ಮಹಿಷ ಮಹೋತ್ಸವದ ವಿಷಯದಲ್ಲಿ ಮಹಿಷ ಸಮುದಾಯಕ್ಕಿಂತಲೂ ಹೆಚ್ಚಾಗಿ ಪಾಪ ಬಿಜೆಪಿ ಸಂಸದ ಪ್ರತಾಪ ಸಿಂಹ ತಲೆಕೆಡಿಸಿಕೊಂಡಿದ್ದಾರೆ. ಕಳೆದ ತಿಂಗಳು ನಾವು ಮಹಿಷ ದಸರ ಆಚರಿಸುತ್ತೇವೆ ಎಂದು ಕರೆಕೊಟ್ಟಾಗಿನಿಂದ ಮಾನ್ಯ ಸಂಸದರು ನಿದ್ದೆಗೆಟ್ಟಿದ್ದಾರೆ. ಮಾತ್ರವಲ್ಲದೆ, ಅವರ ಮನಸು ಎಷ್ಟು ಕ್ಷೋಭೆಗೊಳಗಾಗಿದೆ ಎಂದರೆ, ತಾನೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ, ಸಂಸದ ಎಂಬುದನ್ನೂ ಮರೆತು ಪುಢಾರಿಗಿಂತಲೂ ಕೀಳು ಭಾಷೆಯಲ್ಲಿ ಬಡಬಡಾಯಿಸುತ್ತಿರುವುದು ಕರ್ಣ ಕಠೋರವಾಗಿದೆ. ಇವರ ಎಗ್ಗಿಲ್ಲದ ಮಾತುಗಳನ್ನು ಕೇಳಿ ಪತ್ರಕರ್ತರೇ ಬಿದ್ದು ಬಿದ್ದು ನಗುವಂತಾಗಿದೆ.

“ಮಹಿಷ ದಸರವನ್ನು ನಾವು ಮೈಸೂರು ದಸರಕ್ಕೆ ಪರ್ಯಾಯವಾಗಿ ಮಾಡುತ್ತಿಲ್ಲ. ಮೈಸೂರು ದಸರಕ್ಕೆ ಯಾವುದೇ ರೀತಿಯ ಕುಂದುಂಟಾಗದ ರೀತಿಯಲ್ಲಿ ನಮ್ಮಷ್ಟಕ್ಕೆ ನಾವು ಮಾಡುತ್ತೇವೆ” ಎಂದು ನಾವು ಬಹಳ ಸ್ಪಷ್ಟವಾಗಿ ಕರೆಕೊಟ್ಟಿದ್ದೇವೆ. ಅದು ಅಷ್ಟೇ ಸ್ಪಷ್ಟವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ, ಮಾಧ್ಯಮಗಳಲ್ಲಿ ಪ್ರಸಾರವೂ ಆಗಿದೆ. ಅಷ್ಟಾದರೂ ಈ ಪ್ರತಾಪ್ ಸಿಂಹ ಎಂಬ ಸಂಸದ ಪತ್ರಿಕಾಗೋಷ್ಟಿ ಕರೆದು ನಾನು ಸಂಘರ್ಷಕ್ಕೂ ರೆಡಿ ಎಂದು ಗಲಭೆ ಎಬ್ಬಿಸುವ ಮಾತಾಡುತ್ತಿದ್ದಾರಲ್ಲ ಇವರಿಗೆ ಪ್ರಜ್ಞೆ ಇದೆಯೇ?

ನಾವ್ಯಾರೂ ಗಲಭೆಗಾಗಲಿ ಸಂಘರ್ಷಕ್ಕಾಗಲಿ ಸಿದ್ಧರಿಲ್ಲ; ನಾವು ಶಾಂತಿ ಮತ್ತು ಸೌಹಾರ್ಧತೆಯಿಂದ, ಬಹಳ ಎಚ್ಚರಿಕೆಯಿಂದ ನಮ್ಮ ಸಂಸ್ಕೃತಿಗಳ ಸ್ಮರಣೆ ಮಾಡುತ್ತೇವೆ ಎಂದು ಮತ್ತೆ ಮತ್ತೆ ಹೇಳಿದರೂ, ಅದನ್ನು ಕಿವಿಗೆ ಹಾಕಿಕೊಳ್ಳದೇ ಈ ಸಂಸದರು ತಮ್ಮ ಪ್ರತಾಪವನ್ನು ಕೊಚ್ಚುತ್ತಲೇ ಇರುವುದು ಇವರ ಘನತೆಯನ್ನು ಮೂರಾಬಟ್ಟೆ ಮಾಡಿದೆ. ಒಬ್ಬ ಸಂವಿಧಾನಬದ್ದ ಸಂಸದರು ಹೀಗೆ ಬಹಿರಂಗವಾಗಿ ಸಮರಕ್ಕೆ ಸಂಘರ್ಷಕ್ಕೆ ಪಂಥಾಹ್ವಾನ ನೀಡಬಹುದೇ? ಅದು ಸುಮ್ಮನೆ ತಮ್ಮಷ್ಟಕ್ಕೆ ತಾವಿರುವ ಒಂದು ಬಹುದೊಡ್ಡ ಮತದಾರ ಸಮುದಾಯದ ಸಂಸ್ಕೃತಿಯ ಆಚರಣೆಯ ವಿರುದ್ಧ ಸಂಘರ್ಷವಾದರೂ ಸಿದ್ಧ ಆದರೆ, ಅವರ ಆಚರಣೆಗೆ ಮಾತ್ರ ಅವಕಾಶ ಕೊಡುವುದಿಲ್ಲ ಎಂಬುದು ಕಾನೂನು ಭಂಗವಾದ ಮಾತುಗಳಲ್ಲವೇ?

