ಮೊದಲ ಭಾಗದ ಲೇಖನದಲ್ಲಿ ಕಾಂಗ್ರೆಸ್ ಎಂಬ ಮಾಯೆಯ ಕುರಿತು ವಿಶ್ಲೇಷಿಸಲಾಗಿತ್ತು. ಇಂದು ಬಿಜೆಪಿ ಎಂಬ ಮಾರಿ ಕುರಿತು ವಿಶ್ಲೇಷಣೆ ನಡೆಸಲಾಗಿದೆ.
ಮೊದಲ ಭಾಗದ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಒಂದು ರಾಜಕೀಯ ಪಕ್ಷಕ್ಕೆ ಯಾವುದಾದರು ಒಂದು ರಚನಾತ್ಮಕವಾದ ಸಿದ್ಧಾಂತದ ಜೊತೆಗೆ ಸಾಮಾಜಿಕ ಸಮಸ್ಯೆಗಳ ಅರಿವು ಬಹಳ ಮುಖ್ಯ. ಆದರೆ, ಇದ್ಯಾವುದರ ಅರಿವೇ ಇಲ್ಲದೆ ಕೋಮು ಮತ್ತು ಜಾತಿಯ ದ್ವೇಷವನ್ನು ಬಿತ್ತುತ್ತ, ಕಾಗಕ್ಕ ಗೂಬಕ್ಕನ ಕಥೆಗಳನ್ನು ಹೆಣೆಯುತ್ತ ಹುಸಿ ದೇಶಪ್ರೇಮದ ಬಗ್ಗೆ ಮಾತನಾಡುತ್ತಾ, ಸ್ವಜಾತಿ ಪಕ್ಷಪಾತವನ್ನೆ ಧ್ಯೇಯವಾಗಿಸಿಕೊಂಡು ಬ್ರಿಟಿಷರ ಏಜೆಂಟ್ ಗಳಾಗಿ ಕೆಲಸ ಮಾಡಿಕೊಂಡು ಬಂದಂತ ಜನಾಂಗೀಯ ಶ್ರೇಷ್ಠತೆಯ ಗೀಳನ್ನು ಒಳಗೊಂಡಂತ, ಒಂದು ಸಣ್ಣ ಗುಂಪಿನಿಂದ 1925ರಲ್ಲಿ ಸಂಘವಾಗಿ ಪ್ರಾರಂಭವಾಗಿ ನಂತರದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರು 1951ರಲ್ಲಿ ಭಾರತೀಯ ಜನಸಂಘ (BJS)ಎಂಬ ರಾಜಕೀಯ ಪಕ್ಷವಾಗಿಸಿ ನಂತರದಲ್ಲಿ ಅಂದಿನ ಕಮ್ಯೂನಿಷ್ಟ್ ಮತ್ತು ಸಮಾಜವಾದಿಗಳ ಜೊತೆ ಸೇರಿ, ಸ್ವಲ್ಪ ಸ್ವಲ್ಪವಾಗಿ ಅಧಿಕಾರವನ್ನು ಅನುಭವಿಸುತ್ತ ಅದರ ಜೊತೆಗೆ ಸಂಪನ್ಮೂಲ ಕ್ರೂಢೀಕರಣಗೊಳಿಸಿಕೊಳ್ಳುತ್ತ ನಂತರ 1980ರಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವಾಗಿ ನಾಮಕರಣಗೊಂಡು ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಅಧಿಕಾರದಾಹಿ ಪಕ್ಷವಾದ BJP ಏನು ಮಾಡಬಹುದು!
