ಚಿಕ್ಕಬಳ್ಳಾಪುರ: ಜೀರೋ ಇದ್ದವನನ್ನು ಹೀರೋ ಮಾಡಿ, ಕರ್ನಾಟಕದ ಉದ್ದಗಲಕ್ಕೂ ಪರಿಚಯವಾಗುವಂತೆ ಮಾಡಿದ ಮಾತೃಪಕ್ಷ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ತೋರುವ ಬದಲಿಗೆ ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿ ತನ್ನ ಯೋಗ್ಯತೆಯೇನು ಎಂಬುದನ್ನು ತೋರಿಸಿದ್ದಾನೆ.ಉಂಡಮನೆಗೆ ದ್ರೋಹಬಗೆದ ಈತನಿಗೆ ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆಯಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಕೆಂಡಕಾರಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ಜ.೨೩ರಂದು ನಡೆಯುವ ಪ್ರಜಾಧ್ವನಿ ಯಾತ್ರೆ ಸಮಾವೇಶದ ಅಂಗವಾಗಿ ನಡೆಸಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

೨೦೧೩ರಲ್ಲಿ ಸುಧಾಕರ್ ಅವರಿಗೆ ರಾಜಕಾರಣದ ಗಂಧಗಾಳಿ ಗೊತ್ತಿರಲಿಲ್ಲ. ಪರಮೇಶ್ವರ್ ದೇಶಪಾಂಡೆ ಕಾರಣವಾಗಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದಲ್ಲದೆ ಶಾಸಕರಾಗಿ ಆರಿಸಿ ಬರುವಂತೆ ಮಾಡಲಿಲ್ಲ ಎಂದಿದ್ದರೆ ಇವರು ಎಲ್ಲಿರುತ್ತಿದ್ದರು ಎಂಬುದನ್ನು ಅರಿತು ಮಾತನಾಡುವುದು ಕಲಿಯಬೇಕು ಎಂದು ಕುಟುಕಿದರು.
ರಾಜಕೀಯವಾಗಿ ಅನುಭವವೇ ಇಲ್ಲದ ಕಾಲದಲ್ಲಿ ಇಲ್ಲದೆ ಇರುವವರಿಗೆ ರಾಜಕೀಯ ಅವಕಾಶ ಕೊಟ್ಟವರಿಗೆ ನೀನು ಬಳಸಿರುವ ಮಾತು ಕ್ಷುಲ್ಲಕತನದ್ದು. ನಾನು ಕೇಳುತ್ತೇನೆ ರಾಜಕಾರಣಕ್ಕೆ ನಿಮ್ಮದು ಏನು ಕೊಡುಗೆ ? ಇರಲಿ ಅಧಿಕಾರ ಸಿಕ್ಕಿದೆ. ಒಳ್ಳೆಯ ಕೆಲಸ ಮಾಡು. ಉದ್ದಟತನದ ಮಾತುಗಳು ಬೇಡ ಎಂದು ವಾಗ್ದಾಳಿ ನಡೆಸಿದರು.

ಮಿಸ್ಟರ್ ಸುಧಾಕರ್ ದೇಶ ಮತ್ತು ದೇಶದ ಹಿತಕ್ಕಾಗಿ ನೆಹರು ಕುಟುಂಬ ಮಾಡಿರುವ ತ್ಯಾಗ ಬಲಿದಾನ ಯಾರೂ ಮಾಡಲು ಸಾಧ್ಯವಿಲ್ಲ.ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ಕೈಕಟ್ಟಿಕೊಂಡು ಅವರಿಗಾಗಿ ಕಾಯುತ್ತಿದ್ದ ದಿನಗಳನ್ನು ನೆನಪಿಸಿಕೋ. ಸರಕಾರದ ತೆರಿಗೆ ಹಣದಲ್ಲಿ ಉತ್ಸವ, ಮೋಜು ಮಸ್ತಿ ಮಾಡುತ್ತಾ ತೋರುತ್ತಿರುವ ದುರಹಂಕಾರದ ವರ್ತನೆಯನ್ನು ಚಿಕ್ಕಬಳ್ಳಾಪುರದ ಜನತೆ ನೋಡಿ ನೋಡಿ ಸಾಕಾಗಿದೆ. ಕ್ಷೇತ್ರದಲ್ಲಿ ನನಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಅವರಿವರಿಂದ ಹೊಗಳಿಸಿಕೊಂಡು ಬೀಗುತ್ತಿರುವ ನಿಮ್ಮಂತಹವರನ್ನು ಮತದಾರರು ಮನೆಗೆ ಕಳಿಸುವ ದಿನಗಳು ದೂರವಿಲ್ಲ.ಇಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಹೆದರಿಸುವ ಕಾರಣ ಇಲ್ಲಿರುವ ಪ್ರತಿಯೊಬ್ಬ ಮತದಾರರನೂ ನಿಮ್ಮ ಎದುರಾಳಿಯೇ. ಭ್ರಷ್ಟಾಚಾರ ಹೆಚ್ಚಾಗಿ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆ ಸಂದರ್ಭದ ನಾಟಕಗಳು ಗೊತ್ತಿವೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತಂದು ಜನರಿಗೆ ಉದ್ಯೋಗ ನೀಡಿದ್ದೀರಾ? ರೈತರಿಗೆ ನೀರಾವರಿ ಯೋಜನೆ ಮಾಡಿದ್ದೀರಾ? ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ನಾವು ಮಾಡಿರುವುದನ್ನು ನೀವು ಉದ್ಘಾಟನೆ ಮಾಡುವುದಲ್ಲ ಎಂದು ಟೀಕಾಪ್ರಹಾರ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಮತ್ತು ಬಿಜೆಪಿ ವಿರುದ್ಧದ ಗಾಳಿ ಬೀಸುತ್ತಿದೆ. ಪ್ರವಾಹದ ಸಂದರ್ಭದಲ್ಲಿ ರಾಜ್ಯಕ್ಕೆ ಬರದ ಪ್ರಧಾನಿ ಈಗ ಚುನಾವಣಾ ಸಮೀಪಿಸುವ ಹೊತ್ತಿನಲ್ಲಿ ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಬಿಜೆಪಿಯದ್ದು ಅವಕಾಶವಾದಿ ರಾಜಕಾರಣ ಎಂಬುದು ಜನತೆಗೆ ಗೊತ್ತಿದೆ ಎಂದು ಕಾಲೆಳೆದರು.

