ಮುಂದುವರೆದ ಭಾಗ…
ಅಹಿಂಸಾವಾದಿ ಗಾಂಧಿ!
ದಕ್ಷಿಣ ಆಫ್ರಿಕಾದ ಕಿಂಬರ್ಲೆಯಲ್ಲಿ 1870ರಲ್ಲಿ ಹಾಗು ವಿಟ್ವಾಟ್ರ್ಸರ್ಯಾಂಡ್ರನಲ್ಲಿ 1886ರಲ್ಲಿ ವಜ್ರದ ಗಣಿ ಪತ್ತೆಯಾದ ಮೇಲೆ ಅದರ ಮಾಲಿಕತ್ವಕ್ಕಾಗಿ ಬ್ರಿಟಿಷ್ ಮತ್ತು ಡಚ್ ವಸಾಹತುಗಾರರ ನಡುವೆ ಯುದ್ಧವು ಪ್ರಾರಂಭವಾಯಿತು. ಆ ಯುದ್ದವನ್ನು ಆಂಗ್ಲೋ-ಬೋಯ್ರ್ ಯುದ್ಧವೆಂದು ಕರೆಯುತ್ತಾರೆ. ಜೊತೆಗೆ ಅದನ್ನು ಸೌತ್ ಆಫ್ರಿಕನ್ ವಾರ್ ಎಂತಲೂ ಹಾಗು ವೈಟ್ ಮ್ಯಾನ್ಸ್ ವಾರ್ ಎಂದು ಕೂಡ ಕರೆಯಲಾಗುತ್ತದೆ. ಸಾವಿರಾರು ಕರಿಯ ಆಫ್ರಿಕನ್ ಹಾಗೂ ಭಾರತೀಯರನ್ನು ಎರಡೂ ಸೈನ್ಯಗಳ ಪರವಾಗಿ ಹೋರಾಡಲು ಬಲವಂತವಾಗಿ ತಮ್ಮ ಸೈನ್ಯಗಳಿಗೆ ಸೇರಿಸಿಕೊಳ್ಳಲಾಗುತಿತ್ತು. ಸೈನ್ಯ ಸೇರಿದ್ದ ಭಾರತೀಯರಿಗೆ ಯಾವುದೇ ಆಯುಧಗಳನ್ನು ನೀಡದೆ ಅವರನ್ನು ಸಹಾಯಕ ಕೆಲಸಕ್ಕಾಗಿ ಹಾಗೂ ಗಾಯಗೊಂಡವರನ್ನು ಅಥವಾ ಮೃತರನ್ನು ಹೊರುವ ಕೆಲಸಕ್ಕೆ ಬಳಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಅಹಿಂಸವಾದಿ ಗಾಂಧಿಯವರು “ನಾವು ಬ್ರಿಟಿಷರ ಅಧೀನದಲ್ಲಿರುವ ಕಾರಣಕ್ಕಾಗಿ ನಾವು ಅವರ ಪ್ರಜೆಗಳು, ಹಾಗಾಗಿ ಬ್ರಿಟಿಷರ ಪರ ಯುದ್ಧ ಮಾಡುವುದು ನಮ್ಮ ಆದ್ಯ ಕರ್ತವ್ಯವೆಂದು”, ಅವರು ಸ್ವಯಂ ಪ್ರೇರಿತರಾಗಿ ಬ್ರಿಟಿಷ್ ಆರ್ಮ್ಡ್ ಕಾರ್ಪ್ಸನಲ್ಲಿ ಸೇವೆ ಸಲ್ಲಿಸಲು ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೆ. ಈ ಯುದ್ಧವು ಅತ್ಯಂತ ಘೋರ ಯುದ್ಧವಾಗಿದ್ದು, ಸಾವಿರಾರು ಎಕರೆ ಬೋಯ್ರ್ ಗ್ವೆರಿಲ್ಲಾರ ತೋಟಗಳನ್ನು ನಾಶ ಮಾಡಲಾಯಿತು. ಜೊತೆಗೆ ಸಾವಿರಾರು ಬೋಯ್ರ್ ನಾಗರಿಕರ ಅದರಲ್ಲೂ ಅತಿಹೆಚ್ಚು ಮಹಿಳೆ ಮತ್ತು ಮಕ್ಕಳನ್ನು ಹತ್ಯೆ ಮಾಡಲಾಯಿತು. ಸಾವಿರಾರು ಜನರನ್ನು ಕಾನ್ಸಂಟ್ರೇಶನ್ ಶಿಬಿರಗಳಲ್ಲಿ ಕೂಡಿ ಹಾಕಲಾಯಿತು. ಇದು ಹಿಟ್ಲರನ ಕಾನ್ಸಂಟ್ರೇಶನ್ ಶಿಬಿರಗಳಿಗಿಂತ ಘೋರವಾಗಿದ್ದವು.
ಆದರೂ ಅಹಿಂಸವಾದಿ ಗಾಂಧಿಯವರಿಗೆ ಇದ್ಯಾವುದು ಹಿಂಸೆ ಅನಿಸಲಿಲ್ಲ. ಬದಲಾಗಿ ಯುದ್ಧದ ನಂತರ ಬ್ರಿಟಿಷ್ ರಾಣಿಯು ತನ್ನ ಸೈನಿಕರಿಗೆ ಚಾಕೊಲೇಟ್ ಬಾರ್ ಗಳನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಘೋಷಿಸಿದಾಗ, ಗಾಂಧಿ ಮಹಾತ್ಮರು “ಅವುಗಳನ್ನು ತಮಗೂ ಹಾಗು ತಮ್ಮ ಜೊತೆ ನಾಯಕತ್ವ ವಹಿಸಿದ ಇತರ ನಾಯಕರಿಗೆ ಕೊಟ್ಟರೆ ನಮಗೂ ಬಹಳ ಸಂತೋಷವಾಗುತ್ತದೆ ಹಾಗು ನಾವು ಅದನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತೇವೆ” ಎಂದು ಹೇಳುತ್ತಾರೆ. ಪಾಪ ಕೊನೆಗೂ ಬ್ರಿಟಿಷರು ಅವರ ಬೇಡಿಕೆಯನ್ನು ತಿರಸ್ಕರಿಸುತ್ತಾರೆ ಬಿಡಿ! ನಂತರದಲ್ಲಿ ಒಪ್ಪಂದದ ಮೂಲಕ ಯುದ್ದವು ಕೊನೆಗೊಂಡಾಗ ಕರಿಯರಿಗೂ ಹಾಗು ಭಾರತೀಯರಿಗು ಒಂದು ಸಣ್ಣ ವಜ್ರದ ತುಂಡನ್ನು ನೀಡದೆ ಬಿಳಿಯರು ತಮ್ಮ ತಮ್ಮಲ್ಲೇ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.
