ಅಗೋ ಅಲ್ಲಿ ಸೂರ್ಯ
ಚಕೋತದಂತೆ ಮೂಡುತಿರುವನು
ಬೆಳಕು ಬೆಳೆಯತೊಡಗಿದೆ ಮಾಟಗಾತಿಯಂತೆ.

ಬೆಳಕಿನ ಮಾಯೆ ತನ್ನ ಕೋಲನ್ನೂರುತ್ತಾ
ಕತ್ತಲಿದ್ದಲೆಲ್ಲ ತಿರುಗುತ್ತಿದ್ದಾಳೆ
ತಲೆಯ ಮೇಲಿನ ಲಾಂದ್ರವ ಹಿಡಿದು ಬಗ್ಗಿ ನೋಡುತ್ತಾಳೆ
ಕಣ್ಣುಜ್ಜಿ ನೋಡಿದರೂ ಬೆಳಕಿರುವಷ್ಟೇ ತೋರಿ
ಕೈಬಿಸುಟು ಧಗಧಗನೆ
ಹೊತ್ತಿ ಉರಿದಿದ್ದಾಳೆ.
ಲಾಂದ್ರದ ಬೆಳಕು ಬೆಳೆಯಬಹುದು ನಿಜ;
ಹಿಂದಣ ಬೆಳಕಲ್ಲ!
ಲಾಂದ್ರವು ಧಗ್ಗನೆ ಹೊತ್ತಿ ಉರಿಯುತ್ತ ಉರಿದುರಿದು
ಮೆಲ್ಲನೆ ಕಾವು ತಗ್ಗುತ್ತ
ಅಲ್ಲೇ ಅರಳಿ ಬಾಡಿದ ಮೊಗ್ಗಿನಂತಾಗಿದೆ.

ಕತ್ತಲೊಳು ನಿಂತು ಜನ
ಕೇಕೆ ಹೊಡೆಯುತ್ತಿದ್ದಾರೆ
ಚಂದ್ರ ಮೆಲ್ಲನೆ ಬಂದು
ನಗುತ್ತಾ ನಿಂತಿದ್ದಾನೆ.

‘ನಾಳೆ ಮುಂಜಾನೆ ಬಂದೇ ಬರುವೆ
ನನ್ನೊಡಲ ಕತ್ತಲೆಯಾಗಿ ಬೆಳೆದು
ಬಚ್ಚಿಟ್ಟು ಆಟವಾಡುವೆಯಾ ಮಗಳೇ?
ಈ ನೆಲವ ಗೆಯ್ದವರು ಯಾರು?
ಆ ಸ್ನಾನದ ಕೊಳಗಳು ಯಾರವು?
ಇಲ್ಲಿ ಯಾಕೆ ನದಿಗೆ ಅಣೆಕಟ್ಟು ಕಟ್ಟಲಾಗಿದೆ?
ಬೆಳಕಲ್ಲಿ ಕೆಲವರ ಕಂಡೆ; ಯಾರವರು?’

ಲಾಂದ್ರದ ಬೆಳಕು ಫಕ್ಕನೆ ಆರಿ
ಫುಸಕ್ಕನೆ ಜಾರಿ ಕತ್ತಲೆಯಲಿ ಬಿದ್ದಳು.
ಚಂದ್ರ ಗಹಗಹಿಸಿ ನಕ್ಕ.
ಸುತ್ತ ನೆರೆದ ನಕ್ಷತ್ರಗಳು ಕಿಲಕಿಲ ನಕ್ಕವು.

