ಪ್ರತೀ ಚುನಾವಣೆಯಲ್ಲೂ ಎಲ್ಲ ಪಕ್ಷಗಳು ಪೈಪೋಟಿಯ ಮೇಲೆ ಮತದಾರರನ್ನು ಸೆಳೆಯಲು ಉಚಿತ ಸ್ಕೀಂಗಳನ್ನು ಬಿಡುಗಡೆ ಮಾಡುತ್ತವೆ. ಅದೂ ತಿಂಗಳಿಗೆ ಇಂತಿಷ್ಟು ಹಣವೋ, ರೇಷನ್ನೋ ಅಥವಾ ಮತ್ಯಾವುದೋ ಒಂದನ್ನು ’ಉಚಿತವಾಗಿ ಕೊಡ್ತೀವಿ’ ಅಂತ ಘೋಷಣೆ ಮಾಡಿ ಮತದಾರರನ್ನು ತಮ್ಮ ಚಕ್ರವ್ಯೂಹದೊಳಕ್ಕೆ ನುಗ್ಗಿಸಲು ಯತ್ನಿಸುತ್ತವೆ. ಸ್ವಾತಂತ್ರ್ಯ ಪಡೆದು ೭೫ ವರ್ಷಗಳೇ ಗತಿಸಿದ್ದರೂ ಜನರ ದೈನಂದಿನ ಸ್ಥಿತಿಗತಿಗಳು ಬದಲಾಗಿಲ್ಲ. ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳೆಂಬ ಚಕ್ರವ್ಯೂಹದೊಳಗೆ ನುಗ್ಗಿ, ಅದರಿಂದ ಬಿಡಿಸಿಕೊಂಡು ಹೊರಬರಲಾಗದೇ ಇಂದಿಗೂ ನಲುಗುತ್ತಿದ್ದಾರೆ.
ದೇಶದ ಅಷ್ಟೂ ಸಂಪತ್ತು ಕೆಲವೇ ಕೆಲವರ ಬಳಿಯಿದೆ. ಬಡವರ ಬಳಿಯಿರುವ ಕಿಲುಬುಕಾಸಿಗೆ ಯಾವುದೇ ಗ್ಯಾರಂಟಿಯಿಲ್ಲ. ಅವರ ಸೂರನ್ನೋ, ಅಂಗೈ ಅಗಲದ ಭೂಮಿಯನ್ನೋ ಸರ್‍ಕಾರಗಳು ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಗಳಿಗೆಯಲ್ಲಿ ಕಿತ್ತು ಯಾವುದಾದರೂ ಕಾರ್‍ಪೋರೇಟ್ ಕಂಪೆನಿಗಳಿಗೆ ಕೊಟ್ಟುಬಿಡಬಹುದು. ಅದನ್ನು ಪ್ರಶ್ನಿಸಲೂ ಆಗದಂತೆ ನಮ್ಮ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದಾಗಿಬಿಟ್ಟಿದೆ. ಹೀಗಿರುವಾಗ ಕುಮಾರವ್ಯಾಸ ಹೇಳುವಂತೆ, ’ಬಡವರ ಬಿನ್ನಪವನಾರು ಕೇಳ್ವರು?’ ಎಂಬ ಹೀನಾಯ ಸ್ಥಿತಿಗೆ ಇಲ್ಲಿನ ಕೆಳಜಾತಿಗಳು ತಲುಪಿಯಾಗಿದೆ.

Priyanka Gandhi

ನಿನ್ನೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರ ’ನಾ ನಾಯಕಿ’ ಕಾರ್‍ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮನೆಯಲ್ಲಿರುವ ಗೃಹಿಣಿಯರಿಗೆ ೨೦೦೦ ಸಾವಿರ ರೂಪಾಯಿ ಸಹಾಯಧನ ನೀಡುವ ’ಗೃಹಲಕ್ಷಿ’ ಯೋಜನೆಯನ್ನು ’ಎದೆಯುಬ್ಬಿಸಿ’ ಘೋಷಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಥರದ ’ಭಾಗ್ಯ’ ಯೋಜನೆಗಳನ್ನು ಕೊಟ್ಟು, ’ಅನ್ನರಾಮಯ್ಯ, ಭಾಗ್ಯರಾಮಯ್ಯ’ ಎಂಬ ಬಿರುದುಬಾವಲಿಗಳಿಂದ ಮಿಂಚುತ್ತಿದ್ದಾರೆ. ಆದರೆ, ಆ ಭಾಗ್ಯಗಳನ್ನು ಪಡೆದುಕೊಂಡ ಜನರ ಸ್ಥಿತಿಗತಿಯಲ್ಲೇನಾದರೂ ಬದಲಾವಣೆ ಕಂಡಿದೆಯೇ? ಈ ಉಚಿತ ಸ್ಕೀಂಗಳಿಂದ ಒಂದೊತ್ತಿನ ಹೊಟ್ಟೆ ತುಂಬಬಹುದೇ ಹೊರತು, ಅದರಿಂದ ಭವಿಷ್ಯವೇನೂ ಬದಲಾಗುವುದಿಲ್ಲ.

