2021ರ T-20 ಕ್ರಿಕೆಟ್ ವಿಶ್ವಕಪ್. ಭಾರತ ಮತ್ತು ಪಾಕಿಸ್ತಾನ ಮೈದಾನದಲ್ಲಿ ಸೆಣಸುತ್ತಿವೆ. ಡ್ರಿಂಕ್ಸ್ ಬ್ರೇಕ್. ಪಾಕಿಸ್ತಾನಿ ಆಟಗಾರ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ. ಪಾಕಿಸ್ತಾನಿ ಕ್ರಿಕೆಟ್ ದಿಗ್ಗಜ ವಾಕರ್ ಯೂನಿಸ್ “ರಿಜ್ವಾನ್ ಭಾರತೀಯ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ವಿಶೇಷವಾಗಿತ್ತು.” ಎಂದು ಆಘಾತಕಾರಿ ಹೇಳಿಕೆ ನೀಡಿದ. 1990ರ ದಶಕದ ಶಾರ್ಜಹಾ ಮೈದಾನದಲ್ಲೂ ಆಟಗಾರರು ನಮಾಜ್ ಮಾಡುವುದು ಸಾಮಾನ್ಯವಾಗಿತ್ತು. “ನೀನು ಮುಸಲ್ಮಾನಲ್ಲದಿದ್ದರೆ, ಮುಸಲ್ಮಾನನಾಗಿ ಮತಾಂತರನಾಗು. ಬದುಕಲ್ಲಿ ಏನೇ ಮಾಡಿದ್ದರೂ, ನೇರ ಸ್ವರ್ಗಕ್ಕೆ ಹೋಗುವೆ.” ಈ ಮಾತುಗಳನ್ನಾಡಿದವ ಷೆಹೆಝದ್. ಆ ದಿನ ದಂಬೋಲಾ ಕ್ರೀಡಾಂಗಣದಲ್ಲಿ ಶ್ರೀಲಂಕಾದ ತಿಲಕರತ್ನೇ ದಿಲ್ಶಾನಿಗೆ ನೀಡಿದ ವಿಚಿತ್ರ ಸಲಹೆ ರೆಕಾರ್ಡ್ ಆಗಿತ್ತು. ಕ್ರೀಡಾಂಗಣವನ್ನ ಧರ್ಮ ಪ್ರಚಾರಕ್ಕೆ, ಧಾರ್ಮಿಕ ಆಚರಣೆಗಳಿಗೆ ಬಳಸಿಕೊಳ್ಳುವುದರ ಬಗ್ಗೆ ತಕರಾರುಗಳಿವೆ. ಪ್ರತಿಕ್ರಿಯೆಯಲ್ಲಿ ಕ್ರೀಡಾಂಗಣದಲ್ಲಿ “ಜೈ ಶ್ರೀ ರಾಮ್” ನಾರೆಗಳು ಕೂಡ ಸಮರ್ಥನೀಯವಲ್ಲ. ಕ್ರೀಡಾ ಸ್ಪೂರ್ತಿ ಹೇಗಿರಬೇಕು, ಪ್ರೇಕ್ಷಕರ ವರ್ತನೆ ಹೇಗಿರಬೇಕು, ಆಟಗಾರರ ಪ್ರತಿಕ್ರಿಯೆ ಹೇಗಿದ್ದರೆ ಚನ್ನ ಎಂಬುದರ ಬಗ್ಗೆ ಕ್ರೀಡಾಸಕ್ತನಾದ ನಾನು ಶ್ರೇಷ್ಠ ಉದಾಹರಣೆಯನ್ನಂತೂ ಕೊಡಬಲ್ಲೆ.
ಜನವರಿ 28, 1999. ಭಾರತ-ಪಾಕಿಸ್ತಾನ ಟೆಸ್ಟ್ ಸರಣಿ ಆಡುತ್ತಿವೆ. ಮೊದಲ ಪಂದ್ಯ ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ. ಕಿಕ್ಕಿರಿದು ತುಂಬಿದ್ದ ಮೈದಾನ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 238 ರನ್ನುಗಳಿಗೆ ಆಲ್ ಔಟ್ ಆಗುತ್ತದೆ. ಅನಿಲ್ ಕುಂಬ್ಳೆ ಆರು ವಿಕೆಟ್ ಪಡೆದು ಪಾಕಿಸ್ತಾನ ಪತನಕ್ಕೆ ಕಾರಣವಾಗುತ್ತಾರೆ. ನಂತರ ಆಡಿದ ಭಾರತ 254ಕ್ಕೆ ಆಲ್ ಔಟ್ ಆಗುತ್ತಾರೆ. ಪಾಕಿಸ್ತಾನದಂತಹ ತಂಡದೆದುರು ಈ ಹದಿನಾರುಗಳ ರನ್ನುಗಳ ಅತ್ಯಲ್ಪ ಮುನ್ನಡೆ ಸಾಕಾದೀತೇ?