ಬ್ರಿಟಿಷ್ ಮತ್ತು ದಕ್ಷಿಣ ಆಫ್ರಿಕಾದ ಝುಲು ಜನಾಂಗದ ನಡುವೆ ಮೊದಲಿಂದಲೂ ದ್ವೇಷವಿತ್ತು. 1879ರಲ್ಲಿ ಝುಲು ಜನಾಂಗವು ಬ್ರಿಟಿಷ್ ಸೈನ್ಯವನ್ನು ಯುದ್ಧದಲ್ಲಿ ಧೂಳಿಪಟ ಮಾಡಿತ್ತು. ಕಾಲಾನಂತರದಲ್ಲಿ ಬ್ರಿಟಿಷರ ಆಧುನಿಕ ಶಸ್ತ್ರಾಸ್ತ್ರಗಳ ಮುಂದೆ ನಿಲ್ಲಲಾಗದೆ ಸೋಲನ್ನು ಅನುಭವಿಸ ಬೇಕಾಯ್ತು. ನಂತರ ಝುಲುರ ಜಮೀನುಗಳನ್ನು ಕಸಿದುಕೊಂಡ ಬ್ರಿಟಿಷರು ಅವರನ್ನು ನೆಲವಿಲ್ಲದಂತೆ ಮಾಡಿ, ಅವರನ್ನು ಅದೇ ಜಮೀನುಗಳಲ್ಲಿ ಕೆಲಸ ಮಾಡಲು ಒತ್ತಾಯಿಸಿದಾಗ ಝುಲು ಸಮುದಾಯವು ಅದನ್ನು ಧಿಕ್ಕರಿಸಿ ನಿಲ್ಲುತ್ತಾರೆ. ಹಾಗಾಗಿಯೇ ಬ್ರಿಟಿಷರು ಅವರ ಜಮೀನುಗಳಲ್ಲಿ ದುಡಿಯಲು ಭಾರತೀಯರನ್ನು ಆಳುಗಳಾಗಿ ದುಡಿಸಿಕೊಳ್ಳಲು ಭಾರತದಿಂದ ಕರೆದುಕೊಂಡು ಹೋಗುತ್ತಾರೆ. ಒಂದಿಷ್ಟು ವರ್ಷಗಳ ನಂತರ ಮತ್ತೆ 1906ರಲ್ಲಿ ಅದೇ ದಕ್ಷಿಣ ಆಫ್ರಿಕಾದ ಝುಲು ಜನಾಂಗದ ಮೇಲೆ ಬ್ರಿಟಿಷರು ಒಂದು ಪೌಂಡು ಚುನಾವಣಾ ತೆರಿಗೆಯನ್ನು ವಿಧಿಸಿದಾಗ, ಆ ಜನಾಂಗದ ಮುಖ್ಯಸ್ಥ ಬಂಬಾತ ಕಾಮನ್ಕಿಝಾ ಬ್ರಿಟಿಷರ ವಿರುದ್ಧ ದಂಗೆ ಏಳುತ್ತಾರೆ. ಬ್ರಿಟಿಷರ ಆಧುನಿಕ ಶಸ್ತ್ರಾಸ್ತ್ರಗಳ ವಿರುದ್ಧ ಈಟಿ ಮತ್ತು ಹಸುವಿನ ಚರ್ಮದ ಗುರಾಣಿಗಳೊಂದಿಗೆ ಝುಲು ಜನಾಂಗವು ದಂಗೆಗೆ ಇಳಿದಿರುತ್ತೆ. ಇಂತಹ ಸಮಯದಲ್ಲಿ ಗಾಂಧಿಯವರು ದಿನಾಂಕ 14.04.1906ರಂದು Indian Opinion ಎಂಬ ಪತ್ರಿಕೆಯಲ್ಲಿ “We have already declared in the English colums of this journal that the Indian community is prepared to play its part. We believe what we did during Boer War should also be done now” ಅಂದರೆ, “ಭಾರತೀಯ ಸಮುದಾಯವು ತನ್ನ ಪಾತ್ರವನ್ನು ನಿರ್ವಹಿಸಲು ಸಿದ್ಧವಾಗಿದೆ ಎಂದು ನಾವು ಈಗಾಗಲೇ ಈ ಜರ್ನಲ್‌ನ ಇಂಗ್ಲಿಷ್ ಅಂಕಣಗಳಲ್ಲಿ ಘೋಷಿಸಿದ್ದೇವೆ. ಬೋಯರ್ ಯುದ್ಧದ ಸಮಯದಲ್ಲಿ ನಾವು ಮಾಡಿದ್ದನ್ನು ಈಗಲೂ ಮಾಡಬೇಕು ಎಂದು ನಾವು ನಂಬುತ್ತೇವೆ” ಎಂದು ಬರೆಯುತ್ತಾರೆ!