ಬಿಜೆಪಿ ಸರ್‍ಕಾರ ಕಳೆದ ವರ್‍ಷ ಆರ್‍ಥಿಕವಾಗಿ ಕ್ಷೀಣವಾಗಿರುವ ಮೇಲ್ಜಾತಿಯ ಬಡವರಿಗೆ 10 ಪರ್‍ಸೆಂಟ್ ಮೀಸಲಾತಿ ನೀಡುವ ಹಾಗೆ ಸಂವಿಧಾನಕ್ಕೆ ತಿದ್ದುಪಡಿ ತಂದಿತು. ಮೇಲ್ಜಾತಿಯಲ್ಲಿ 10 ಪರ್‍ಸೆಂಟ್ ಮೀಸಲಾತಿ ಬೇಕಾಗುವಷ್ಟು ದೊಡ್ಡಮಟ್ಟದಲ್ಲಿ ಬಡವರಿದ್ದಾರೋ, ಇಲ್ಲವೋ? ಅದು ಬೇರೆ ಚರ್‍ಚೆ. ಆದರೆ, ಅಲ್ಲಿರುವ ಕನಿಷ್ಟ ಮಟ್ಟದ ಬಡವರಿಗೆ 10 ಪರ್‍ಸೆಂಟ್ ಮೀಸಲಾತಿ ಅದೆಷ್ಟು ಆತ್ಮವಿಶ್ವಾಸವನ್ನು ಕೊಟ್ಟಿರಲಿಕ್ಕಿಲ್ಲ… ಮೇಲ್ಜಾತಿಯಲ್ಲಿರುವ ಕೆಲವೇ ಕೆಲವು ಬಡವರ ಆರ್‍ಥಿಕ ಪರಿಸ್ಥಿತಿ ಉತ್ತಮವಾಗಿ ಅವರು ತಮ್ಮ ಸರೀಕರಂತೆ ಮುನ್ನಲೆಗೆ ಬರುವಂತಾಗಲೂ ಈ ಮೀಸಲಾತಿ ಸಹಾಯ ಮಾಡೇ ಮಾಡುತ್ತದೆ.
ಇಂಥಹ ಯಾವುದಾದರೊಂದು ಕಾನೂನು ಜಾರಿ ಮಾಡುವ ಬಗ್ಗೆ ತನ್ನ ಮತದಾರರಿಗೆ ಆಶ್ವಾಸನೆ ಕೊಟ್ಟು, ಅವರೊಳಗೆ ಆತ್ಮವಿಶ್ವಾಸ ತುಂಬುವುದು ಬಿಟ್ಟು ’ಉಚಿತ ಕೊಡುಗೆ’ ಕೊಡುತ್ತೇವೆಂದು ಅವರನ್ನು ತಮ್ಮ ಖೆಡ್ಡಾದೊಳಕ್ಕೆ ಬೀಳಿಸಿಕೊಳ್ಳುವ ಚಾಳಿಗೆ ಕೊನೆಯೆಂದು? ಕಾಂಗ್ರೆಸ್ ಅನ್ನು ಹೊತ್ತು ಮೆರೆಸುತ್ತಿರುವ ಪ್ರಗತಿಪರರು ಇದನ್ನು ಅರ್‍ಥಮಾಡಿಕೊಳ್ಳಬೇಕು. ಅವರು ಘೋಷಣೆ ಮಾಡಿದ್ದನ್ನೇ ಅದ್ಭುತವೆಂದು ಪ್ರಚಾರಕ್ಕಿಳಿಯುವುದು ಬಡವರ ಸ್ಥಿತಿಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಅಷ್ಟೇ. ಜಗತ್ತು ಕಂಡ ಮಹಾ ಮಾನವತಾವಾದಿಗಳಲ್ಲಿ ಒಬ್ಬರಾದ ಯೇಸು ಕ್ರಿಸ್ತ ಹೇಳುವಂತೆ, ’ಮೀನು ಕೊಡುವುದಕ್ಕಿಂತಲೂ, ಮೀನು ಹಿಡಿಯುವುದನ್ನು ಕಲಿಸಬೇಕು’ ಎಂಬಂತಾಗಬೇಕು. ಆದರೆ ಆಗುತ್ತಿರುವುದು ಏನು?
ಅಸಲಿಗೆ ಪ್ರಜಾಪ್ರಭುತ್ವದ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರೀಕ ಪ್ರಜೆಗೂ ಭೂಮಿ ಹೊಂದುವ ಹಕ್ಕು ಇದೆ. ಉಚಿತವಾಗಿ ಏಕರೂಪದ ಶಿಕ್ಷಣ ಪಡೆದುಕೊಳ್ಳುವ ಹಕ್ಕು ಇದೆ. ಉಚಿತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಕ್ಕು ಇದೆ. ಸೂಕ್ತ ಉದ್ಯೋಗವನ್ನು ಹೊಂದು ಹಕ್ಕು ಕೂಡಾ ಇದೆ. ಇವುಗಳನ್ನು ಯಾವುದೋ ರಾಜಕೀಯ ನಾಯಕನೋ, ಪಕ್ಷವೋ ಕೊಡಮಾಡುವ ’ಕೊಡುಗೆ’ಯಲ್ಲ. ಅವುಗಳು ಇಲ್ಲಿನ ನಾಗರೀಕ ಜನಗಳ ಮೂಲಭೂತ ಹಕ್ಕಷ್ಟೇ. ಈ ಹಕ್ಕನ್ನು ಮರೆಮಾಚಿ ’ಉಚಿತ ಕೊಡುಗೆ’ ಎಂಬ ಚಕ್ರವ್ಯೂಹವನ್ನು ಹೆಣೆದು ಅದರೊಳಗೆ ಅವರನ್ನು ಬೀಳಿಸಿ, ಏಮಾರಿಸುವುದು ಒಳ್ಳೆಯ ನಡೆಯಂತೂ ಅಲ್ಲವೇ ಅಲ್ಲ.
-ವಿ.ಆರ್.ಕಾರ್ಪೆಂಟರ್
ಸಂಪಾದಕ

Leave a Reply

Your email address will not be published. Required fields are marked *