ಗೆಂಡೆ ದೇವರ ಮಠವೆಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಮುಂಬೈ ಪ್ರಾಂತದಲ್ಲಿಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರವರ್ದಮಾನಕ್ಕೆ ಬರುತ್ತಿರುವ ಮಠವಿದು. ಧರೆಗಟ್ಟಿ ಎಂಬ ಪುರದ ಪುಣ್ಯವೇ ಹಾಗೆ. ಈ ಊರೆಂಬೋ ಊರು ಗೆಂಡೆದೇವರ ಮಠದಿಂದಾಗಿಯೇ ಸುತ್ತಲ ಹತ್ತು ಹಳ್ಳಿಯಲ್ಲಿ ವಿಶೇಷ ಸ್ಥಾನವನ್ನು, ಗೌರವವನ್ನು ಪಡೆದಿದೆ. ಈ ನೆಲದಲ್ಲಿ ಎಷ್ಟೊಂದು ಪವಾಡ ಪುರುಷರು, ಮಹಿಮಾವಂತರು ಆಗಿ ಹೋಗಿದ್ದಾರೆಂಬುದಕ್ಕೆ ಲೆಕ್ಕವಿಟ್ಟವರ್‍ಯಾರು? ಕಾಲದ ಓಟದಲ್ಲಿ ಪಾಪದ ಜನರ ಜಂಜಡಗಳನ್ನು ಪರಿಹರಿಸುವದಕ್ಕಾಗಿಯೇ ಉದ್ಭವಿಸುವ ಮಹಿಮಾ ಪುರುಷರು ತಮ್ಮ ಕರ್ತವ್ಯ ಪೂರೈಸಿದ ನಂತರ ಮತ್ತೆ ಕಾಲದ ಮೂಲ ಮನೆಗೆ ಮರಳಿ ನಕ್ಷತ್ರಗಳಾಗಿದ್ದಾರೆ. ಅಗೋ ಅಲ್ಲಿ ನೋಡಿ ಎಂದು ತಾಯಂದಿರು ತಮ್ಮ ಮಕ್ಕಳಿಗೆ ಕಥೆ ಹೇಳುತ್ತಿರುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ. ಈ ನೆಲದ ಸನಾತನ ಪರಂಪರೆಯನ್ನು ಅರೆದು ಕುಡಿದಿರುವ ಜನರು ಸಹ ಕಾಲದ ಗರ್ಭದಲ್ಲಿ ಹುಟ್ಟಿ ಬರುವ ದೈವ ಪುರುಷರನ್ನು ಅವರ ಬಾಲ ಲೀಲೆಗಳಿಂದಲೇ ಗುರುತಿಸಿ ಅವರಿಗೆ ದೇವರ ಪಟ್ಟವನ್ನು ಕಟ್ಟಿ ತಮ್ಮ ಸಂಕಷ್ಟಗಳನ್ನು ಅವರ ಕೊರಳಿಗೆ ನೇತಾಕಿ ತಾವು ನೆಮ್ಮದಿಯಿಂದ ನಿಟ್ಟುಸಿರು ಗರೆಯುವುದನ್ನು ರೂಡಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಈ ಊರೆಂಬೋ ಊರಿನ ಮುಕ್ಕಾಲು ಪಾಲು ಜಾಗ ಗುಡಿ ಗುಂಡಾರಗಳ, ಮಠ ಮಂದಿರಗಳ, ಅವುಗಳ ಬ್ರ್ಯಾಂಚುಗಳ ಕಟ್ಟಡಗಳಿಂದಲೇ ತುಂಬಿಹೋಗಿದೆ. ಅಲ್ಲೊಂದು ಮೂಲೆ ಇದ್ದರೆ, ಆ ಮೂಲೆಯಲ್ಲಿ ಕಲ್ಲೊಂದಿದ್ದರೆ, ಅದು ಕುಂಕುಮ ವಿಭೂತಿಗಳಿಂದ ಭೂಷಿತವಾಗಿರದಿದ್ದರೆ ಕೇಳಿ. ಈ ಊರಿಗೆ ಬಂದ ಹೊಸಬರಿಗೆ ಊರ ಹಿರಿತಲೆಗಳು ಹೇಳುವ ಮೊದಲ ಎಚ್ಚರಿಕೆ ಎಂದರೆ ’ನೆಲ ನೋಡ್ಕೊಂಡು ಅಡ್ಯಾಡಿರಿ. ನಮ್ಮೂರೊಳಗ ಹೆಜ್ಜೆ ಹೆಜ್ಜೆಗೊಂದು ದೇವರ ಕಲ್ಲದಾವು. ಅಕಸ್ಮಾತ್ ಅವುತರ ಮ್ಯಾಲ ಕಾಲಿಟ್ರಿ.. ಭಸ್ಮವಾಗಿ ಬೀಡುತ್ತಿರಿ ಹುಷಾರ್’ ಎನ್ನುವ ಎಚ್ಚರವನ್ನು ಉದುರಿಸುತ್ತವೆ. ದಾರಿ-ದಾರಿಗಳು ಕೂಡುವ ಸರ್ಕಲ್‌ಗಳಲ್ಲೆಲ್ಲ ಕುಂಕುಮಧಾರಿ ಕಲ್ಲುಗಳು ತಮ್ಮ ಸುತ್ತ ದೈವಪ್ರಭೆಯನ್ನು ಚೆಲ್ಲುತ್ತಾ ಜನರಲ್ಲಿ ಭಯ ಭಕ್ತಿಯನ್ನು ಹುಟ್ಟಿಸುವ ತಮ್ಮ ಜವಾಬ್ಧಾರಿಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿವೆ. ಧಾರವಾಡದ ಮೇಲೆ ಕಲ್ಲು ಬೀಸಿದರೆ ಅದು ಸಾಹಿತಿಗಳ ಮನೆ ಮೇಲೆಯೇ ಬೀಳುವಂತೆ ಧರೆಗಟ್ಟಿಯ ಮೇಲೆ ಕಲ್ಲು ಬೀಸಿದರೆ ಅದು ಯಾವುದೋ ಒಂದು ಗುಡಿ ಗುಂಡಾರದ ಮೇಲೇಯೇ ಬೀಳುವುದು ಖಚಿತ ಎನ್ನುವ ಮಾತು ಈ ಭಾಗದಲ್ಲಿ ಚಾಲ್ತಿಯಲ್ಲಿದೆ. ಈ ಊರ ಪ್ರಸಿದ್ಧಿ ಎಷ್ಟಿರುವುದೆಂದರೆ, ನಾಡಿನಾದ್ಯಂತ ಇರುವ ಸಾಧು ಸಂತರು, ಸಿದ್ಧರು, ಆರೂಢರು, ರಾಮಕೊಂಡಾಡಿಗಳು ಮತ್ತಿತರ ದೈವಾರಾಧಕರು ಈ ಊರಿನ ಸೀಮೆಗೆ ಕಾಲಿಡುತ್ತದೇ ಇಲ್ಲಿನ ಮಣ್ಣನ್ನು ತಮ್ಮ ಹಣೆ, ಹೊಟ್ಟೆ, ತೋಳುಗಳಿಗೆ ಬಳಿದುಕೊಂಡು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ. ಈ ಊರಲ್ಲಿ ಕೆಲ ಕಾಲ ನೆಲೆ ನಿಂತು ಮತ್ತಷ್ಟು ವರ್ಷಗಳಿಗಾಗುವಷ್ಟು ಪುಣ್ಯವನ್ನು ಸಂಪಾದಿಸಿಕೊಂಡು, ಊರಿನ ಮಣ್ಣನ್ನು ಹಣೆಗೆ ಬಳಿದುಕೊಂಡು, ಜೋಳಿಗೆಯಲ್ಲಿ ಕಟ್ಟಿಕೊಂಡು ಹಿಂದಿರುಗುತ್ತಾರೆ.