ಮೊಟ್ಟಮೊದಲ ಬಾರಿಗೆ 1984ರಲ್ಲಿ 2 ಸೀಟುಗಳನ್ನು ಗೆಲ್ಲುವ ಮುಖಾಂತರ ತಮ್ಮ ಖಾತೆಯನ್ನು ತೆರದ BJPಯು 1989ರಲ್ಲಿ 89 ಸೀಟುಗಳನ್ನು, ಪಡೆದು V P ಸಿಂಗ್ ರ ನ್ಯಾಷನಲ್ ಫ್ರಂಟ್ ಗೆ ಬೆಂಬಲವನ್ನು ನೀಡಿದರು. ನಂತರದಲ್ಲಿ ದಶಕಗಳಿಂದ ಧೂಳಿಡಿಸಿದ್ದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶಿಫಾರಸ್ಸು ಮಾಡಿದ್ದ ‘ಮಂಡಲ್ ವರದಿಯನ್ನು’ ಜಾರಿ ಮಾಡಬೇಕೆಂಬ ಮಾನ್ಯವಾರ್ ಕಾನ್ಷಿರಾಮ್ ರವರ ಒತ್ತಡದಿಂದ ಕೇಂದ್ರ ಸರ್ಕಾರವು ಮಂಡಲ್ ವರದಿಯನ್ನು ಜಾರಿ ಮಾಡಿ ಹಿಂದುಳಿದ ಜಾತಿಗಳಿಗೆ 27% ಮೀಸಲಾತಿಯನ್ನು ಜಾರಿ ಮಾಡಿತು.
ಆದರೆ, ಮೀಸಲಾತಿಯ ವಿರುದ್ಧ ಇದ್ದ ಬಿಜೆಪಿಯು ಹಿಂದುಳಿದ ಸಮುದಾಯಗಳನ್ನು ದಾರಿ ತಪ್ಪಿಸಿ ಅವರಿಗೆ ಸುಳ್ಳು ಹೇಳಿ ಒಬಿಸಿ ಮೀಸಲಾತಿಯ ವಿರುದ್ಧವೇ ತಮ್ಮನ್ನು ಎತ್ತಿ ಕಟ್ಟಿ, ಮಂಡಲ್ ವರದಿ ಜಾರಿಯಾದರೆ ಹಿಂದುಳಿದ ಜಾತಿಗಳು ಕೂಡ ದಲಿತರ ಹಾಗೆ ತಮ್ಮ ಪ್ರಾತಿನಿಧ್ಯ ಮತ್ತು ಹಕ್ಕುಗಳನ್ನು ಗಳಿಸುತ್ತಾರೆ ಎಂಬ ಭಯದಿಂದ ಹಿಂದುಳಿದ ಜಾತಿಗಳನ್ನ ಬ್ರಾಹ್ಮಣೀಕರಿಸುತ್ತ, ಅವರಲ್ಲಿ ಧರ್ಮದ ವಿಷವನ್ನು ಬಿತ್ತಿ ಮಂಡಲ್ ವಿರುದ್ಧವಾಗಿ ಕಮಂಡಲ್ ಎನ್ನುವ ವಿಷಯವನ್ನು ಮುಂದಿಟ್ಟು, ಮಂಡಲ್ ಗಿಂತಲೂ ನಮಗೆ ಕಮಂಡಲೇ ಮುಖ್ಯ ಎಂದು ಹೇಳುತ್ತಾ ರಾಮ ಜನ್ಮಭೂಮಿಯ ವಿವಾದವನ್ನು ಇವರ ತಲೆಗಳಲ್ಲಿ ತುಂಬಿ, ಬಾಬರಿ ಮಸೀದಿಯನ್ನು ಕೆಡುವ ಸಲುವಾಗಿ ಇವರ ತಲೆಗಳಲ್ಲಿ ಧರ್ಮದ ವಿಷಬೀಜವನ್ನು ಬಿತ್ತಿ, ನಂತರ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ, ದೇಶದುದ್ದಕ್ಕೂ ಕೋಮುವಾದವನ್ನು ಹಚ್ಚಿ ನೂರಾರು ಜೀವಗಳನ್ನು ಬಲಿ ತೆಗೆದುಕೊಂಡರು.
