-೧-
ಎಲ್ಲಿಂದಲೋ
ಸಿಡಿದ ಮೊದಲ ಕಲ್ಲು
ಮಣ್ಣಿನ ಮೊದಲ ಕಣ
ಹುಡಿ ಹಿಡಿ
ಸವೆದಾಗ ಕಾಲ ಮತ್ತೆ
ಘನವಾದ ಕಲ್ಲು
ನೀರು ನಾರು ಬೇರು
ಜೀವ ಸಂಚಾರ
ಕಾಲ
ಕಲ್ಲು ಮಣ್ಣುಗಳ ಒಳಗೆ
ಇಳಿಯಿತು
ಏರಿತು ಮೇಲಕ್ಕೆ
ಚಲಿಸುವ ವರ್ತಮಾನ
ಈಗ ಎಲ್ಲರಿಗೂ
ಕಾಲದ್ದೇ ಚಿಂತೆ
ಮಾತು ಮಿತಿಗಳ ನಡುವೆ
ನಿರ್ಮಿತಿ
ಮಹಾನ್ ಮನುಷ್ಯರಿಂದ
ಕಾಲಕ್ಕೆ ಪುನರ್ವಸತಿ
-೨-
ಸಹ ಕವಿಯ
ಪುಸ್ತಕ ಬಿಡುಗಡೆಗೆ
ಒಂದು ದಿನ ಮೊದಲೇ
ಸರಿಯಾದ ಸಮಯಕ್ಕೆ
ಸಭಾಂಗಣಕ್ಕೆ
ಸ್ವಲ್ಪ ಹಳೆ ಕವಿಯ ಹಾಜರು
ಕವಿತೆಯ ಮಂಪರಿಗೆ
ಮರೆವು
ಹಿಂದಿನ ದಿನ ಖಾಲಿತನ
ಕವಿತೆ ಗಳಾಗಿದ್ದವು
ಮರು ದಿನ ಮತ್ತೆ
ಅಲ್ಲಿ ಸರಿಯಾದ ಸಮಯಕ್ಕೆ
ತುಂಬಿತ್ತು ಸಭಾಂಗಣ
ಕವಿತೆ ಮಾತಾಗಿತ್ತು
ಕವಿ ಕಾವ್ಯವನ್ನು
ಸಂತೈಸುತ್ತಿದ್ದರು
ಹೊರಗೆ ಜೋಡಿಸಿಟ್ಟ
ಹೊಸ ಪುಸ್ತಕ
ಹೊಸ ಗಾಳಿಯ ಸೇರಿ
ಕಾಮ ಕಸ್ತೂರಿಯಂತೆ
ಘಮಗುಡುವ ಅಮಲು
ಅಲ್ಲೊಬ್ಬಳು
ಮಮತೆಯಿಂದ
ದಾರಕ್ಕಿಂತ
ಅಗಲ ಕಣ್ಣಿನ ಸೂಜಿಯಲ್ಲಿ
ಹೊಲೆಯುತ್ತಿದ್ದಳು
ತುಂಡು ತುಂಡು ವಾತ್ಸಲ್ಯವನ್ನು
ಹಳೆಯ ತುಂಡು ಬಟ್ಟೆ
ಹೊಚ್ಚ ಹೊಸ ಕೌದಿ ಆಯಿತು
ಹೊಸ ಕವಿತೆ ಕೌದಿ
ಹೊಳೆದಾಗ
ಮೈ ಮನವೆಲ್ಲ ಬೆಚ್ಚಗಾಯಿತು
-೩-
ಅತ್ತ
ಇಬ್ಬರೂ ಕವಿಗಳ ವಿದ್ಯಾರ್ಥಿಗಳು
ಅಕ್ಷರ ಅನ್ನವಾಗುವ
ಕಲೆ ಕಣ್ಣಾಗುವ ಸ್ಪರ್ಧೆಯಲ್ಲಿ
ಬಹುಮಾನ ವಿತರಣೆಗೆ
ಕಾತರರಾಗಿದ್ದಾರೆ
ಇತ್ತ
ಬಹುಮತಕ್ಕಾಗಿ
ಅಭ್ಯರ್ಥಿಗಳು ಬಲೆ ಬೀಸಿ
ಹಪಹಪಿಸುತ್ತಿದ್ದಾರೆ
ಸೋಲು ಗೆಲುವು ಕೌದಿ ಕಾಲ ಕಾವ್ಯ
ಕಲ್ಲು ಮಣ್ಣುಗಳ ಒಳಗೆ
ನೆಂದು ಒಣಗಿ
ಮತ್ತೆ ಮತ್ತೆ
ಒಣಗೊಣಗಿ ನೆನೆಯುತ್ತಲೇ ಇದೆ
ಎದೆಗಿಳಿಯಿತು ಕವಿತೆ
ಕವಿಗೆ ಶರಣು
ಕವಿತೆಗೂ …
ತುಂಬಾ ಮಾರ್ಮಿಕವಾಗಿ ಮೂಡಿಬಂದ ಕವಿತೆ ಅರ್ಥಪೂರ್ಣವಾಗಿದೆ . ಅಭಿನಂದನೆಗಳು ಸರ್
ಕೌದಿಕಾವ್ಯ
ಎಲ್ಲಿಂದಲೋ ಮತ್ತೆಲ್ಲಿಗೋ ಕರೆದುಹೊಯ್ದಿರಿ…