ಈ ಊರಿನ ದೈವಿ ಸಂಭೂತ, ಗುರು ಪ್ರಭಾವಳಿಯ ಐನೋರ ಮನೆಯಲ್ಲಿಯೇ ಈಗ ಗೆಂಡೆದೇವರು ಉದೈಸಿರುವುದು. ಈ ಮನೆನದ ಪೂರ್ವಜರ ಪುಣ್ಯ ಚರಿತ್ರೆಯೇ ಅಂಥಹದ್ದು. ಕಾಲಕಾಲಕ್ಕೆ ಎದಿರಾಗುತ್ತಿದ್ದ ಕಂಟಕಗಳಿಂದ ಈ ಊರು ಪಾರಾಗಿರುವುದೇ ಈ ಮನೆತನದವರ ಪುಣ್ಯ ಪುರುಷರ ದೈವ ಬಲದಿಂದಾಗಿಯೇ ಎಂಬುದನ್ನು ಯಾರಾದರೂ ಒಪ್ಪುತ್ತಾರೆ. ಅಯ್ಯಯ್ಯೋ.. ಎಷ್ಟೊಂದು ಕಂಟಕಗಳು ಮುಗಿಬಿದ್ದಿದ್ದವು ಈ ಊರ ಮೇಲೆ? ಪ್ಲೇಗ್ಂತೆ ಕಾಲರಾ, ಅಂತೆ, ದೆವ್ವ-ಭೂತಗಳ ಕಿರಿ ಕಿರಿ.. ಆಗೆಲ್ಲ ಈ ಮನೆತನದವರೇ ತಮ್ಮ ದೈವಿ ತಪಸ್ಸಿನಿಂದ ಊರನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಅವನೊಬ್ಬನಿದ್ದ, ನಗುರಯ್ಯ ಮುತ್ಯಾ. ಇಡಿ ದೇಶಂಬೋ ದೇಶ ಸ್ವಾತಂತ್ರ್ಯೋ ಹೋರಾಟದಲ್ಲಿ ದುಮುಕಿದಾಗ ತಾವು ಸಹ ಜೀವದ ಹಂಗು ತೊರೆದು ಗಾಂಧಿ ಮುತ್ಯಾನ ಕೂಡ ಕೈ ಜೋಡಿಸಿದ್ದರು. ಅಂತೂ ಇಂತೂ ದೇಶವೆಲ್ಲ ಸ್ವಾತಂತ್ರ್ಯ ಸಿಕ್ಕ ಸಂಭ್ರಮದಲ್ಲಿದ್ದಾಗ ಗುರಯ್ಯ ಮುತ್ಯಾ ಧರೆಗಟ್ಟಿಗೆ ಹಿಂದಿರುಗಿದ್ದರೆ, ಇಲ್ಲಿ ಊರೆಂಬ ಊರು ಕಾಲರಾ ರೋಗದಿಂದ ವಾಂತಿ ಬೇದಿ ಮಾಡಿಕೊಳ್ಳುತ್ತಿತ್ತು. ಆಗಿಂದಾಗಲೇ ತಪ್ಪಲ್ವಾರಿ ಗುಡ್ಡವೇರಿದ ಗುರಯ್ಯ, ಯಾವ್ಯಾವದೋ ತಪ್ಪಲು ಬೇರು ತಂದು ಸಾಣಿಕಲ್ಲು ತೇದು ತೇದು ರಸದ ಗುಟುಕು ಕುಡಿಸಿ ಸಾಯುತ್ತಿದ್ದವರಿಗೆ ಸಂಜೀವಿನಿಯಾದರು. ನಿದ್ದೆ ಊಟ ತ್ಯಜಿಸಿ ಬಿಟ್ಟು ಮೂರು ದಿನ ತೇಯ್ದು ತೇಯ್ದು ಬಂದವರಿಗೆಲ್ಲ ಮದ್ದು ನೀಡಿದ ಗುರಯ್ಯಜ್ಜನನ್ನೆ ಕಾಲರಾ ನುಂಗತೊಡಗಿದಾಗ ಅಜ್ಜನ ಬಳಿ ತಾನು ಕುಡಿಯಲು ತೊಟ್ಟು ಮದ್ದು ಉಳಿದಿರಲಿಲ್ಲವಂತೆ. ಊರನ್ನು ನುಂಗಲು ಬಂದು ವಿಷವನ್ನೆ ತಾನು ನುಂಗಿ ವಿಷಕಂಠನಾದ ಅಜ್ಜ ಐನೋರ ಮನೆಯ ಹಿತ್ತಲಿನಲ್ಲಿರುವ ಘೋರಿಯಲ್ಲಿ ಅಮರನಾಗಿದ್ದಾನೆ. ಊರ ಗತ ಬದುಕಿಗೆ ಆಗಾಗ ಅಪ್ಪಳಿಸುತ್ತಿದ್ದ ಕಂಟಕಗಳನ್ನು ನುಂಗಿ ದೂರ ಮಾಡುತ್ತಿದ್ದ ಅವನ ಪೂರ್ವಜರ ಸಾಲು ಸಾಲು ಘೋರಿಗಳು ಅಲ್ಲೇ ಇವೆ. ಅವನೊಬ್ಬ ಆಗಿ ಹೋಗಿದ್ದಾನೆ, ಪಟಗದ ಮುತ್ಯಾ. ಸಂಸಾರದ ಜಂಜಡವನ್ನು ಧಿಕ್ಕರಿಸಿ ದೇಶಾಂತರ ಹೋಗಿದ್ದ ಮುತ್ಯಾ ನಾಡೆಲ್ಲ ತಿರುಗಾಡಿ ವರ್ಷಗಳ ನಂತರ ವಾಪಸ್ ಬಂದಾಗ ಅವನ ತಲೆಗೊಂದು ಹಳೆಯ ರೇಷ್ಮಿ ಪಟಗ ಮಾತ್ರವಿತ್ತು. ಇಡಿ ದೇಹವೇ ಬೆತ್ತಲು. ಮೊದಲೆಲ್ಲ ಅವನಿಗೆ ಎಲ್ಲರೂ ಮರುಳು ಹಿಡಿದಿರಬೇಕು ಎಂದು ಬಟ್ಟೆ ತೋಡಿಸಲು ನೋಡಿದರು. ತೋಡಿಸಿದ ಬಟ್ಟೆ ಹೊತ್ತಿ ಉರಿದು ದಗದಗಿಸಿಬಿಟ್ಟಿತಂತೆ. ಅವತ್ತಿಂದ ಊರೆಲ್ಲ ಬೆತ್ತಲೆ ಅಡ್ಡಾಡಿಕೊಂಡಿದ್ದ. ನಮಗೆ ಇಂಥದ್ದನ್ನು ತಂದು ಕೊಡು ಎಂದು ಕಾಲಿಗೆ ಬಿದ್ದವರ ದುಬ್ಬಕ್ಕೆ ಇಂವ ಒದ್ದನೆಂದರೆ ಒದೆಸಿಕೊಂಡವನ ಬೇಡಿಕೆ ಈಡೇರಿದಂತೆಯೇ ಲೆಕ್ಕವಂತೆ. ಊರಲ್ಲಿ ಮಳೆಯಾಗದಿದ್ದರೆ ತಪ್ಪಲ್ವಾರಿ ಗುಡ್ಡದ ಮೇಲೆ ತಪಿಸ್ಸಗ ಕುಳಿತರೆ ವಾರೊಪ್ಪತ್ತಿನಲ್ಲಿ ಮಳೆ ಸರೊತ್ತು ಸುರಿಯುತ್ತಿತ್ತಂತೆ. ಇಂಥ ಪುಣ್ಯ ಪುರುಷರ ಕುಡಿಯೇ ಈಗ ಗೆಂಡೆದೇವರಾಗಿ ಧರೆಗಟ್ಟಿ ನೆಲದಲ್ಲಿ ಅವತರಿಸಿದ್ದ.
ಗೆಂಡೆದೇವರ ಉಗಮದ ಕಾಲಘಟ್ಟ ಕೂಡ ಒಂದು ವಿಚಿತ್ರವೇ. ಧರೆಗಟ್ಟಿಯಲ್ಲಿ ಇಷ್ಟೊಂದು ದೇವರಿದ್ದರೂ ಯಾವವೂ ಕೂಡ ಸುಖಾ ಸುಮ್ಮನೇ ಹುಟ್ಟಿದ್ದಲ್ಲ. ದೇವರು ತನ್ನ ಲೀಲೆಯನ್ನು ಲೀಲಾಜಾಲವಾಗಿ ಶಕ್ತಿಯನ್ನು ತೋರ್ಪಡಿಸಿದ ನಂತರವೇ ಊರ ಜನ ದೇವರೆಂದು ಒಪ್ಪಿಕೊಳ್ಳುತ್ತಿದ್ದರು. ಯಾರದಾದರೂ ಮೈಯಲ್ಲಿ ದೇವರು ಬಂತೆಂದು ಕುಣಿಯೊಡಗಿದರೆ, ’ಒಣ ದಿಮಾಕು ಮಾಡಬ್ಯಾಡ, ನಿನೇಟು, ನಿನ್ನ ಶಕ್ತಿಯೆಟು ಅಂಬೋದನ್ನು ತೋರಿಸು’ ಎಂದು ಊರ ಹಿರಿಕರು ಸವಾಲು ಹಾಕುವುದು ಸಾಮಾನ್ಯವಾಗಿತ್ತು. ತಾನು ಖರೆ ದೇವರಾಗಿದ್ದರೆ ಮಾತ್ರ ಇಂಥ ಎಡವಟ್ಟು ಜನರ ಮುಂದೆ ಅದರ ಆಟ ನಡೆಯುತ್ತಿತ್ತು. ಗೆಂಡೆದೇವರ ಪೂರ್ವಾಶ್ರಮದ ನಾಮ ಮಲ್ಲಯ್ಯ. ಎಲ್ಲ ಬಾಲಕರಂತೆ ಸಾಮಾನ್ಯ ಬಾಲ ಲೀಲೆಗಳಲ್ಲಿಯೇ ಬೆಳೆದ ಮಲ್ಲಯ್ಯನಗೆ ಎಳೆಂಟು ವರ್ಷಗಳಾದರೂ ನಾಲಿಗೆಯೇ ಹೊರಳಾಡಿಲಿಲ್ಲವಾಗಿ ಅವನಿಗೆ ಮೂಕ ಮಲ್ಲಯ್ಯ ಎಂದು ರೂಡಿನಾಮ ಜಾರಿಗೊಂಡಿತ್ತು. ಸ್ವಭಾವತಃ ಮಂಕ, ಸೋಮಾರಿ, ಮುಂಗೋಪಿಯಾಗಿದ್ದ ಈ ಮೂಕ ಬೆಳಗ್ಗೆ ಮನೆಯಿಂದ ಹೊರಬಿದ್ದರೆ, ಬೀದಿಯಲ್ಲೆ ಅಂಡಾಡಿ ಉಂಡು ಹೊತ್ತು ಮುಳುಗಿದ ಮೇಲೆಯೇ ಮನೆಗೆ ಹಿಂದಿರುಗುವ ಉಂಡಾಡಿಗುಂಡನಾಗಿದ್ದ. ಇವನ ಇಬ್ಬರ ಅಣ್ಣಂದಿರು ಹಾಸ್ಟೇಲು ವಾಸಿಗಳಾಗಿ ಓದು ಬರಹ ಮಾಡುತ್ತಾ ನೌಕರಿ ಮಾಡುವ ಮಟ್ಟಕ್ಕೆ ಬೆಳೆದಿದ್ದರೆ, ಈ ಮೂಕ ಮಾತ್ರ ವಾರಕ್ಕೋ ತಿಂಗಳಿಗೋ ಸ್ನಾನ ಶೌಚಾದಿ ಮಾಡುತ್ತಾ, ಎಪರಾ ತೆಪರಾ ಅಂಗಿ ಲುಂಗಿ ಸುತ್ತಿಕೊಂಡು ಕರೆದವರ ಮನೆಯಲ್ಲಿ ತಳವೂರಿ ಉಂಡು ತಿಂದು ಮಾಡುತ್ತಾ ಊರ ಮಗನಾಗಿ ಬೆಳೆಯತೊಡಗಿದ್ದ. ನೌಕರಿ ಹಿಡಿದ ಅಣ್ಣಂದಿರು ವಯಸ್ಸಿಗೆ ಬಂದಿದ್ದರಿಂದ ತಂದೆ ರುದ್ರಯ್ಯನವರು ಖರ್ಚಿನೊಳಗೆ ಖರ್ಚೆಂದು ಎಲ್ಲ ಮೂವರು ಮಕ್ಕಳಿಗೆ ಒಮ್ಮೆಲೆ ಲಗ್ನ ಮಾಡುವ ತಯಾರಿ ನಡೆಸಿದರು. ಆದರೆ, ಮಂದಬುದ್ಧಿಯ ಮೂಕನಿಗೆ ಕನ್ಯೆ ಕೊಡುವವರು ಬೇಕಲ್ಲ. ಮೇಲಾಗಿ ಇನ್ನು ವಯಸ್ಸಿಗೆ ಬರದ ಅಪ್ರಾಪ್ತ ಬೇರೆ. ಇಡಿ ಸೀಮಿ ಹುಡುಕಿದರೂ ತಮ್ಮ ಅಂತಸ್ಥಿಗೆ ಹೊಂದುವ ಹುಡುಗಿ ಸಿಗದೇ ಹೋದುದರಿಂದ ಅನಿವಾರ್ಯವಾಗಿ ತಮ್ಮದೇ ಊರಿನ, ಆದರೆ, ಮಂಗಳೂರಿನಲ್ಲಿ ದುಡಕೊಂಡು ತಿನ್ನುತ್ತಿದ್ದ ಬಡ ರಾಚಯ್ಯನ ಕೊನೆ ಮಗಳು ತಾರಿಣಿ ಎಂಬ ಬಾಲಕಿಯೊಂದಿಗೆ ಮದುವೆ ಶಾಸ್ತ್ರ ಮುಗಿಸಿದ್ದರು. ಮದುವೆಗಾಗಿಯೇ ತಮ್ಮ ಕುಟುಂಬ ಸಮೇತ ಊರಿಗೆ ಬಂದಿದ್ದ ರಾಚಯ್ಯ ಮತ್ತು ಪತ್ನಿ ಗುರವ್ವ ಮದುವೆ ಮುಗಿದ ತಿಂಗಳೊಪ್ಪತ್ತಿನಲ್ಲಿಯೇ ಮತ್ತೆ ಮಂಗಳೂರು ಸೇರಿದ್ದರು.