ಎರಡನೇ ಇನ್ನಿಂಗ್ಸಿನಲ್ಲಿ ಶಾಹಿದ್ ಅಫ್ರಿದಿಯ ಅಬ್ಬರಕ್ಕೆ ಇನ್ನೇನು ಭಾರತ ತತ್ತರಿಸಿ ಹೋಗುತ್ತದೆ ಎನ್ನುವ ಭೀತಿಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ನೀಡಿದ್ದು ವೇಗಿ, ವೆಂಕಟೇಶ್ ಪ್ರಸಾದ್., ವೆಂಕಟೇಶ್ ಪ್ರಸಾದ್ ಆರು ವಿಕೆಟ್ ಉರುಳಿಸಿ ಪಾಕಿಸ್ತಾನವನ್ನು 286ರನ್ನುಗಳಿಗೆ ಕಟ್ಟಿಹಾಕುತ್ತಾರೆ. ಕೊನೆಯ ಇನ್ನಿಂಗ್ಸಿನಲ್ಲಿ ಭಾರತಕ್ಕೆ ಗೆಲ್ಲಲು 270 ರನ್ ಗಳಿಸಬೇಕಾಗುತ್ತದೆ. ಮೂರನೇ ದಿನದ ಕೊನೆಯ ಅವಧಿ ಸಮೀಪಿಸುತ್ತಿದ್ದಂತೆ, ಭಾರತ ಆರು ರನ್ನಿಗೆ ಎರಡು ವಿಕೆಟ್ ಕಳೆದುಕೊಳ್ಳುತ್ತದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸಚಿನ್ ಮೈದಾನಕ್ಕಿಳಿಯುತ್ತಾರೆ. ಅವರ ಹೆಗಲ ಮೇಲೆ ಇಡೀ ಭಾರತದ ನಿರೀಕ್ಷೆಗಳು! ಮೊದಲ ಇನ್ನಿಂಗ್ಸ್ ನಲ್ಲಿ ಸೊನ್ನೆಗೆ ಔಟ್ ಆಗಿದ್ದ ಸಚಿನ್ ಅವರಿಗೆ “ರನ್ ಗಳಿಸದಿದ್ದರು ಪರ್ವಾಗಿಲ್ಲ, ಔಟ್ ಮಾತ್ರ ಆಗಬೇಡ ಸಚಿನ್” ಎಂದು ಇಡೀ ಭಾರತ ಪ್ರಾರ್ಥಿಸುತ್ತದೆ. ಸಚಿನ್ ಪಿಚ್ ಬಳಿ ಬಂದಾಗ ಸಾಥ್ ನೀಡಲು ಇದದ್ದು ವಕಾರ್ ಯೂನಿಸ್ ಬಿರುಸಿನ ದಾಳಿಗೆ ಹೆದರಿದ್ದ ಲಕ್ಷ್ಮಣ್! ಅಂದು ಲಕ್ಷ್ಮಣ್, ಸಚಿನ್ ಅವರಿಗೆ ಯಾವುದೇ ಆತ್ಮ ವಿಶ್ವಾಸ ತುಂಬುವ ಸ್ಥಿತಿಯಲ್ಲಂತೂ ಇರಲಿಲ್ಲ. ದಿನದಂತ್ಯಕ್ಕೆ ಭಾರತ 40 ರನ್ನುಗಳಿಗೆ 2 ವಿಕೆಟ್. ಸೋಲುವ ಭೀತಿ, ಆತಂಕವಿದ್ದರೂ, ಸಚಿನ್ ಔಟಾಗದೆ ಉಳಿದಿದ್ದಾನೆ ಎಂಬ ವಿಶ್ವಾಸದಲ್ಲಿ ಕ್ರೀಡಾಂಗಣದಿಂದ ಪ್ರೇಕ್ಷಕರು ಮನೆಗೆ ಮರಳಿದರು. ನಾಲ್ಕನೇ ದಿನ ಗೆಲ್ಲಲು ಭಾರತ 231 ಗಳಿಸಬೇಕಿತ್ತು.