ಪ್ರತಾಪ ಸಿಂಹ ಅಡ್ಡಂಡ ಕಾರ್ಯಪ್ಪ
ಅಡ್ಡಂಡ ಕಾರ್ಯಪ್ಪ

ಇದನ್ನು ಬೆಂಬಲಿಸಿ ಮೊನ್ನೆ ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ಮಾತಾಡುತ್ತಾ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ “ಒಂದಷ್ಟು ಪ್ರಾಣ ಹೋದರೆ ಹೋಗಲಿ” ಎಂದು ಬಹಿರಂಗ ಸಭೆಯಲ್ಲಿ ಮಾತಾಡುತ್ತಾರೆ ಎಂದರೆ ಇವರು ಅದಾಗಲೇ ಒಂದು ಗಲಭೆ ಸೃಷ್ಟಿಸಲು, ಪೂರ್ವತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದರ್ಥವಲ್ಲವೇ? ಇದನ್ನು ಜಿಲ್ಲಾಡಳಿತ, ಕಾನೂನು ಸುವ್ಯವಸ್ಥೆ ಗಂಭೀರವಾಗಿ ಪರಿಗಣಿಸಿ ಇವರ ಮೇಲೆ ಗಲಭೆಗೆ ಪ್ರಚೋದನೆ ನೀಡುವ ಸ್ವಪ್ರೇರಿತ ಕೇಸು ದಾಖಲಿಸಬೇಕಲ್ಲವೇ ಮುಂದೊದಗಬಹುದಾದ ಸಂಘರ್ಷಕ್ಕೆ ಪೊಲೀಸ್ ಇಲಾಖೆ ಈಗಲೇ ಕ್ರಮಜರುಗಿಸಬೇಕಲ್ಲವೇ? ಆದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮೌನವಾಗಿರುವುದೇ ಆಶ್ಚರ್ಯವಾಗಿದೆ.