ಜೊತೆಗೆ ಹಿಂದುಳಿದ ಜಾತಿಗಳು ದಲಿತರು ಮತ್ತು ಮುಸ್ಲಿಮರ ನಡುವೆ ಅಂತರವನ್ನು ಸೃಷ್ಟಿಸಿ ಕೋಮುವಾದದ ಮುಖಾಂತರ ಮತಗಳನ್ನು ಪಡೆಯುವ ಕೃತ್ಯಕ್ಕೆ ಕೈ ಹಾಕಿದರು. ದುರಂತವೆಂದರೆ 1991ರಲ್ಲಿ ನಡೆದ ಚುನಾವಣೆಯಲ್ಲಿ ಇವರು 120 ಸೀಟುಗಳನ್ನು ಗೆಲ್ಲುತ್ತಾರೆ. ನಂತರ 1996ರಲ್ಲಿ 161 ಸೀಟುಗಳನ್ನು ಗೆದ್ದು ವಾಜಪೇಯಿ ಅವರ ನಾಯಕತ್ವದಲ್ಲಿ 13 ದಿನಗಳ ಕಾಲದ ಸರ್ಕಾರವನ್ನು ರಚಿಸುತ್ತಾರೆ. ನಂತರ 1998, 1999ರಲ್ಲೂ ಸರ್ಕಾರ ರಚಿಸುತ್ತಾರೆ. ಜೊತೆಗೆ ಇಡೀ ಮೇಲ್ಜಾತಿಗಳನ್ನು ಧೃವಿಕರಿಸುವ ಸಲುವಾಗಿ ನಿರಂತರವಾಗಿ ದಲಿತ- ಹಿಂದುಳಿದ- ಮುಸ್ಲಿಂ ಹಾಗು ಕ್ರೈಸ್ತರ ವಿರುದ್ಧ ಷಡ್ಯಂತರವನ್ನು ರೂಪಿಸುತ್ತಾ ಬರುತ್ತಾರೆ. 1997ರಲ್ಲಿ ಅರುಣ್ ಶೌರಿಯ ಮುಖಾಂತರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ತೇಜೋವಧೆ ಮಾಡುವ ಸಲುವಾಗಿ “Worshipping false gods” ಎನ್ನುವ ದ್ವೇಷ ಮತ್ತು ಸುಳ್ಳು ಪೂರಿತ ಕೃತಿಯನ್ನು ರಚಿಸಿ, ಮೇಲ್ಜಾತಿಗಳನ್ನು ಮೆಚ್ಚಿಸುವ ಕೆಲಸಕ್ಕೆ ಕೈ ಹಾಕುತ್ತಾರೆ!
ವಾಜಪೇಯಿ ಅವರ ನಾಯಕತ್ವದಲ್ಲಿ ರಚಿಸಲಾದ ಸರ್ಕಾರವು ಜನ ವಿರೋಧಿ ನೀತಿಗಳ ಮುಖಾಂತರ ಜನರನ್ನು ಹೈರಾಣಾಗಿಸಿದರು. ಬಹುಜನರ ವಿರುದ್ಧವಾಗಿ ಕಾಂಗ್ರೆಸ್ ಪ್ರಾರಂಭಿಸಿದ್ದ, ಖಾಸಗೀಕರಣ ಎಂಬ ಭೂತಕ್ಕೆ ಮತ್ತಷ್ಟು ಶಕ್ತಿ ತುಂಬಿ ಜಗತ್ತಿನ ಯಾವ ದೇಶದಲ್ಲೂ ಇರದ Department of Disinvestment ಎಂಬ ಖಾತೆಯನ್ನು ಪ್ರಾರಂಭಿಸಿ, ಇಡೀ ಸರ್ಕಾರಿ ವಲಯವನ್ನು ನಾಶ ಮಾಡಿ ಕೋಟ್ಯಾಂತರ ಉದ್ಯೋಗಗಳನ್ನು ನಾಶ ಮಾಡುತ್ತಾರೆ. ಬಹುಜನರಿಗೆ ಆಸರೆಯಾಗಿದ್ದ ಮೀಸಲಾತಿಯನ್ನು ಮತ್ತಷ್ಟು ದುರ್ಬಲಗೊಳಿಸುವ ಜೊತೆಗೆ ಇಡೀ ರೈತ ಸಮುದಾಯವನ್ನು ಬೀದಿಗೆ ತಂದು ನಿಲ್ಲಿಸುತ್ತಾರೆ. ಜೊತೆಗೆ, ದೇಶವನ್ನು