ನಮ್ಮಲ್ಲಿ ಈ ಮಂಗಳಮುಖಿಯರು ಎಂದರೆ ಚಕ್ಕಾ, ಕೋಜಾ,ಹಿಜಡಾ,ನಪುಂಸಕ, ಅದೂ ಅಲ್ಲ, ಇದೂ ಅಲ್ಲ, ಎನ್ನುವ ತಾತ್ಸಾರದ ಭಾವನೆ ಇರುತ್ತದೆ. ಅವರು ಈ ರೀತಿ ಹುಟ್ಟಿರುವುದು ತಪ್ಪಾ? ಅಥವಾ ಅವರು ಈ ರೀತಿ ಪರಿವರ್ತನೆಯಾಗುವುದು ತಪ್ಪಾ? ಯಾವುದು ತಪ್ಪು ಎಂದು ಹೇಳುವುದು ತುಂಬಾ ಕಷ್ಟವಾಗುತ್ತದೆ.
ಈ ಮಂಗಳಮುಖಿಯರು ಸಾಮಾನ್ಯರಂತೆ ಸಹಜ ಜೀವನ ನಡೆಸಲು ನಾವೇ ಅವಕಾಶ ಮಾಡಿಕೊಡುವುದಿಲ್ಲವೆಂದು ನನಗನ್ನಿಸುತ್ತದೆ. ಏಕೆಂದರೆ ಅವರ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ದುಡ್ಡಿನ ಅವಶ್ಯಕತೆಯಿರುತ್ತದೆ, ದುಡ್ಡು ಬೇಕೆಂದರೆ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡಲು ಮನಸ್ಸಿದ್ದರೂ ಅವರಿಗೆ ಯಾರು ತಾನೇ ಕೆಲಸ ಕೊಡುತ್ತಾರೆ. ಯಾರಿಗೂ ಮಂಗಳಮುಖಿಯರಿಗೆ ಕೆಲಸ ಕೊಡುವ ಉದಾರ ಮನಸ್ಸು ಇರುವುದಿಲ್ಲ.
ಅಂಗಡಿಗಳಿಗೆ ಇಲ್ಲಾ ಹೋಟೆಲುಗಳಿಗೆ ಕೆಲಸ ಕೇಳಲು ಹೋದರೆ ಹೇ ಇಲ್ಲ ಹೋಗು, ನೀನು ಮಾಡುವಂತ ಕೆಲಸ ನಮ್ಮಲ್ಲಿಲ್ಲ, ನೀವು ಏನು ಕೆಲಸಾ ಮಾಡ್ತೀರಾ ಎಂದು ಹಿಯಾಳಿಸಿ ಬೈದು ಕಳುಹಿಸುತ್ತಾರೆ, ಮತ್ತೆ ಕೆಲವರು ನಿನ್ನಂತವರು ಮಾಡುವ ಅಡುಗೆಯನ್ನು ಯಾರು ತಿನ್ನುತ್ತಾರೆ ಎಂದೇಳಿ ಕಳಿಸುತ್ತಾರೆ. ಮತ್ತೆ ಕೆಲವು ಕಡೆ ಅಂಗಡಿಗಳ ಮುಂದೆ ಹೋದರೆ ಸಾಕು 10 ರೂಗಳನ್ನು ಕೊಟ್ಟು ಕಳಿಸುತ್ತಾರೆ.
ಹೀಗೆ ಅವರಿಗೆ ದುಡಿಯಲು ಕೆಲಸ ಕೊಡದೆ, ನೆಮ್ಮದಿಯಾಗಿರಲು ನೆಲೆ ಕೊಡದೆ, ತ್ರಿಶಂಕು ರೀತಿಯಲ್ಲಿ ಅಲೆದಾಡುವ ಹಾಗೆ ಮಾಡುವುದೆ ನಾವು.ಅವರಿಗೆ ಅಗತ್ಯವಿರುವ ಕೆಲಸವನ್ನು ಕೊಟ್ಟು ಅವರು ಇಷ್ಟಪಡುವ ಹಾಗೆ ಸಾಮಾನ್ಯ ಜನರಂತೆ ಬದುಕಲು ಅವಕಾಶ ನೀಡಿದ್ದರೆ ಅವರ ಜೀವನವೂ ಎಲ್ಲರಂತೆ ಹಸನಾಗಿ ಅವರೂ ಎಲ್ಲರಂತೆ ಒಳ್ಳೇಯ ಜೀವನ ನಡೆಸುತ್ತಿದ್ದರು.
ನಾವು ಮೊದಲು ಅವರನ್ನು ನೋಡುವ ರೀತಿಯನ್ನು ಬದಲಿಸಿಕೊಂಡು ಅವರ ಕೌಶಲ್ಯಕ್ಕೆ ತಕ್ಕಂತೆ ಕೆಲಸವನ್ನು ನೀಡಿ ಅವರನ್ನು ಪ್ರೋತ್ಸಾಹಿಸಿದ್ದರೆ ಅವರು ಗೌರವಯುತವಾಗಿ ಬದುಕುತ್ತಿದ್ದರು ಆದರೆ ನಾವು ಅವರಿಗೆ ಆ ಅವಕಾಶವನ್ನೇ ಕೊಡುವುದಿಲ್ಲ .