ಇದರಿಂದಾಗಿ ಮತ್ತೆ ಮತ್ತೆ ಪತ್ರಿಕಾಗೋಷ್ಟಿ ಕರೆಯುತ್ತಿರುವ ಸಂಸದ, ನಮ್ಮನ್ನು ಇನ್ನಷ್ಟು ಕೆರಳಿಸಲು ಮತ್ತು ಧಾರ್ಮಿಕ ಭಾವನೆಗಳ ಮೂಲಕ ಜನರನ್ನು ಎತ್ತಿಕಟ್ಟುವ ಸಲುವಾಗಿ “ಮಹಿಷ ಎಂದರೆ ಅಸಹ್ಯ, ಅಪದ್ದ, ಅವಮಾನ. ಮಹಿಷನನ್ನು ಪೂಜಿಸುವುದು ಒಂದು ಸಂಸ್ಕೃತಿಯೇ? ಅಂತಹವರು ತಮ್ಮ ಮನೆಗಳಲ್ಲಿ ಪೂಜಿಸಲಿ, ಮಹಿಷನಂತೆಯೇ ಮಕ್ಕಳನ್ನು ಹುಟ್ಟಿಸಲಿ ಬೆಟ್ಟಕ್ಕೆ ಬರುವುದಕ್ಕೆ ಅವಕಾಶ ಕೊಡುವುದಿಲ್ಲ. ಇದನ್ನು ತಡೆಯಲೇಬೇಕು. ಜನರು ಸ್ವಪ್ರೇರಣೆಯಿಂದ ಮಹಿಷ ದಸರ ಆಚರಣೆ ತಡೆಯಲು ಬೆಟ್ಟಕ್ಕೆ ನುಗ್ಗಬೇಕು ನಮ್ಮ ಸಂಸ್ಕೃತಿ ಕಾಪಾಡಬೇಕು” ಎಂದು ಬಡಬಡಾಯಿಸುತ್ತಿರುವುದು ನಿಜಕ್ಕೂ ವಿಪರೀತ ಎನಿಸುತ್ತಿದೆ. ಅಲ್ರೀ ಸಂಸದರೇ ಭಾರತ ಬಹುಸಂಸ್ಕೃತಿಗಳ ನಾಡಲ್ವೇನ್ರಿ? ನಿಮ್ಮ ಸಂಸ್ಕೃತಿ ನಿಮಗೆ ಹೆಚ್ಚು, ನಮ್ಮ ಸಂಸ್ಕೃತಿ ನಮಗೆ ಹೆಚ್ಚು ಅನ್ನುವ ಕಾಮನ್ ಸೆನ್ಸ್ ಬೇಡವೇನ್ರಿ ನಿಮಗೆ? ಸಂವಿಧಾನವು ಪ್ರತಿಯೊಬ್ಬರಿಗೂ ಉಪಾಸನಾ ಸ್ವಾತಂತ್ರ್ಯ ಕೊಟ್ಟಿಲ್ಲವೇನ್ರಿ? ನಮ್ಮ ನಮ್ಮ ಧಾರ್ಮಿಕ ಸ್ವಾತಂತ್ರ್ಯ ಕಸಿಯಲು ನಿಮಗೆ ಹಕ್ಕಿದೆಯೇನ್ರಿ? ಆಗಿಂದ ಇಲ್ಲದ್ದು ಈಗ್ಯಾಕೆ? ಎನ್ನುತ್ತೀರಲ್ಲ ಒಕ್ಕಲಿಗ ಜಾತಿಗೆ ಸೇರಿದ ನಿಮಗೆ, ವೈದಿಕರ ಚಾತುರ್ವರ್ಣ ವ್ಯವಸ್ಥೆಯಲ್ಲಿ ಇರುವ ಸ್ಥಾನಮಾನಗಳೇನು ಗೊತ್ತು ತಾನೆ? ಸಾವಿರಾರು ವರ್ಷಗಳ ಕಾಲ ನಿಮಗೆ ಇದೇ ವೈದಿಕರು ಧರ್ಮದ ಕಟ್ಟಳೆ ಹೆಸರಲ್ಲಿ ಅಕ್ಷರ ನಿರಾಕರಿಸಿದ್ದರು, ಅಧಿಕಾರ ನಿರಾಕರಿಸಿದ್ದರು, ಆಸ್ತಿ ನಿರಾಕರಿಸಿದ್ದರು, ಆಯುಧ ನಿರಾಕರಿಸಿದ್ದರು. ಅದಲ್ಲದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬ ಮೇಲಿನ ಮೂರ ವರ್ಗಗಳಿಗೆ ಸಕಲ ಸೇವೆಗಳನ್ನೂ ಮಾಡುವ ಗುಲಾಮ ಸ್ಥಾನ ಕೊಟ್ಟಿದ್ದರು ಅಲ್ವೇನ್ರಿ?

