ಇತಿಹಾಸದ ಓದು ಚಂದಮಾಮನ ಕತೆಗಳನ್ನು ಓದಿದಂತೆ ಓದಲಾಗದು. ಹಾಗೆ ಚಂದಮಾಮನ ಕತೆಯಂತೆ ಓದಿದ ಇತಿಹಾಸದ ಓದು ಭಾರಿ ಅನರ್ಥಗಳಿಗೆ ಎಡೆ ಮಾಡಿಕೊಡುತ್ತದೆ. ಇತಿಹಾಸಗಳನ್ನು ವಿವೇಚಿಸುತ್ತಾ, ವಿಮರ್ಶೆಗೊಳಪಡಿಸುತ್ತಾ, ಅರಿವಿನಿಂದ ಓರೆಗೆ ಹಚ್ಚುತ್ತಾ ಓದಿಕೊಳ್ಳಬೇಕು. ಬಾಬಾ ಸಾಹೇಬರು ಹೇಳುವಂತೆ ಭಾರತದ ಇತಿಹಾಸ ಇತಿಹಾಸವೇ ಅಲ್ಲ. ಹಾಗಂತ ಭಾರತಕ್ಕೆ ಇತಿಹಾಸವೇ ಇಲ್ಲ ಅಂತಲೂ ಅಲ್ಲ. ಇತಿಹಾಸದ ಸತ್ಯವನ್ನು ಬಗೆದು ನೋಡುವ ಅಗತ್ಯವಿದೆ. ಇಲ್ಲದಿದ್ದರೆ ಯಾರೋ ಬರೆದಿದ್ದು, ಓದಿ ಹೇಳಿದ್ದು, ಭಾಷಣ ಬರೆಹಗಳಲ್ಲಿ ಕಕ್ಕಿದ್ದನ್ನೇ ನಂಬಿ ನಡೆದರೆ ಈಗ ಶಿವಮೊಗ್ಗದಲ್ಲಿ ಔರಂಗಜೇಬನೆಂಬ ಮತಾಂಧ ಕ್ರೂರಿ, ಹಿಂದೂಗಳ ಶ್ರದ್ಧಾ ಕೇಂದ್ರಗಳ ಭಂಜಕ, ತೆರಿಗೆಗಳ್ಳನನ್ನು ಮೆರೆಸಲು ಹೋಗಿ, ನಾಡಿನ ಎಲ್ಲ ಪ್ರಜ್ಞಾವಂತರಿಂದಲೂ, ಸ್ವತಃ ಮುಸ್ಲಿಂ ವಿಚಾರವಂತರಿಂದಲೂ, ಧಾರ್ಮಿಕ ಮುಖಂಡರಿಂದಲೂ ಈಗ ಛೀಮಾರಿಗೆ ಒಳಗಾಗಿದ್ದಾರಲ್ಲಾ ಹಾಗಾಗಬೇಕಾಗುತ್ತದೆ. ಮತ್ತೊಂದು ಇತಿಹಾಸದ ಪೋಸ್ಟ್ ಮಾರ್ಟಮ್ ಮಾಡಿದ್ದೇನೆ ಓದಿ. ಔರಂಗಜೇಬ್ ನೀನಾ ಇತಿಹಾಸ?
ಔರಂಗಜೇಬ್
ತಂದೆ ಷಹಜಹಾನನು ತನ್ನ ನಂತರ ತನ್ನ ರಾಜ್ಯಾಧಿಕಾರದ ಪಟ್ಟವನ್ನು, ದಾರಾಶಿಖೋನನಿಗೆ ಕಟ್ಟಬೇಕೆಂದು ಯೋಚಿಸಿರುವಾಗಲೇ ಅಣ್ಣ ದಾರಾಶಿಖೋನನ್ನು ಕೊಲೆಗೈದು, ಅಪ್ಪ ಷಹಜಹಾನನ್ನು ಬಂಧಿಖಾನೆಯಲ್ಲಿರಿಸಿ, ತನ್ನ ಇನ್ನಿಬ್ಬರು ಸಹೋದರರಾದ ಷೋಜ ಮತ್ತು ಮುರಾದ್‌ನನ್ನು ಮತ್ತು ಒಬ್ಬ ಸೋದರಳಿಯ ದಾರಾ ಹಾಗು ಸ್ವಂತ ಮಗನನ್ನೇ ಗಲ್ಲಿಗೇರಿಸಿ, ತನ್ನ ಪೈಶಾಚಿಕ ಕೃತ್ಯ ಮೆರೆದವನೇ ಔರಂಗಜೇಬ. ಶಿವಾಜಿಯ ಮಗ ಶಾಂಬಾಜಿಯನ್ನು ಕೊಂದವನು ಇವನೇ. ಶಿವಾಜಿಯ ಕಿರಿಮಗ ಸಾಹುವನ್ನು ಜೈಲಲ್ಲಿಟ್ಟು ಹಲವು ಹಿಂದೂ ರಾಜರನ್ನು ತನ್ನ ಸಾಮಂತರನ್ನಾಗಿ ಮಾಡಿಕೊಂಡು ಧರ್ಮಾಂದನಂತೆ ಮೆರೆದವನು, ಭಾರತದ ನೆಲದ ಸರ್ವ ಧರ್ಮ ಸಹಿಷ್ಣುತೆಗೆ ಕೊಳ್ಳಿ ಇಡುತ್ತಲೇ ತನ್ನ ಸಾಮ್ರಾಜ್ಯ ವಿಸ್ತಾರಣೆಯ ದಾಹಕ್ಕೆ ಒಳಗಾಗಿದ್ದವನೇ ಔರಂಗಜೇಬ.
