿಟ್ಟರೆ ಉಳಿದ ಯಾವ ಎಡಗೈ ಮತ್ತು ಬಲಗೈ ಸಮುದಾಯದ ಸಾಮಾನ್ಯರಿಗೂ ಇವರ ಕೊಡುಗೆ ಏನೂ ಇಲ್ಲ.
ಹಾಗೆ ನೋಡಿದರೆ ಎಡಗೈ ಸಮುದಾಯ ಇದೇ ಕೆ.ಹೆಚ್. ಮುನಿಯಪ್ಪನವರನ್ನು ಕ್ಷಮಿಸಲೇಬಾರದು. ಆದರೂ 5 ವರ್ಷವೆಲ್ಲಾ ಬೈದು ಕೊನೆಗೆ ಇವರಿಗೇ ಓಟು ಹಾಕಿದವರು ಈ ಎಡಬಲಗಳು. ಕೊನೆಗೆ 2019ರ ಚುನಾವಣೆಯಲ್ಲಿ ಇದೇ ಕೆ.ಹೆಚ್. ಮುನಿಯಪ್ಪ ಯಾವ ಸಮುದಾಯಗಳನ್ನು ನೆಚ್ಚಿಕೊಂಡಿದ್ದರೋ ಅವರೇ ಬಿಜೆಪಿಗೆ ಓಟು ಹಾಕಿ ಬಲಗೈ ಸಮುದಾಯದ ಮುನಿಸ್ವಾಮಿಯನ್ನು ಗೆಲ್ಲಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಜೆಪಿಯಲ್ಲಿ ಕನಿಷ್ಠ ನಾಲ್ಕು MLAಗಳೂ ಇಲ್ಲದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಎಂಪಿ ಸೀಟು ಗೆಲ್ಲುತ್ತದೆ ಎಂದರೆ ಇಲ್ಲಿ ಪಕ್ಷಗಳು ನಗಣ್ಯ, ನಾಯಕರು ನಗಣ್ಯ. ಏಕೆಂದರೆ ಇಲ್ಲಿ ಕೇವಲ ಎರಡೇ ಅಂಶಗಳು ಮುಖ್ಯ ಒಂದು ಕೆ.ಹೆಚ್. ಮುನಿಯಪ್ಪನವರ ಸ್ವಾರ್ಥ ರಾಜಕಾರಣ, ಎರಡು ಇಂದು ಎಡಗೈ ಬಲಗೈ ಬಗ್ಗೆ ಮಾತನಾಡುತ್ತಿರುವ feudal ರಾಜಕಾರಣಿಗಳ ಮರ್ಯಾದೆ. ಇವೆರಡೇ ಬಿಜೆಪಿಯ ಮುನಿಸ್ವಾಮಿ ಗೆಲ್ಲಲು ಕಾರಣ.
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಾಗ ಇದೇ ಬಿಜೆಪಿಯನ್ನು ಗೆಲ್ಲಿಸಿದ ಮಾಜಿ ಮತ್ತು ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ತಾತ್ಕಾಲಿಕವಾಗಿ ಜಾತ್ಯಾತೀತರಾದರು. ಸಂತೋಷದ ವಿಷಯವೆಂದರೆ ಕೋಮುವಾದಿ ಬಿಜೆಪಿಯನ್ನು ಸೋಲಿಸಿದರು. ಆದರೆ ತಮ್ಮ ಒಳಗಿನ ಜಾತಿವಾದಿಯನ್ನು ಸೋಲಿಸಲೇ ಇಲ್ಲ. ಏಕೆಂದರೆ ಇವರ ಆಂತರ್ಯದಲ್ಲಿ ಕೋಮುವಾದಿಗಳು ಬಹಿರಂಗವಾಗಿ ಜಾತ್ಯಾತೀತರಷ್ಟೇ.
ಮೀಸಲು ಕ್ಷೇತ್ರಗಳು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟರಿಗೆ ಗುಲಾಮರನ್ನು ಸರಬರಾಜು ಮಾಡುವ ಕೇಂದ್ರಗಳಲ್ಲ!
ಈ scst ಸೆಲ್‌ಗಳು, scst ಮೋರ್ಚಾಗಳು, ಕಣ್ಣಿಗೆ ಕಾಣಿಸದ ಕಮ್ಯುನಿಸ್ಟ್ ಮೋರ್ಚಾಗಳು ಇವೆಲ್ಲಾ ದಲಿತರನ್ನು ಉದ್ದಾರ ಮಾಡಲು ಮಾಡಿದ ಶಾಖೆಗಳು ಎಂದು ನೀವು ಭಾವಿಸಿದರೆ ನಿಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ. ಏಕೆಂದರೆ ಇವೆಲ್ಲಾ ಗುಲಾಮರನ್ನು ಸೃಷ್ಟಿ ಮಾಡುವ ಕೇಂದ್ರಗಳು. MLA, MP ಟಿಕೆಟ್ ನೀಡುವಾಗ ನೋಡುವ ಮೊದಲ ಮಾನದಂಡವೇ ಇವರಲ್ಲಿ ಬೆಸ್ಟ್ ಗುಲಾಮ ಯಾರೆಂದು! ಇಲ್ಲಿಯವರೆಗೂ ಮೀಸಲು ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸಿಗರು ಪ್ರಬಲ ಜಾತಿಗಳನ್ನು ಉದ್ದಾರ ಮಾಡಲು, ಮೀಸಲು ಕ್ಷೇತ್ರದಲ್ಲಿ ಗೆದ್ದ ಬಿಜೆಪಿಗರು ಹಿಂದೂ ಹೆಸರಿನಲ್ಲಿ ಇದೇ ಪ್ರಬಲ ಜಾತಿಗಳನ್ನು ಉದ್ದಾರ ಮಾಡಿದ್ದಾರೆಯೇ ಹೊರೆತೂ ದಲಿತರನ್ನಲ್ಲ. ಕಂಬಾಲಪಲ್ಲಿಯಲ್ಲಿ ಕೊಲೆಯಾದವರು ಬಲಗೈ ಸಮುದಾಯ. ಆದರೆ ನೋವಾಗಿದ್ದು ಎಡಬಲ ಎರಡೂ ಸಮುದಾಯಕ್ಕೆ. ಹೋರಾಟಗಳನ್ನು ಮಾಡಿದ್ದು ಎಡಬಲ ಎರಡೂ ಸಮುದಾಯ. ಶಿಕ್ಷೆಯಂತೂ ಯಾರಿಗೂ ಆಗಲಿಲ್ಲ! ಆದರೆ ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟವರನ್ನು ಬೆಂಬಲಿಸಿದವರು ಇದೇ ಪ್ರಬಲ ಜಾತಿಗೆ ಸೇರಿದ ಕಾಂಗ್ರೆಸ್, ಬಿಜೆಪಿ, ಕಮ್ಯನಿಸ್ಟರು! ಇದು ಎಂತಹಾ ದುರಂತವೆಂದರೆ ಇಂದು ಇವರೇ ಎಡಗೈ ಬಲಗೈ ಎಂದು ಸಾಮಾಜಿಕ ನ್ಯಾಯದ ಬಗ್ಗೆ ಒಲವಿರುವಂತೆ ಮಾತನಾಡುತ್ತಿದ್ದಾರೆ.
ಎಡಗೈ ಬಲಗೈ ಇಬ್ಬರಲ್ಲಿ ಈ ಜಾತ್ಯಾತೀತ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಬೇಕು?
ಎಡಗೈ ಸಮುದಾಯದ ಕೆ.ಹೆಚ್. ಮುನಿಯಪ್ಪ ದಲಿತರಿಗೆ ಮಾಡಿದ್ದೇನೂ ಇಲ್ಲ. actually ಇಂದು ಇದೇ ಮುನಿಯಪ್ಪನವರನ್ನು ವಿರೋಧಿಸುತ್ತಾ ಅವರ ಅಳಿಯನಿಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿರುವವರಿಗೆ ಕೆ.ಹೆಚ್. ಮುನಿಯಪ್ಪನಂತಹಾ ಬಲಗೈ ಸಮುದಾಯದವರು ಬೇಕೇ ಹೊರೆತೂ ಎಡಬಲ, ಜಾತಿ, ಧರ್ಮ ನೋಡದ ವ್ಯಕ್ತಿಯಂತೂ ಬೇಕಿಲ್ಲ. ಕಂಡಕಂಡವರ ಕಾಲಿಗೆ ಬೀಳುವ ಬಿಜೆಪಿಯ ಮುನಿಸ್ವಾಮಿಯಂತಹಾ ಬಲಗೈ ಸಂಸದರೇ ಕಾಂಗ್ರೆಸಿನಲ್ಲಿಯೂ ಬೇಕಷ್ಟೆ.
