ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿರುಗೇಟು
ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್ ನಾಯಕರ ಮುಖ ನೋಡಿ ಜನರಿಗೆ ಬೇಜಾರಾಗಿದೆ ಎಂದು ಪ್ರಿಯಾಂಕಾ ಗಾಂಧಿಯವರನ್ನು ಕರೆತಂದಿದ್ರಾ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.
ಹಾವೇರಿಯಲ್ಲಿ ಸಿದ್ದರಾಮಯ್ಯ ಮಾಡಿರುವ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾ ನಾಯಕಿ ಅಂತ ಪ್ರಯಾಂಕಾ ಗಾಂಧಿ ಅವರನ್ನು ಕರೆತಂದಿದ್ದರಲ್ಲ, ಭಾರತ್ ಜೋಡೋ, ವಾಕಿಂಗ್, ಮ್ಯಾರಥಾನ್ ಮೂಲಕ ನಡೆಸಿಕೊಂಡು ಅವರನ್ನೂ ಓಡಿಸಿಕೊಂಡು ಹೋಗಿದ್ದರಲ್ಲಾ ಅವರು ಯಾಕೆ ಬಂದಿದ್ದು ಎಂದು ಪ್ರಶ್ನಿಸಿದರು.
ಅವರು ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ಅವರಂತಹ ಕಂದಮ್ಮಗಳನ್ನೇ ಕರೆತಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷ ದೇಶಕ್ಕೆ ಸೇವೆ ಮಾಡಿದ್ದಾರೆ, ವಾಕಿಂಗ್, ಮ್ಯಾರಥಾನ್ ಗಾಗಿ ಅವರು ರಾಜ್ಯಕ್ಕೆ ಬಂದಿಲ್ಲ. ಬದಲಿಗೆ 10 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ತಂದಿದ್ದಾರೆ, ಅವರು ತಂದಿದ್ದಾರೆಯೇ ಎಂದು ಪ್ರಶ್ನಿಸಿದರು.

ತರ್ಕಬದ್ಧವಾಗಿ ಮಾತನಾಡುವುದನ್ನು ಸಿದ್ದರಾಮಯ್ಯ ಬಿಟ್ಟಿದ್ದಾರೆ. ಅವರು ಬಹಳ ದಿನಗಳಿಂದ ಈ ರೀತಿಯೇ ಮಾತನಾಡಲಾರಂಭಿಸಿದ್ದಾರೆ ಎಂದರು. ಲಂಚ ಮಂಚದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಲೋಕಾಯುಕ್ತ ಮುಚ್ಚಿದ್ದು ಯಾಕೆ, ಎಸಿಬಿ ಮಾಡಿದ್ದು ಯಾಕೆ, ಇವರು ಸತ್ಯ ಹರಿಶ್ಚಂದ್ರರಲ್ಲ ಯಾಕೆ ಲೋಕಾಯುಕ್ತ ಮುಚ್ಚಿದರು ಎಂಬುದಕ್ಕೆ ಮೊದಲು ಉತ್ತರ ಕೊಡಲಿ, ಆಮೇಲೆ ಲಂಚ ಮಂಚದ ಬಗ್ಗೆ ಮಾತನಾಡೋಣ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ. ಶಿವಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನಗಬೇಕಷ್ಟೇ ಎಂದರು. ಮುಖ್ಯಮಂತ್ರಿಗಳ ಬಗೆಗಿನ ಆರೋಪಕ್ಕೆ ಪ್ರತಿಕ್ರಿಯಿಸಿ, ಇಡೀ ರಾಜ್ಯ ಹೇಳುತ್ತಿದೆ ಬಸವರಾಜ ಬೊಮ್ಮಯಿ ಅವರು ಉತ್ತಮ ಮುಖ್ಯಮಂತ್ರಿ ಎಂದು, ಅನೇಕ ವರ್ಷಗಳಿಂದ ಇತ್ಯರ್ಥವಾಗದ ವಿಚಾರಗಳನ್ನೆಲ್ಲ ಅವರು ಇತ್ಯರ್ಥ ಮಾಡುತ್ತಿದ್ದಾರೆ. 25 ಸಾವಿರ ಕೋಟಿ ಮಿನರಲ್ ಫಂಡ್ ಹತ್ತಾರು ವರ್ಷಗಳಿಂದ ಸುಪ್ರೀಂಕೋರ್ಟಿನಲ್ಲಿತ್ತು. ಈಗ ಅದನ್ನು ತಂದು ಅಭಿವೃದ್ಧಿ ಮಾಡುತ್ತಿದ್ದಾರೆ, ಅವರೇಕೆ ಮಾಡಲಿಲ್ಲ ಎಂದು ಹೇಳಿದರು.
ಅಲ್ಲದೆ ಕಳಸಾ ಬಂಡೂರಿ ಯೋಜನೆ ಮಾಡುತ್ತಿರುವವರು ಯಾರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚು ಮಾಡಿದ್ದು ಯಾರು, ಮಾಡಲು ಬದ್ಧತೆ ಬೇಕು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಚಾರ ಅಳವಡಿಸಿಕೊಂಡಿದ್ದಾರೆ, ಸರ್ಕಾರ ಅಳವಡಿಸಿಕೊಂಡಿದೆ. ಬಡವರ ಬಗ್ಗೆ ಅನುಕಂಪ ಮತ್ತು ಕಾರ್ಯಕ್ರಮ ರೂಪಿಸುವ ಬದ್ಧತೆ ಬೇಕು ಅವರೆಡೂ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕಿದೆ ಎಂದರು.

ಚುನಾವಣೆ ಗೆಲ್ಲುವ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, 2018ರಲ್ಲಿಯೂ ಹೀಗೇ ಹೇಳಿದ್ದರು, ಆದರೆ ಫಲಿತಾಂಶ ಏನಾಯಿತು, ಈಗಲೂ ಅಷ್ಟೇ ಕಾಂಗ್ರೆಸ್ ಕೇವಲ 80ರಿಂದ 90 ಸ್ಥಾನ ಮೀರುವುದಿಲ್ಲ ಎಂದರು. 2023ರ ಚುನಾವಣೆ ನಂತರ ಬೊಮ್ಮಾಯಿ ವೀರರ, ಶೂರರ ಎಂಬುದು ತಿಳಿಯಲಿದೆ. ಈಗ ಕೊಟ್ಟ ಕುದುರೆ ಚೆನ್ನಾಗಿ ಓಡಿಸುತ್ತಿದ್ದಾರೆ,. ಕಾಂಗ್ರೆಸ್ ನವರು ಓಡಿಸಲಾಗದೆ 2018ರಲ್ಲಿ ಮುಗ್ಗರಿಸಿ ಬಿದ್ದರು ಎಂದು ಲೇವಡಿ ಮಾಡಿದರು. ಅಲ್ಲದೆ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸದಿಂದ ಕಾಂಗ್ರೆಸ್ ಗೆ ಲಾಭವಾಗಲಿದೆಯೆ ಎಂಬ ಪ್ರಶ್ನೆಗೆ, ಉತ್ತರಪ್ರದೇಶದಲ್ಲಿ ಒಂದಷ್ಟು ಸ್ಥಾನ ಬರುವುದು ಇವರು ಹೋಗಿ ಅವೂ ಬರಲಿಲ್ಲ. ರಾಜ್ಯದಲ್ಲಿಯೂ ಅಷ್ಟೇ ಎಂದರು.
ಬಿಗ್ ಕನ್ನಡ ಪ್ರತಿನಿಧಿ, ಚಿಕ್ಕಬಳ್ಳಾಪುರ