ಬಹುಶಃ ಮೂರನೇ ದಿನದ ರಾತ್ರಿ, ಚೆನ್ನೈ ಪೊಲೀಸರಿಗೆ ಬೆಳಗಿಲ್ಲದ ರಾತ್ರಿಯಾಗಿತ್ತು. ಕ್ರೀಡಾಂಗಣಕ್ಕೆ ಸುಮಾರು 3200 ಪೊಲೀಸರ ಪಹರೆ. ಕ್ರೀಡಾಂಗಣವಂದು ದಾಳಿ ಎದುರಿಸಲು ಸನ್ನದ್ಧವಾದ ಕೋಟೆಯಾಗಿ ಬದಲಾಗಿತ್ತು. ಕೆಲವರ ಕೈಯಲ್ಲಿ ಲಾಠಿ, ಕೆಲವರ ಕೈಯಲ್ಲಿ ಬಂದೂಕು, ಇನ್ನೂ ಕೆಲವರು ಅಶ್ವಾರೋಹಿಗಳು. ಈ ಭಾರೀ ಬಂದೋಬಸ್ತ್ ಮಾಡುವ ಅಗತ್ಯವೇನಿತ್ತು?
ಪಾಕಿಸ್ತಾನ ಭಾರತಕ್ಕೆ ಬರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ (ಶಿವ ಸೇನೆಯ) ಬಾಳ ಠಾಕ್ರೆ ಅನುಯಾಯಿಗಳು ಮೊದಲ ಟೆಸ್ಟ್ ನೆಡೆಯಬೇಕಿದ್ದ ಫೆರೋಜ್ ಷಾ ಕೋಟ್ಲಾ ಮೈದಾನದ ಪಿಚ್ ಹಾಳುಗೆಡವಿದ್ದರೂ. ಆ ಕಾರಣದಿಂದ ಮೊದಲ ಟೆಸ್ಟ್ ಚೆನ್ನೈ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿತ್ತು. ಹನ್ನೆರಡು ವರುಷಗಳ ನಂತರ ಆಯೋಜಿಸಲಾಗಿದ್ದ ಸರಣಿ ನೆಡೆದೆ ತೀರಬೇಕೆಂಬ ಅಂದಿನ ಸರ್ಕಾರದ ಹಠ ಪೋಲೀಸರ ಮೇಲೆ ಇನ್ನಷ್ಟು ಒತ್ತಡ ಹಾಕಿತ್ತು. “ಭಾರತ ಪಾಕ್ ಸರಣಿಗಾಗಿ ಪ್ರೇಕ್ಷಕರು ಉತ್ಸಾಹದಿಂದ ಕಾದಿದ್ದಾರೆ. ಕೆಲ ಧರ್ಮಾಂಧರು ನಡೆಸಿದ ದಾಂಧಲೆಯಿಂದ ಈ ಸರಣಿ ನಿಲ್ಲದು. ಅವರು ಕ್ರೀಡೆಯನ್ನು ಒತ್ತೆಯಾಳಾನ್ನಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಕ್ರಿಕೆಟ್ ಅವರಿಗಿಂತ ದೊಡ್ಡದು” ಎಂಬ ಹೇಳಿಕೆಯನ್ನು ಅಂದಿನ ದೆಹಲಿ ಕ್ರಿಕೆಟ್ ಕಾರ್ಯದರ್ಶಿ ಸುನಿಲ್ ದೇವ್ ನೀಡಿದ್ದರು.
1990ರ ದಶಕದಲ್ಲಿ ಮತೀಯ ಗಲಭೆ, ಕಗ್ಗೊಲೆಗಳು ಹೆಚ್ಚಾಗಿದ್ದಕ್ಕೂ, ಭಾರತ, ಉದಾರೀಕರಣ, ಖಾಸಗಿಕಾರಣ, ಮತ್ತು ಜಾಗತೀಕರಣಕ್ಕೆ ತೆರೆದುಕೊಂಡದ್ದಕ್ಕೂ ನೇರ ಸಂಬಂಧಗಳಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜಿಸಲಾಗಿದ್ದ 1996 ಕ್ರಿಕೆಟ್ ವಿಶ್ವಕಪ್ ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ಈ ರಾಷ್ಟ್ರಗಳಿಗೆ ಲಗ್ಗೆ ಇಟ್ಟವು. 1996ರ ವಿಶ್ವಕಪ್ಪಿನಲ್ಲಿ ಕ್ರಿಕೆಟ್ ತಂಡಗಳು ಮಾತ್ರ ಸೆಣೆಸಲಿಲ್ಲ. ಉಪಖಂಡದಲ್ಲಿ ತಮ್ಮ ಛಾಪು ಮೂಡಿಸಲು ಹಲವು ಕಂಪನಿಗಳು ಕೂಡ ಕದನಕ್ಕಿಳಿದಿದ್ದವು. 1996 ವಿಶ್ವಕಪ್ ವೇಳೆಯ ಉದಾಹರಣೆಯನ್ನೇ ನಾವು ವಿಶ್ಲೇಷಿದರೆ ಈ ವಿಷಯ ಸ್ಪಷ್ಟವಾದೀತು.