ಅಣ್ಣಂದಿರ ಹೆಂಡಂದಿರು ಹೊಸಮಾಲಗಿತ್ತಿಯರಾಗಿ ಊರಿಗೆ ಬಂದ ಮೇಲೆ ಮೂಕ ಮಲ್ಲಯ್ಯನವರ ಶಯನ ಸ್ಥಾನವೂ ಮನೆಯಿಂದ ಊರ ಮಧ್ಯದ ಭಜನಾ ಕೋಲಿಗೆ ಬದಲಾಯಿತು. ರುದ್ರಯ್ಯನವರ ಮನೆಯ ಆಳು ಒಂದು ಚಾಪೆ ಸುಳ್ಳಿ ಬಗಲಲ್ಲಿಟ್ಟುಕೊಂಡು ಬಂದು ಬಜನಿ ಕೋಲಿಯಲ್ಲಿ ಒಗೆದು, ಮೂಲಕ ಮಲ್ಲಯ್ಯನನ್ನು ಹುಡುಕಿ ಕರ್‍ಕೊಂಡು ಬಂದು ಇನ್ನು ಮೇಲೆ ನಿನ್ನ ಠಿಕಾಣಿ ಇಲ್ಲೆ ಎಂದು ಕೈ ಬಾಯಿ ಸನ್ನೆಯಲ್ಲಿ ಹೇಳಿ ನಿರ್ದಾಕ್ಷಿಣ್ಯವಾಗಿ ಅಲ್ಲೆ ಬಿಟ್ಟು ಹೋಗಿಬಿಟ್ಟ. ಮನೆಯಲ್ಲಿನ ತಮ್ಮ ಅಣ್ಣಂದಿರು, ಚಿಕ್ಕಪ್ಪಂದಿರು, ಹೊಸದಾಗಿ ಮದುವೆಯಾದ ಮಕ್ಕಳು ನಿರಾಳವಾಗಿ ಸಂಸಾರ ನಡೆಸಲೆಂಬ ಉದ್ದೇಶದಿಂದ ಮಲ್ಲಯ್ಯನ ಹಾಗೇಯೇ ನೂರಾರು ಹತ್ತಾರು ಜನ ಭಜನಾ ಕೋಲಿಯ ಅಂಗಳಕ್ಕೆ ಬಂದು ಮಲಗುವುದನ್ನು ರೂಡಿಸಿಕೊಂಡಿದ್ದರು. ಅವರನ್ನೆಲ್ಲ ಕಣ್ತುಂಬಿಕೊಳ್ಳುತ್ತಾ ಮಲ್ಲಯ್ಯ ಅಲ್ಲೆ ಮೂಲೆಯಲ್ಲಿ ಅಡ್ಡಾದ. ಇದಾಗಿ ಅದಾಗಿ ವರ್ಷಾನುಗಟ್ಟಲೇ ಈ ಕೋಲಿಯ ಅಂಗಳವೇ ಮಲ್ಲಯ್ಯನ ಶಯನಗ್ರಹವಾಗಿಬಿಟ್ಟಿತ್ತು.
**
ಅವತ್ತು ಧರೆಗಟ್ಟಿಯಲ್ಲಿ ತಡರಾತ್ರಿಯವರೆಗೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವಿದ್ದುದರಿಂದ ಪಕ್ಕದ ವಜ್ರಮಟ್ಟಿಯ ಪ್ರಲ್ಹಾದ ಮತ್ತು ಗೆಳೆಯರು ಕಬಡ್ಡಿ ನೋಡಲು ಬಂದವರು ಅಲ್ಲೆ ಭಜನಾ ಕೋಲಿಯ ಮುಂದೆ ತನ್ನ ಗೆಳೆಯರೊಂದಿಗೆ ಮಲಕ್ಕೊಂಡಿದ್ದರು. ಬೆಳಗ್ಗಿನ ಜಾವ ಸೂರ್ಯ ಮೂಡಿ ಎಳೆಬಿಸ್ಲು ಹೊಚ್ಚಿಕೊಂಡ ರಗ್ಗನ್ನು ಚುರುಗುಡಿಸೊಡದಾಗ ಎಚ್ಚರಗೊಂಡ ಹುಡುಗರು ಅಲ್ಲೆ ರಗ್ಗಿನೊಳಗಡೆಯೇ ಕಾಲು ಚಾಚಿಕೊಂಡು ಒಬ್ಬರನ್ನೊಬ್ಬರು ಆಡಿಕೊಳ್ಳುತ್ತಾ ಮಜಕೂರಿಗೆ ಬಿದ್ದಿದ್ದರು. ಇವರ ಗದ್ದಲಕ್ಕೆ ಮೇಲೆದ್ದ ಮೂಕ ಮಲ್ಲಯ್ಯ ಎರಡು ಕೈ ಆಕಾಶಕ್ಕೆಸೆಯುತ್ತಾ ಎದ್ದು ನಿಂತು ಬೆನ್ನು ನಿಟಾರಿಸತೊಡಗಿದಾಗ ನಿಧಾನಕ್ಕೆ ಅವನ ಸೊಂಟದ ಸುತ್ತಲಿದ್ದ ಲುಂಗಿ ಕೆಳಕ್ಕೆ ಜಾರುವುದಕ್ಕೂ, ಗೆಳೆಯರ ಜೋಕಿಗೆ ಈ ಕಡೆ ಹೊರಳಿ ಹಲ್ಲುಕಿಸಿಯುತ್ತಿದ್ದ ಪಲ್ಯಾನಿಗೆ ಮಲ್ಲಯ್ಯನ ಗುಪ್ತಾಂಗದ ದರ್ಶನವಾಗುವುದಕ್ಕೂ ಸರಿ ಹೋಯಿತು.
ತಮಾಷೆಯ ಮೂಡಿನಲ್ಲಿದ್ದ ಪಲ್ಯಾನಿಗೆ ಮಲ್ಲಯ್ಯನಿಗೆ ಸೊಂಟದ ಕೆಳಗಿನ ದರ್ಶನವಾಗುತ್ತಲೇ ಏಕದಂ ಸಿಟ್ಟು ಬಂದು ’ಥೋ ಅಸಂಯ್ಯ.. ಲೇ ನೋಡ್ರಲೇ ಅಲ್ಲೊಬ್ಬ ಹ್ಯಾಂಗ ತನ್ನ ಗಳ್ಳಗಂಟಿ ಅಳ್ಯಾಡಿಸಿಕೋತ ನಿಂತಾನ ಎಂದು ಚೀರಿ ಬಿಟ್ಟ. ಅಲ್ಲಿ ಮಲಕ್ಕೊಂಡವರೆಲ್ಲ ಎದ್ದು ಕುಂತು ಮಲ್ಲಯ್ಯನ ಕಡೆ ನೋಡಿದರು. ಇದ್ಯಾವುದರ ಖಬರಿಲ್ಲದೇ ಮಲ್ಲಯ್ಯ ತನ್ನ ಗಳ್ಳಾಗಂಟಿ ಅಳ್ಯಾಡಿಸುತ್ತಲೇ ಭಜನಿ ಕೋಲಿಯ ಕಟ್ಟಿ ಇಳಿದು ಹೋಗಿ ಚಿಲ್ ಎಂದು ಉಚ್ಚಿ ಜಿಗಿಸತೊಡಗಿದ.