ಬಂಬಾತ ದಂಗೆಯನ್ನು ಹತ್ತಿಕ್ಕಿದ ಬ್ರಿಟಿಷರು ಬಂಬಾತನನ್ನು ಸೆರೆ ಹಿಡಿದು ತಲೆಯನ್ನು ಕಡಿದು ಹಾಕುತ್ತಾರೆ. ಸುಮಾರು ನಾಲ್ಕು ಸಾವಿರ ಝುಲುರನ್ನು ಹತ್ಯೆ ಮಾಡಲಾಗುತ್ತೆ. ಸಾವಿರಾರು ಝುಲುರನ್ನು ಕಾರಾಗೃಹದಲ್ಲಿ ಕೂಡಿ ಹಾಕಲಾಗುತ್ತೆ. ಅಂದಿನ ಬ್ರಿಟಿಷ್ ಅಧೀನ ಕಾರ್ಯದರ್ಶಿ ಹಾಗು ಯುದ್ಧ ಧುರೀಣರಾದ ವಿನ್ಸ್ಟನ್ ಚರ್ಚಿಲ್ ಕೂಡ ಅಲ್ಲಿ ನಡೆದ ಹಿಂಸೆಯನ್ನು ವಿರೋಧಿಸುತ್ತಾರೆ. ಆದರೆ ನಮ್ಮ ಅಹಿಂಸವಾದಿ ಗಾಂಧಿಯವರು ಮಾತ್ರ ತಾವು ಭಾಗವಹಿಸಿದ್ದ ಬೋಯ್ರ್ ಯುದ್ಧದ ಬಗ್ಗೆಯಾಗಲಿ, ಬಂಬಾತ ದಂಗೆಯ ಬಗ್ಗೆಯಾಗಲಿ ಪಶ್ಚತಾಪ ವ್ಯಕ್ತಪಡಿಸಲೇ ಇಲ್ಲ! 1915ರಲ್ಲಿ ಗಾಂಧಿಯವರು ಲಂಡನ್ ಮುಖಾಂತರ ಭಾರತಕ್ಕೆ ತೆರಳುತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪೆನ್ಸ್ಹರ್ಟ್ ನ ಲಾರ್ಡ್ ಹಾರ್ಡಿಂಗ್ ಗಾಂಧಿಯವರಿಗೆ ಕೈಸರ್- ಇ – ಹಿಂದ್ ಚಿನ್ನದ ಪದಕವನ್ನು ನೀಡಿ ಗೌರವಿಸುತ್ತಾರೆ.
ಇದನ್ನೂ ಓದಿ: ಗಾಂಧಿ ಮತ್ತು ಅಂಬೇಡ್ಕರ್ : ಎರಡು ದಿಕ್ಕುಗಳು
ದೇವಮಾನವ ಗಾಂಧಿ!
ಇಂದಿನ ಗಾಂಧಿವಾದಿಗಳು ಹಾಗು ಗಾಂಧಿ ಭಕ್ತರು ಹೇಗೆ ಗಾಂಧಿಯವರ ವಿಚಾರಗಳು ಸರ್ವವ್ಯಾಪಿ ಹಾಗು ಅವರು ಒಬ್ಬ ದೊಡ್ಡ ಸಂತ ಎಂದೆಲ್ಲಾ ಬಿಂಬಿಸಲು ಎಷ್ಟು ಕಷ್ಟ ಪಡುತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಆದರೆ, ಅಂದಿನ ಕಾಲದ ಗಾಂಧಿವಾದಿಗಳು ಹಾಗು ಗಾಂಧಿ ಭಕ್ತರು ಗಾಂಧಿಯವರನ್ನು ದೇವರನ್ನಾಗಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲಾ. ಗೋರಕ್ಪುರ್ ನ ‘ಸ್ವದೇಶ್’ ಎಂಬ ಪತ್ರಿಕೆಯು ಗಾಂಧಿಯವರ ಅನೇಕ ಪವಾಡಗಳನ್ನು ಪ್ರಕಟಿಸಿತ್ತು. ಅವುಗಳನ್ನು ಕೇಳಿದರೆ ನಿಮಗೆ ಆಶ್ಚರ್ಯದ ಜೊತೆಗೆ ನಗು ಕೂಡ ಬರಬಹುದು.
ಅದೇನೆಂದರೆ, ಗಾಂಧಿಯವರು ತಮ್ಮ ದಿವ್ಯ ಶಕ್ತಿಯನ್ನು ಬಳಸಿ ಒಂದು ಬಾವಿಯಿಂದ ಸುಗಂಧ ಭರಿತ ಹೊಗೆಯನ್ನು ಬರುವಂತೆ ಮಾಡಿದ್ದರಂತೆ… ಮುಚ್ಚಲ್ಪಟ್ಟಿದ್ದ ಒಂದು ಕೋಣೆಯಲ್ಲಿ ಪವಿತ್ರ ಕುರಾನ್ ಪ್ರತಿಯೊಂದನ್ನು ಪ್ರತ್ಯಕ್ಷವಾಗುವಂತೆ ಮಾಡಿದ್ದರಂತೆ… ಒಮ್ಮೆ ಒಬ್ಬ ಸಾಧು ಗಾಂಧಿಯವರ ಹೆಸರಿನಲ್ಲಿ ಭಿಕ್ಷೆ ಬೇಡುತಿದ್ದ ಸಂಧರ್ಭದಲ್ಲಿ ಆತನಿಗೆ ಭಿಕ್ಷೆ ನೀಡಲು ನಿರಾಕರಿಸಿದ ವ್ಯಕ್ತಿಯ ಎಮ್ಮೆಯು ಬೆಂಕಿಗೆ ಆಹುತಿಯಾಗಿತ್ತಂತೆ… ಗಾಂಧಿಯವರ ಮಾತನ್ನು ಒಪ್ಪದ ಬ್ರಾಹ್ಮಣ ವ್ಯಕ್ತಿಯು ಹುಚ್ಚನಾಗಿ ಬಿಟ್ಟಿದ್ದನಂತೆ…
ಹೀಗೆ ಅನೇಕ ಕಥೆಗಳನ್ನು ಸೃಷ್ಟಿಸಿ ಜನರಲ್ಲಿ ಗಾಂಧಿಯವರ ಬಗ್ಗೆ ಭಯ ಮತ್ತು ಭಕ್ತಿ ಬರುವಂತೆ ಮಾಡಲು ಪ್ರಯತ್ನಿಸಲಾಗುತಿತ್ತು. ಇದನ್ನು ನೋಡಿದಾಗ ಇಂದಿನ ಮೋದಿ ಭಕ್ತರಿಗೂ ಇವರಿಗೂ ಬಹಳ ವ್ಯತ್ಯಾಸ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ..!
ಸರಳ ಜೀವಿ ಗಾಂಧಿ!
ದಕ್ಷಿಣ ಆಫ್ರಿಕಾದ ಜೋಹೆನ್ಸಬರ್ಗ್‌ನ ಹೊರವಲಯದಲ್ಲಿ ಗಾಂಧಿಯವರಿಗೆ ಅವರ ಶ್ರೀಮಂತ ಸ್ನೇಹಿತ ಹರ್ಮನ್ ಕಲ್ಕೆನ್ಬ್ಯಕ್ ಸುಮಾರು 1,100 ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿರುತ್ತಾರೆ. ಇಲ್ಲಿ ಗಾಂಧಿಯವರು ಸುಮಾರು ಒಂದು ಸಾವಿರ ಹಣ್ಣು ಗಿಡಗಳನ್ನು ನೆಟ್ಟು, ಟಾಲ್ಸ್ಟಾಯ್ ಫಾರ್ಮ್ ನ್ನು ಸ್ಥಾಪಿಸಿ, ಅಲ್ಲಿ ಶುದ್ಧೀಕರಣ ಮತ್ತು ಆಧ್ಯಾತ್ಮಿಕತೆಯ ಪ್ರಯೋಗಗಳನ್ನು ಪ್ರಾರಂಭಿಸುತ್ತಾರೆ. ವಿಪರ್ಯಾಸವೆಂದರೆ ಇಲ್ಲಿ ಅವರು Poverty Rituals ಮಾಡುತಿದ್ದರು. ಹೀಗೆ ಅವರನ್ನು ಬಡತನದಲ್ಲಿ ಇರಿಸಲು ವಿಸ್ತಾರವಾದ ಕೃಷಿ ಭೂಮಿ ಮತ್ತು ಸಾವಯವ ಹಣ್ಣುಗಳು ಬೇಕಾಗಿತ್ತು.
ಆದರೆ ಅವರು ಎಂದಿಗೂ ಆಸ್ತಿ ಕ್ರೂಡೀಕರಣದ ವಿರುದ್ಧವಾಗಲಿ, ಅಸಮಾನ ಆಸ್ತಿಯ ಅಂಚಿಕೆಯ ಬಗ್ಗೆಯಾಗಲಿ ಅಥವಾ ಭಾರತೀಯ ಕೂಲಿ ಕಾರ್ಮಿಕರ ಪರಿಸ್ಥಿತಿಯ ಬಗ್ಗೆಯಾಗಲಿ ಮಾತನಾಡಿದವರಲ್ಲ. ಬದಲಿಗೆ ಭಾರತೀಯ ವ್ಯಾಪಾರಸ್ಥರ ಹಕ್ಕುಗಳು ಹಾಗು ಅವರ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಹೆಚ್ಚು ಆಸಕ್ತಿಯನ್ನು ತೋರುತಿದ್ದರು. 1921ರಲ್ಲಿ ಮಧ್ಯ ಭಾರತದಲ್ಲಿ ರೈತರು ಜಮೀನ್ದಾರರ ವಿರುದ್ಧ ಸಿಡಿದೆದ್ದಾಗ ಅದನ್ನು ವಿರೋಧಿಸಿ ರೈತರು ಮಾಡುತ್ತಿರುವುದು ತಪ್ಪು, ಅವರು ಜಮೀನ್ದಾರರ ಪರ ನಿಲ್ಲಬೇಕೆ ಹೊರತು, ಅವರ ವಿರುದ್ದವಲ್ಲ ಎಂದು ಸಲಹೆ ನೀಡುತ್ತಾರೆ.
ಗಾಂಧಿಯವರ ಶಾಶ್ವತ ಪ್ರಾಯೋಜಕರಾಗಿದ್ದವರು ಶ್ರೀಮಂತ G D ಬಿರ್ಲಾ ಅವರು ಗಾಂಧಿಯ ಎಲ್ಲಾ ಆಶ್ರಮಗಳ ಖರ್ಚು ಮತ್ತು ಕಾಂಗ್ರೆಸ್ ಪಕ್ಷದ ಕೆಲಸಕ್ಕಾಗಿ ಹಣವನ್ನು ನೀಡುತಿದ್ದರು. ಅವರು ಹಿಂದುಸ್ತಾನ್ ಟೈಮ್ಸ್ ಎಂಬ ಪತ್ರಿಕೆಯನ್ನು ನಡೆಸುತಿದ್ದರು. ಆ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಗಾಂಧಿಯವರ ಪುತ್ರ ದೇವದಾಸ್ ರನ್ನು ನೇಮಿಸುತ್ತಾರೆ. ಗಾಂಧಿಯವರು ಯಂತ್ರ ಮತ್ತು ಕೈಗಾರಿಕೆಗಳನ್ನು ವಿರೋಧಿಸುತಿದ್ದರು. ಆದರೆ ಅವರು ಖಾದಿಯನ್ನು ತಯಾರಿಸಲು ಬಳಸುತಿದ್ದ ಚರಕ ಮತ್ತು ನೂಲನ್ನು ಮಾತ್ರ ಇದೆ ಕೈಗಾರಿಕೋದ್ಯಮಿಗಳು ಅವರಿಗೆ ಉಡುಗೊರೆಯಾಗಿ ನೀಡುತಿದ್ದರು.