ವಿಶ್ವಕಪ್ಪಿನ ಅಧಿಕೃತ ಪ್ರಯೋಜಕರಾಗಿ (official sponsor) ಕೋಕಾ ಕೋಲಾ ಆಯ್ಕೆಯಾಯಿತು. ಎದುರಾಳಿ ಪೆಪ್ಸಿ ಇದರಿಂದ ತೀವ್ರ ನಿರಾಶೆ ಒಳಗಾದರೂ ಎದೆಗುಂದಿರಲಿಲ್ಲ. There is nothing official about it, Ye hi hai right choice Baby ಎಂಬ ಅಭಿಯಾನ ಶುರುಮಾಡಿದ್ದರು. ಒಂದೆಡೆ ಕಾಂಬ್ಳಿ, ಸಚಿನರನ್ನು ಜಾಹಿರಾತಿಗೆ ಎಳೆದು ತಂದರೆ, (ಕಪ್ಪವರ್ಣದವರಾಗಿದ್ದ ಕಾಂಬ್ಳಿಯನ್ನೂ ಸಾಕಷ್ಟು ಬೆಳಗಾಗಿಸಿದ್ದರು), ಪಾಕಿಸ್ತಾನದಲ್ಲಿ ಜಾವೇದ್ ಮಿಯಾನ್ ದಾದರನ್ನು ಜಾಹಿರಾತಿಗೆ ಬಳಸಿಕೊಂಡರು. ಸರಕುಗಳನ್ನು ಬಿಕರಿ ಮಾಡಲು ಭಾರತ, ಪಾಕಿಸ್ತಾನವೆನ್ನದೆ ಹೈಪರ್ ರಾಷ್ಟ್ರವಾದಕ್ಕೆ ಕುಮ್ಮಕ್ಕು ನೀಡಿದರು. ಜನರನ್ನು ರಾಷ್ಟೋನ್ಮಾದದ ಅಲೆಯಲ್ಲಿ ತೇಲಿಸಿ, ಕ್ರೀಡಾರಂಗವನ್ನು ರಣರಂಗವಾಗಿಸಿದರು. ರಾಷ್ಟೋನ್ಮಾದ, ದ್ವೇಷದ ದುಖಾನುಗಳು ವ್ಯಾಪಾರಕ್ಕೆ ಪೂರಕವೆಂಬ ಕರಾಳ ಸತ್ಯ ಕಂಪನಿಗಳಿಗೆ ತಿಳಿದಿತ್ತು. ಕ್ರೀಡೆಯಲ್ಲಿ ಸೋಲು ಗೆಲವು ಸಹಜವೆಂಬುದನ್ನು ಜನ ಅರಗಿಸಿಕೊಳ್ಳದಾದರು. ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾದೆದುರು ಭಾರತ ಸೋಲುವುದು ಖಾತರಿಯಾದಾಗ, ಜನ ಇಡೀ ಈಡೆನ್ ಗಾರ್ಡೆನ್ ಕ್ರೀಡಾಂಗಣಕ್ಕೆ ಬೆಂಕಿಯಿಟ್ಟದ್ದು ಇದಕ್ಕೆ ಸ್ಪಷ್ಟ ನಿದರ್ಶನವಾಗಿತ್ತು.