ಪ್ರಲ್ಹಾದ ತಮಾಷೆಯ ಗುಂಗಿಗೆ ಕೃತಕ ಸಿಟ್ಟನ್ನು ತೋರ್ಪಡಿಸುತ್ತಾ ಮತ್ತೆ ಮಾತಾಡತೊಡಗಿದ. ಥೋ ಎದ್ದ ಗಳೇನ್ ಎಂಥಾದ್ದ ನೋಡಿದ್ನೆಪಾ. ಅಸಂಯ್ಯ, ಇವತ್ತು ಏನ್ ಕಾದೈತೋ ಏನೋ. ನನ್ನ ಆ ದೇವರೇ ಕಾಪಾಡಬೇಕು . ಇವತ್ತಿನ ಮೂಡೆಲ್ಲ ಹಾಳು ಮಾಡ್ತು ಈ ಗಳ್ಳಾಗಂಟಿ ದರ್ಶನ’ ಎಂದ.
ಅವನದೇ ವಾರಿಗೆಯ ಧರೆಗಟ್ಟಯ ದೋಸ್ತ್ ಬಸ್ಯಾ ಅದೇ ತಮಾಷೆಯ ಮೂಡಿನಲ್ಲಿ ಅವನಿಗೆ ಪ್ರತ್ಯುತ್ತರ ನೀಡುತ್ತಾ, ’ಲೇ ಮಗನ.. ಒಳ್ತ ಅನ್ನು. ಅಂವ ರುದ್ರಯ್ಯನವರ ಸ್ವಾಮಿ ಸಾಮಾನು ಬಡ್ದು ಹುಟ್ಟಿರೋ ಸಾಮಿ. ಹೋಗ್ಹೋಗು… ನಿನಗಿವತ್ತು ಸಾಕ್ಷಾತ್ ದೇವರ$ ಬೆಟ್ಯಾಗಾನ. ನೀನು ಮಾಡೋ ಕೆಲಸ ಇವತ್ತು ಸಕ್ಸಸ್ ಅಂತ ತಿಳ್ಕೊಂಡಬಿಡು. ಅಂವನ ಸಾಮಾಣಿಗೆ ಇನ್ನೊಮ್ಮಿ ನಮಸ್ಕಾರ ಮಾಡು’ ಎಂದು ಉಕ್ಕಿ ಬರುವ ನಗು ತಡೆಹಿಡಿದು ನುಡಿದ.
ಇದರಿಂದ ಪಲ್ಯಾನ ತಮಾಷೆಯ ಬುದ್ಧಿ ಮತ್ತಷ್ಟು ಉದ್ರೇಕಗೊಂಡು ’ಮಗನ, ಜೋಕ್ ಮಾಡ್ತಿ? ಹೋಗಿ ಹೋಗಿ ಅಂವನ ಸಾಮಾನಿಗ ಸಾಮಾಡಾಕ ಹೇಳ್ತಿ’ ನನ್ನೇನ ಮಬ್ಬ ಅರಬನ್ನ ಮಾಡಿ ಏನು?
ಬಸ್ಯಾ ಈ ಸಲ ಮತ್ತಷ್ಟು ಗಂಭೀರದಿಂದೆಂಬಂತೆ ’ಲೇ ಮಗನ ನಕಲಿ ಮಾಡಾಕತ್ತಿಲ್ಲ ನಾನು ಖರೇನ ನಿನಗ ಏನು ಆಗಬೇಕು ಅನ್ನೋದನ್ನ ಮನಸ್ನ್ಯಾಗ ಅನ್ಕೊಂಡು ಅಂವನ ಕಡೆ ನಮಸ್ಕಾರ ಮಾಡು. ಇವತ್ತು ಸೂರ್ಯ ಮುಳುಗುದರೊಳಗ ನೀ ಅನ್ಕೊಂಡದ್ದು ಆಗಲಿಲ್ಲಂದ್ರ ಕೇಳು.’
ಹಂಗಾರ ನಾನು ಇವತ್ತು ಓಸಿ ನಂಬರ್ ಬರಿಸ್ತಿನಿ. ನನ್ನ ನಂಬರ್‌ಗೆ ಓಸಿ ಹತ್ತತೈನು..? ಪಲ್ಯಾ ಸವಾಲು ಹಾಕಿದ.
’ಓ… ಗ್ಯಾರಂಟಿ’ ಅಂದ ಬಸ್ಯಾ
’ಮಗನ ನೀ ಹೇಳಿದಂಗ ಅಂವಂಗ ನಮಸ್ಕಾರ ಮಾಡ್ತಿನಿ. ಅಕಸ್ಮಾತ್ ನನಗ ಇವತ್ತ ನಂಬರ್ ಹತ್ತಲಿಲ್ಲ ಅಂದ್ರ ನಿನ್ನ ಹುಡುಕ್ಕೊಂಡು ಬಂದು ಓಡ್ಯಾಡಿಸಿ ಹೊಡಿತಿನಿ.’
ಆತಪಾ, ಹಂಗ ಮಾಡುವಿಯಂತ. ಈಗ ನಮಸ್ಕಾರ ಮಾಡು.’
’ಇಲ್ಲ, ಒಸಿ ನಂಬರ್ ಹತ್ತಿದ ಮ್ಯಾಲ ಬಂದು ನಮಸ್ಕಾರ ಮಾಡ್ತೆನಿ’
’ಮಗನ ಪಸ್ಟು ನೀ ಮಾಡು’
’ಆತು ತುಗೋ ಹಂಗಾರ’ ಪಲ್ಯಾ ಕುಳಿತಲ್ಲೆ ಎದಿ ಹಣೆ ಮುಟ್ಟಿಕೊಂಡಿದ್ದ.
’ಹೇ ಹಂಗೆಲ್ಲ ನಡೆಯಂಗಿಲ್ಲ. ಎದ್ದು ನಿಂತು ಆ ಮೂಕನ ಸಾಮಾನ ಕಡೆ ಉದ್ದಂಡ ನಮಸ್ಕಾರ ಮಾಡು. ಆಗ ಒಸಿ ತ್ತಿಲ್ಲಂದ್ರ ಕೇಳು.’
ಪಲ್ಯಾ ಅಡ್ಡಬಿದ್ದು ಉದ್ದಂಡ ನಮಸ್ಕಾರ ಮಾಡೇಬಿಟ್ಟ. ಆ ಕ್ಷಣ ಬಸ್ಯಾ ಸೇರಿದಂತೆ ಅಲ್ಲಿ ಹಾಸಿಗೆಯಲ್ಲಿ ಮಲಗಿ ತಮಾಷೆ ನೋಡುತ್ತಲಿದ್ದ ಗೆಳೆಯರೆಲ್ಲರೂ ಬಿದ್ದು ಬಿದ್ದು ನಗತೊಡಗಿದರು. ಪಲ್ಯಾ ಪೆಕರನಂತೆ ಅವರನ್ನೆಲ್ಲ ನೋಡತೊಡಗಿದ. ಇದ್ಯಾವುದರ ಅರಿವಿಲ್ಲದೆ ಮೂಕ ಮಲ್ಲಯ್ಯ ಉಚ್ಚಿ ಹೋಯ್ದು ಬಂದು ಮತ್ತೆ ತನ್ನ ಚಾಪೆಯೊಳಗ ಅಡ್ಡಾಗಿ ಮುಗಿಲ ದಿಟ್ಟಿಸತೊಡಗಿದ.
**
ಮರುದಿನ ಬೆಳ್ಳಂಬೆಳಿಗ್ಗೆ ಪಲ್ಯಾ ಅವಸರವಾಗಿ ಬಸ್ಯಾನನ್ನು ಹುಡುಕಿಕೊಂಡು ಬಂದ. ಬಸ್ಯಾ ಮತ್ತು ಅವನ ಇಬ್ಬರು ದೋಸ್ತ್ರು ಆಗಷ್ಟ ದನೇ ಎದ್ದು ಹರಟೆ ಹೊಡೆಯುತ್ತಾ ಹಾಸಿಗೆ ಮಡ್ಚುತ್ತಿದ್ದರು. ಪಲ್ಯಾ ಬಂದವನೇ ನನ್ನ ಪಾಲಿನ ದೇವರು ಎಲ್ಲಿ? ಎಂದು ಸುತ್ತಲೂ ಹುಡುಕತೊಡಗಿದ. ಮೂಕ ಮಲ್ಲಯ್ಯ ಸಹ ಅಲ್ಲೇ ಚಾಪೆಯೊಳಗ ಬಿದ್ದುಕೊಂಡಿದ್ದ. ಎಲರೂ ಯಾಕ ಯಾಕ ಎಂದರು.
’ನೀ ಹೇಳಿದ್ದ ಕರೆಕ್ಟ್ ಲೇ ಬಸ್ಯಾ ನನಗ ನಿನ್ನಿ ಓಸಿ ನಂಬರಕ್ಕ ೨೨ ಸಾವರ ರೊಕ್ಕ ಬಂದ್ವು’ ಎಂದ
ಎಲ್ಲರೂ ಅಚ್ಚರಿಯಿಂದ ದಿಗ್ಮೂಡರಾದರು. ಇವರ ಗದ್ದಲಕ್ಕೆ ಮೂಕ ಮಲ್ಲಯ್ಯ ಎದ್ದು ನಿಂತ.