ಈ ರೀತಿ ಅವಮಾನಕ್ಕೊಳಗಾಗಿ ಎಲ್ಲರ ಹತ್ತಿರ ತೂ, ಛೀ, ಅನಿಸಿಕೊಳ್ಳುವುದನ್ನು ಸಹಿಸದ ಅವರು ಬಸ್ಸ್ಟಾಂಡ್, ರೈಲ್ವೆ ಸ್ಟೇಷನ್, ರೋಡುಗಳಲ್ಲಿ, ಇನ್ನಿತರ ಸ್ಥಳಗಳಲ್ಲಿ ಗಾಡಿಗಳಲ್ಲಿ ಹೋಗ ಬರುವವರನ್ನು ತಡೆದು ಚಪ್ಪಾಳೆ ತಟ್ಟಿ ಅಣ್ಣಾ ಕೊಡಿ, ಅಕ್ಕಾ ಕೊಡಿ , ಭಿಕ್ಷೆ ಬೇಡಿ ತಮ್ಮ ಹೊಟ್ಟೆಪಾಡನ್ನು ಪಡುತ್ತಿರುತ್ತಾರೆ.
ನಮ್ಮ ಸಮಾಜದಲ್ಲಿ ಅವರೂ ನಮ್ಮಂತೆಯೇ ಮನುಷ್ಯರು, ಅವರಿಗೂ ನಮ್ಮಂತೆಯೇ ಗೌರವಯುತವಾಗಿ ಬದುಕುವ ಹಕ್ಕಿದೆ ಎಂದು ಮನುಷ್ಯತ್ವದಿಂದ ಅವರನ್ನು ನೋಡಿದ್ದರೆ ಪಾಪ ಅವರಿಗೆ ಈ ರೀತಿಯ ಜೀವನ ನಡೆಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಅವರ ಈ ಪರಿಸ್ಥಿತಿಗೆ ಪ್ರತ್ಯಕ್ಷವಾಗಿ, ಅಥವಾ ಪರೋಕ್ಷವಾಗಿ ನಾವೇ ಕಾರಣಕರ್ತರಾಗಿದ್ದೇವೆ ಎಂಬುದಂತೂ ಸುಳ್ಳಲ್ಲ.
ಕಾಲ ಬದಲಾದಂತೆಲ್ಲ ಜನರಲ್ಲಿಯೂ ಕೆಲವು ವದಲಾವಣೆಗಳು ಕೂಡಾ ಆಗಿವೆ. ಅವರನ್ನು ಚಕ್ಕಾ, ಕೋಜಾ,ಹಿಜಡಾ, ನಪುಂಸಕ, ಎಂದು ಕರೆಯುತ್ತಿದ್ದ ಜನರು ಅವರನ್ನು ಮಂಗಳಮುಖಿಯರು, ಕಿನ್ನರರು ಎಂದು ಹೇಳುತ್ತಿದ್ದಾರೆ. ಅವರತ್ರ ಆಶೀರ್ವಾದ ಮಾಡಿಸಿಕೊಂಡರೆ ಒಳ್ಳೆಯದಾಗುತ್ತದೆ ಅವರಿಂದ ಶಾಪ ಹಾಕಿಸಿಕೊಂಡರೆ ಕೆಟ್ಟದಾಗುತ್ತದೆ ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಆಗಿದೆ.
ಮಂಗಳಮುಖಿಯರನ್ನು ಅವರೂ ನಮ್ಮಂತೆ ಜೀವನ ನಡೆಸುವ ಹಕ್ಕಿದೆ, ಅವರೂ ನಮ್ಮಂತೆಯೇ ಮನಷ್ಯರು ಎಂದು ಅವರ ಜೊತೆ ಪ್ರೀತಿಯಿಂದ ಮಾತನಾಡಿ. ಅವರ ಕುಶಲೋಪಚರಿ ವಿಚಾರಿಸಿ ನೋಡಿ ಆಗ ಅವರು ಓಹ್ ಇವರು ತುಂಬಾ ಒಳ್ಳೆಯವರು ನಮ್ಮನ್ನೂ ಮನಷ್ಯರಂತೆ ನೋಡುತ್ತಿದ್ದಾರೆ ಎಂದು ಅವರ ಮನಸ್ಸಲ್ಲಿ ನಿಮಗೆ ಒಳ್ಳೆಯ ಸ್ಥಾನವನ್ನೆ ಕೊಟ್ಟಿರುತ್ತಾರೆ. ಮತ್ತು ಅವರ ಜೀವನದಲ್ಲಿ ಆದಂತಹ ಘಟನೆಗಳನ್ನು ಆಪ್ತರ ಜೊತೆ ಹೇಳಿಕೊಳ್ಳುವ ಹಾಗೆ ಹೇಳೊಕೊಂಡು ಕಣ್ಣಿರಾಕುತ್ತಾರೆ.
ನೋಡಿದ್ರಲ್ಲಾ ಅವರಿಗೆ ಪ್ರೀತಿಯನ್ನು ನೀಡಿದರೆ ಅವರು ವಾಪಸ್ಸು ಬೆಟ್ಟದಷ್ಟೂ ಪ್ರೀತಿಯನ್ನ ನೀಡುತ್ತಾರೆ. ಒಮ್ಮೆ ಅವರ ಮಾತುಗಳಿಗೆ ಕಿವಿಯಾಗಿ ನೋಡಿ. ಅವರ ಆನಂದಕ್ಕೆ ಪಾರವೇ ಇರುವುದಿಲ್ಲ.