ಬಲಗೈ ತೋರಿಸಿ ಎಡಗೈಯಲ್ಲಿ ಹೊಡೆಯುವವರ ಬಗ್ಗೆ ಎಚ್ಚರವಾಗಿರಿ
ಎಡಗೈ ಸಮುದಾಯಕ್ಕೆ ಬಿಟ್ಟು ಬಲಗೈ ಸಮುದಾಯಕ್ಕೆ ಎಂಪಿ ಟಿಕೇಟ್ ಕೊಟ್ಟರೆ ನಮ್ಮ ಬೆಂಬಲ ಇದೆ ಎನ್ನುತ್ತಿದ್ದಾರೆ. ನನಗೂ ಕೂಡಾ ಈ ಹೇಳಿಕೆ ಒಪ್ಪಿಗೆ ಇದೆ. ಏಕೆಂದರೆ ಯಾವಾಗಲೂ ಎಡಗೈ ಮಾದಿಗ ಸಮುದಾಯಕ್ಕೇ ಕಾಂಗ್ರೆಸ್ ಎಂಪಿ ಟಿಕೆಟ್ ಕೊಡುವುದು ಸರಿಯಲ್ಲ . ಹಾಗೇ ಈ ಪುಡಿಗೈಗಳು ಈ ಪ್ರಶ್ನೆಗೆ ಉತ್ತರಿಸಬೇಕು.
ಜನಾ ನಾಗಪ್ಪ ಅವರ ಈ ಲೇಖನವನ್ನೂ ಓದಿ: ಮೂಕನಾಯಕ ಪತ್ರಿಕೆ ಎತ್ತಿದ ದನಿ; ಮೂರ್ಖ, ಮನುವಾದಿ ನಾಯಕರಿಗೆ ಬಿದ್ದ ಚಾಟಿ ಏಟು!
ಯಾವಾಗಲೂ ಒಕ್ಕಲಿಗ ಸಮುದಾಯಕ್ಕೇ MLA ಟಿಕೆಟ್ ಕೊಡುವುದು ಕೂಡಾ ಕಾಂಗ್ರೆಸ್ ಮಾಡುವ ತಪ್ಪಲ್ಲವೇ?
ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ MLA ಆಗಿರುವ ಸಮುದಾಯ ಒಕ್ಕಲಿಗ ಸಮುದಾಯ. ಇದರ ಬಗ್ಗೆ ಯಾರಿಗೂ ಅಭ್ಯಂತರವಿಲ್ಲ. ಜೊತೆಗೆ sc ಎಂದು ಸುಳ್ಳು ದಾಖಲೆ ಸೃಷ್ಟಿಸಿದ ಕೊತ್ತೂರು ಮಂಜುನಾಥ್ ಕೂಡಾ ಎಡಗೈ ಬಲಗೈ ಬಗ್ಗೆ ಮಾತನಾಡುತ್ತಾರೆ . ಅದ್ಯಾವ ನೈತಿಕತೆ ಇವರಿಗೆ ಇದೆಯೋ ಇಲ್ಲವೋ ಅವರೇ ಹೇಳಲಿ. ಇಷ್ಟಕ್ಕೂ ಒಂದೇ ಜಾತಿಗೇ ಸುಮಾರು ವರ್ಷಗಳಿಂದ MLA ಟಿಕೆಟ್ ಕೊಡುತ್ತಿರುವ ಕಾಂಗ್ರೆಸ್ ಈ ಬಗ್ಗೆ ಏನು ಹೇಳುತ್ತದೆ? ಹೋಗಲಿ ಬಲಗೈನವರಿಗೇ ಸೀಟು ಕೊಡಿ ಎಂದು ರಾಜೀನಾಮೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿರುವವರು ಸುಲಭವಾಗಿ ಎಡಗೈ ಸಮುದಾಯದವರು ಕಾಂಗ್ರೆಸಿಗೆ ಓಟು ಹಾಕಬೇಡಿ ಎಂದು ಹೇಳಲು ಧೈರ್ಯವಿಲ್ಲವೇ?