ಕಾಯುವ ಸೈನಿಕರ ಶವಪೆಟ್ಟಿಗೆಯಲ್ಲೂ ಹಗರಣ ಮಾಡುತ್ತಾರೆ. ಅನಂತಕುಮಾರ್ ಅವರಂತು ದೊಡ್ಡ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಆದರೆ BJP ಮಾತ್ರ ಇದೆಲ್ಲವನ್ನೂ ಮುಚ್ಚಿ ಹಾಕಲು “ಭಾರತವು ಪ್ರಜ್ವಲಿಸುತ್ತಿದೆ” (India Shining) ಎಂಬ ದೊಡ್ಡ ಅಭಿಯಾನವನ್ನು ಪ್ರಾರಂಭಿಸುತ್ತದೆ. ಆದರೆ ಇದರಿಂದ ಅವರಿಗೆ ಯಾವುದೇ ಪ್ರಯೋಜನ ವಾಗಲಿಲ್ಲ, ಬದಲಿಗೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಾರೆ!
ವಾಜಪೇಯಿಯ ನಂತರ, ರಥ ಯಾತ್ರೆಯ ಮುಖಾಂತರ BJPಗೆ ರಾಜಕೀಯ ಭವಿಷ್ಯವನ್ನು ರೂಪಿಸಿದ L.K.ಅದ್ವಾನಿಯವರನ್ನು ಪ್ರಧಾನಿ ಮಾಡಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ವಾಜಪೇಯಿಯ ನಂತರ BJPಯ ನಾಯಕತ್ವ ದೊರತದ್ದು ಮಾತ್ರ ಯಾರೂ ಊಹಿಸಲಾಗದ ವ್ಯಕ್ತಿಗೆ! 2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡದ ಮುಖ್ಯ ಆರೋಪಿಯಾಗಿದ್ದ ಮೋದಿಯನ್ನು ಇಡಿ ದೇಶ ಮಾತ್ರವಲ್ಲ ಜಗತ್ತೆ ದ್ವೇಷಿಸುತಿತ್ತು! ಅಂತಹ ಸಂದರ್ಭದಲ್ಲಿ ಮಾಧ್ಯಮಗಳ ಮುಖಾಂತರ ‘ಗುಜರಾತ್ ಮಾದರಿ’ ಎನ್ನುವ ಹುಸಿ ಸುಳ್ಳುಗಳ ಜೊತೆಗೆ, ಬಲಪಂಥಿಯ ಮೋದಿಯನ್ನು ರಾಷ್ಟ್ರೀಯವಾದಿ ಮೋದಿಯನ್ನಾಗಿಸಲು, ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ಅಂತರರಾಷ್ಟ್ರೀಯ ಬ್ರ್ಯಾಂಡಿಗ್ ಪರಿಣಿತರ ಮುಖಾಂತರ ಮೋದಿಯೆನ್ನುವ ಬ್ರ್ಯಾಂಡ್ ತಯಾರಿಸಿದರು. ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಚುನಾವಣಾ ಪ್ರಕ್ರಿಯೆಯನ್ನು ಕಾರ್ಪೊರೇಟೀಕರಣ ಗೊಳಿಸಿದರು! ಸಾವಿರಾರು ಕೋಟಿಗಳನ್ನು ಖರ್ಚು ಮಾಡಿ ಮಾಧ್ಯಮಗಳನ್ನು ಖರೀದಿಸಿ, ಪ್ರತಿನಿತ್ಯ ಅವುಗಳನ್ನು ಮೋದಿಯ ಭಜನೆಯಲ್ಲಿ ತೊಡಗಿಸಿದರು.
ಅಮಿತ್ ಮಾಳ್ವಿಯಾ ಎನ್ನುವ ಸುಳ್ಳು ಫ್ಯಾಕ್ಟರಿಯ ಮುಖಾಂತರ ಲಕ್ಷಾಂತರ ಫೇಕ್ ಐಡಿಗಳನ್ನು ಮತ್ತು ಅಕೌಂಟ್ ಗಳನ್ನು ಸೃಷ್ಟಿಸಿ, ಇಡೀ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಅಭಿಪ್ರಾಯಗಳನ್ನು ಮೂಡಿಸುವ ಯಂತ್ರಗಳಾಗಿ ಕೆಲಸ ಮಾಡಿದರು. ಇದಕ್ಕೆ ಲಕ್ಷಾಂತರ ಪೇಡ್ ಮೀಡಿಯಾ ಹ್ಯಾಂಡಲರ್ಸ್ ನ್ನು ಬಳಸಿಕೊಂಡರು. ಇದರ ಪರಿಣಾಮ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತಾರೆ. ಆದರೆ ಅದರ ನಂತರ ನಡೆದದ್ದು ಮಾತ್ರ ಘನ ಘೋರ. ಏಕೆಂದರೆ, ಸದಾ ದೇಶಪ್ರೇಮದ ಬಗ್ಗೆ ಮಾತನಾಡುತಿದ್ದ ಮೋದಿ ಮತ್ತು ಬಿಜೆಪಿ ಮಾಡಿದ್ದು ಮಾತ್ರ ದೇಶ ವಿನಾಶದ ಕೆಲಸ!
ದೂರದೃಷ್ಟಿ ಇಲ್ಲದ ಒಬ್ಬ ನಾಯಕ ದೇಶಕ್ಕೆ ಮತ್ತು ಸಮಾಜಕ್ಕೆ ಎಂಥಹ ಅನಾಹುತವನ್ನು ತಂದೊಡ್ಡಬಲ್ಲ ಅನ್ನುವುದಕ್ಕೆ ಮೋದಿಗಿಂತ ದೊಡ್ಡ ಉದಾಹರಣೆ ಸಿಗದು. ಸದಾ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾ ತಾನೂ GST ಎಂಬ ತೆರಿಗೆ ಭಯೋತ್ಪಾದನೆಯನ್ನೆ ಶುರು ಮಾಡಿಬಿಟ್ಟರು. ತಲೆಯಿಲ್ಲದ Demonetization ಅಂತೂ ಇಡಿ ಭಾರತವನ್ನೆ ಬೀದಿಗೆ ತಂದು ನಿಲ್ಲಿಸಿತು. ತನ್ನ ಭಕ್ತರ ತಂಡದ ಮುಖಾಂತರ ಆಹಾರ ಭಯೋತ್ಪಾದನೆ, ಉಡುಪು ಭಯೋತ್ಪಾದನೆ, ಗೋ ಭಯೋತ್ಪಾದನೆ, ಪ್ರೇಮ ಭಯೋತ್ಪಾದನೆ ಥರದ ಚಿತ್ರ ವಿಚಿತ್ರ ನಾಟಕಗಳನ್ನು ಪ್ರಾರಂಭಿಸಿದರು. ಇವರು ಯಾವುದೇ ಕಾನೂನು ಮತ್ತು ವ್ಯವಸ್ಥೆಯ ಭಯವಿಲ್ಲದೆ ಇಡೀ ಸಮಾಜವನ್ನು ಭಯದಲ್ಲಿ ಬದುಕುವಂತೆ ಮಾಡಿದರು. ಈ ಭಕ್ತರ ಪಡೆಯನ್ನಾಗಲಿ, ಸರ್ಕಾರವನ್ನಾಗಲಿ ಅಥವಾ ಮೋದಿಯನ್ನಾಗಲಿ ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಯಿತು. ಸಾವಿರಾರು ಜನರನ್ನು ದೇಶದ್ರೋಹದ ಪ್ರಕರಣಗಳಲ್ಲಿ ಸಿಲುಕಿಸಲಾಯಿತು. ವಿದ್ಯಾರ್ಥಿಗಳು, ಪತ್ರಕರ್ತರು, ವೃದ್ದರು ಎಂದು ಲೆಕ್ಕಿಸದೆ ಬಹಳಷ್ಟು ಅಮಾಯಕರನ್ನು ಜೈಲಿಗಟ್ಟಲಾಯಿತು. ಇವರ ಕಾಟ ತಡೆಯದೆ ಪ್ರತಿವರ್ಷ ಸಾವಿರಾರು ಭಾರತೀಯರು ತಮ್ಮ ಪೌರತ್ವವನ್ನೆ ತ್ಯಜಿಸಿ ದೇಶ ಬಿಟ್ಟರು.
ಇನ್ನು ಇವರ ಆರ್ಥಿಕ ನೀತಿಗಳಂತು ಭಾರತದ ಅರ್ಥವ್ಯವಸ್ಥೆಯನ್ನೆ ಅಲುಗಾಡಿಸಿ, ಲಕ್ಷಾಂತರ ಉದ್ದಿಮೆಗಳು ಬಾಗಿಲು ಹಾಕಿಕೊಳ್ಳುವಂತೆ ಮಾಡಿದವು. ಇದರ ಪರಿಣಾಮ ಉದ್ಯೋಗಗಳು ಸೃಷ್ಠಿಯಾಗದೆ ಕೋಟ್ಯಾಂತರ ಯುವಕರು ನಿರುದ್ಯೋಗಿಗಳಾದರು. ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಥಿಕ ಕೊಲೆಗಳು ನಡೆದವು. ಶಿಕ್ಷಣ ಸಂಸ್ಥೆಗಳನ್ನು ದ್ವೇಷ ಬಿತ್ತುವ ಕೇಂದ್ರಗಳನ್ನಾಗಿಸಿದರು. ಕೊರೋನಾ ಎಂಬ ಹೆಮ್ಮಾರಿಯು ಇಡೀ ಜಗತ್ತನ್ನೆ ನಡುಗಿಸಿತು. ನಮ್ಮ ಸರ್ಕಾರವು ಆ ಸಂಧರ್ಭದಲ್ಲಿ ಬಹಳ ಅವಿವೇಕಿತನ ಮತ್ತು ಅಸಮರ್ಥತೆಯಿಂದ ವರ್ತಿಸಿದ ಪರಿಣಾಮ ಲಕ್ಷಾಂತರ ಜನ ಬೀದಿ ಹೆಣಗಳಾದರು. ಸಾವಿರಾರು ಹೆಣಗಳು ನದಿಯಲ್ಲಿ ತೇಲಿ ಸಮುದ್ರದ ಪಾಲಾದವು. ಲಕ್ಷಾಂತರ ಜನ ಸಾವಿರಾರು ಮೈಲಿಗಳ ದೂರ ನಡೆದು ಮನೆ ಸೇರಿದರೆ. ಸಾವಿರಾರು ಜನ ಔಷಧ, ಆಮ್ಲಜನಕ ಮತ್ತು ಹಾಸಿಗೆಗಳು ಸಿಗದೆ ಪರಲೋಕ ಸೇರಿದರು. ಆದರೆ ನಮ್ಮ ಸರ್ಕಾರ ಮತ್ತು ಮಂತ್ರಿ ಮಹೋದಯರು ಮಾತ್ರ ಹಣಗಳಿಕೆಯಲ್ಲಿ ತಲ್ಲೀನರಾಗಿದ್ದರು!