ಸ್ವತಃ ಸರೋಜಿನಿ ನಾಯ್ಡು ಅವರೇ ಹೀಗೆ ಹೇಳುತ್ತಾರೆ, “ನಾವು ಗಾಂಧಿಯವರನ್ನು ಅತ್ಯಂತ ಸರಳ ವ್ಯಕ್ತಿಯನ್ನಾಗಿ ಬಿಂಬಿಸಲು ಬಹಳಷ್ಟು ಹಣವನ್ನು ಕರ್ಚು ಮಾಡಬೇಕಾಗುತಿತ್ತು. ಅವರು ರೈಲಿನಲ್ಲಿ ಪ್ರಯಾಣ ಮಾಡುವಾಗ ಅವರ ಸರಳತೆಯನ್ನು ಪ್ರದರ್ಶಿಸಲು ಸಾಮಾನ್ಯ ಬೋಗಿಯಲ್ಲಿ ಪ್ರಯಾಣ ಮಾಡುತಿದ್ದರು. ಹಾಗಾಗಿ ನಾವು ಅವರು ಪ್ರಯಾಣಿಸುತಿದ್ದ ಇಡೀ ಬೋಗಿಯನ್ನೆ ಕಾಯ್ದಿರಿಸಿ, ಅವರೊಂದಿಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಡವರಂತೆ ವೇಷ ಹಾಕಿ ಕೂರಿಸುತಿದ್ದೆವು. ಹಾಗಾಗಿ ಹೀಗೆ ಮಾಡಲು ನಮಗೆ ಹೆಚ್ಚು ಖರ್ಚಾಗುತಿತ್ತು” ಎಂದು ಹೇಳುತ್ತಾರೆ.
ಜಾತಿ ವಿರೋಧಿ ಸಿದ್ದಾಂತದ ಗಾಂಧಿ!
1921-22ರಲ್ಲಿ ಗಾಂಧಿಯವರು ತಮ್ಮ ಗುಜರಾತಿ ಪತ್ರಿಕೆ ನವ-ಜೀವನ್‌ನಲ್ಲಿ ಜಾತಿ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೀಗೆ ಜನವ್ಯಕ್ತಪಡಿಸಿದ್ದಾರೆ.
“ಹಿಂದೂ ಸಮಾಜವು ಜಾತಿ ವ್ಯವಸ್ಥೆಯ ಮೇಲೆ ಸ್ಥಾಪಿಸಲ್ಪಟ್ಟಿರುವ ಕಾರಣಕ್ಕೆ ಇಂದು ಅದು ಸ್ಥಿರವಾಗಿ ನಿಂತಿದೆ ಎಂದು ನಾನು ನಂಬುತ್ತೇನೆ.”
“ಸ್ವರಾಜ್ಯದ ಬೀಜಗಳು ಜಾತಿ ವ್ಯವಸ್ಥೆಯಲ್ಲಿ ಕಂಡುಬರುತ್ತವೆ. ವಿವಿಧ ಜಾತಿಗಳು ಮಿಲಿಟರಿ ವಿಭಾಗದ ವಿವಿಧ ವಿಭಾಗಗಳಂತೆ ಪ್ರತಿ ವಿಭಾಗವೂ ಇಡೀ ಒಳಿತಿಗಾಗಿ ಕೆಲಸ ಮಾಡುತ್ತದೆ.”
“ಜಾತಿ ವ್ಯವಸ್ಥೆಯನ್ನು ಸೃಷ್ಟಿಸಬಲ್ಲ ಸಮುದಾಯವು ಸಂಘಟನೆಯ ಅನನ್ಯ ಶಕ್ತಿಯನ್ನು ಹೊಂದಿದೆ ಎಂದು ಹೇಳಬೇಕು.”
“ಜಾತಿಯು ಪ್ರಾಥಮಿಕ ಶಿಕ್ಷಣವನ್ನು ಹರಡಲು ಸಿದ್ಧವಾದ ಸಾಧನವನ್ನು ಹೊಂದಿದೆ, ಪ್ರತಿಯೊಂದು ಜಾತಿಯು ತನ್ನ ಜಾತಿಯ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಜಾತಿಗೆ ರಾಜಕೀಯ ತಳಹದಿಯಿದೆ. ಇದು ಪ್ರಾತಿನಿಧಿಕ ಸಂಸ್ಥೆಗೆ ಮತದಾರರಾಗಿ ಕೆಲಸ ಮಾಡಬಹುದು. ಒಂದೇ ಜಾತಿಯ ಸದಸ್ಯರ ನಡುವಿನ ವಿವಾದಗಳನ್ನು ನಿರ್ಧರಿಸಲು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಜಾತಿಯು ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸಬಹುದು. ಜಾತಿಗಳೊಂದಿಗೆ ರಕ್ಷಣಾ ಪಡೆಯನ್ನು ಬೆಳೆಸುವುದು ಸುಲಭವಾಗಿದೆ. ಪ್ರತಿ ಜಾತಿಗೂ ಒಂದು ಪಡೆಯನ್ನು ರಚಿಸುವ ಅಗತ್ಯವಿದೆ.”
“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ಪರಸ್ಪರ ವಿವಾಹ ಅಥವಾ ಅಂತರ್ವಿವಾಹ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ. ಒಟ್ಟಿಗೆ ಊಟ ಮಾಡುವುದು ಸ್ನೇಹವನ್ನು ಸೃಷ್ಟಿಸುತ್ತದೆ ಎಂಬುದು ಅನುಭವಕ್ಕೆ ವಿರುದ್ಧವಾಗಿದೆ. ಇದು ನಿಜವಾಗಿದ್ದಲ್ಲಿ ಯುರೋಪಿನಲ್ಲಿ ಯುದ್ಧವೇ ನಡೆಯುತ್ತಿರಲಿಲ್ಲ. ಆಹಾರ ಸೇವಿಸುವುದು ಮಲ ವಿಸರ್ಜನೆ ಮಾಡುವಷ್ಟೇ ಕೊಳಕು ಕ್ರಿಯೆ! ಒಂದೇ ವ್ಯತ್ಯಾಸವೆಂದರೆ ಪ್ರಕೃತಿಯ ಕರೆಗೆ ಉತ್ತರಿಸಿದ ನಂತರ ನಮಗೆ ಸಿಗುವ ಉಲ್ಲಾಸ ಮತ್ತು ಶಾಂತಿ ಆಹಾರವನ್ನು ಸೇವಿಸುವಾಗ ಸಿಗದು. ನಾವು ಏಕಾಂತದಲ್ಲಿ ಪ್ರಕೃತಿಯ ಕರೆಗೆ ಉತ್ತರಿಸುವ ಹಾಗೆ ಆಹಾರವನ್ನು ತೆಗೆದುಕೊಳ್ಳುವ ಕ್ರಿಯೆಯನ್ನು ಸಹ ಏಕಾಂತದಲ್ಲಿ ಮಾಡಲಾಗುತ್ತದೆ.”
