ಬೆಂಗಳೂರು (22-02-2023): ರಾಜ್ಯ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ಯಾವುದೇ ನಿರೀಕ್ಷೆಗಳು ಮತ್ತು ಬೇಡಿಕೆಗಳು ಘೋಷಣೆಯಾಗಿಲ್ಲ, ಈ ಕಾರಣದಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೌಕರರು ಮಂಗಳವಾರ ಸಭೆ ಸೇರಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಿಂಗಳ ಅಂತ್ಯದವರೆಗೆ ಗಡುವು ನೀಡಿದ್ದಾರೆ.
ರಾಜ್ಯದ 2023-24ರ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಸೆ ಮೂಡಿರುತ್ತದೆ.
![](https://bigkannada.com/wp-content/uploads/2023/02/IMG_20230222_120202-1024x663.jpg)
ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ವೃಂದ ಸಂಘಗಳ ಅಧ್ಯಕ್ಷರು – ಪದಾಧಿಕಾರಿಗಳ ಸಭೆ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರ ಸಭೆಯನ್ನು ಮಂಗಳವಾರ ಸಂಜೆ 5.00 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಕರೆಯಲಾಗಿತ್ತು.
![](https://bigkannada.com/wp-content/uploads/2023/02/IMG_20230222_120342-1024x671.jpg)
ಕಬ್ಬನ್ ಉದ್ಯಾನವನ ಹತ್ತಿರ ಇರುವ ಸಂಘದ ಕಛೇರಿಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಎಲ್ಲಾ ಜಿಲ್ಲೆಗಳಿಂದಲೂ ಸಂಘದ ಪದಾಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ, ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿ-ನೌಕರರು ದಿನಾಂಕ: 01-03-2023ರ ಬುಧವಾರದಿಂದ ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ಸಮಸ್ತ ನೌಕರ ಸಮುದಾಯಕ್ಕೆ ಸಂಘವು ಕರೆ ನೀಡಿದೆ.