ಈಗ ನಿಮಗೆ ಅಕ್ಷರ ದಕ್ಕಿದ್ದು, ಅಧಿಕಾರ ದಕ್ಕಿದ್ದು, ಆಸ್ತಿ, ಆಯುಧ, ವಾಕ್ ಸ್ವಾತಂತ್ರ್ಯ, ಘನತೆ ಎಲ್ಲವೂ ದಕ್ಕಿದ್ದು ಸಂವಿಧಾನದಿಂದ ಅಲ್ವೇನ್ರಿ? ಇತ್ತೀಚಗೆ ಅಕ್ಷರಸ್ಥರಾದ ನಿಮಗೇ ಇನ್ನೂ ಇತಿಹಾಸದ ನೈಜ ಕತೆಗಳು ಅರ್ಥವಾಗಿಲ್ಲ. ಇನ್ನು ಈ ಮನುಸ್ಮೃತಿ ಆಧಾರಿತ ವರ್ಣ ವ್ಯವಸ್ಥೆಯನ್ನು ಅಂದೇ ಧಿಕ್ಕರಿಸಿ, ಅವರ್ಣಿಯರಾಗೇ ಉಳಿದ ನಮಗೆ ಅಕ್ಷರ ಕಲಿಕೆ ಸಿಕ್ಕಿರೋದೇ ಇತ್ತೀಚಗೆ. ಕಲಿಯುತ್ತಾ ಕಲಿಯುತ್ತಾ ನಮಗೆ ಈಗೀಗ ಪ್ರತಿಯೊಂದರ ಐತಿಹಾಸಿಕತೆ, ಐತಿಹಾಸಿಕ ದ್ರೋಹ, ವಂಚನೆ, ಮೋಸ ಎಲ್ಲವೂ ಅರ್ಥವಾಗುತ್ತಿದೆ. ಮನುವಾದಿಗಳು ಮರೆಮಾಚಿರುವ ಭಾರತದ ಮೂಲನಿವಾಸಿಗಳಾದ ನಿಮ್ಮ ಮತ್ತು ನಮ್ಮ ನೈಜ ಸಂಸ್ಕೃತಿಯನ್ನು ಕಟ್ಟಿಕೊಟ್ಟಿರುವ ಬುದ್ದ, ಬಸವಾದಿ ಶರಣರು, ವಿವೇಕಾನಂದರು, ಪೆರಿಯಾರರು, ನಾರಾಯಣಗುರುಗಳು, ಕುವೆಂಪು, ಅಂಬೇಡ್ಕರ್ ಅವರ ಬರಹಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ನಮಗೀಗ ಸತ್ಯ ಮಿಥ್ಯಗಳು ಗೋಚರಿಸುತ್ತಿವೆ. ಈಗ ನಮ್ಮ ಸಂಸ್ಕೃತಿ ಆಚರಣೆಗೆ ತರುತ್ತಿದ್ದೇವೆ. ಇದರಿಂದ ಭಯವಾಗುತ್ತಿರುವುದು ನಮ್ಮನ್ನು ಅಕ್ಷರ ಅಧಿಕಾರ ಆಸ್ತಿ ಅಂತಸ್ತುಗಳಿಂದ ವಂಚಿಸಿರುವ ವೈದಿಕರಿಗೆ. ವಿರೋಧಿಸಬೇಕಾದವರು ವೈದಿಕರು. ಆದರೆ ಐತಿಹಾಸಿಕ ದ್ರೋಹದ ಬಲಿಪಶುವಾದ ಶೂದ್ರ ಸಮುದಾಯದ ನೀವ್ಯಾಕ್ರಿ ವೈದಿಕರ ಪರ ವಕಾಲತ್ತು ವಹಿಸಿ ಅವರಿಗಾಗಿ ಕಾವಲು ಕಾಯುತ್ತಿರುವಿರಿ!?

ಡಾ. ಚಮರಂ ಅವರ ಈ ಲೇಖನವನ್ನೂ ಓದಿ: ಮತದಾನ ಮಾಡದವರಿಗೆ ಸವಲತ್ತುಗಳಿಲ್ಲ ಎಂಬ ಕಾನೂನು ಬರಬೇಕು!

ಈ ನಿಮ್ಮ ನಡೆಯು ಬಹಳ ಹಾಸ್ಯಾಸ್ಪದವಾಗಿದೆ. ನಾವು ಯುದ್ದಕ್ಕೆ ಸಿದ್ದರಿಲ್ಲ.

ಬುದ್ದನು ಯುದ್ಧ ನಿರಾಕರಿಸಿ ರಾಜ್ಯ ತೊರೆದು ಜಗತ್ತಿಗೆ ಶಾಂತಿ, ಅಹಿಂಸೆ, ವಿಶ್ವಮೈತ್ರಿ ತೋರಿದನು. ಅದು ನಮಗೆ ಆದರ್ಶ. ಈ ಆದರ್ಶವನ್ನು ನಮ್ಮ ಬಾಬಾಸಾಹೇಬರು ಮೈಗೂಡಿಸಿಕೊಂಡು ಸಂವಿಧಾನಬದ್ದಗೊಳಿಸಿ, ರಕ್ತರಹಿತ ಕ್ರಾಂತಿಗೆ ಆಹ್ವಾನ ನೀಡಿದರು. ಅದು ನಮಗೆ ಆದರ್ಶ.
ಮನುವಾದಿಗಳು ಶೂದ್ರರಾದ ನಿಮ್ಮ ಮತ್ತು ಅವರ್ಣಿಯರಾದ ನಮ್ಮ ಜನರ ಎಡೆಯೊಳಗೆ ಬಿತ್ತಿರುವ ಮೌಢ್ಯ ಕಂದಾಚಾರಗಳನ್ನು ಕಿತ್ತೆಸೆದು ವಿಶ್ವಮಾನವರಾಗಿ ಎಂದು ವಿಚಾರಕ್ರಾಂತಿಗೆ ಕರೆನೀಡಿದ ರಾಷ್ಟ್ರಕವಿ ಕುವೆಂಪು ನಮಗೆ ಆದರ್ಶ.