“ಭಾರತದಲ್ಲಿ ಸಹೋದರರ ಮಕ್ಕಳು ಅಂತರ್ಜಾತಿ ವಿವಾಹವಾಗುವುದಿಲ್ಲ. ಅವರು ಪರಸ್ಪರ ಮದುವೆಯಾಗದ ಕಾರಣ ಅವರು ಪ್ರೀತಿಸುವುದನ್ನು ನಿಲ್ಲಿಸುತ್ತಾರೆಯೇ? ವೈಷ್ಣವರಲ್ಲಿ ಅನೇಕ ಮಹಿಳೆಯರು ಎಷ್ಟು ಸಂಪ್ರದಾಯಸ್ಥರೆಂದರೆ ಅವರು ಕುಟುಂಬದ ಸದಸ್ಯರೊಂದಿಗೆ ಊಟ ಮಾಡುವುದಿಲ್ಲ ಅಥವಾ ಸಾಮಾನ್ಯ ನೀರಿನ ಪಾತ್ರೆಯಿಂದ ನೀರನ್ನು ಕುಡಿಯುವುದಿಲ್ಲ. ಅವರಿಗೆ ಪ್ರೀತಿ ಇಲ್ಲವೇ? ಜಾತಿ ವ್ಯವಸ್ಥೆಯು ಕೆಟ್ಟದ್ದು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಅದು ವಿವಿಧ ಜಾತಿಗಳ ನಡುವೆ ಅಂತರ್‌ಸಂಪರ್ಕ ಅಥವಾ ಅಂತರ್ ವಿವಾಹವನ್ನು ಅನುಮತಿಸುವುದಿಲ್ಲ.”
“ನಿಯಂತ್ರಣಕ್ಕೆ ಇನ್ನೊಂದು ಹೆಸರೇ ಜಾತಿ. ಜಾತಿಗಳು ಭೋಗಕ್ಕೆ ಮಿತಿ ಹಾಕುತ್ತವೆ. ಒಬ್ಬ ವ್ಯಕ್ತಿಯು ತನ್ನ ಭೋಗದ ಅನ್ವೇಷಣೆಯಲ್ಲಿ ಜಾತಿ ಮಿತಿಗಳನ್ನು ಮೀರಲು ಜಾತಿಯು ಅನುಮತಿಸುವುದಿಲ್ಲ. ಅದು ಅಂತರ್ ವಿವಾಹ ಮತ್ತು ಅಂತರ್ ವಿವಾಹದಂತಹ ಜಾತಿ ನಿರ್ಬಂಧಗಳ ಅರ್ಥ.”
“ಜಾತಿ ವ್ಯವಸ್ಥೆಯನ್ನು ನಾಶಮಾಡಿ ಪಾಶ್ಚಿಮಾತ್ಯ ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಎಂದರೆ ಹಿಂದೂಗಳು ಜಾತಿ ವ್ಯವಸ್ಥೆಯ ಆತ್ಮವಾದ ವಂಶಪಾರಂಪರ್ಯ ವೃತ್ತಿಯ ತತ್ವವನ್ನು ತ್ಯಜಿಸಬೇಕು. ಆನುವಂಶಿಕ ತತ್ವವು ಶಾಶ್ವತ ತತ್ವವಾಗಿದೆ. ಅದನ್ನು ಬದಲಾಯಿಸುವುದೆಂದರೆ ಅಸ್ವಸ್ಥತೆಯನ್ನು ಸೃಷ್ಟಿಸುವದೆಂದರ್ಥ. ಬ್ರಾಹ್ಮಣನ್ನು ಬ್ರಾಹ್ಮಣ ಎಂದು ಕರೆಯಲಾಗದಿದ್ದರೆ ನನಗೆ ಬ್ರಾಹ್ಮಣನಿಂದ ಪ್ರಯೋಜನವಿಲ್ಲ. ಪ್ರತಿದಿನ ಬ್ರಾಹ್ಮಣನನ್ನು ಶೂದ್ರನಾಗಿ ಮತ್ತು ಶೂದ್ರನನ್ನು ಬ್ರಾಹ್ಮಣನಾಗಿ ಬದಲಾಯಿಸಿದರೆ ಅದು ಅವ್ಯವಸ್ಥೆಯಾಗುತ್ತದೆ.”
“ಜಾತಿ ವ್ಯವಸ್ಥೆಯು ಸಮಾಜದ ಸ್ವಾಭಾವಿಕ ಕ್ರಮವಾಗಿದೆ. ಭಾರತದಲ್ಲಿ ಅದಕ್ಕೆ ಧಾರ್ಮಿಕ ಲೇಪನ ನೀಡಲಾಗಿದೆ. ಇತರ ದೇಶಗಳು ಜಾತಿ ವ್ಯವಸ್ಥೆಯ ಉಪಯುಕ್ತತೆಯನ್ನು ಅರ್ಥಮಾಡಿಕೊಳ್ಳದ ಪರಿಣಾಮ ಅದು ಸಡಿಲ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿತ್ತು ಹಾಗು ಇದರ ಪರಿಣಾಮವಾಗಿ ಆ ದೇಶಗಳು ಜಾತಿ ವ್ಯವಸ್ಥೆಯಿಂದ ಭಾರತ ಪಡೆದಿರುವಷ್ಟು ಪ್ರಯೋಜನವನ್ನು ಪಡೆಯಲಾಗಲಿಲ್ಲ.”