ಪಲ್ಯಾ ’ನಾನು ನನ್ನ ದೇವರಿಗೆ ನಮಸ್ಕಾರ ಮಾಡಬೇಕು’ ಎಂದಾಗ ಬಸ್ಯಾನ ಗೆಳೆಯರು ಮೂಕ ಮಲ್ಲಯ್ಯನನ್ನು ಎಬ್ಬಿಸಿಕೊಂಡು ಭಜನಾ ಕೋಲಿ ಹಿಂದಿನ ಹಿತ್ತಿಲಕ್ಕೆ ಕರೆ ತಂದರು. ಅಲ್ಲಿ ಪಲ್ಯಾ ಮಲ್ಲಯ್ಯನ ಲುಂಗಿ ಎತ್ತಿದ್ದವನೇ ತನ್ನ ಬೊಕ್ಕಣದಲ್ಲಿಂದ ಕುಂಕುಮ ವಿಭೂತಿ ತೆಗೆದು ಅಲ್ಲಿನ ಗೆಂಡೆದೇವರಿಗೆ ಹಚ್ಚಿ ಅಡ್ಡಬಿದ್ದು ನಮಸ್ಕಾರ ಮಾಡಿದ. ಅವನ ಭಕ್ತಿಗೆ ಮರಳಾದವರಂತೆ ಉಳಿದವರು ಸಹ ನಮಸ್ಕರಿಸಿದರು.
**
ಹೂಸು ಬಿಟ್ಟರೂ ಊರೆಲ್ಲ ಗುಲ್ಲಾಗುವ ಧರೆಗಟ್ಟಿಯದು. ಮಲ್ಲಯ್ಯನ ಗೆಂಡೆದೇವರಿಗೆ ನಮಸ್ಕಾರ ಮಾಡಿದ್ದಕ್ಕೆ ಪಲ್ಯಾನಿಗೆ ನಂಬರ್ ಹತ್ತಿರುವುದು ಊರೆಲ್ಲ ಗೊತ್ತಾಯಿತು. ಮೊದಲಿಗೆ ಬಸ್ಯಾ ಮತ್ತು ಗೆಳೆಯರು ತಾವು ಯಾವುದೇ ಕೆಲಸಕ್ಕೆ ಹೋಗುವಾಗ ನಮಗೆ ಯಶಸ್ಸು ಸಿಗಲಿ ಎಂದು ಬೇಡಿಕೊಂಡು ಗೆಂಡೆದೇವರಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದರು. ಇದು ಬರಬರುತ್ತಾ ಊರೆಲ್ಲರಿಗೂ ಗೊತ್ತಾಗಿ ಮಲ್ಲಯ್ಯ ಎಲ್ಲೆ ಕಂಡರೂ ಅಲ್ಲೆ ಗಿಡಗಂಟಿ, ಗೋಡೆ, ಕಟ್ಟೆಗಳ ಗೆಂಡೆದೇವರನ್ನು ಎಳೆದುಕೊಂಡು ಹೋಗಿ ಲುಂಗಿ ಎತ್ತಿ ನಮಸ್ಕಾರ ಮಾಡಿ ಮತ್ತೆ ಬಯಲಿಗೆ ಕರೆತಂದು ಬೀಡುತ್ತಿದ್ದರು. ಇದು ಎಲ್ಲಿಯ ಮಟ್ಟಿಗೆ ಮುಂದುವರೆಯಿತೆಂದರೆ ಊರ ಜನ ಒಬ್ಬೊಬ್ಬರೆ ರುದ್ರಯ್ಯನವರ ಮನೆ ಮಟಾ ಬಂದು ’ಅಜ್ಜಾರ ಒಂದೀಟು ಮಲ್ಲಯ್ಯನವರನ್ನ ಕಳಿಸಿಕೊಡ್ರಿ.. ಕೆಲಸೈತಿ’ ಎಂದು ಹಿತ್ತಿಲಕ್ಕೆ ಕರೆದುಕೊಂಡು ಹೋಗಿ ಗೆಂಡೆದೇವರಿಗ ನಮಸ್ಕರಿಸಿ ತಮ್ಮ ಭಕ್ತಿಯನ್ನು ಮೆರೆಯುತ್ತಿದ್ದರು. ಬಹುತೇಕ ಭಕ್ತರಿಗೆ ಅಂದುಕೊಂಡಿದ್ದು ಈಡೇರುತ್ತಿದ್ದುದರಿಂದ ದಿನದಿಂದ ದಿನಕ್ಕೆ ಗೆಂಡೆದೇವರ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. ಇದು ಅವರವರ ಗಂಡಂದಿರಿಂದ ಹೆಂಗಸರಿಗೂ ಗೊತ್ತಾಗಿ ಅವರು ಸಹ ಪ್ರಾರಂಭದಲ್ಲಿ ಗೆಂಡೆದೇವರಿಗೆ ಕಂಡಲ್ಲಿ ಕೈ ಮುಗಿಯುತ್ತಿದ್ದರು.
ಅದು ಇದು ಆಗಿ ಒಂದಿನ ರುದ್ರಯ್ಯನವರಿಗೆ ಸುದ್ದಿ ಹೋಯಿತು. ಅವರು ಮೊದಮೊದಲು ತನ್ನ ಮೂಕ ಮಗ ದೇವರೆಂಬುದರ ಬಗ್ಗೆ ನಂಬಿಕೆ ಬರಲಿಲ್ಲ. ಇದೇನು ಅಸಹ್ಯ ಎಂದು ಮಗನಿಗೆ ಮೂಕ ಭಾಷೆಯಲ್ಲಿ ಬೈಯ್ದು ಬುದ್ಧಿ ಹೇಳಿ ಮನೆಯಲ್ಲಿ ಕುಂಡ್ರಸಿಕೊಂಡು ಬಿಟ್ಟರು. ಆದರೆ, ಊರ ಭಕುತರು ಬಿಡಬೇಕಲ್ಲ. ಮನೆ ಮಟಾ ಬಂದು ನಮಗೆ ಗೆಂಡೆ ದೇವರ ದರ್ಶನ ಬೇಕೆ ಬೇಕೆಂದು ಜಗಳ ತೆಗೆಯತೊಡಗಿದರು. ಈ ಗಲಾಟೆ ಊರ ಹಿರಿಯರಿಗೂ ಗೊತ್ತಾಯಿತು. ಹಿರಿಯರು ರುದ್ರಯ್ಯನನ್ನು ಕರೆ ಕಳಿಸಿ ಪಂಚಾಯ್ತಿ ನಡೆಸಿದರು.
’ಯಾಕ ರುದ್ರಯ್ಯ, ನಿಮ್ಮ ಮನೆತನದ ಮಹಿಮೆ ನಿನಗ ಮರ್‍ತ ಹೋಗೇತೇನು? ನಿಮ್ಮ ಪೂರ್ವಜರು ಕಾಲ ಕಾಲಕೆ ದೇವರಾಗಿ ಊರಿಗೆ ಎದುರಾದ ಕಂಟಕಗಳನ್ನು ದೂರಮಾಡಿದ್ದು ನೆನಪಿಲ್ಲೇನು? ಎಂದು ಕುರುಬರ ಹೆರಕಪ್ಪ ಮುತ್ಯಾ ತರಾಟೆಗೆ ತೆಗೆದುಕೊಂಡ.
’ಆದ್ರ ಇದು ಮರ್‍ಯಾದೆ ಪ್ರಶ್ನೆ ಮುತ್ಯಾ, ಆ ಸೊಂಟದ ಕೆಳಗಿನ ಸಾಮಾನನ್ನು ಪೂಜೆ ಮಾಡೂದಂದ್ರ ಅಸಂಯ್ಯ ಅನ್ಸೂದಿಲ್ಲೇನ್ರಿ? ರುದ್ರಯ್ಯ ಸಹ ತನ್ನ ಅನುಮಾನವನ್ನು ಹೊರ ಹಾಕಿದ.
’ಯಾಕ್ರಿ ರುದ್ರಯ್ಯ ನಮ್ಮ ದೇಶದ ಆಧ್ಯಾತ್ಮ ಏನು ಹೇಳ್ತೈತಿ ಗೊತ್ತೈತಿಲ್ಲೋ?’ ಇಲ್ಲಿ ಎಲ್ಲ ಬಿಟ್ಟಾಂವ ದೊಡ್ಡಾಂವ’ ಭೈರಾಗಿಗಳು, ವಿರಾಗಿಗಳು, ಅವದೂತರೇ ಈ ನರ ಮನುಷ್ಯರ ಸಂಕಷ್ಟಗಳನ್ನು ದೂರ ಮಾಡುವುದು ನಿಮಗೆ ಗೊತ್ತಿಲ್ಲೇನು? ಇಲ್ಲಿ ಎಲ್ಲ ಮೋಹ ಜಂಜಡಗಳಿಂದ ಬಿಡಿಸಿಕೊಂಡಿದ್ದರೆ ಗೌರವ’ ಎಂದು ದ್ಯಾಮಪ್ಪಜ್ಜ ಚರ್ಚೆಗೆ ದನಿಗೂಡಿಸಿದರು.
’ಅವರೆಲ್ಲ ಯಾಕ ನಿಮ್ಮ ಹಿರ್‍ಯಾ ಪಟಗದ ಮುತ್ಯಾಂದು ನೆನಪೈತಿಲ್ಲೋ’ ಎಂದು ಹೆರಕಪ್ಪ ಹೇಳಿದ.
ಹಿಂಗ ಮುಂದುವರೆದ ಅವತ್ತಿನ ಸಭೆಯಲ್ಲಿ ಮೂಕ ಮಲ್ಲಯ್ಯ ಗೆಂಡೆದೇವರಾದುದಕ್ಕೆ ಅಧಿಕೃತ ಮುದ್ರೆ ಬಿದ್ದಂತಾಯಿತು. ಅವತ್ತಿನ ಸಭೆಯಲ್ಲಿ ದೈವ ಲೀಲೆಗಳನ್ನು ಪ್ರಕಟಿಸಿದ ಗೆಂಡೆದೇವರಿಗೆ ರುದ್ರಯ್ಯನವರ ಹಿತ್ತಲಿನಲ್ಲಿ ಒಂದು ಸಣ್ಣಮಠ ಕಟ್ಟಿ ಅಲ್ಲಿ ಸಾರ್ವಜನಿಕರ ದರ್ಶನದ ವ್ಯವಸ್ಥೆಗೆ ಮಾತಾಯಿತು. ಮನೆಗಿಂತಿಷ್ಟು ಪಟ್ಟಿ ಹಾಕಿ ವರ್ಷೊಪ್ಪತ್ತಿನಲ್ಲಿ ಮಠ ಎಬ್ಬಿಸುವ ಸಂಕಲ್ಪ ತೊಟ್ಟರು.