ಇಂತಹ ಆದರ್ಶ ಸಾಧಿಸುವಾಗ ನಮಗೆ ನಮ್ಮ ನೈಜ ಇತಿಹಾಸವು ವೈದಿಕರ ಕಟ್ಟುಕತೆಗಳೊಳಗೆ ಬಂಧಿಯಾಗಿರುವುದು ಕಾಣುತ್ತದೆ. ಅದನ್ನು ವಿಭಜಿಸಿ ನಮ್ಮದನ್ನು ನಾವು ಗುರ್ತಿಸಿಕೊಳ್ಳುವ ತವಕ ನಮ್ಮದು. ಇದರ ಪೂರ್ವಾಪರ ಅರಿಯದೆ ನಿಮ್ಮಂತಹ ಶೂದ್ರರನ್ನು ಅದೇ ಸಂವಿಧಾನದತ್ತ ಅಧಿಕಾರ, ಹಣಗಳ ಆಮೀಷ ನೀಡಿ ಓಲೈಸಿಕೊಂಡು ನಿಮಗೆ ಸೋದರರಾಗಿರುವ ನಮ್ಮ ವಿರುದ್ದ ಎತ್ತಿಕಟ್ಟುತ್ತಿದ್ದಾರೆ. ಇಷ್ಟು ಸಾಮಾನ್ಯ ಜ್ಞಾನ ನಿಮಗೆ ಇಲ್ಲ ಎಂದು ನಾನು ಭಾವಿಸುವುದಿಲ್ಲ. ಕೇವಲ ಹಣ, ಅಧಿಕಾರದ ಆಮಿಷಕ್ಕೆ ಬಲಿಯಾಗಿ ನಿಮ್ಮಂತಹ ವಿದ್ಯಾವಂತರೂ ವೈದಿಕರ ಗುಲಾಮರಾಗುವುದೇ?

ಅಧಿಕಾರವು ಸಂವಿಧಾನದತ್ತವಾದುದೇ ಹೊರತು ವೈದಿಕರು ಕೊಟ್ಟಿದ್ದಲ್ಲ. ಸತ್ಯವನ್ನು ಸತ್ಯವೆಂದು ಒಪ್ಪಿಕೊಳ್ಳಿ. ಇತರರ ಸಂಸ್ಕೃತಿಯನ್ನು ಅಲ್ಲಗೆಳೆಯುವ ಸಣ್ಣ ಮನಸ್ಥಿತಿಯು ನಿಮಗೆ ಕಪ್ಪುಚುಕ್ಕೆಯಾಗುತ್ತದೆ. ನೀವು ಭ್ರಮಿಸಿರುವಂತೆ ಕೇವಲ ಬೆರಳೆಣಿಕೆಯಲ್ಲಿ ಮಹಿಷ ಪಡೆಯಿಲ್ಲ. ಊರೂರಿಗೆ ನಾವು ಭಾರತದ ನೈಜ ಇತಿಹಾಸವನ್ನು ಕೊಂಡುಹೋಗಿದ್ದೇವೆ. ನಮ್ಮಿಡೀ ಸಮುದಾಯ ಬಾಬಾಸಾಹೇಬರ, ಬುದ್ದನ, ಬಸವಣ್ಣನ, ವಿವೇಕಾನಂದರ, ಮಹಾತ್ಮ ಫುಲೆಯವರ, ನಾರಾಯಣ ಗುರುಗಳ, ಪೆರಿಯಾರರ, ನಾಲ್ವಡಿಯವರ, ಬಾಬಾಸಾಹೇಬರ ಚಿಂತನೆಗಳನ್ನು ಮೈಗೂಡಿಸಿಕೊಂಡಿದೆ. ನಮ್ಮನ್ನು ಅಷ್ಟು ಹಗುರವಾಗಿ ಪರಿಗಣಿಸಬೇಡಿ. ನಾವು ನಿಮ್ಮಂತೆ ಮನುವಾದಿಗಳ ಗುಲಾಮರಾಗಲು ಸಿದ್ದರಿಲ್ಲ.
“ಹೊಸ ನೆರೆಟೀವ್” ಸೃಷ್ಟಿಸುತ್ತಿದ್ದಾರೆ ಎನ್ನುತ್ತಿದ್ದೀರಿ. ಹೌದು ಸತ್ಯ ತಿಳಿದಾಗ ಹೊಸ ನೆರೆಟೀವ್ಸ್ ಹುಟ್ಟಿಕೊಳ್ಳುತ್ತದೆ. ನಮಗದು ಮುಚ್ಚಿಟ್ಟ ಸತ್ಯ ನಿಮಗದು ಹೊಸ ನೆರೆಟಿವ್! ಮನುವಾದದ ಅನ್ಯಾಯ, ಅಸಮಾನತೆಯ ವ್ಯವಸ್ಥೆಯನ್ನು ಪ್ರಶ್ನಿಸುವುದೆಲ್ಲವೂ ನಿಮಗೆ ಹೊಸ ನೆರೆಟಿವ್ ಗಳಾಗಿಯೇ ಕಾಣುತ್ತದೆ.