ಎಡಗೈ ಬಲಗೈ ಒಂದಾಗುವುದೇ ಸಹಿಸದ ಜಾತಿವಾದಿ ಪ್ರಜಾಪ್ರತಿನಿಧಿಗಳು ಇವರೇ ನೋಡಿ…
ಕಾಂಗ್ರೆಸ್ ಯಾವ ಗುಲಾಮನಿಗಾದರೂ ಟಿಕೆಟ್ ಕೊಡಲಿ, ಯಾವ ಸಮರ್ಥನಿಗಾದರೂ ಟಿಕೆಟ್ ಕೊಡಲಿ . ಅದು ಪಕ್ಷದ ಆಂತರಿಕ ವಿಷಯ. ಆದರೆ ಎಡಬಲ ಎಂದು ದಲಿತರನ್ನೇ ಬೇರ್ಪಡಿಸುವ ಹೇಳಿಕೆಗಳನ್ನು ನೀಡುವ ನಿಮ್ಮ ಹುನ್ನಾರವಾದರೂ ಏನು? ನಿಮಗೆ ಎಡಬಲಗಳ ಕಾಳಜಿ ಇದ್ದರೆ ಈ ಸಮುದಾಯಗಳ ಬಗ್ಗೆ ಕಾಳಜಿವಹಿಸಿ ಹೋರಾಟಗಳನ್ನು ಮಾಡಿದ ನಾಯಕರಿಗೆ ನಮ್ಮ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬರವಿಲ್ಲ. ಅಂತಹ ಧೀಮಂತ ನಾಯಕರಿಗೆ ಟಿಕೆಟ್ ಕೊಡುವ ಮನಸ್ಸು ಎಡಬಲಗಳ ಬಗ್ಗೆ ಮಾತನಾಡುವ ಪುಡಿಗಳಿಗೆ ಇದೆಯೇ? ಇದ್ದರೆ ಇಲ್ಲಿಯವರೆಗೂ ಮಾದಿಗ ಸಮುದಾಯಕ್ಕೇ ಕೊಟ್ಟಿದ್ದೇವೆ ಈಗ ಬಲಗೈ ಸಮುದಾಯದ ಪ್ರಾಮಾಣಿಕ ಹೋರಾಟಗಾರನಿಗೆ ಕೊಡುತ್ತಿದ್ದೇವೆ ಎಂದು ಒಬ್ಬ ಸಮರ್ಥರಿಗೆ ಕೊಡಿ. ಇಲ್ಲ ನಿಮ್ಮ ತಾಳಕ್ಕೆ ಕುಣಿಯುವಂತಹಾ ಎಡಗೈ ಬಲಗೈ ಸಮುದಾಯದ ಅಭ್ಯರ್ಥಿಯೇ ಬೇಕು ಎನ್ನುವುದಾದರೆ ನೇರವಾಗಿ ಹೇಳಿಬಿಡಿ. ಅಧಿಕಾರ ಬೇಕಾದಾಗ ಜಾತ್ಯಾತೀತರಾಗಿ ಅದೇ ಅಧಿಕಾರ ದಲಿತರಿಗೆ ಸಿಗುವಾಗ ಎಡಬಲ ಎಂದು ಎತ್ತಿಕಟ್ಟುವ ಕೆಲಸ ಏಕೆ? ನೀವು ಮಾಡಿದ್ದು ಪುನಃ ನಿಮಗೇ ಹಿಂದಿರುಗುವುದು ನೆನಪಿಡಿ.
ಜೈ ಭೀಮ್