ಹೊಸಮಠದಲ್ಲಿ ಗೆಂಡೆದೇವರ ಪೀಠಾರೋಹಣಕ್ಕಾಗಿ ಬಾಗಲಕೋಟೆಯಿಂದ ಚತುರ್ಮುಖ ಲಿಂಗದೇವ ಸ್ವಾಮೀಜಿಯವರು ಬಂದಿದ್ದರು. ಅವರಂದು ಆರ್ಶಿವರ್ಚನ ನೀಡುತ್ತಾ, ಶಿವನ ನೆಪದಲ್ಲಿ ಆದಿಕಾಲದಿಂದಲೂ ಲಿಂಗವನ್ನು ಪೂಜಿಸುತ್ತಾ ಬಂದಿರುವ ಪರಂಪರೆ ನಮ್ಮದು. ಈ ಜಗತ್ತಿನ ನಿರಂತರ ಚಲನೆಗೆ ಲಿಂಗವೇ ಪ್ರಧಾನವಾದುದು. ಲಿಂಗವೆಂಬುದು ಆದಿ ಅನಾದಿ. ಅದು ಜಗತ್ತೆ ಕೈ ಬಿಟ್ಟಂತೆ. ಲಿಂಗದ ಕುರಿತು ಅಸಯ್ಯಪಟ್ಟುಕೊಳ್ಳಬಾರದೆಂದು ದೇವರು ಈ ಸಲ ಗೆಂಡೆದೇವರ ರೂಪದಲ್ಲಿ ಈ ಭೂವಿಯಲ್ಲಿ ಅವತರಿಸಿ ಬಂದಿದ್ದಾನೆ. ನಾವೆಲ್ಲರೂ ಅವನನ್ನು ಭಕ್ತಿಯಿಂದ ಪೂಜಿಸೋಣ. ಗೆಂಡೆದೇವರನ್ನು ಪೂಜಿಸಲು ಯಾವುದೇ ರೀತಿಯ ಹಿಂಜರಿಕೆ ಬೇಡ. ಮನಸೋ ಇಚ್ಚೆ ನಿಮ್ಮನ್ನು ಅರ್ಪಿಸಿಕೊಳ್ಳಿ ಎಂದು ಆರ್ಶಿವಚಿಸಿದರು.
ಗೆಂಡೆದೇವರ ಪ್ರಸಿದ್ಧಿ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರತೊಡಗಿದ್ದರಿಂದ ಮಠದ ಮುಂದೆ ಭಕ್ತ ಸಾಗರ ಹೆಚ್ಚುತ್ತಲೇ ಹೋಯಿತು. ಅಂದುಕೊಂಡಿದ್ದು ಈಡೇರುತದೆ ಎಂಬ ನಂಬಿಕೆ ಎಲ್ಲೆಡೆ ಹರಡಿದ್ದರಿಂದ ನಾಡಿನ ಮೂಲೆ ಮೂಲೆಯಿಂದಲೂ ಧರೆಗಟ್ಟಿಯತ್ತ ಜನ ಸಾಗರ ಹರಿದು ಬರತೊಡಗಿತು. ಆನರನ್ನು ನಿಂಯತ್ರಿಸಲಿಕ್ಕಾಗದೇ ಮಠದ ನಾನಾ ನಮೂನಿಯ ದರ್ಶನಗಳಿಗೆ ತಹರೆವಾರು ರೀತಿಯಲ್ಲಿ ರೇಟು ಪಿಕ್ಸು ಮಾಡಿ ಬೋರ್ಡು ನೇತಾಕಲಾಯಿತು. ’ಗೆಂಡೇದೇವರಿಗೆ ನಮೋ ನಮೋ’ ಎಂದು ತಮ್ಮೂರುಗಳಿಂದಲೇ ನಾಮಸ್ಮರಣೆ ಮಾಡುತ್ತಾ ದರ್ಶನಕ್ಕೆ ಬರುತ್ತಿದ್ದ ಭಕ್ತರು ಕಪ್ಪಾದ ರೋಮರಾಶಿಯ ನಡುವೆ ಪವಡಿಸಿದ್ದ ಗೆಂಡೆದೇವರಿಗೆ ಕೈಯ್ಯಾರೆ ಕುಂಕುಮ ವಿಭೂತಿ ಹೂವುಗಳಿಂದ ಶೃಂಗರಿಸಿ ಕಣ್ತುಂಬಿಕೊಳ್ಳುತ್ತಾ, ಕೊಂಡಾಡುತ್ತಾ ಮುಂದಕ್ಕೆ ಹೋಗುತ್ತಿದ್ದರು. ಕೆಲವು ಶ್ರೀಮಂತ ಭಕ್ತರಂತೂ ತಮ್ಮ ಬೇಡಿಕೆ ಈಡೇರಿಸಿದ್ದ ಗೆಂಡೆದೇವರ ಪ್ರತಿಕೃತಿಯನ್ನು ಬಂಗಾರ, ಬೆಳ್ಳಿ ತಾಮ್ರ ಫಲಕಗಳಲ್ಲಿ ಕೆತ್ತಿಸಿ ಮಠದ ಗೂಟುಗಳಿಗೆ ನೇತು ಹಾಕಿದ್ದರು. ಹೀಗಾಗಿ ಮಠದ ತುಂಬಾ ಎಲ್ಲೆಡೆಯೂ ನಾನಾ ನಮೂನಿ ಆಕಾರದ ಗೆಂಡೆದೇವರೇಗಳೇ ನೇತಾಡುತ್ತಿದ್ದವು.
**
ಜಗಮಗಿಸುವ ವಿದ್ಯುದ್ವೀಪಗಳ ಹೊಳಪಿನ ಕೆಳಗೆ ವಿಶೇಷ ಕೆತ್ತನೆಯ ಗದ್ದುಗೆಯ ಮೇಲೆ ವೈವಿಧ್ಯಮಯ ಹೂವುಗಳ ನಡುವೆ ಕುಂಕುಮ, ವಿಭೂತಿಗಳಿಂದ ಅಲಂಕರಿಸಿಕೊಂಡಿರುತ್ತಿದ್ದ ಗೆಂಡೆದೇವರು ಬೆಳಗ್ಗೆಯಿಂದ ತಡರಾತ್ರಿಯವರೆಗೂ ಭಕುತಜನಕ್ಕೆ ದರ್ಶನ ನೀಡಬೇಕಾಗುತ್ತಿತ್ತು. ಇದರಿಂದ ಗೆಂಡೆದೇವರ ವಾಹನವಾಗಿದ್ದ ಮೂಕ ಮಲ್ಲಯ್ಯನ ಸರೀರಕ್ಕೆ ಸುಸ್ತಾಗುತ್ತಿತ್ತು. ಒಂದಕ್ಕೆ, ಎರಡಕ್ಕೆ ಅವಸರವಾದರೂ ಬಿಡದ ಭಕ್ತರು ದರ್ಶನಕ್ಕೆ ಗುದಮುರುಗಿ ಬೀಳುತ್ತಿದ್ದುದರಿಂದ ದೇವರು ಮುಂಜೇಲಿಂದ ಸಂಜಿ ಮಟ ಕುಂತಲ್ಲೆ ಕುಂಡರ್ರಬೇಕಿತ್ತು. ನಡು ನಡುವೆ ಒಂದಕ್ಕೆ ಹೊಯ್ಯಲು ಅವಕಾಶವಿತ್ತಾದರೂ ಒಂದಕ್ಕೆ ಮಾಡಿ ಒಳಬಂದಾಗೊಮ್ಮೆ ವಿಭೂತಿ ಕುಂಕುಮ, ಹೂವುಗಳಿಂದ ದೇವರ ಅಲಂಕಾರ ಮಾಡುವುದು ಅನಿವಾರ್ಯವಾಗುತ್ತಿತ್ತು. ಅದಕ್ಕಾಗಿಯೇ ಒಂದಿಬ್ಬರು ಪೂಜಾರಿಗಳನ್ನು ನೇಮಕ ಮಾಡಿದ್ದರು. ಈ ಕಿರಿ ಕಿರಿ ತಾಳಲಾರದೇ ತನ್ನನ್ನು ಮುಟ್ಟಿ ಮುಟ್ಟಿ ನಮಸ್ಕಾರ ಮಾಡುತ್ತಿದ್ದ ಭಕುತನರನ್ನು ಗೆಂಡೆದೇವರು ಒಮ್ಮೊಮ್ಮೆ ಸಿಟ್ಟಿನಿಂದ ಒದ್ದು ತನ್ನ ಮೂಕಭಾಷೆಯಲ್ಲಿ ’ಆ..ಆ ಊ..ಊಂ’ ಎಂದು ಚೀರಾಡುತ್ತಾ ಜಾಡಿಸಿ ಒದೆಯುವುದು, ನಮಸ್ಕಾರ ಮಾಡುತ್ತಿದ್ದ ಭಕ್ತರ ಕೂದಲು ಹಿಡಿದು ಎಳೆದಾಡುವುದು ಮಾಡುತ್ತಿತ್ತು. ಇದು ಕೂಡ ದೇವರ ಅನುಗೃಹದ ಶೈಲಿಯೇ ಎಂದು ಭಾವಿಸುತ್ತಿದ್ದ ಭಕ್ತಿಯ ಉತ್ತುಂಗದಲ್ಲಿರುತ್ತಿದ್ದ ಭಕ್ತರು ’ಒದಿ ದೇವರ ಓದಿ.. ಒದ್ದು ಒದ್ದು ನನ್ನ ಪಾಪದ ಪಾಶ ನಾಶ ಮಾಡು. ನಾನು ಮಾಡಿರೋ ಪಾಪಕ್ಕೆ ಹಿಂಗ ಸಾವಕಾಶ ಒದ್ದರ ಆಗೂದಿಲ್ಲ. ಒದ್ದು ಒದ್ದು ನನ್ನ ದೇಹ ಶುದ್ಧಿ ಮಾಡು ಎಂದು ಮತ್ತಷ್ಟು ಒದಿಸಿಕೊಳ್ಳಲು ಪಣ ತೋಡುತ್ತಿದ್ದರು. ಇದರಿಂದ ಮೊದಲೇ ಕುಂತಲ್ಲೆ ಕುಂತು ಹೈರಾಣಾಗಿರುತ್ತಿದ್ದ ದೇವರು ’ಇವರೌರ ಈ ಮಳ್ಳ ಭಕ್ತರಿಗೆ ಏನು ಮಾಡಬೇಕು’ ಎಂದು ಅಸಹಾಯಕತನದಿಂದ ಚಿಂತೇಗೀಡಾಗುತ್ತಿತ್ತು. ಭಕ್ತರು ಮಾತ್ರ ಇನ್ನು ಒದೆ ಒದೆ ಎಂದು ಬೆಂಬಿಡದೇ ಕಾಡತೊಡಿದಾಗ ದೇವರು ಮುಗಿಲಮುಖಿಯಾಗಿ ’ಯೋಯೋ’ ಎಂದು ಚೀರಾಡುತ್ತಿತ್ತು. ಪೂಜಾರಗಳೇ ಭಕ್ತರನ್ನು ಎಳೆದು ಹೊರ ಹಾಕುತ್ತಾ ’ಹಂಗ ದೇವರನ್ನು ಪೀಡಿಸಬಾರದು’ ಎಂದು ಸಮಾಧಾನಿಸಿ ಕಳಿಸಿಕೊಡುತ್ತಿದ್ದರು.