“ಇದು ನನ್ನ ಅಭಿಪ್ರಾಯಗಳಾಗಿದ್ದು, ಜಾತಿ ವ್ಯವಸ್ಥೆಯನ್ನು ನಾಶಮಾಡಲು ಹೊರಟಿರುವ ಎಲ್ಲರನ್ನೂ ನಾನು ವಿರೋಧಿಸುತ್ತೇನೆ.”
ಇವು ಜಾತಿ ವ್ಯವಸ್ಥೆಯ ವಿರುದ್ಧ ಇದ್ದ ಸಾಕ್ಷಾತ್ ಗಾಂಧಿ ತಾತನ ಮಾತುಗಳು! ನನಗೆ ಇವರ ಮತ್ತು ಇಂದಿನ ಸಂಘ ಪರಿವಾರದ ಮಾತು ಮತ್ತು ಮನಸ್ಥಿತಿಯಲ್ಲಿ ಯಾವುದೆ ವ್ಯತ್ಯಾಸಗಳು ಕಾಣುತ್ತಿಲ್ಲ. ನಿಮಗೆ ಕಂಡರೆ ಖಂಡಿತವಾಗಿಯೂ ನಿಮಗೂ ಭಕ್ತರ ರೋಗವು ಅಂಟಿದೆ ಎಂದರ್ಥ!
ನಮ್ಮ ವಾಟ್ಸಾಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗಾಂಧಿ ಮತ್ತು ಭಂಗಿ ನಾಟಕ ಪ್ರಸಂಗ
ಇಂದು ರಾಜಕಾರಣಿಗಳು ಗ್ರಾಮ ವಾಸ್ತವ್ಯ, ದಲಿತರ ಮನೆಯಲ್ಲಿ ಆಹಾರ ಸೇವನೆ ಇತ್ಯಾದಿ ನಾಟಕಗಳನ್ನು ನೋಡಿ ಅನೇಕ ಬಾರಿ ಬೇಸರಗೊಂಡು ಅವರಿಗೆ ಛೀಮಾರಿ ಹಾಕಿದ್ದುಂಟು. ಆದರೆ ಈ ರೀತಿಯ ನಾಟಕಗಳನ್ನು ಮೊದಲು ಉದ್ಘಾಟನೆ ಮಾಡಿದ್ದೆ ನಮ್ಮ ಗಾಂಧಿ ತಾತ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ! ದಲಿತರ ಮತಗಳನ್ನು ಸೆಳೆಯುವ ಸಲುವಾಗಿ ವಾಲ್ಮೀಕಿ ಭಂಗಿ ಕಾಲೋನಿಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಮಾಡುತಿದ್ದರು. ಇಂತ ಸಂದರ್ಭಗಳಲ್ಲಿ ಅವರ ಭೇಟಿ ನೀಡಲಿದ್ದ ಕಾಲೋನಿಯಲ್ಲಿ ಮೊದಲೇ ಅರ್ಧದಷ್ಟು ನಿವಾಸಿಗಳು ಸ್ಥಳಾಂತರಗೊಳಿಸಿ, ಅಲ್ಲಿಯ ನಿವಾಸಿಗಳ ಗುಡಿಸಲುಗಳನ್ನು ಕಿತ್ತುಹಾಕಿ, ಆ ಸ್ಥಳದಲ್ಲಿ ಅಚ್ಚುಕಟ್ಟಾಗಿ ಸಣ್ಣ ಗುಡಿಸಲುಗಳನ್ನು ನಿರ್ಮಿಸಿ, ಗುಡಿಸಲುಗಳ ಪ್ರವೇಶದ್ವಾರ ಮತ್ತು ಕಿಟಕಿಗಳನ್ನು ಮ್ಯಾಟಿಂಗ್‌ನಿಂದ ಶೃಂಗಾರ ಮಾಡಲಾಗುತಿತ್ತು ಮತ್ತು ಗಾಂಧಿಯ ಭೇಟಿಯ ಉದ್ದಕ್ಕೂ, ತಣ್ಣಗಿರಲು ನೆಲಕ್ಕೆ ನೀರನ್ನು ಚಿಮುಕಿಸಲಾಗುತಿತ್ತು. ಸ್ಥಳೀಯ ದೇವಾಲಯಕ್ಕೆ ಬಣ್ಣ ಬಳಿದು ಹೊಸ ಇಟ್ಟಿಗೆ ಹಾಸಿನ ಮಾರ್ಗಗಳನ್ನು ಹಾಕಲಾಗುತಿತ್ತು. 1946ರಲ್ಲಿ ‘Life’ ಪತ್ರಿಕೆಯ ಫೋಟೋ ಜರ್ನಲಿಸ್ಟ್ Margaret Bourke-White (ಬರ್ಕ್‌ವೈಟ್) ಅವರಿಗೆ ನೀಡಿದ ಸಂದರ್ಶನದಲ್ಲಿ ಗಾಂಧಿಯವರ ಭೇಟಿಯ ಉಸ್ತುವಾರಿ ವಹಿಸಿದ್ದ ಬಿರ್ಲಾ ಕಂಪನಿಯ ದೀನನಾಥ್ ತೀಯಾಂಗ್ ಎನ್ನುವ ವ್ಯಕ್ತಿ ಕಾಲೋನಿಯಲ್ಲಿ ಗಾಂಧಿಯವರ ಬೇಟಿಗಾಗಿ ತಯಾರು ನಡೆಸುತಿದ್ದರ ಬಗ್ಗೆ ಹೇಳುತ್ತಾ “ತಾವು ಕಳೆದ ಇಪ್ಪತ್ತು ವರ್ಷಗಳಿಂದ ಗಾಂಧಿಯವರ ಸೌಕರ್ಯಗಳನ್ನು ನೋಡಿಕೊಳ್ಳುತಿದ್ದೇವೆ” ಎಂಬುದನ್ನು ಒಪ್ಪಿಕೊಳ್ಳುತ್ತಾರೆ.