ವಚನ ಭ್ರಷ್ಟ ಪ್ರಧಾನಿ
ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನವಿರೋಧಿ ನೀತಿ,ದುರಾಡಳಿತ,ಭ್ರಷ್ಟಾಚಾರ,ಅವಕಾಶವಾದಿ ರಾಜಕಾರಣದ ಮುಖವಾಡವನ್ನು, ವಚನ ಭ್ರಷ್ಟ ಪ್ರಧಾನಿ ಬಗ್ಗೆ,ಇಂಚಿಂಚಾಗಿ ಜನರ ಮುಂದೆ ಅನಾವರಣ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು ಜನತೆ ಭಾರೀ ಬೆಂಬಲ ಸೂಚಿಸುತ್ತಿದ್ದಾರೆ. ಏಕೆಂದರೆ ನುಡಿದಂತೆ ನಡೆಯುವ ಮೂಲಕ ಕೊಟ್ಟ ಭರವಸೆಗಳನ್ನು ಕಾಲಮಿತಿಯಲ್ಲಿ ಈಡೇರಿಸಿದ ಕೀರ್ತಿ ನಮ್ಮ ಪಕ್ಷದ ಸಿದ್ಧರಾಮಯ್ಯ ಅವರಿಗಿದೆ. ಪ್ರಜಾಧ್ವನಿ ಮೂಲಕ ಮತ್ತೊಮ್ಮೆ ಜನತೆಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ರಾಜ್ಯದ ಉದ್ದಗಲಕ್ಕೂ ಸಂಚಾರ ಪ್ರಾರಂಭವಾಗಿದೆ. ಜ.೨೩ರಂದು ಚಿಕ್ಕಬಳ್ಳಾಪುರದ ಕೆ.ವಿ.ಕ್ಯಾಂಪಸ್ ಬಳಿಯ ಮೈದಾನದಲ್ಲಿ ‘ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವರು.ಜಿಲ್ಲೆಯಿಂದ ಹೆಚ್ಚಿನ ಮಂದಿ ಇದರಲ್ಲಿ ಭಾಗಿಯಾಗಿ ಸಮಾವೇಶದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಅಭ್ಯರ್ಥಿ; ಗೊಂದಲವಿಲ್ಲ’
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಮತ ಕೇಳುವುದು ವ್ಯಕ್ತಿಗಲ್ಲ, ಪಕ್ಷಕ್ಕೆ. ಪಕ್ಷದ ಸಿದ್ದಾಂತ, ನಾಯಕತ್ವಕ್ಕೆ ಬದ್ದವಾಗಿರುವವರೇ ಅಭ್ಯರ್ಥಿ ಆಗುತ್ತಾರೆ. ಪಕ್ಷ ಪ್ರಕಟಿಸುವವರೆಗೂ ಯಾರೂ ಅಭ್ಯರ್ಥಿ ಆಗುವುದಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಕಣಕ್ಕೆ ಇಳಿಸುತ್ತೇವೆ. ಮತದಾರರು ಮನಸ್ಸು ಮಾಡಿದರೆ ಎಷ್ಟೇ ಸಂಪನ್ಮೂಲ ಇದ್ದವರನ್ನೂ ಸೋಲಿಸಬಹುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಮುಖಂಡರಾದ ಯಲುವಳ್ಳಿ ರಮೇಶ್, ಲಾಯರ್ ನಾರಾಯಣ ಸ್ವಾಮಿ, ನಾರಾಯಣ ಸ್ವಾಮಿ, ಕಿಸಾನ್ ರಾಮಕೃಷ್ಣಪ್ಪ, ಗಂಗರೇಕಾಲುವೆ ನಾರಾಯಣಸ್ವಾಮಿ ಗೋಷ್ಠಿಯಲ್ಲಿ ಇದ್ದರು.
ಬಿಗ್‌ ಕನ್ನಡ ಪ್ರತಿನಿಧಿ, ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *