ಬೆಂಗಳೂರು (22-02-2023): ರಾಜ್ಯ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ಯಾವುದೇ ನಿರೀಕ್ಷೆಗಳು ಮತ್ತು ಬೇಡಿಕೆಗಳು ಘೋಷಣೆಯಾಗಿಲ್ಲ, ಈ ಕಾರಣದಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೌಕರರು ಮಂಗಳವಾರ ಸಭೆ ಸೇರಿ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಿಂಗಳ ಅಂತ್ಯದವರೆಗೆ‌ ಗಡುವು ನೀಡಿದ್ದಾರೆ.

ರಾಜ್ಯದ 2023-24ರ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಸೆ ಮೂಡಿರುತ್ತದೆ.

ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ವೃಂದ ಸಂಘಗಳ ಅಧ್ಯಕ್ಷರು – ಪದಾಧಿಕಾರಿಗಳ ಸಭೆ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರ ಸಭೆಯನ್ನು ಮಂಗಳವಾರ ಸಂಜೆ 5.00 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಕರೆಯಲಾಗಿತ್ತು.‌

ಕಬ್ಬನ್ ಉದ್ಯಾನವನ ಹತ್ತಿರ ಇರುವ ಸಂಘದ ಕಛೇರಿಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಎಲ್ಲಾ ಜಿಲ್ಲೆಗಳಿಂದಲೂ ಸಂಘದ ಪದಾಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು.‌ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.‌ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ತೀರ್ಮಾನದಂತೆ, ರಾಜ್ಯದ ಸಮಸ್ತ ಸರ್ಕಾರಿ ಅಧಿಕಾರಿ-ನೌಕರರು ದಿನಾಂಕ: 01-03-2023ರ ಬುಧವಾರದಿಂದ ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ಸಮಸ್ತ ನೌಕರ‌ ಸಮುದಾಯಕ್ಕೆ ಸಂಘವು ಕರೆ ನೀಡಿದೆ.

Leave a Reply

Your email address will not be published. Required fields are marked *