ಊರಿನ ಹೆಂಗಸರು ಮೊದಮೊದಲು ಗೆಂಡೆದೇವರನ್ನು ನಿರ್ಲಕ್ಷಿಸಿ ಅಡ್ಡಾಡುತ್ತಿದ್ದರಾದರೂ ಊರ ಹಿರಿ ತಲಿಗಳು ಗೆಂಡೆದೇವರ ದೈವತ್ವವನ್ನು ಒಪ್ಪಿಕೊಂಡ ಮೇಲೆ ನಮ್ಮದೇನಿದೆ ಎಂಧು ಅವರು ದರ್ಶನಕ್ಕೆ ಬರತೊಡಗಿದ್ದರು. ಈ ಮೊದಲೆಲ್ಲ ಶೈಶವಾವಸ್ತೆಯಲ್ಲೇ ಇದ್ದು ಒಂದಿಷ್ಟು ಆರಾಮಾಗಿದ್ದ ದೇವರ ವಾಹನ ಮೂಕ ಮಲ್ಲಯ್ಯನ ದೇಹ ಇತ್ತೀಚೆಗಷ್ಟೆ ಹರೆಯಕ್ಕೆ ದುಮ್ಮಿಕ್ಕುತ್ತಿತ್ತು. ಹೀಗಾಗಿ ಮಹಿಳೆಯರು ದರ್ಶನಕ್ಕೆ ಬಂದಾಗ ಆ ವಾಹನದ ಒಂದು ಭಾಗವೇ ಆಗಿದ್ದ ಗೆಂಡೆದೇವರು ವಿಶೇಷ ಎಚ್ಚರಾವಸ್ತೆಗೆ ಒಳಗಾದಂತೆ ಭಾಸವಾಗುತ್ತಿತ್ತು. ಸೌಂದರ್ಯದ ಒಡತಿಯರು ಬಂದಾಗ ಅವರನ್ನು ಇದಿರುಗೊಳ್ಳಲೆಂಬಂತೆ, ಅವರ ಸೌಂದರ್ಯರಸ ಆಸ್ವಾದಿಸಲೆಂಬಂತೆ ನಿಧಾನಕ್ಕೆ ಎದ್ದುನಿಂತು ಮಿಡುಕತಿತ್ತು. ಅದು ಮಿಡುಕಿದಾಗಲೆಲ್ಲ ಅದರ ಎಡಬಲದಲ್ಲಿದ್ದ ಸಂಪಿಗೆ, ಸೇವಂತಿಗೆ, ಮಲ್ಲಿಗೆ ಪುಷ್ಪಗಳು ನೆಲಕ್ಕೆ ಉದುರುತ್ತಿದ್ದವು. ಅವು ಉದುರಿದಾಗಲೆಲ್ಲ ತಮಗೆ ದೇವರ ವಿಶೇಷ ಅನುಗೃಹ ಲಬಿಸಿದಂತಾಯಿತು ಎಂದು ಭಕ್ತಿಭಾವದಿಂದ ಗಲ್ಲ ಬಡೆದುಕೊಳ್ಳುತ್ತಿದ್ದರು.
ಇಷ್ಟೆಲ್ಲ ಗೆಂಡೆದೇವರ ಪುರಾಣ ಕೇಳಿರುವ ಈ ಕತೆಯ ಓದುಗರಾದ ನೀವು ಸಹ ಗೆಂಡೆದೇವರ ಭಕ್ತರಾಗಿ ಪರಿವರ್ತಿತರಾಗಿರುತ್ತಿರಿ ಎಂಬುದರಲ್ಲಿ ಅನುಮಾನವಿಲ್ಲ. ಗೆಂಡೆದೇವರ ಪುರಾಣವನ್ನು ಓದುತ್ತಿರುವ ನಮ್ಮ ಪ್ರೀತಿಯ ಓದುಗರಿಗೆ ಇನ್ನೊಂದು ಮುಖ್ಯ ಸಂಗತಿಯನ್ನು ಜ್ಞಾಪಿಸಬೇಕು. ಗೆಂಡೆದೇವರ ವಾಹನವಾಗಿದ್ದ ಮೂಕ ಮಲ್ಲಯ್ಯನಿಗೆ ಅವರಿಬ್ಬರ ಅಣ್ಣಂದಿರ ಜೊತೆಗೆಯೇ ಬಾಲ್ಯವಿವಾಹ ನಡೆದಿತ್ತೆಂದು ಹೇಳಿತ್ತಲ್ಲ. ಪಾಪ, ಮೂಕ ಹುಡುಗ, ಇವನಿಗ್ಯಾರು ಹೆಣ್ಣು ಕೊಡಬೇಕೆಂದು ದುಡಿಯಲು ಮಂಗಳೂರಿಗೆ ಹೋಗಿ ಅಲ್ಲೆ ನೆಲೆಸಿದ್ದ, ವರ್ಷಕ್ಕೊಂದೆರಡವರ್ತಿ ಹಬ್ಬ ಹರಿದಿನಗಳಲ್ಲಿ ಊರಿಗೆ ಬರುತ್ತಿದ್ದ ರಾಚಯ್ಯನ ಸಣ್ಣ ಮಗಳು ತಾರಿಣಿಯನ್ನು ಮದುವೆ ಮಾಡಿದ್ದರಲ್ಲ. ಊರಿಗೆ ಬಂದಾಗೊಮ್ಮೆ ರಾಚಯ್ಯನ ಕಟುಂಬ ರುದ್ರಯ್ಯನ ಮನೆಯಲ್ಲೆ ಉಳಿದಕೊಳ್ಳುತ್ತಿತ್ತು. ಹಾಗೆ ಬಂದಾಗಲೆಲ್ಲ ಹುಡುಗರಾದ ಮೂಕ ಮಲ್ಲಯ್ಯ ಮತ್ತು ತಾರಿಣಿ ಅಂಡ್ಯಾಳ, ಕುಂಟಲಿಪ್ಪಿ ಮುಂತಾದವಗಳನ್ನು ಆಡಿಕೊಂಡು ಸುಖವಾಗಿದ್ದರು. ಮೂಕ ಮಲ್ಲಯ್ಯ ತಪ್ಪಲ್ವಾರಿ ಗುಡ್ಡಕ್ಕೆ ಹೋಗಿ ಬಾರೆ ಹಣ್ಣು, ಕಾರೆ, ಕವಳಿಕಾಯಿ ತಂದುಕೊಟ್ಟು ತಿನಿಸುತ್ತಿದ್ದ. ಆದರೆ, ಹುಡುಗಿ ಇತ್ತಿತ್ತಲಾಗಿ ಶಾಲೆಗೆ ಹೋಗುತ್ತಿದರಿಂದ ಧರೆಗಟ್ಟಿಗೆ ಬಂದಿರಲಿಲ್ಲ.
ಇತ್ತೀಚೆಗೆ ತನ್ನ ಗಂಡ ದೇವರಾಗಿರುವ ಬಗ್ಗೆ ಊರವರ ಬಾಯಲಿ ಕೇಳಿ ತಿಳಿದುಕೊಂಡಿದ್ದರಿಂದ ಇನ್ನು ನನ್ನ ಮಗಳು ಬಾಳ್ವೆ ದಾರಿ ತಪ್ಪಿದಂಗೆ ಸೈ ಎಂದು ತಾರಿಣಿ ತಂದೆತಾಯಿ ಚಿಂತೆಗೆ ಬಿದ್ದಿದ್ದರು. ಮಗಳನ್ನು ಇನ್ನೊಂದು ಮದುವಿ ಮಾಡಬೇಕೆ ಬೇಡವೇ ಎಂಬ ಗೊಂದಲದಲ್ಲಿದ್ದ ಅವರು, ಈ ಸಲ ಕಾರ್ತಿಕ ಮಾಸದಲ್ಲಿದ್ದ ಗೆಂಡೆದೇವರ ಪಲ್ಲಕ್ಕಿ ಉತ್ಸವಕ್ಕೆ ಹೋಗಿ ನಿಜಾಂಶ ಅರಿತು ಮುಂದೆ ಯೋಚಿಸಿದರಾಯಿತು ಎಂದು ಊರಿಗೆ ಹೊರಟು ಬಂದಿದ್ದರು.
