ನಾಡ ನಡುವಿನಿಂದ ಸಿಡಿದ ನೋವಿನ ಕೂಗು ಅರಳಿ ಮತ್ತೆ ನಿರ್ವಾಣಗೊಂಡ ಇತಿಹಾಸವು ದಲಿತರು ಅಷ್ಟೆ ಅಲ್ಲ, ಇಡೀಯಾಗಿ ನಿಜ ಭಾರತವನ್ನು ಪ್ರೀತಿಸುವ ಪ್ರತಿ ಭಾರತೀಯರಲ್ಲೂ ಮನಸ್ಸು ಕ್ಷಣಕಾಲ ಕಂಪನಗೊಳ್ಳದೆ ಇರಲಾರದು. ಡಿಸೆಂಬರ್ ಆರು ಎಂಬ ಬಾಬಾ ಸಾಹೇಬರ ಪರಿನಿರ್ವಾಣವು ಇಂಡಿಯಾದ ಬಹುಸಂಖ್ಯಾತರ ಬದುಕಿನ ಸೂರ್ಯನ ಅಸ್ತಗಂತವೆಂದು ತೋರಿದರೂ, ಈ ಸೂರ್ಯ ಮತ್ತೆ ಮತ್ತೆ ನಮ್ಮ ವ್ಯಕ್ತಿತ್ವ ಹಾಗೂ ನಾವು ಬದುಕುವ ಜೀವನ ಪರಿಸರದಲ್ಲಿ ದಿನಕರನಾಗಿ ಮೂಡುತ್ತಲೇ ಇರುತ್ತದೆ ಎಂಬುದರ ಸೂಚಕವೇ ಆಗಿರುತ್ತದೆ.
ಆ ಭಗವಾನ್ ಬುದ್ಧರ ಚೇತನವೂ ಆಧುನಿಕ ಸಂದರ್ಭದಲ್ಲಿ ಇಡೀ ಭಾರತವನ್ನು ಪ್ರಜ್ಞೆಗೆ ಒಳಪಡಿಸುತ್ತದೆ ಎಂದರೆ ಇದು ಮಾನವ ಜಗತ್ತಿನ ಕೋಟಿ ಸೂರ್ಯರ ಉತ್ಪಾದನೆಯೇ ರೀತಿಯೇ ಎಂದು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪದ್ಮಗಳು ಅರಳಲಿ ಎನ್ನುವ ಬಾಬಾ ಸಾಹೇಬರು ಮಾತುಗಳು ಮೈತ್ರಿಯ ಹೊಸ ಕಾಲದ ಮಾನವತೆಯ ಮುನ್ನುಡಿಯಂತೆಯೇ ಭಾಸವಾಗುತ್ತವೆ.
ಆಕಾಶದ ಅಗಲಕ್ಕೂ ನಿಂತ ಆಲವೂ ಎಂದೂ ಬೀಳದು. ಬಾಬಾ ಸಾಹೇಬರನ್ನು ರಾಜಕೀಯವಾಗಿ ಮಾತ್ರ ಪ್ರತಿಮೆಯನ್ನಾಗಿಸುವವರಿಗೆ ಗೊತ್ತಿಲ್ಲ ಈ ಮಹಾರಿನ ಮಹಾನದಿಯಾನವು ಅನಂತವಾದ ಜೀವಜಗತ್ತಿನ ಚೈತ್ರಯಾತ್ರೆಯ ಪ್ರತೀಕವಾಗುತ್ತದೆಂಬುದು. ನವ ಬೌದ್ಧರ ರೂಢಿಯಾಚೆಗೂ ವ್ಯಾಪಿಸುತ್ತಿರುವ ಬಾಬಾ ಸಾಹೇಬರ ದಿವ್ಯ ಕಾಂತಿಯು ಒಟ್ಟಾರೆ ಮಾನವತೆಯ ಹೊಸ ಜನಾಂಗದ ಸೃಷ್ಟಿಯ ಮೂಲ ಧಾತು ಎಂಬುದ್ದನ್ನು ನಾವ್ಯಾರೂ ಮರೆಯುವಂತಿಲ್ಲ.
ನಮಗೆ ಜಗತ್ತು ಎಂಬುದರ ಅಸ್ಮಿತೆ ಹಾಗು ಅದರ ಜೀವಂತಿಕೆ ತಂದಿಟ್ಟ ಆ ಮಹಾಸೂರ್ಯನ ಎದುರು ನಾವು ಸೂರ್ಯಕಾಂತಿ ಹೂವಾಗಿ ಮುಖವ ಆ ಕಡೆ ತಿರುಗಿಸುವ ನೈತಿಕತೆ ಹಾಗೂ ಶೀಲವನ್ನು ಹೊಂದಿದ್ದೇವೆಯೇ ಎಂದು ಈ ಹೊತ್ತು ಕೇಳಿಕೊಳ್ಳಬೇಕಿದೆ. ನಮ್ಮ ಆಂತರ್ಯದ ಈ ಭೀಮನೆಂಬ ಸೂರ್ಯನನ್ನು ಎಂದೂ ಅಸ್ತಗಂತವಾಗಿಸಲು ಬಿಡದ ನಮ್ಮ ಋಜುತ್ವದಿಂದ ಮಾತ್ರ ಈ ಪರಿನಿರ್ವಾಹಣದ ಹೊತ್ತು ಬುದ್ದ ಶರಣಂ ಗಚ್ಚಾಮಿ ಎಂದು ಹೇಳಲು ಅರ್ಹರಾಗುತ್ತೇವೆ.
