ಬೆಂಗಳೂರು: ಒಂದು ವಾರದೊಳಗೆ 2021ರಲ್ಲಿ ಆರಂಭಗೊಂಡ 1242ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಪ್ರಕ್ರಿಯೆಯನ್ನು ಆರಂಭಿಸಿ, ಡಿಸೆಂಬರ್ ಅಂತ್ಯದೊಳಗೆ ಆದೇಶ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಹೇಳಿದರು.
ಗುರುವಾರ ನಗರದ ಸಚಿವರ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಬಳಗದ ವತಿಯಿಂದ ಮನವಿ ಮಾಡಿದ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ʻಕೆಎಟಿಯಿಂದ ತೀರ್ಪು ಪ್ರಕಟವಾಗಿದೆ. ಸರ್ಕಾರದ ಸುತ್ತೋಲೆಯ ಪರವಾಗಿ ಜಯವಾಗಿದೆ. ತೀರ್ಪನ್ನು ಸ್ವಾಗತಿಸುತ್ತೇನೆ. ಇನ್ನೂ ಸಿಸಿಬಿ ವರದಿಯ ಪರಿಶೀಲನೆಗಾಗಿ ನೇಮಿಸಿದ ತ್ರಿಸದಸ್ಯ ಸಮಿತಿಯಿಂದ 6 ದಿನಗಳ ಒಳಗೆ ವರದಿಯನ್ನು ಪಡೆದು, ಕೂಡಲೇ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಅಭ್ಯರ್ಥಿಗಳು ಆತಂಕ ಪಡಬೇಡಿʼ ಎಂದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2021ರ ಕುರಿತಾಗಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯಾಧಿಕರಣವು ದಿನಾಂಕ: 01-02-2023ರ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತ ಕರ್ನಾಟಕ ಸರ್ಕಾರದ ಮಧ್ಯಂತರ ಸುತ್ತೋಲೆಯನ್ನು ಎತ್ತಿ ಹಿಡಿದು ಸದರಿ ನೇಮಕಾತಿಯ ವ್ಯಾಜ್ಯವನ್ನು ಬಗೆಹರಿಸಿ ತೀರ್ಪು ಪ್ರಕಟಿಸಿದೆ. ನೇಮಕಾತಿಗೆ ಮುಂದೆ ಯಾವುದೇ ಕಾನೂನಾತ್ಮಕ ತೊಡಕುಗಳು ಎದುರಾಗದಂತೆ ದಯವಿಟ್ಟು ಸರ್ಕಾರದ ಕಡೆಯಿಂದಲೇ ಗೌರವಾನ್ವಿತ ಉಚ್ಛನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದರು. ಸಚಿವರು ಕೊಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ನಾಳೆಯೇ ಕೇವಿಯಟ್ ಸಲ್ಲಿಸಬೇಕೆಂದು ಸೂಚಿಸಿದರು.
ಈಗಾಗಲೇ ನೇಮಕಾತಿ ಆರಂಭವಾಗಿ 3 ವರ್ಷಗಳು ಮುಗಿಯುತ್ತಿದ್ದು, ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಖಾಯಂ ಪ್ರಾಧ್ಯಾಪಕರ ನೇಮಕಾತಿ ಅತ್ಯಂತ ಜರೂರಾಗಬೇಕಿದೆ. ಅಂತಿಮ ಆಯ್ಕೆ ಪಟ್ಟಿಯಲ್ಲಿರುವಂತಹ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳೆಲ್ಲರೂ ಈಗಾಗಲೇ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ನೇಮಕಾತಿ ಯಾವಾಗ ಆರಂಭವಾಗಿ, ನೇಮಕಾತಿ ಆದೇಶವನ್ನು ಯಾವಾಗ ಪಡೆಯುತ್ತೇವೆ ಎಂಬ ಚಿಂತೆಯಲ್ಲೇ ದಿನದೊಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ.
ಇತ್ತ ಪದವಿ ವಿದ್ಯಾರ್ಥಿಗಳಿಗೆ ಬೋಧಿಸಲು ಖಾಯಂ ಪ್ರಾಧ್ಯಾಪಕರಿಲ್ಲದಂತಾಗಿದೆ. ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವ ಇಚ್ಛಾಶಕ್ತಿಯನ್ನು ಸರ್ಕಾರ ಮಾಡಬೇಕಿದೆ. ಆಯ್ಕೆಯಾದ ಎಲ್ಲಾ ಸಹಾಯಕ ಪ್ರಾಧ್ಯಾಪಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಬೇಕು. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ನೆರವಾಗಬೇಕಿದೆ ಎಂದು ಅಭ್ಯರ್ಥಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಳದ ನಾಗಲಕ್ಷ್ಮೀ, ಪ್ರಿಯಾಂಕ, ಜಯಶಂಕರ್, ರಮೇಶ್, ಅಶೋಕ್, ಯದುಕುಮಾರ್, ಯಲ್ಲಪ್ಪ, ಮತ್ತಿತರಿದ್ದರು.