ಕಳೆದ ಐದಾರು ವರ್ಷಗಳಿಂದ ಗೆಂಡೆದೇವರ ಪಲ್ಲಕ್ಕಿ ಉತ್ಸವ ಅನ್ನ ಸಂತರ್ಪನೆ ಸಾಂಗವಾಗಿ ನಡೆದುಕೊಂಡು ಬರುತ್ತಿತ್ತು. ವರ್ಷದಿಂದ ವರ್ಷಕ್ಕೆ ಗೆಂಡೆದೇವರ ಮಹಿಮೆ ಹೆಚ್ಚುತ್ತಲೇ ಇದ್ದುದರಿಂದ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿತ್ತು. ದೇವರ ಪ್ರಸಿದ್ಧಿಗನುಗುಣವಾಗಿ ಇತ್ತೀಚೆಗೆ ಊರ ಕೆರೆಯ ಮಗ್ಗಲಿನ ಮಡ್ಡಿಯಲ್ಲಿ ಬೃಹತ್ತಾದ ಗೆಂಡೆದೇವರ ಮಠವನ್ನು ಎದ್ದು ನಿಂತಿತ್ತು. ಅದರ ಅಂಗಳದಲ್ಲೆ ಜಾತ್ರೆ ನೆರವೇರುತ್ತಿತ್ತು.
ಮಠದ ಮುಂದಿನ ಕಿಲೋಮೀಟರ್ ಉದ್ದದ ಪೆಂಡಾಲಿನೊಳಗೆ ಬೆವರು ಸುರಿಸುತ್ತ ನಿಂತಿದ್ದ ಭಕ್ತಗಣದ ಹಿಂದೆ ರಾಚಯ್ಯ, ಗುರುವ್ವ ಮತ್ತು ತಾರಿಣಿ ನಿಂತುಕೊಂಡರು. ಅವರು ಅರ್ಧ ಕ್ಯೂ ಬರುವಷ್ಟರಲ್ಲಿಯೇ ಅವರಿಗೆ ಸಾಕು ಬೇಕಾಯಿತು. ಯಾರೋ ಅವರನ್ನು ತಮ್ಮ ಗೆಂಡೆದೇವರ ಪೂರ್ವಾಶ್ರಮ ಸಂಬಂಧಿಕರು ಎಂಬುದನ್ನು ಗುರುತಿಸಿ ಕ್ಯೂ ತಪ್ಪಿಸಿ ನೇರವಾಗಿ ಗರ್ಭಗುಡಿಯೊಳಗೆ ಬಿಟ್ಟು ಹೋದರು. ಇವರು ಗರ್ಭಗುಡಿಯ ಗದ್ದುಗೆಯ ಮೇಲೆ ಆಸೀನರಾಗಿದ್ದ ಗೆಂಡೆದೇವರನ್ನು ವಿಚಿತ್ರವಾಗಿ ನೋಡುತ್ತಾ ಗರ್ಭಗುಡಿಯ ಮೂಲೆಯೊಂದರಲ್ಲಿ ಕುಳಿತರು. ಜಾತ್ರೆ ನಿಮಿತ್ತವಾಗಿ ಮೂಕ ಮಲ್ಲಯ್ಯನ ಸೊಂಟದ ಕೆಳಭಾಗವನ್ನು ವಿಶೇಷ ಪರಿಣಿತರು ತಹರೆವಾರಿ ಹೂವುಗಳಿಂದ ಅಲಂಕರಿಸಿ ಚಂದಗೊಳಿಸಿದ್ದರು. ಸಂಪೂರ್ಣವಾಗಿ ಹೂವಿನಿಂದ ಮುಚ್ಚಿಹೋಗಿದ್ದ ಗೆಂಡೆದವರ ತುದಿ ಮಾತ್ರ ದರ್ಶನಕ್ಕೆ ಲಭ್ಯವಿತ್ತು. ಆ ದೇವರನ್ನು ಧರಿಸಿಕೊಂಡಿದ್ದ ಮೂಕ ಮಲ್ಲಯ್ಯ ದೇಹ ಮಾತರ ಸೊರಗಿದಂತೆ, ವಿಚಿತ್ರ ಸಂಕಟದಲ್ಲಿದ್ದಂತೆ ತಾರಣಿಗೆ ಗೋಚರಿಸಿತು. ಅಲ್ಲಿನ ವೈವಿಧ್ಯಮಯ ಭಕ್ತರ ಉತ್ತುಂಗ ಸ್ಥಿತಿಯನ್ನು, ಮೈಮೆಯುವಿಕೆಯನ್ನು ನೋಡಿ ಪರವಶಗೊಂಡ ರಾಚಯ್ಯ ಸಹ ತನ್ನ ಕುಟುಂಬವನ್ನು ಗೆಂಡೆದೇವರ ಹತ್ತಿರಕ್ಕೆ ಕರೆದೊಯ್ದು ಅಡ್ಡಬಿದ್ದ. ರಾಚಯ್ಯ ಮತ್ತು ಗುರವ್ವ ಗೆಂಡೆದೇವರಿಗೆ ನಮಸ್ಕರಿಸುತ್ತಿದ್ದರೆ, ತಾರಿಣಿ ಗೆಂಡೇದೇವರ ಕಣ್ಣುಗಳನ್ನೇ ತದೇಕ ಚಿತ್ತದಿಂದ ನೋಡತೊಡಗಿದಳು. ಆದರೆ, ದೇವರ ಎತ್ತಲೋ ನೋಡುತ್ತಾ ಅವಳ ಕಣ್ಣು ಬಿರುಸಿನ ಕಣ್ಣೋಟದಿಂದ ತಪ್ಪಿಸಿಕೊಂಡಿತು.
ಅವತ್ತು ರಾಚಯ್ಯ ಮತ್ತು ಗುರವ್ವ ಗೆಂಡೆದೇವರ ಸೇವೆ ಮಾಡುವ ಉದ್ದೇಶದಿಂದ ಗೆಂಡೆದೇವರ ಖಾಸಗಿ ಕೊಣೆಯಲ್ಲೆ ಉಳಿದುಕೊಂಡಿದ್ದರು. ಅವತ್ತು ರಾತ್ರಿ ಮಗಳಿಗೆ ’ಆದ್ದದ್ದಾತು. ಮೂಕ ಮಲ್ಲಯ್ಯ ದೇವರು ಎನ್ನುವುದು ಈಗ ಜಗಜ್ಜಾಹಿರಾಗಿದೆ. ನೀನು ಮಲ್ಲಯ್ಯನನ್ನು ಮರೆತುಬಿಡು ಮುಂದೆ ನಿನ್ನ ಹಣೆಬರಹದಲ್ಲಿ ಇನ್ನೊಂದು ಗಂಡನನ್ನು ಬರೆದಿದ್ದರೆ ಲಗ್ನ ಮಾಡಿಕೊಡ್ತಿವಿ ಇಲ್ಲದಿದ್ದರೆ, ನಿನ್ನನೆ ಗಂಡ ಮಗನೆಂದು ತಿಳಿದು ಜ್ವಾಪಾನ ಮಾಡುತ್ತೇವೆ ಎಂದು ರಾಚಯ್ಯ ಬುದ್ಧಿವಾದ ಹೇಳಿದ.
ಮರುದಿನ ಹೊತ್ತು ಹೊಂಟರೆ ಪಲ್ಲಕಿ ಉತ್ಸವ. ಬೆಳಗ್ಗಿನ ಜಾವ ಬೆಳ್ಳಿಚುಕ್ಕಿ ಕಾಣಿಸಿಕೊಂಡ ಸಮಯದಲ್ಲೇ ಮಠದ ಮೈಕು ’ಏಳು ಏಳಯ್ಯ ಗೆಂಡೆದೇವಯ್ಯ, ಭಖುತರ ಮೊರೆ ಆಲಿಸಲೇಳಯ್ಯ’ ಎಂದು ಸುಶ್ರ್ಯಾವವಾಗಿ ಹಾಡತೊಡಗಿತು. ಪಲ್ಲಕ್ಕಿ ಉತ್ಸವಕ್ಕೆ ಊರವರು ನಿನ್ನೆಯೇ ಸಕಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದ್ದರು. ಗೆಂಡೆದೇವರನ್ನು ಪಲ್ಲಕ್ಕಿಯಲ್ಲಿ ಹಿರಿ ಹೊಳೆಗೆ ಕರೆದುಕೊಂಡು ಸ್ನಾನ ಮಾಡಿಸುವುದು ಮೊದಲ ಆಚರಣೆ. ಅದಕಾಗಿ ಊರ ಹಿರಿಕರು ಗೆಂಡೆದೇವರನ್ನು ಎಬ್ಬಿಸಲು ಮಠಕ್ಕೆ ಬಂದರು. ಆದರೆ, ಮಠದ ದೇವರ ಖಾಸಗಿ ಕೊಣೆಯಲ್ಲಿ ದೇವರೇ ಕಾಣಿಸುತ್ತಿಲ್ಲ. ಇತ್ತ ರಾಚಯ್ಯ ತಮ್ಮ ಮಗಳು ತಾರಿಣಿ ಎಲ್ಲಿ ಎಂದು ಗುರುವ್ವಳಿಗೆ ಅನುಮಾನದಿಂದ ಪಿಸುದನಿಯಲ್ಲಿ ಕೇಳಿದ. ಗುರುವ್ವ ಶ್… ಸುಮ್ಮನಿರು ಜೋರು ಬಾಯಿ ಮಾಡಬ್ಯಾಡ. ಇನ್ನ ಇಲ್ಲೇನು ಕೆಲಸ? ನಡಿ ಹೊರೆ ಹೊರಗ ಹೋಗೋನು. ಎಲ್ಲ ಹೇಳ್ತಿನಿ.’ ಎಂದು ಆ ಜನ ಜಂಗುಳಿಯಿಂದ ಗಂಡನನ್ನು ಹೊರಗೆ ಕರೆತಂದಳು.