ಅದೇ ವರ್ಷ ಅಂದಿನ ರೀಡಿಂಗ್ ರೋಡ್ ನಲ್ಲಿದ್ದ ವಾಲ್ಮೀಕಿ ಕಾಲೋನಿಗೆ ಬೇಟಿ ಕೊಟ್ಟ ಸಂದರ್ಭದಲ್ಲಿ, ಅಲ್ಲಿನ ವ್ಯಕ್ತಿ ತಾನು ತಯಾರು ಮಾಡಿದ್ದ ಅಡುಗೆಯಲ್ಲಿ ಗಾಂಧಿಯವರಿಗೆ ನೀಡಲು ಬಂದಾಗ ಅದನ್ನು ತಿರಸ್ಕರಿಸಿ, “ಬೇಕಾದರೆ ಇಲ್ಲೆ ಬಂದು ಅಡುಗೆ ಮಾಡು ಆಗ ನಾನು ಸ್ವೀಕರಿಸುತ್ತೇನೆ” ಎಂದು ಹೇಳುತ್ತಾರೆ. ಅಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಗಾಂಧಿಯವರಿಗೆ ತಿನ್ನಲು ಕಡಲೆ ಕೊಟ್ಟಾಗ ಅದನ್ನು ಅವರು ತಿನ್ನದೆ, ಮೇಕೆಯ ಬಾಯಿಗೆ ತುರುಕುತ್ತಾರೆ! ಅವರು ಸೇವಿಸುತಿದ್ದ ಆಹಾರವು ನೇರವಾಗಿ ಬಿರ್ಲಾ ಹೌಸ್ ನಿಂದ ಬರುತಿತ್ತು. ಹಾಗಾಗಿ ಗಾಂಧಿಯವರದು 5 ಸ್ಟಾರ್ ಕಾಲೋನಿ Visit ಆಗಿರುತಿತ್ತೆ ಹೊರತು ಅಸಲಿ ಕಾಲೋನಿಯ Visit ಅಲ್ಲ.
1920ರಲ್ಲಿ ಅಹಮದಾಬಾದ್ ನ ಗಿರಣಿ ಕಾರ್ಮಿಕರ ಸಂಘಟನೆಯಾದ, ಮಜೂರ್ ಮಹಾಜನ್ ಸಂಘ್ (MMS) ದ ಸಲಹೆಗಾರರಾಗಿದ್ದ ಗಾಂಧಿಯವರಿಗೆ ಕಾರ್ಮಿಕರ ನಡುವೆ ಇದ್ದ ತಾರತಮ್ಯ ಹಾಗು ಅಸ್ಪೃಶ್ಯತೆಯ ಬಗ್ಗೆ ಮಾತನಾಡಲು ಅದ್ಯಾಕೋ ಮನಸೇ ಬರಲಿಲ್ಲ. ಅಲ್ಲಿನ ಗಿರಣಿಯ ಕ್ಯಾಂಟೀನ್ ಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಅವರಿಗೆ ಕುಡಿಯುವ ನೀರಿಗಾಗಿ ಪ್ರತ್ಯೇಕ ನೀರಿನ ಟ್ಯಾಂಕ್ಗಳನ್ನು ಇಡಲಾಗಿತ್ತು. ಅವರು ವಾಸಿಸುವ ಮನೆಗಳು ಪ್ರತ್ಯೇಕವಾಗಿದ್ದವು. ಆದರೆ ಇದ್ಯಾವು ದಲಿತ ಉದ್ದಾರಕ ಗಾಂಧಿಯವರ ಕಣ್ಣಿಗೆ ಕಾಣಲೆ ಇಲ್ಲ. ಇನ್ನು ಗಾಂಧಿಯವರು ಹೆಣ್ಣನ್ನು ಹೇಗೆ ನೋಡುತಿದ್ದರು ಮತ್ತು ಅವರ ಬಗ್ಗೆ ಅವರಿಗಿದ್ದ ಅಭಿಪ್ರಾಯ ಏನು ಎಂಬುದು ಎಲ್ಲರಿಗೂ ತಿಳಿದಿರುವುದೆ ಬಿಡಿ. ಆ ವಿವರಣೆ ಇಲ್ಲಿ ಬೇಡ.
ಹೀಗೆ ಗಾಂಧಿ ಪುರಾಣವನ್ನು ಹೇಳುತ್ತಾ ಹೋದರೆ ಅದು ಮುಗಿಯದ ಕಥೆ. ಹೀಗೆ ತಮ್ಮ ಜೀವನದುದ್ದಕ್ಕು ವಿರೋಧಬಾಸದ ಜೀವನವನ್ನು ನಡೆಸಿದ ಗಾಂಧಿ, ಮಾತಿಗೂ – ನಡೆಗೂ ಸಂಬಂಧವಿಲ್ಲ ಎಂಬಂತೆ ಬದುಕಿದ ಗಾಂಧಿಯು ಒಂದು ದಿಕ್ಕಾದರೆ, ಯಾವುದೆ ವಿರೋಧಭಾಸವಿಲ್ಲದ ಹಾಗು ನುಡಿದಂತೆ ನಡೆದ ಬಾಬಾಸಾಹೇಬರ ದಿಕ್ಕು ಒಂದಾಗಲು ಸಾಧ್ಯವೆ? ಖಂಡಿತವಾಗಿಯೂ ಇಲ್ಲ, ಇವರಿಬ್ಬರು ವಿರುದ್ಧದ ದಿಕ್ಕುಗಳು. ಅವು ಎಂದಿಗೂ ಒಂದಾಗಲು ಸಾಧ್ಯವಿಲ್ಲ.
- ಹರಿರಾಮ್. ಎ
ವಕೀಲರು ಮತ್ತು ಚಿಂತಕರು