ಗ್ರಾಮ, ಗ್ರಾಮದಲ್ಲೂ ಮದ್ಯದಂಗಡಿ ತೆರೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ಪಾನ ನಿಷೇಧ ಮಹಾತ್ಮ ಗಾಂಧಿಯವರ ಅತಿ ದೊಡ್ಡ ಕನಸಾಗಿತ್ತು. ಅವರ ತತ್ವ ಪಾಲಿಸುತ್ತೇವೆ ಎಂದು ಸುಳ್ಳು ಹೇಳುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರ್ಕಾರ ಈಗಾಗಲೇ ಇರುವ ಮದ್ಯದಂಗಡಿಗಳು ಸಾಲದು ಎಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿದೆ. ಇಂತಹ ಮದ್ಯಪಾನ ಪ್ರೋತ್ಸಾಹಿಸುವ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ, ಅಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಯಾವ ನೈತಿಕತೆಯೂ ಇಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ತನ್ನ ಆದಾಯ ಹೆಚ್ಚಿಸಿಕೊಳ್ಳುವ ಏಕೈಕ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಮದ್ಯಪಾನದಿಂದ ಸಮಾಜದಲ್ಲಿ ಎಷ್ಟೆಲ್ಲ ಸಾಮಾಜಿಕ ಸಮಸ್ಯೆಗಳು, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಮದ್ಯದಂಗಡಿಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಏರಿಸಲು ಹೊರಟಿರುವ ಯೋಜನೆಯನ್ನು ಎಸ್.ಡಿ.ಪಿ.ಐ ಕಟುವಾಗಿ ವಿರೋಧಿಸುತ್ತದೆ.
ಜನರನ್ನು ಮದ್ಯಪಾನಕ್ಕೆ ಉತ್ತೇಜಿಸುವ ಕಾಂಗ್ರೆಸ್ ಸರಕಾರಕ್ಕೆ ಪಾನಮುಕ್ತ ಸಮಾಜದ ಕನಸು ಕಂಡಿದ್ದ ಗಾಂಧಿಯವರ ಜಯಂತಿಯನ್ನು ಆಚರಿಸುವ ಯಾವುದೇ ನೈತಿಕತೆ ಇರುವುದಿಲ್ಲ. ಅದು ಗಾಂಧಿಯವರಿಗೆ ಈ ಸರ್ಕಾರ ಮಾಡುವ ಅವಮಾನವಾಗಿರುತ್ತದೆ. ಈ ಸರ್ಕಾರಕ್ಕೆ ನಿಜವಾಗಿಯೂ ಗಾಂಧಿಯವರ ಮೇಲೆ ಗೌರವ ಇದ್ದರೆ ತಕ್ಷಣವೇ ಜಾರಿಯಾಗುವಂತೆ ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡಲಿ ಎಂದು ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡುವಂತೆ ಒತ್ತಾಯಿಸಿ ನಮ್ಮ ಪಕ್ಷದ ವತಿಯಿಂದ ಅಕ್ಟೋಬರ್ 02 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾಸ್ಕರ್ ಪ್ರಸಾದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.