ನವೆಂಬರ್ 3, 1618ರಲ್ಲಿ ಜನಿಸಿದ್ದ ಔರಂಗಜೇಬ್ ಮಾರ್ಚ್ 3, 1707ರವರೆಗೆ ಬದುಕಿದ್ದ. 1659ರಿಂದ 1707ರವರೆಗೆ 49ವರ್ಷಗಳ ಕಾಲದ ಸುದೀರ್ಘ ಆಡಳಿತ ನಡೆಸಿದ್ದ ಔರಂಗಜೇಬ್ ಭಾರತದ ಆರನೆಯ ಮೊಘಲ್ ಚಕ್ರವರ್ತಿಯಾಗಿದ್ದ. ತಾಜ್ ಮಹಲ್ ಕಟ್ಟಿಸಿದ ಷಹಜಹಾನನ ಮೂರನೆಯ ಮಗನೇ ಈ ಔರಂಗಜೇಬ್. ಇವನು ತಂತ್ರಗಾರಿಕೆಯ ಆಡಳಿತಗಾರನು, ಕಟ್ಟರ್ ಮುಸ್ಲಿಮನು, ಹಿಂದೂ ಧರ್ಮ ವಿರೋಧಿಯೂ ಆಗಿದ್ದ. ಜಾತ್ಯಾತೀತ ತತ್ವಗಳನ್ನು ವಿರೋಧಿಸುತ್ತಿದ್ದ. ಇವನ ಆಡಳಿತಾವಧಿಯಲ್ಲಿ ಧಾರ್ಮಿಕ ಅಸಹಿಷ್ಣುತೆ ತಾಂಡವವಾಡುತ್ತಿತ್ತು ಎಂದರೂ ತಪ್ಪಲ್ಲ. ಇವನೊಬ್ಬ ವಿಸ್ತರಣಾವಾದಿಯಾಗಿದ್ದ. ವಿಸ್ತರಣಾವಾದಿಯಾಗಿದ್ದನೆಂದರೆ ತನ್ನ ಸಾಮ್ರಾಜ್ಯದ ವಿಸ್ತರಣೆಗಾಗಿ ಹರಿಸಿದ ರಕ್ತಕ್ಕೆ, ಕಳೆದ ಜೀವಗಳಿಗೆ ಲೆಕ್ಕವಿರುವುದಿಲ್ಲವಷ್ಟೇ.
