ಬೆಂಗಳೂರು (01-03-2023): ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಕೈಗೊಂಡಿದ್ದ ಮುಷ್ಕರದಿಂದ ಸಿಎಂ ಬೊಮ್ಮಾಯಿ ಸರ್ಕಾರ ತೀವ್ರ ಮುಖಭಂಗಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೂ ನೌಕರರ ಸಂಘದ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳ ಸಭೆ ನಡೆಸಿದರೂ ಒಮ್ಮತಕ್ಕೆ ಬಾರದ ಕಾರಣ ಇಂದು ಮುಂಜಾನೆಯಿಂದಲೇ ನೌಕರರು ಕಛೇರಿಗೆ ಗೈರು ಹಾಜರಾಗುವ ಮೂಲಕ ಮುಷ್ಕರ ಆರಂಭಿಸಿದ್ದರು.‌

ಈ ಹಿನ್ನೆಲೆಯಲ್ಲಿ ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ ಏಳನೇ ವೇತನ ಆಯೋಗದ ಮಧ್ಯಂತರ ಪರಿಹಾರದ ರೂಪದಲ್ಲಿ ನೌಕರನ ಮೂಲವೇತನದ 17% ಅನ್ನು ಹೆಚ್ಚಿಸಿ ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಪಾವತಿ ಮಾಡುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿಗಳ ಹೆಸರಿನಲ್ಲಿ ಆದೇಶ ಹೊರಡಿಸಿದೆ.‌

ನೌಕರರ ಮತ್ತೊಂದು ಪ್ರಮುಖ ಬೇಡಿಕೆಯಾಗಿದ್ದ ಹಳೆಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಧ್ಯಯನ ಸಮಿತಿ ರಚಿಸಿ ವರದಿ ಪಡೆದು ಪರಿಶೀಲಸುವುದಾಗಿ ಸರ್ಕಾರ ಭರವಸೆ ನೀಡಿದೆ.‌ ಕಳೆದ ಹಲವು ದಿನಗಳಿಂದಲೂ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದರೂ ಸಹ ಸುಮ್ಮನೆ ಇದ್ದ ಸರ್ಕಾರ ಇದೀಗ ನೌಕರರು ಮುಷ್ಕರ ಆರಂಭಿಸಿದ‌ ಕೂಡಲೆ ಒತ್ತಡಕ್ಕೆ ಸಿಲುಕಿದೆ. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೌಕರರ ಸಭೆ ನಡೆಸಿ, ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ, ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿ-ನೌಕರರು ದಿನಾಂಕ: 01-03-2023ರ ಬುಧವಾರದಿಂದ ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಬೇಕು ಎಂದು ಕರೆನೀಡಿದ್ದರು. ಸದ್ಯ ನೌಕರರು ಮುಷ್ಕರ ನಿಲ್ಲಿಸುತ್ತಾರೆಯೇ ಅಥವಾ ಬೇಡಿಕೆ ಈಡೇರಿಕೆಗೆ ಬಿಗಿಪಟ್ಟು ಹಿಡಿಯುತ್ತಾರೆಯೇ ಕಾದುನೋಡಬೇಕಿದೆ.‌

Leave a Reply

Your email address will not be published. Required fields are marked *