ದಲಿತರು ಊರ ಹೊರಗೆ ಇದ್ದುಕೊಂಡು, ಬೀದಿಗೆ ಬರಲು, ಸಾರ್ವಜನಿಕ ಕೆರೆ, ಬಾವಿ, ನಲ್ಲಿಗಳನ್ನು ಬಳಸಲು, ದುಡಿಮೆಗೆ ತಕ್ಕ ಕೂಲಿ ಕೇಳಲು ಹೆದರಿಕೊಂಡು ಸದಾ ಗುಲಾಮರಾಗಿರಬೇಕು ಎಂಬುದು ನೀವು ಬಯಸುವ ಸೌಹಾರ್ಧಯುತವಾದ ವ್ಯವಸ್ಥೆ ಅಲ್ಲವೇ? ನಾವು ಈ ಅನ್ಯಾಯಗಳನ್ನು ಪ್ರಶ್ನಿಸುವುದು, ಪ್ರತಿಭಟಿಸುವುದು ನಿಮಗೆ ಶಾಂತಿ ಭಂಗದಂತೆ ಕಾಣುತ್ತದೆ! ಹೊಸ ನೆರೆಟಿವ್ ಎನಿಸುತ್ತದೆ. ಹಾಗೆಂದು ನಾವು ನಿಮ್ಮ ಗುಲಾಮರಾಗಿಯೇ ಇರಬೇಕೇನು? ಅದು ನಿಮ್ಮ ಬಯಕೆ ಇರಬಹುದು. ನಮಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯು ಆದರ್ಶ ಸಮಾಜವಾಗಿದೆ. ಹೀಗೆ ನಿಮ್ಮ ಸಮುದಾಯದ ಮತ್ತು ನಮ್ಮ ಸಮುದಾಯದ ಕೋಟ್ಯಾನುಕೋಟಿ ಜನರನ್ನು ಮನುಸ್ಮೃತಿ ಹೆಸರಲ್ಲಿ, ಪದ್ದತಿಯ ಹೆಸರಲ್ಲಿ ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳಾಗಿದ್ದರೂ, ಗುಲಾಮರಾಗಿಯೇ ಇಟ್ಟುಕೊಳ್ಳಬಯಸಿರುವ ವೈದಿಕರ ಈ ಅಸ್ಪೃಶ್ಯತೆ, ಜಾತೀಯತೆ, ದಬ್ಬಾಳಿಕೆ, ಅಸಮಾನತೆಗಳಲ್ಲವೇ ಅಸಹ್ಯ? ಇವಲ್ಲವೇ ಅಪದ್ದ? ಇವಲ್ಲವೇ ಅಮಾನುಷ? ಇವುಗಳನಲ್ಲವೇ ಮನಸಿನಿಂದ ತೊಲಗಿಸಿ ದೇಶವನ್ನು ಸುಭದ್ರವಾಗಿ ಕಟ್ಟಬೇಕಲ್ಲವೇ?

ಇಂತಹ ಕಾರ್ಯಕ್ಕಾಗಿ ಎಂದಾದರೂ ಸಂಘರ್ಷವಾದರೂ ಸರಿಯೇ ತೊಲಗಿಸಬೇಕು ಎಂದು ನಿಮಗೆ ಅನಿಸಿಲ್ಲವೇ? ಹಾಗೆ ನೋಡಿದರೆ ಜನರು ನಿಮ್ಮನ್ನು ಆರಿಸಿರುವುದೇ ಈ ಕೆಲಸ ಮಾಡಲು ಹೊರತು, ದ್ವೇಷದ ಬೆಂಕಿಹಚ್ಚುವುದಕ್ಕಲ್ಲ ಅಲ್ಲವೇ ಪ್ರತಾಪ್ ಸಿಂಹ? ನಿಮ್ಮ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದ ನೀವು ಮಾಡಿರುವ ಜನೋಪಯೋಗಿ ಕೆಲಸಗಳೇನು? ಮಾಡಿರುವುದೆಷ್ಟು? ಮಾಡಬೇಕಿದ್ದೆಷ್ಟು? ಉಳಿದುದೆಷ್ಟು? ಅದಕ್ಕಾಗಿ ನೀವು ಗಳಿಸಿರುವ ಜನಪ್ರೀತಿ ಎಷ್ಟು? ಆ ಜನ ಪ್ರೀತಿಯಿಂದಲ್ಲವೇ ರಾಜಕೀಯ ಮಾಡಬೇಕಾದ್ದು? ಇಂತ ಸಣ್ಣತನದ ಸಂಘರ್ಷಗಳಿಂದ ರಾಜಕೀಯ ಲಾಭ ಗಳಿಸಬೇಕೆಂಬ ದುಷ್ಟ ಕನಸನ್ನು ಬಿಟ್ಟುಬಿಡಿ. ನಿಮ್ಮ ಕ್ಷೇತ್ರದಲ್ಲಿಯೂ ನಮ್ಮ ಜನ ಕನಿಷ್ಟ ಆರು ಲಕ್ಷ ಇದ್ದಾರೆ. ಜನಸೇವೆಯ ಮೇಲೆ ಗೆಲ್ಲಲು ಸಾಧ್ಯವಾಗದೆ ನಮ್ಮಷ್ಟಕ್ಕೆ ನಾವು ಮಾಡುತ್ತಿರುವ ಒಂದು ಸಾಂಸ್ಕೃತಿಕ ಉತ್ಸವದಲ್ಲಿ ಅನಗತ್ಯವಾಗಿ ಮೂಗುತೂರಿಸಿ ಕಾನೂನು ಭಂಗ ಮಾಡುವ ದುಷ್ಟ ಯೋಜನೆ ರೂಪಿಸಬೇಡಿ. ಅದರಿಂದ ನಿಮಗೆ ಯಾವುದೇ ಲಾಭವಿಲ್ಲ. ಇತಿಹಾಸದಲ್ಲಿ ಬಹಳ ಕೆಟ್ಟಹೆಸರು ತಂದುಕೊಳ್ಳುತ್ತೀರಿ ಎಚ್ಚರ.

