ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನವರಿ 16 ರಂದು ದೆಹಲಿಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಭೇಟಿಯ ಹಿಂದಿರಬಹುದಾದ ಪ್ರಮುಖ ಕಾರಣ ಏನಿರಬಹುದು ಎಂದು ಚರ್ಚೆಗಳು ನಡೆಯುತ್ತೀವೆ.
ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಅಥವಾ ಹಾಲಿ ಸಚಿವರ ಕಾರ್ಯವೈಖರಿ ಆಧಾರದ ಮೇಲೆ ಸಂಪುಟ ಪುನಾರಚನೆ ಮಾಡುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆ ಇದೆ. ಸಂಕ್ರಾಂತಿ ನಂತರ ಬದಲಾವಣೆಗಳಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಬಹಳ ದಿನಗಳಿಂದ ಬಾಕಿ ಉಳಿದಿರುವ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಪಟ್ಟಿಗೆ ಅಂತಿಮ ಮುದ್ರೆ ಒತ್ತಿಸಿಕೊಳ್ಳುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿರಬಹುದು. ಶಾಸಕರು ಮತ್ತು ಕಾರ್ಯಕರ್ತರ ಅಸಮಾಧಾನ ಶಮನಕ್ಕೆ ಇದು ಅನಿವಾರ್ಯವಾಗಿದೆ.
ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿ, ವಿರೋಧ ಪಕ್ಷಗಳ ಹೋರಾಟ ಎದುರಿಸುವ ತಂತ್ರಗಾರಿಕೆ ಮತ್ತು ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ನೀರಾವರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು, ಮೇಕೆದಾಟು ಯೋಜನೆ, ಮಹದಾಯಿ ಅಥವಾ ರಾಜ್ಯದ ಇತರ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಯೂ ಇರುತ್ತದೆ.
ಈ ಭೇಟಿಯು ಕೇವಲ ಆಡಳಿತಾತ್ಮಕವಾಗಿರದೆ, ಪಕ್ಷದ ಸಂಘಟನೆ ಮತ್ತು ಆಂತರಿಕ ಬದಲಾವಣೆಗಳ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಈ ಭೇಟಿ ನಡೆಯುತ್ತಿರುವುದರಿಂದ, ರಾಜ್ಯ ರಾಜಕಾರಣದಲ್ಲಿ ಹೊಸ ಬದಲಾವಣೆಗಳ ಮುನ್ಸೂಚನೆ ಇದಾಗಿದೆ ಎನ್ನಬಹುದು.