ಆಗ ಈ ಎಲ್ಲವ ನೋಡುತ್ತಾ ನಿಂತಿದ್ದ
ನಮ್ಮ ಕೇರಿಯ ಹೆಣ್ಣು ಮಗಳು ಕೈಯಲ್ಲಿ
ಚಂದ್ರನ ಚೂರೊಂದನ್ನು ಕನ್ನಡಿಯಾಗಿಸಿಕೊಂಡು
ತಲೆ ಬಾಚಿಕೊಳ್ಳುತ್ತಿದ್ದಳು.
ನಡೆದಿದ್ದನ್ನೆಲ್ಲ ನೋಡಿ
‘ಎಲಾಎಲಾ…ಹೀಗೆ ನಡೆಯುವುದುಂಟಾ?
ಮತ್ತಾರಿಗೂ ಹೀಗೆ ಕಾಣಿಸದಾ…’
ಎಂದವಳು ಅಂದುಕೊಳುವಾಗಲೇ
ನಾಲ್ಕು ದೀಪವಿಡಿದು ನಾಲ್ಕು ದಾರಿಗಳಿಂದಲೂ ಬಂದರು
ಯಾರೋ ನಾಲ್ವರು.
‘ಯಾರು ಯಾರವರು?’
‘ನಾವು ಕಣಕ್ಕೋ ಮಿಂಚಕ್ಕತಂಗ್ಯೇರು’
ಅಂತಂತ ಅಂತಂತ ಹಾರಿ ಬಂದು
ಅವಳ ಲಂಗದ ಮ್ಯಾಲೆ ಕುಳಿತವಲ್ಲ!
ಅವಳು ಕಿಲಕಿಲ ನಗುವಾಗ
ಅಪ್ಪ ಮಾದಾರ ರಂಗಪ್ಪ ‘ಆದ್ಯಾವಾಟ ಏನು ಮಗಳೆ?’
‘ಏನಿಲ್ಲಪ್ಪೋ, ಮಿಂಚುಹುಳುಗಳ ಜೊತೆ ಮಾತಾಡ್ತಿದ್ದೆ’
‘ಎಲ್ಲಿಯಾದರೂ ಉಂಟೆ ಅವು ಮಾತಾಡಿರೋದಾ?
ಯಾರು ಕಂಡವರೆ ಹೇಳು?’
ಮಿಂಚುಹುಳುಗಳು: ‘ನೋಡಿದೆಯಾ ಪಾರು
ನಾವು ಮಾತಾಡಿದ್ದು ಸುಳ್ಳುಸುಳ್ಳೆ?’

‘ಎಲೆಎಲಾ ಇದು ಅರ್ಥವಾಗದ ಪ್ರಶ್ನೆಯಾಯ್ತಲ್ಲ!’
ಮುಖವ ಅಂಗೈಯಾಗಿಸಿ ನೆಲಕ್ಕೂರಿ
ಆಲೋಚನೆಗೆ ಬಿದ್ದಾಗ ಇನ್ನೂ ಪ್ರಶ್ನೆಗಳು
ಬೀದಿದೀಪಗಳಂತೆ, ಕೆಂಪಗಿನ ಇದ್ದಿಲಿನಂತೆ
ಉರಿವತೊಡಗಿದವಲ್ಲ!

‘ಅಪ್ಪಾ ನಮ್ ಕಂಡ್ರೆ ಜನ ಯಾಕೆ ಮಾರು ದೂರ ಹೋಗ್ತಾರೆ?
ಯಾಕೆ ನಮಗೆ ಬೇರೆಯದೇ ಲೋಟದಲ್ಲಿ ನೀರು ಕೊಡ್ತಾರೆ?
ನಾವು ಅವರ ಮನೆಗೆ ಹೋಗೋದು ತಪ್ಪಾ?
ನಾನಿವತ್ತು ನಿಂಗೊಂದು ಸತ್ಯ ಹೇಳ್ತೀನಿ ಕೇಳಿಸ್ಕೋ
ನಾನೊಬ್ಬ ಮೇಲ್ಜಾತಿ ಹುಡುಗನ್ನ ಮದ್ವೆಯಾಗ್ತಾ ಇದೀನಿ
ಅದಕ್ಕೆ ಮೇಲಿನ ಪ್ರಶ್ನೆಗಳ ಕೇಳ್ದೆ
ತಪ್ಪು ತಿಳಿಬ್ಯಾಡಪ್ಪಾ…!’

ರಂಗಪ್ಪನ ಕಣ್ಣುಗಳಿಂದ ತಟತಟನೆ
ಜಾರಿದವು ಕಣ್ಣೀರು.

ಆಗಿನ್ನು ಲಾಂದ್ರ ಹೊತ್ತಿ ಬಂದ ಮಾಟಗಾತಿ
ಅಪ್ಪ-ಮಗಳ ಮೇಲೆ ಲಾಂದ್ರದ ಬೆಳಕು ಬಿಟ್ಟಳು
‘ಏನು ನಡೆಸಿದ್ದೀರಿಲ್ಲಿ?’ ಅಂದಳು.

ಆ ಹುಡುಗಿಯ ಕೋಪ
ಮಿಡಿನಾಗರದಂತೆ ಹೆಡೆಯಾಡುತ್ತಾ
‘ನಿಂದೇನೆ ಮಧ್ಯದಲ್ಲಿ?’ ಅಂದಳು.

ತಟಕ್ಕನೆ ಲಾಂದ್ರವ ಮುಂದೆ ಮುಂದೆ ಎಳೆಯತೊಡಗಿದ ಮುದುಕಿ:
‘ಯಪ್ಪಾ ಈಗ್ತಾನೆ ಈದ ನಾಯಿ ಥರ ಕಚ್ಚೋಕೆ ಬತ್ತವಲ್ಲೋ..!’
‘ನಮ್ಮನ್ನೇ ನಾಯಂತೀಯಾ?’
‘ಮಗಳೇ, ಅವರನ್ನ ಹಾಗನ್ನಬಾರದು
ತಪ್ಪಾಯ್ತು ಅಂತ ಕೆನ್ನೆ ಬಡ್ಕೋ..’
‘ಅಪ್ಪಾ, ಸರಿ-ತಪ್ಪು ಯಾವುದಪ್ಪ?

ಅವಳು ನಿಂತಲ್ಲಿ ಸುತ್ತುವರಿದ ಮಲ್ಲಿಗೆ ಬಳ್ಳಿಯೊಂದು
ಗೊಂಚಲುಗೊಂಚಲು ಮೊಗ್ಗ
ಫಕ್ಕನೆ ಅರಳಿಸಿ ಅವಳ ಗಮನ ಸೆಳೆಯಲು
ಘಮಲು ಸೂಸಿತು.
ಹುಸಿಕೋಪದಿ ಬಳ್ಳಿಯ ತಡವಿ
‘ವಸಿ ಸುಮ್ಕೆ ನಿಂತ್ಕಳಿ’ ಅಂದಳು.

ಆ ಮಾತು ಮಾಟಗಾತಿಗೆ ಕೇಳಿ:
‘ಕರೆದೆಯಾ ತಾಯಿ?’
‘ಹ್ಞೂಂ, ಕೂತ್ಕೋ ಬಾ ಇಲ್ಲಿ ಮೂಲೇಲಿ
ಬಾಡಿನೆಸರು ಕುದಿತೈತೆ ಒಲೆ ಮ್ಯಾಲೆ
ಅಪ್ಪ ನಿನ್ನ ಬೈಬ್ಯಾಡ ಅಂತ ಹೇಳವ್ನೆ..’
‘ನಿಮ್ಮಪ್ಪ ಧರ್ಮರಾಯ..!’
‘ಅಲ್ಲ, ಸರಿ-ತಪ್ಪು ಯಾವುದಂತೀನಿ?
ನಾವೆಲ್ಲ ಚಂದ್ರನಿಗೆ ಹುಟ್ಟಿದವರಾ?’
‘ಬೇಡ ಉಣ್ಣೋ ಹೊತ್ತಲಿ ಕ್ಯಾತೆ ತೆಗೀಬೇಡ’
‘ನಾವು ಮುಟ್ಟಿಸಿಕೊಳ್ಳದೋರಾ?’
‘ಮಗಳೇ ನೋಡು, ಗಿರಿಗಿರಿಗಿಟ್ಲೆ ತೆಂಗಿನ ಗರಿಯದ್ದು..’
‘ಅಪ್ಪಾ ನೀ ನಂಗೆ ಕಾಮನಬಿಲ್ಲು ತಂದುಕೊಟ್ಟರೂ ಬೇಡ’

ಲಾಂದ್ರದ ಬೆಳಕು ಎದ್ದು ನಿಂತಿತು.
‘ಅಯ್ಯಾ ನಾ ಹೊಂಟೆ…ಅಪ್ಪ-ಮಗಳ ಕಣಿಯಾಟ ಸಾಕು
ನಾನು ಇನ್ನೊಂದಿನ ನಿಲ್ತೇನಪ್ಪ…ನಾನೀಗ ಹೊಂಟೆ’

ಬೆಳಕು ದೂರ ಸಾಗಿ
ಅದೊಂದು ಹಾದಿಯಂತೆ ಕೊನೆಯಾಯಿತು.
ಗೌಗತ್ಲು ಬಲೆ ಬೀಸಿ ಎಸೆದಂತೆ
ಎಲ್ಲರ ಮೇಲೂ ಎರಗಿತು.

ಚಂದ್ರ ಮೇಲೆ ನಗುತ್ತಾನೆ
ಹುಸಿಕೋಪ ಹುಡುಗಿಗೆ.
‘ಹೇ ಪಾರು…’
ಆ ಮರದ ನೆರಳಿಗಾಚೆ ನಿಂತು ಕರೆಯುತ್ತಿದೆ ಜೀವ

ಇನ್ನರ್ಧ ಬೆಳದಿಂಗಳು ನೆಲಕ್ಕೆ ಬಿತ್ತು.

-ನಾಗತಿಹಳ್ಳಿರಮೇಶ

Leave a Reply

Your email address will not be published. Required fields are marked *