ಅಂದಹಾಗೆ, ಕಾಂಗ್ರೆಸ್ ಸರ್ಕಾರದಲ್ಲಿ ನಾವು ಮಹಿಷ ದಸರ ಆರಂಭಿಸಿದೆವು. ಬಿಜೆಪಿ ಸರ್ಕಾರದಲ್ಲಿ ನೀವು ನಿಲ್ಲಿಸಿದ್ದಿರಿ. ಮತ್ತೀಗ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ಶುರುಮಾಡಿದ್ದೇವೆ ಎಂಬ ನಿಮ್ಮ ವಾದವೇ ಸಂಪೂರ್ಣ ಸುಳ್ಳು! ನಾವು ಇಪ್ಪತೈದು ವರ್ಷಗಳ ಹಿಂದೆಯೇ ಪ್ರತೀ ವರ್ಷ ಮಹಿಷ ಸಾಂಸ್ಕೃತಿಕ ಉತ್ಸವ ನಡೆಸಿದ್ದೇವೆ. ಇದೇ ದಿನ 1956ರಿಂದಲೂ ಮಹಾರಾಷ್ಟ್ರದ ನಿಮ್ಮ ಸಂಘದ ಕೇಂದ್ರ ಕಛೇರಿ ಇರುವ ನಾಗಪುರದಲ್ಲಿ ಒಂಬತ್ತು ದಿನಗಳ ಕಾಲ ಲಕ್ಷಾಂತರ ಜನ ಸೇರಿ ವಿಜೃಂಭಣೆಯಿಂದ ವಿಜಯದಶಮಿ ಆಚರಿಸುತ್ತೇವೆ! ಮೈಸೂರಿನ ಪ್ರಾಂತ್ಯದಲ್ಲಿ ಮಹಿಷೋತ್ಸವವನ್ನು ಆಚರಣೆಗೆ ತಂದವರೇ ಇದೀಗ ನಿಮ್ಮ ಪಕ್ಷದಲ್ಲೇ ಇರುವ ಸನ್ಮಾನ್ಯ ಎನ್.ಮಹೇಶ್ ಅವರು!

ಎನ್‌ ಮಹೇಶ್‌ N Mahesh

ಆಗಿಂದಲೂ ಯಾವ ಸರ್ಕಾರ ಬರಲಿ ಬಿಡಲಿ, ಎನ್. ಮಹೇಶ್ ಅವರು ಇರಲಿ, ಬಿಡಲಿ ನಾವು ಆಚರಿಸಿಕೊಂಡೇ ಬಂದಿದ್ದೇವೆ! 2014ರಲ್ಲಿ ಕೆಲವರು ಬೆಟ್ಟಕ್ಕೇ ಹೋಗಿ ಪುಷ್ಪಾರ್ಚನೆ ಮಾಡಿ ಬರುವ ಕಾರ್ಯಕ್ರಮ ಶುರು ಮಾಡಿದೆವು. ಅದರ ನಂತರ ನಮ್ಮ ಜನ ಜಾಸ್ತಿ ಆದರು, ಅಲ್ಲೇ ಸಮಾವೇಶ ಮಾಡಿದೆವು. ಆಗ ಉರಿಯಲು ಶುರುವಾದದು ವೈದಿಕರಿಗೆ. ಅದನ್ನವರು ಅವರ ಕಾಲಾಳುಗಳಾಗಿರುವ ನಿಮ್ಮಂತಹ ಶೂದ್ರ ಭಕ್ತರ ತಲೆಗೆ ತುಂಬಿದರು. ಆಗ ನಿಮ್ಮಂತಹವರು ಅಧಿಕಾರದ ದರ್ಪ ಬಳಸಿ ಪೊಲೀಸ್ ಶಕ್ತಿ ಉಪಯೋಗಿಸಿ, ಕಾನೂನನ್ನೇ ತಪ್ಪಾದ ಕಾರ್ಯಕ್ಕೆ ಬಳಸಿ ಬೆಟ್ಟಕ್ಕೆ ಬರುವುದನ್ನಷ್ಟೇ ತಡೆದಿರಿ. ಆದರೆ ಆಚರಣೆಯನ್ನೇ ತಡೆದೆವೆಂದು ಬುರುಡೆ ಬಿಡುತ್ತಿದ್ದೀರಲ್ಲ. ನಾವು ಅಶೋಕ್ ಪುರಂ ಮತ್ತು ನಿಮ್ಮ ಮಾಸ್ಟರ್ ಗಳಾದ ವೈದಿಕರೇ ಇರುವ ಕೃಷ್ಣಮೂರ್ತಿ ಪುರಂ ನಡುವೆಯೇ ಇರುವ ಡಾ‌.ಅಂಬೇಡ್ಕರ್ ಪಾರ್ಕ್ ನಲ್ಲಿ ಮಾಡಿಕೊಂಡೇ ಬಂದಿದ್ದೇವಲ್ಲವೇ? ಮತ್ತು ನಿಮ್ಮ ಬಿಜೆಪಿ ಸರ್ಕಾರ ತಡೆದ ಕಾರಣಕ್ಕೆ ಆಗ ಮೈಸೂರಲ್ಲಿ ಮಾತ್ರ ಇದ್ದ ಮಹಿಷೋತ್ಸವ ರಾಜ್ಯದ ಹಳ್ಳಿಹಳ್ಳಿಗೂ ಹಬ್ಬಿ, ಅಲ್ಲೆಲ್ಲಾ ಮಾಡಿದ್ದಾರೆ!

ಈ ವರ್ಷವೂ ಎಂದಿ‌ನದೇ ಶಾಂತಿಯಿಂದ ನಾವು ಲೋಕಲ್ ಆಗಿ ಮಾಡಬೇಕೆಂದು ಯೋಜಿಸಿದ್ದೆವು. ಆದರೆ ನಿಮ್ಮ ಹರಕು ಬಾಯಿಯಿಂದಾಗಿ ಅದೀಗ ರಾಜ್ಯಾದ್ಯಂತ ಹರಡಿದೆ! ರಾಜ್ಯದೆಲ್ಲೆಡೆಯಿಂದ ನಮ್ಮ ಜನ ಜಮಾಯಿಸುತ್ತಾರೆ. ನಾವು ಸಂವಿಧಾನ ಬದ್ದವಾಗಿ ನಡೆಯುತ್ತೇವೆ. ನಿಮ್ಮಿಂದಲೂ ಅದೇ ನಡೆಯನ್ನು ನಿರೀಕ್ಷಿಸುತ್ತೇವೆ. ಯಾರ ಬೆದರಿಕೆಗೂ ಬಗ್ಗುವುದಿಲ್ಲ ಮತ್ತು ನಿಲ್ಲಿಸುವುದಿಲ್ಲ. ಮನದಿಂದ ಮನಕ್ಕೆ ಹರಡುವುದನ್ನು ಯಾರಿಂದಾದರು ತಡೆಯಲು ಸಾಧ್ಯವೇ? ಸಾರ್ವಜನಿಕ ಸ್ಥಳಕ್ಕೆ ಯಾರನ್ನಾದರು ನಿಷೇಧಿಸಲು ಸಾಧ್ಯವೆ? ಹಾಗೊಂದು ವೇಳೆ ದಲಿತರನ್ನು ಬೆಟ್ಟದಂತಹ ಸಾರ್ವಜನಿಕ ಸ್ಥಳಕ್ಕೆ ನಿಷೇಧಿಸುವುದೇ ಆದರೆ ಅದು ಸ್ಪಷ್ಟವಾಗಿ ಜಾತೀಯತೆ ಆಚರಿಸಿದಂತೆಯೇ ಸರಿ. ಇದಕ್ಕೆ ಅಟ್ರಾಸಿಟಿ ಕೇಸ್ ದಾಖಲಿಸುವುದೂ ಸತ್ಯ‌.
ಡಾ.ಚಮರಂ

One thought on “ಶೂದ್ರ ಪ್ರತಾಪ ಸಿಂಹನ ವೈದಿಕ ವಕಾಲತ್ತು!”

Leave a Reply

Your email address will not be published. Required fields are marked *