ಈ ಬಗ್ಗೆ ನಮ್ಮ ಅಂತರಾಳಗಳು ಬೀದಿಯ ಹೂಗಳಾಗಿ ಅರಳಿ ಬಾಬಾ ಸಾಹೇಬ್ ಜಿಂದಾಬಾದ್ ಎಂದು ಹೇಳುವ ಧೈರ್ಯ ತೋರುವವೆ ಎಂದು ಕೇಳಿಕೊಳ್ಳಬೇಕಿದೆ. ರೂಢಿಯ ಜನಪ್ರಿಯವಾದ ಪ್ರತಿಮೆ ಹಾಗೂ ಘೋಷಣೆಗಳ ಆಚೆಗೂ ಬಾಬಾ ಸಾಹೇಬರನ್ನು ಕಾಣಲಾರದ ನಾವು ಜಗದ ಬೆಳಕನ್ನು ಬಂಧಿಸುವ ಎಗ್ಗತನದಲ್ಲಿ ಕುರುಡು ಆರಾಧನೆಗೆ ದ್ವೀಪವಾಗಿಸುತ್ತಿದ್ದೇವೆಯೇ. ಈ ಪ್ರಶ್ನೆಗಳು ತುಂಬ ಕಠೋರವೆನಿಸಿದರೂ ಈಗ ನಾವು ಅಸಲಿಯಾಗಿ ಬಾಬಾ ಸಾಹೇಬರ ಅನುಯಾಯಿಗಳಾದರೆ ಇವುಗಳನ್ನು ಹಾದು ಹೋಗಿಯೇ ನಮ್ಮ ನಮ್ಮ ನಿಸ್ಪೃಷ್ಟತೆಯ ಮೇಲೆ ನಾವು ಪ್ರತಿಯೊಬ್ಬರ ಕಣ್ಣಲ್ಲಿ ಬಾಬಾ ಸಾಹೇಬರನ್ನು ಕಾಣಬೇಕಿದೆ. ಇದರ ಹೊರತಾದ ನಮ್ಮ ಆಚರಣೆ ಹಾಗು ಮೆರವಣಿಗೆಗಳು ಎಂದೂ ನಮಗೆ ನಿಜದ ಬಾಬಾ ಸಾಹೇಬರ ದರ್ಶನ ನೀಡಲಾರವು.
ಈ ಪರಿನಿರ್ವಾಣದ ದಿನ ನನಗೆ ನೀಲಗಾರರ ಪದದಲ್ಲಿ ಬಾಬಾ ಸಾಹೇಬರ ನಿಜದ ಚೇತನ ಇದೆ ಎಂಬ ಅರಿವಾಗುತ್ತಿದೆ. ಬಾಬಾ ಸಾಹೇಬರನ್ನು ನಾನು ಹೀಗೆ ನೆನೆಯುತ್ತೇನೆ.
ಆದಿ ಜ್ಯೋತಿ ಬನ್ನಿ,
ಬೀದಿ ಜ್ಯೋತಿ ಬನ್ನಿ,
ಅಯ್ಯ ಸತ್ತ ಮನೆಗೂ ಜ್ಯೋತಿ,
ಹೆತ್ತ ಮನೆಗೂ ಜ್ಯೋತಿ
ಅಯ್ಯ ತಿಪ್ಪೆ ಮೇಲಕ್ಕಸ್ಸಿ ಮಡಗಿದ್ರೆ
ಉರಿವಂತ ಪರಂಜ್ಯೋತಿ
ನಮ್ಮ ಬಾಬಾ ಸಾಹೇಬ
ಎಂದೇ ನಾನು ಮಂಟೇದ ಪರಿಭಾಷೆಗೆ ಬಾಬಾ ಸಾಹೇಬರನ್ನು ರೂಪಾಂತರಿಸುತ್ತೇನೆ. ದಲಿತರು ಇಂದು ಸಮಾಜಕ್ಕೆ ಕಾರುಣ್ಯ ಭಿಕ್ಷೆ ನೀಡಬೇಕಿದೆ. ನನ್ನ ಜನ ಪಡೆವವರಷ್ಟೇ ಅಲ್ಲ, ದೇಶಕ್ಕೆ ಎಲ್ಲವನ್ನೂ ನೀಡುವ ದೇಶಪ್ರೆಮಿಗಳಾಗುತ್ತಾರೆ ಎಂಬುದ್ದನ್ನು ನೆನೆಯುತ್ತಾ ನಾನು ಬಾಬಾ ಸಾಹೇಬರ ಪರಿನಿರ್ವಾಣವನ್ನು ಆಚರಿಸುತ್ತೇನೆ.
ಜೈಭೀಮ್, ಜೈ ಭಾರತ್.