ಕ್ರೀಡೆ ಕ್ರೀಡೆಯಾಗಿ ಉಳಿಯದ ವಿಷಮ ಕಾಲದಲ್ಲಿ ನೆಡೆದ ಭಾರತ-ಪಾಕಿಸ್ತಾನ ಟೆಸ್ಟ್ ಸರಣಿಯ ಕುರಿತು ಕ್ರೀಡಾ ರಸಿಕರಲ್ಲಿ ಆಸಕ್ತಿಯ ಜೊತೆಗೆ ಅತಿಯಾದ ಆತಂಕವು ಇತ್ತು. ಶಿವಸೇನೆ ಸರಣಿ ನೆಡೆಯದಂತೆ ನೂರಾರು ವಿಘ್ನ ಸೃಷ್ಟಿಸಿದ್ದರೂ, ಚೆನ್ನೈನಲ್ಲಿ ಸರಣಿ ಶುರುವಾಯಿತು. ನಾಲ್ಕನೇ ದಿನ ಕ್ರೀಡಾಂಗಣದಲ್ಲೆಲ್ಲಾ ಜನಸಾಗರ. “ಜೀತೇ ಗ ಬೈ ಜೀತೇ ಗ ಇಂಡಿಯಾ ಜೀತೇ ಗ, ಹಾರೇಗ ಬೈ ಹಾರೇಗ ಪಾಕಿಸ್ತಾನ್ ಹಾರೇಗ” ಎಂಬ ನಾರೆ. ಪಾಕಿಸ್ತಾನ ಮತ್ತು ಗೆಲುವಿನ ನಡುವೆ ನಿಂತಿದ್ದ ಏಕೈಕ ಆಟಗಾರ ಸಚಿನ್. ಸಚಿನ್ ಆಡಿದ ಆ ಇನ್ನಿಂಗ್ಸ್ ಬಹುಶಃ ಟೆಸ್ಟ್ ಕ್ರಿಕೆಟ್ಟಿನ ಶ್ರೇಷ್ಠ ಇನ್ನಿಂಗ್ಸ್ ಎಂದರೆ ತಪ್ಪಾಗಲಾರದು. ಸಕ್ಲೈನ್ ಮುಷ್ತಾಕ್ ಕೈಚಳಕ, ಆತನ ಸ್ಪಿನ್ ಮತ್ತು ದೂಸ್ರಾವನ್ನು ಓದಲಾಗದೆ ಗೊಂದಲದಲ್ಲಿ ಔಟಾಗಿ ಮರಳುತ್ತಿದ್ದ ಭಾರತೀಯ ದಾಂಡಿಗರು ಒಂದು ಕಡೆ, ಬೆಂಕಿ ಉಗುಳುತ್ತಿದ್ದ ವಾಸಿಂ, ವಾಕರ್ ಮತ್ತು ಸಕ್ಲೈನರನ್ನು ಸಮರ್ಥವಾಗಿ ಎದುರಿಸುತ್ತಿದ್ದ ಶಾಂತ ಏಕಶಿಲಾ ಬೆಟ್ಟ ಸಚಿನ್ ಇನ್ನೊಂದು ಕಡೆ. ಅಪ್ರತಿಮ ಆಟದಿಂದ ಸಚಿನ್ ಭಾರತವನ್ನು ವಿಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದ. 136 ಗಳಿಸಿ ಆಡುತ್ತಿದ್ದ ಸಚಿನ್ ನಿರ್ಣಾಯಕ ಹಂತದಲ್ಲಿ ಔಟಾದಾಗ ಭಾರತಕ್ಕೆ ಬೇಕಾಗಿದ್ದುದು ಕೇವಲ ಹದಿನೇಳು ರನ್ನುಗಳು. ಆದರೆ ಕರ್ನಾಟಕದ ಸುನಿಲ್ ಜೋಶಿ, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಹದಿನೇಳು ರನ್ನುಗಳನ್ನೂ ಗಳಿಸಲಾಗದೆ ಭಾರತ 258 ರನ್ನುಗಳಿಗೆ ಕುಸಿದು ಸೋಲುತ್ತದೆ.
ಇಡೀ ಭಾರತ ಉಸಿರುಗಟ್ಟಿ ಹಿಡಿದು ಚೆನ್ನೈನತ್ತ ನೋಡತೊಡಗುತ್ತದೆ. ಜನ ರೊಚ್ಚಿಗೆದ್ದು ಕ್ರೀಡಾಂಗಣಕ್ಕೆ ನುಗ್ಗುವರೇ? ಆಟಗಾರರ ಮೇಲೆ ದಾಳಿ ಮಾಡುವರೇ? ಆಸನಗಳಿಗೆ ಬೆಂಕಿ ಹಚ್ಚುವರೇ? ಪೋಲೀಸ್ ಪಡೆಯ ನಿಗರಾಣಿಯಲ್ಲಿ ಆಟಗಾರರನ್ನು ಸುರಕ್ಷಿತ ಜಾಗಕ್ಕೊಯ್ಯಬೇಕೇ? ಎಲ್ಲೆಲ್ಲೂ ಆತಂಕ, ಪ್ರಶ್ನೆಗಳ ಪ್ರವಾಹ! ಆದರೆ ಅಂದು ಚೆನ್ನೈ ಪ್ರೇಕ್ಷಕರು ನೆಡೆದುಕೊಂಡ ರೀತಿ ಎಲ್ಲಾ ಕಾಲಕ್ಕೂ ಮಾದರಿ ಮತ್ತು ಅನುಕರಣೀಯ. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಹತಾಶೆಯಿಂದ ದಾಂಧಲೆಗಿಳಿಯದೇ, ನಿರಾಸೆಯಿಂದ ತಲೆತಗ್ಗಿಸಿ ಕ್ರೀಡಾಂಗಣದಿಂದ ಹೊರನಡೆಯದೆ, ನಿಂತಲ್ಲೇ ಎದ್ದು ನಿಂತು ಚಪ್ಪಾಳೆ ತಟ್ಟತೊಡಗಿದ್ದರು. ಉತ್ಕೃಷ್ಟ ಮಟ್ಟದ ಆಟ ಪ್ರದರ್ಶಿಸಿದ ಎರಡು ತಂಡಗಳಿಗೆ ಅಭಿನಂದನೆ ಸಲ್ಲಿಸಿದ್ದರು. ಪಾಕಿಸ್ತಾನದ ತಂಡ ಮೈದಾನದ ಸುತ್ತ ವಿಜಯದ ಓಟ ಓಡುವಾಗ ಪ್ರಶಂಸಿದರು. ಭಾರತ ಅಂದು ಸೋತರು, ಕ್ರೀಡೆ ಗೆದ್ದಿತ್ತು!
ಮುಂದಿನ ಪಂದ್ಯ ಕೋಟ್ಲಾ ಮೈದಾನದಲ್ಲಿ ನಡೆಯಿತು. ಭಾರತ ಭರ್ಜರಿ ಜಯಗಳಿಸಿತು. ಕುಂಬ್ಳೆ ಒಂದೇ ಇನ್ನಿಂಗ್ಸಿನಲ್ಲಿ ಹತ್ತು ವಿಕೆಟ್ ಗಳಿಸಿದ ಎರಡನೇ ಆಟಗಾರರಾದರು. ಸರಣಿಯನ್ನ ಪರಮ ವೈರಿಗಳು ಅತ್ಯಂತ ಸಂಯಮ, ಸಹನೆಗಳಿಂದ ಆಡಿದರೂ, ಸ್ಪರ್ಧಾತ್ಮಕ ಪೈಪೋಟಿ ಶ್ರೇಷ್ಠ ಮಟ್ಟದಾಗಿತ್ತು. ಕ್ರೀಡಾ ದಾಖಲೆಗಳಲ್ಲಿ ಸಚಿನ್ ತೆಂಡೂಲ್ಕರ್ ಆಟ, ವಾಕರ್, ವಾಸಿಂ ವೇಗ, ಕುಂಬ್ಳೆ, ಸಕ್ಲೈನ್ ಜಾದು ಶಾಶ್ವತವಾಗಿ ದಾಖಲಾದರೆ, ದಾಖಲಾಗದೆ ಉಳಿದದ್ದು ಚೆನ್ನೈ ಪ್ರೇಕ್ಷಕರ ಪ್ರಬುದ್ಧ ನಡತೆ. ಇಂದಿಗೂ ಆ ಸರಣಿಯನ್ನ ನಾನು ನೆನೆಯುವುದು ಮತ, ರಾಷ್ಟ್ರೋನ್ಮಾದಗಳಾಚೆ ನಿಂತು ಕ್ರೀಡೆಯನ್ನ ಕ್ರೀಡೆಯಾಗಿ ನೋಡಿದ ಪ್ರೇಕ್ಷಕರಿಗಾಗಿಯೇ.
[…] ಇದನ್ನೂ ಓದಿ: ಇಂಡೋ vs ಪಾಕ್: ಕ್ರಿಕೆಟ್ ಪ್ರೇಕ್ಷಕ ಗೆದ್ದ ಆ … […]