ಬೆಂಗಳೂರು: ಮುಡಾ ಹಗರಣದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಕುಟುಂಬದ ಪಾತ್ರವಿಲ್ಲವೆಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆಯೇ ಎಂದು ಮುಡಾ ನೀವೇಶನದ ಪ್ರತಿಯನ್ನು ತಮ್ಮ  X ಖಾತೆಯಲ್ಲಿ ಹಾಕಿ ಸಿದ್ದರಾಮಯ್ಯನವರ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನೀವು ಸ್ವಯಂಘೋಷಿತ ವಕೀಲರಲ್ಲವೇ? ಇಲ್ಲಿರುವ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ಕಟುವಾಗಿ ಟೀಕಿಸಿರುವ ಇವರು 50:50ರ ಅನುಪಾತದಲ್ಲಿಯೇ ಮೂಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ಒತ್ತಾಯ ಮಾಡಿದ್ದಾರೆ. ಅರ್ಜಿದಾರರಾದ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ. ಇದು ಮೂಡಾ ದಾಖಲೆಯಲ್ಲಿರುವ ಒಕ್ಕಣೆ. ಇದಕ್ಕೆ ತಾವು ಏನಂತೀರಿ? ಇದು ತಮ್ಮ ಪ್ರಕಾರ ಟಿಪ್ಪಣಿಯೋ..? ಒಕ್ಕಣೆಯೋ..? ಅಥವಾ ಅಪ್ಪಣೆಯೋ..? ಎಂದು ಅವರು ಕಿಡಿಕಾರಿದ್ದಾರೆ.

ಸೂಪರ್ ಸಿಎಂ ಅವರೇ ಒತ್ತಾಯಿಸಿರುತ್ತಾರೆ ಎಂದರೆ ಮೂಡಾ ಅಧಿಕಾರಿಗಳು ಇನ್ನೇನು ಮಾಡಿಯಾರು? ಆಗ ತಾವು ರಾಜ್ಯದಲ್ಲಿ ಏನಾಗಿದ್ರಿ? ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ರಿ. ಈಗ ಹೇಳಿ ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ? ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ..? ಎಂದು ವ್ಯಂಗ್ಯ ಮಾಡಿದ್ದಾರೆ.

Leave a Reply

Your email address will not be published. Required fields are marked *