ಕಲಬುರಗಿ, ಜ.19: ನೃಪತುಂಗನ ನಾಡು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲೆಮಾರಿ ತಾಂಡಾ ನಿವಾಸಿಗಳಿಗೆ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಶಾಶ್ವತ ಸೂರಿನ ರೂಪದಲ್ಲಿ ಏಕಕಾಲದಲ್ಲಿ 52,072 ಜನರಿಗೆ ದಾಖಲೆಯ ಪ್ರಮಾಣದಲ್ಲಿ ಹಕ್ಕು ಪತ್ರ ವಿತರಿಸಿದರು.
ಮಳಖೇಡ್ ಹೊರವಲಯದ 150 ಎಕರೆ ಪ್ರದೇಶದಲ್ಲಿ ಕಂದಾಯ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ “ಅಲೆಮಾರಿ ಸೂರಿನಿಂದ ಸುಸ್ಥಿರ ಊರಿನೆಡೆಗೆ ಕಾರ್ಯಕ್ರಮ”ದಲ್ಲಿ ನಗಾರಿ ಬಾರಿಸುವುದರ ಜೊತೆಗೆ ರಿಮೋಟ್ ಬಟನ್ ಒತ್ತುವ ಮೂಲಕ ಏಕಕಾಲದಲ್ಲಿ 52 ಸಾವಿರ ಜನರಿಗೆ ಹಕ್ಕು ಪತ್ರವನ್ನು ವಿತರಿಸಲಾಯಿತು. ನಂತರ ಪ್ರಧಾನಿಗಳು ಸಾಂಕೇತಿಕವಾಗಿ 5 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.
ಜನರತ್ತ ಕೈ ಬೀಸುತ್ತಲೆ ವೇದಿಕೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಂಬಾಣಿ ಸಮುದಾಯದ ಗೋರ ಬಂಜಾರಾ ಶಾಲು ಹಾಕಿ ಸ್ವಾಗತ ಕೋರಿದರು. ಕಂದಾಯ ಸಚಿವ ಆರ್.ಅಶೋಕ ಅವರು 12ನೇ ಶತಮಾನದಲ್ಲಿಯೇ ವಿಶ್ವಕ್ಕೆ ಸಂಸತ್ತು ಪರಿಚಯಿಸಿದ ಈ ನೆಲದ ಪ್ರತಿರೂಪವಾಗಿ ಅನುಭವ ಮಂಟಪದಲ್ಲಿನ ಬಸವಾದಿ ಶರಣರಾದ ಅಲ್ಲಮಪ್ರಭು, ಮಾತೆ ಅಕ್ಕಮಹಾದೇವಿ ಅವರಿದ್ದ ಪೋಟ್ರ್ರೇಟ್ ನೀಡಿ ಪ್ರಧಾನಿ ಅವರನ್ನು ಸತ್ಕರಿಸಿದರು.
ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾಗಿ ರಾಜ್ಯದಾದ್ಯಂತ ಲಂಬಾಣಿ ತಾಂಡಾ, ಹಟ್ಟಿ, ಆಡಿ, ಗೊಲ್ಲರಹಟ್ಟಿ, ವಡ್ಡರ ಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ದೃಷ್ಠಿಯಿಂದ ಇಂದಿಲ್ಲಿ ಕಲಬುರಗಿ-27,267, ಬೀದರ-7,500, ರಾಯಚೂರು-3,500, ಯಾದಗಿರಿ-11,200 ಹಾಗೂ ವಿಜಯಪುರ-2,605 ಸೇರಿದಂತೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಂಡ ಐದು ಜಿಲ್ಲೆಗಳ 342 ಕಂದಾಯ ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಯಿತು.
ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಈ ಐದು ಜಿಲ್ಲೆಗಳಲ್ಲಿ 772 ಗ್ರಾಮಗಳನ್ನು ಗುರುತಿಸಿದ್ದು, ಇದರಲ್ಲಿ 604 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಆರಂಭಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಈ ಪೈಕಿ ಅಂತಿಮ ಅಧಿಸೂಚನೆ ಹೊರಬಿದ್ದ 342 ಗ್ರಾಮಗಳ 52,072 ಜನರಿಗೆ ಹಕ್ಕು ಪತ್ರ ನೀಡಲಾಯಿತು.
ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಯಿಂದ ಮುಂದೆ ಈ ಗ್ರಾಮಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಳಪಟ್ಟು ಸಹಜವಾಗಿ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್, ಶಿಕ್ಷಣ, ಸಾರಿಗೆ ವ್ಯವಸ್ಥೆ ಹೀಗೆ ಅನೇಕ ಮೂಲಸೌಕರ್ಯ ಸೌಲಭ್ಯ ಲಭ್ಯವಾಗಲಿದೆ. ಶತಮಾನದಿಂದ ಸೂರು ವಂಚಿತರಾಗಿ ಅಲೆಮಾರಿಯಾಗಿ ಬದುಕು ಸಾಗಿಸುತ್ತಿದ್ದ ಸಮುದಾಯಕ್ಕೆ ರಾಜ್ಯ ಸರ್ಕಾರ ಈ ಮೂಲಕ ಶಾಶ್ವತ ಸೂರು ಕಲ್ಪಿಸುವ ಅವರ ಬದುಕಿಗೆ ಆಶ್ರಯವಾಗಿದೆ.
ಮಳಖೇಡದ ಕಾರ್ಯಕ್ರಮ 5 ಜಿಲ್ಲೆಗಳ ಫಲಾನುಭವಿಗಳನ್ನು ಕರೆತರಲು 2,500ಕ್ಕೂ ಹೆಚ್ಚಿನ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ರಾಜ್ಯ ಹೆದ್ದಾರಿ-10ಕ್ಕೆ ಹತ್ತಿಕೊಂಡಂತೆ ಊಟದ ವ್ಯವಸ್ಥೆ ಮಾಡಲಾಗಿತ್ತು. 200 ಕೌಂಟರ್ ತೆರೆದಿದ್ದರಿಂದ ಸಾರ್ವಜನಿಕರು, ಫಲಾನುಭವಿಗಳ ಊಟಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಕಲಬುರಗಿ-ಸೇಡಂ ರಸ್ತೆ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಿತು. ಎಲ್ಲಿಯೂ ಟ್ರಾಫಿಕ್ ಜನದಟ್ಟಣೆಯ ಬಿಸಿ ಕಾಣಲಿಲ್ಲ. ಎಲ್ಲೆಡೆ ಭದ್ರತೆಗೆ ಖಾಕಿ ಸರ್ಪಗಾವಲು ಹಾಕಲಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರದ ರಾಸಾಯನಿಕ, ರಸಗೊಬ್ಬರ ಹಾಗೂ ಹೊಸ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಹಾಗೂ ಬೀದರ ಸಂಸದ ಭಗವಂತ ಖೂಬಾ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ಆರ್. ನಿರಾಣಿ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆ.ಕೆ.ಆರ್.ಟಿ.ಸಿ ಮತ್ತು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಫಲಾನುಭವಿಗಳು, ಸಾರ್ವಜನಿಕರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಂದಾಯ ಸಚಿವ ಆರ್.ಅಶೋಕ ಸ್ವಾಗತಿಸಿದರು.

ಇಮಾಮ್‌ ಗೋಡೇಕರ್‌, ಪ್ರತಿನಿಧಿ

Leave a Reply

Your email address will not be published. Required fields are marked *