ವಿಸ್ತರಣಾವಾದಿಯಾಗಳು ಬಹುಶಃ ಮನುಷ್ಯರಾಗಿರುವುದಿಲ್ಲ. ಅಧಿಕಾರ ದಾಹ ಮತ್ತು ಭೂಮಿ ದಾಹ ಮತ್ತು ಜಗದೇಕವೀರನಾಗಿ ಮೆರೆಯಬೇಕೆನ್ನುವ ರಕ್ತಪೀಪಾಸುಗಳನ್ನೇ ವಿಸ್ತರಣಾವಾದಿಗಳೆನ್ನಲು ಅಡ್ಡಿಯಿಲ್ಲವಷ್ಟೇ. ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ಅತ್ಯಂತ ವಿಸ್ತಾರವಾಗಿತ್ತು ಎಂದರೇನೇ, ಅದು ಎಷ್ಟೆಷ್ಟು ವಿಸ್ತಾರವಾಗುತ್ತಾ ಹೋಗುತ್ತಿತ್ತೋ ಅಷ್ಟಷ್ಟು ರಕ್ತ ಹರಿಸುತ್ತಾ, ದೋಚುತ್ತಾ, ಮಾನ ಪ್ರಾಣಗಳ ಹರಣ ಮಾಡುತ್ತಾ ಸಾಗುತ್ತಿರುತ್ತದೆ. ಅದನ್ನೇ ವಿಸ್ತಾರವಾದ ಎಂದರೇನು ಅಡ್ಡಿಯಿಲ್ಲ. ಇತಿಹಾಸದುದ್ದಕ್ಕೂ ಜಗತ್ತಿನಾದ್ಯಂತ ಇಂತಹ ವಿಸ್ತರಣಾವಾದಿಗಳು ಬಂದು ಹೋಗುತ್ತಲೇ ಇದ್ದಾರೆ. ಭಾರತದ ಪಕ್ಕದ ಚೀನಾ ಕೂಡಾ ತನ್ನ ವಿಸ್ತಾರವಾದದ ಬುದ್ದಿಯನ್ನು ಆಗಾಗ ತೋರಿಸುತ್ತಲೇ ಇದೆ. ಭಾರತದ ಒಂದೊಂದೇ ಹನಿ ರಕ್ತವನ್ನು ಗುಟುಕರಿಸುತ್ತಲೇ ಇದೆ. ವಿಶ್ವಗುರುವಿನ ಭ್ರಮೆಯಲ್ಲಿರುವ ಭಕ್ತರಿಗೆ ಮಾತ್ರ, ಭಾರತವು ತನ್ನ ಗತವೈಭವದ ಅಖಂಡ ಹಿಂದೂ ರಾಷ್ಟ ಮರುಕಳಿಸುತ್ತಿರುವ ಕನಸುಗಳು ಬೀಳುತ್ತಲೇ ಇವೆ.
ನೀನಾ ಇತಿಹಾಸ ಅಂಕಣದ ಮೊದಲ ಭಾಗವನ್ನೂ ಓದಿ: ಪ್ರಗತಿಪರರ ಮಕ್ಕಳ ವಿದೇಶ ಪ್ರಯಾಣವೂ… ಚಳುವಳಿಯ ಹುಡುಗರೂ…
ಜಗತ್ತಿಗೆ ಶಾಂತಿ ಮಂತ್ರವನ್ನು ಬೋಧಿಸಿದ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ನೆನೆಯುವ ಈದ್ ಮಿಲಾದ್ ಹಬ್ಬವನ್ನು ಇಡೀ ದೇಶವೇ ಮೊನ್ನೆಯ ದಿನ ಸಂಭ್ರಮದಿಂದ ಆಚರಿಸಿತು. ಹಾಡು ಕುಣಿತಗಳೊಡನೆ ಹೆಜ್ಜೆ ಹಾಕುತ್ತಾ, ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಾ, ಇಡೀ ದೇಶವೇ ಸಂಭ್ರಮದಿಂದ ನಡೆಯುತ್ತಿದ್ದಾಗ, ಶಿವಮೊಗ್ಗದ ಒಂದು ಏರಿಯಾದಲ್ಲಿ ಮಾತ್ರ ಹೆಜ್ಜೆಗಳು ತಾಳ ತಪ್ಪಿತ್ತು, ಸೌಹಾರ್ದತೆಯು ಅಪಸ್ವರ ತೆಗೆದಿತ್ತು. ಜಗಮಾನ್ಯರಾದ ಪ್ರವಾದಿಗಳ ಉದ್ದೇಶಕ್ಕೆ ಮಸಿ ಬಳಿಯುವ ಕೃತ್ಯಕ್ಕೆ ಸಾಕ್ಷಿಯಾಗಿ ಹೋಯಿತು.
“ಅನಾಥ ಮಕ್ಕಳ ಮುಂದೆ ನೀನು ನಿನ್ನ ಮಗುವನ್ನು ಮುದ್ದಿಸಬೇಡ” ಎಂದವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರು. “ಜಾತಿ ಧರ್ಮದ ಕಾರಣಕ್ಕೆ ನೀನು ಯಾರಲ್ಲಾದರು ಬೇಧ ಎಣಿಸುತ್ತೀಯಾ ಎಂದರೆ ಅದು ಕೊಲೆಯ ಅಪರಾಧಕ್ಕೆ ಸಮ” ಎಂದರವರು ಪ್ರವಾದಿ ಮಹಮ್ಮದ್ ಪೈಗಂಬರ್. “ನಿನ್ನ ಮುಂದೆ ಯಾರನ್ನಾದರೂ ಕೊಲ್ಲಲಾಗುತ್ತಿದೆಯೆಂದರೆ ಕೊನೆಯ ಪಕ್ಷ ನಿನ್ನ ಮಾತಿನಲ್ಲಾದರೂ ಆ ಕೊಲೆಯನ್ನು ನೀನು ತಡೆಯಲು ಪ್ರಯತ್ನ ಮಾಡದಿದ್ದರೆ ನೀನು ಆ ಪಾಪ ಕಾರ್ಯದಲ್ಲಿ ಬಾಗಿಯಾದಂತೆ” ಎಂದವರು ಪ್ರವಾದಿ ಮಹಮ್ಮದ್ ಪೈಗಂಬರ್. ಇಂತಹ ಮಹಾನ್, ಮನುಷ್ಯಪರ ಚಿಂತನೆಯ ಪ್ರವಾದಿಗಳ ಜನ್ಮ ದಿನಾಚರಣೆಯ ಸಂಭ್ರಮದಲ್ಲಿ ಪ್ರವಾದಿಗಳ ಸಂದೇಶಕ್ಕೂ ತನಗೂ ಯಾವ ಸಂಬಂಧವೇ ಇಲ್ಲದಂತೆ ಧರ್ಮಾಂಧನಾಗಿ ಮೆರೆದ, ತನ್ನ ಸ್ವಂತ ಸಹೋದರರು ಬಂಧುಗಳನ್ನು ಕೇವಲ ರಾಜ್ಯದ ಮೇಲಿನ ಆಸೆಗಾಗಿ ಕೊಂದು ಹಾಕಿದ, ಜನ್ಮ ಕೊಟ್ಟ ತಂದೆಯನ್ನೇ ಸಾಯುವವರೆಗೂ ಹಿಂಸಿಸಿದ ಯಕಶ್ಚಿತ್ ಒಬ್ಬ ವಿಸ್ತರಣಾವಾದಿ, ಭೂದಾಹಿ, ರಕ್ತಪಿಪಾಸು ಔರಂಗಜೇಬನ ಹೆಸರಲ್ಲಿ ಸ್ವಾಗತ ಕಮಾನು ಕಟ್ಟಿ, ಅಖಂಡ ಭಾರತದ ಸಾಮ್ರಾಟ ಔರಂಗಜೇಬ್ ಎನ್ನುವ ಉದ್ದಟತನವನ್ನು ಮೆರೆದು, ಪ್ರವಾದಿಗಳ ಜನ್ಮ ದಿನಾಚರಣೆ ಆಚರಿಸಲು ಹೋಗಿ ಪ್ರವಾದಿಗಳ ಉದ್ದೇಶವನ್ನೇ ಹಾಳು ಮಾಡಿದ ದುರುಳರ ಕೃತ್ಯವನ್ನು ಪೂಜ್ಯ ಪ್ರವಾದಿಗಳಾದಿಯಾಗಿ ಈ ನೆಲದ ಯಾವೊಬ್ಬ ಮುಸಲ್ಮಾನನೂ ಎಂದಿಗೂ ಕ್ಷಮಿಸಲಾರರು.
ಗಣೇಶ, ಆಂಜನೇಯ ಮತ್ತು ಶ್ರೀರಾಮನ ಉತ್ಸವಗಳಲ್ಲಿ ಮುಸಲ್ಮಾನರ ಮನೆಗಳಿಗೆ, ಅಂಗಡಿಗಳಿಗೆ, ಮಸೀದಿಗಳಿಗೆ ಕಲ್ಲು ತೂರುತ್ತಾ, ಅಶ್ಲೀಲ, ಅಸಭ್ಯ ಘೋಷಣೆಗಳನ್ನು ಕೂಗುತ್ತಾ, ಕೈಯಲ್ಲಿ ತ್ರಿಶೂಲ, ಕತ್ತಿ ಕಠಾರಿಗಳನ್ನು ಹಿಡಿದು, ಮುಸಲ್ಮಾನರ ವಿರುದ್ಧ ಘೋಷಣೆ ಕೂಗುತ್ತಾ ಹೋಗುವ ಸಂಘ ಪರಿವಾರಿಗಳು ಮತ್ತು ಸಂಘಪರಿವಾರಿಗಳ ಕೃತ್ಯವನ್ನು ಧರ್ಮ ಕಾರ್ಯವೆಂದು ಮೆರೆಸುತ್ತಿದ್ದ ಮಾನಗೇಡಿ ಮಾಧ್ಯಮಗಳು, ಮೊದಲು ತಮ್ಮ ಮೆದುಳನ್ನು ತೊಳೆದುಕೊಳ್ಳದೇ, ಶಿವಮೊಗ್ಗದ ಈ ಘಟನೆಯ ವಿರುದ್ದ ಗಂಟಲು ಹರಿದುಕೊಳ್ಳಲು ಯಾವ ನೈತಿಕ ಹಕ್ಕೂ ಇಲ್ಲ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ನಸುಗುನ್ನಿಗಳಿಂತಿದ್ದ ಮೇನ್‌ಸ್ಟ್ರೀಮ್ ಮಾಧ್ಯಮಗಳು, ಶಿವಮೊಗ್ಗದ ಸೌಹಾರ್ಧತೆಗೆ ಬೆಂಕಿ ಬಿದ್ದಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿವೆ.
ನರಹಂತಕ ಘೋಡ್ಸೆ, ನರಾಧಮ ಮನುವಾದದ ಸಮರ್ಥಕ ಗೋಳ್ವಾಲ್ಕರ್, ರಣಹೇಡಿ ಸಾವರ್ಕರ್‌ಗಳ ಆರಾಧಕರಿಗೂ ಈ ಘಟನೆಯನ್ನು ಖಂಡಿಸುವ ಯಾವ ಹಕ್ಕು ಅಧಿಕಾರಗಳೂ ಉಳಿದಿಲ್ಲ. ಮತ್ತು ಇದೇ ಸಮಯಕ್ಕೆ ಪೈಗಂಬರರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ಕಟೌಟುಗಳನ್ನು ಯಾಕೆ ಹಾಕಬೇಕಿತ್ತು ಎಂದು ಪ್ರಶ್ನಿಸುವ ಅತಿ ಬುದ್ಧಿಜೀವಿಗಳಿಗೆ ನಾನು ಹೇಳುವುದಿಷ್ಟು. ನೀವು ಔರಂಗಜೇಬನನ್ನೂ ಟಿಪ್ಪು ಸುಲ್ತಾನರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಕಿಲ್ಲ. ಟಿಪ್ಪು ಸುಲ್ತಾನ್ ಮದ್ಯಪಾನ ವಿರೋಧಿಯೂ, ಶೋಷಿತರಿಗೆ ಉದ್ಯೋಗ, ಭೂಮಿ ನೀಡಿದ, ಜೊತೆಗೆ ಜಾತಿವಾದಿ ರೋಗಿಷ್ಠರಿಂದ ರಕ್ಷಣೆಯನ್ನೂ ನೀಡಿದ್ದರು. ಪ್ರವಾದಿಗಳು ಹೇಳಿದ ಜೀವಪರ ನಿಲುವುಗಳನ್ನು ಸ್ವತಃ ಆಚರಣೆಗೆ ತಂದಿದ್ದ ಮಹಾನ್ ಪುಣ್ಯಾತ್ಮ ಟಿಪ್ಪು ಸುಲ್ತಾನ್. ಆದರೇ, ಶ್ರೀರಾಮ, ಆಂಜನೇಯ ಮತ್ತು ಗಣೇಶನ ಮೆರವಣಿಗೆಗಳಲ್ಲಿ ಸಾವರ್ಕರ್, ಘೋಡ್ಸೆಯಂತಹ ಪರಮ ಪಾಪಿಗಳ ಕಟೌಟುಗಳ ಮೆರವಣಿಗೆ ಹೊರಟಾಗ ನಿಮ್ಮ ಅತಿ ಬುದ್ದಿವಂತಿಕೆಗಳು ಕೇವಲ ಮಾತನಾಡುತ್ತವೆಯಷ್ಟೇ ಹೊರತು, ಜನಜಾಗೃತಿ ಮೂಡಿಸುವ ಕಾರ್ಯಾಚರಣೆಗೆ ಅಥವಾ ಕಾನೂನು ಹೋರಾಟಕ್ಕೆ ಇಳಿಯುವುದಿಲ್ಲ. ಮೊದಲು ನೀವೂ ಬದಲಾಗಿ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟವಾಗಿ ನಿಮಗೂ ಹೇಳಲು ಇಚ್ಚಿಸುತ್ತೇನೆ.
ಧನ್ಯವಾದಗಳು…
ಜೈ ಭೀಮ್.
ಕೋಮುಸೌಹಾರ್ದತೆ ಚಿರಾಯುವಾಗಲಿ…
[…] ನೀನಾ ಇತಿಹಾಸ? 2ನೇ ಭಾಗವನ್ನೂ ಓದಿ: ಔರಂಗಜೇಬ್ & Read Between The Line’s […]