ಊಟ, ವಸತಿ, ಆರೋಗ್ಯ, ಉದ್ಯೋಗದ ಬಗ್ಗೆ ಮಾತನಾಡಬೇಕಿದ್ದ ಪ್ರಜೆಗಳ ಬಾಯಲ್ಲಿ ಮಂದಿರ- ಮಸೀದಿ, ಹಿಂದೂ- ಮುಸ್ಲಿಂ, ಚೀನಾ-ಪಾಕಿಸ್ತಾನ, ಹೊಡಿ-ಬಡಿ ಎನ್ನುವ ಮಾತುಗಳನ್ನಾಡುವಂತೆ ಮಾಡಿದರು! BJPಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳೆ ಸ್ವತಃ ತಾವೇ “ನಾವು ಬಂದಿರುವುದೆ ಸಂವಿಧಾನ ಬದಲಿಸಲಿಕ್ಕೆ” “ಮುಸಲ್ಮಾರಿಗೆ ಪಾಠ ಕಲಿಸಲಿಕ್ಕೆ” “ನಮಗೆ ರಸ್ತೆಗಳು ಚರಂಡಿಗಿಂತ ಲವ್ ಜಿಹಾದ್ ಬಹಳ ಮುಖ್ಯ” ಎನ್ನುವ ದೇಶದ್ರೋಹಿ ಹೇಳಿಕೆಗಳನ್ನು ನೀಡಿದರು. ಇಂದು ಭಾರತವನ್ನು ಹಸಿವು, ಅಸುರಕ್ಷತೆ, ಬಡತನ, ನಿರುದ್ಯೋಗ, ಮೌಢ್ಯ ತಾರತಮ್ಯ ಮುಂತಾದ ವಿಷಯಗಳಲ್ಲಿ ಕುಖ್ಯಾತಿಗೊಳಿದ್ದಾರೆ. ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ, ಒಂದು ಧರ್ಮ ಎನ್ನುವ ಅಸಹಜ ಮತ್ತು ಅಮಾನವೀಯ ಮೌಲ್ಯಗಳನ್ನು ಬಿತ್ತುತ್ತ, ದೇಶವನ್ನು ಅದೋಗತಿಗೆ ತಳ್ಳಲ್ಪಡುತ್ತಿದೆ! ಈ ಕೆಲಸವನ್ನು ಮಾಡಲು ಇಂದು ಸಂಸತ್ ಮತ್ತು ವಿಧಾನ ಸಭೆಗಳಿಗೆ ಅಪರಾದ ಹಿನ್ನೆಲೆ ಇರುವಂತ ವ್ಯಕ್ತಿಗಳನ್ನು ಕಳುಹಿಸಲಾಗುತ್ತಿದೆ!
ಸರ್ಕಾರಗಳ ಮೇಲೆ ನೇರವಾಗಿ ಭ್ರಷ್ಟಾಚಾರದ ಆರೋಪಗಳು ಪ್ರತಿನಿತ್ಯ ಕೇಳಿಬರುತ್ತಿವೆ. ಲೈಂಗಿಕ ಹಗರಣಗಳು, ಕುದರೆ ವ್ಯಾಪಾರ ಸರ್ವೇಸಾಮಾನ್ಯವಾಗಿದೆ. ಜೊತೆಗೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಇಂದು ಪಕ್ಷ ಮತ್ತು ಸರ್ಕಾರದ ಅಸ್ತ್ರಗಳಾಗಿ ಬಳಸಲಾಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡಿದ್ದಾರೆ ಎಂಬ ಆಪಾದನೆಗಳು ಪ್ರತಿನಿತ್ಯ ಕೇಳಿಬರುತ್ತಿವೆ. ದೇಶದ ಆಸ್ತಿ ಮತ್ತು ಸಂಸ್ಥೆಗಳನ್ಮು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಎಲ್ಲವನ್ನೂ ಖಾಸಗಿ ವ್ಯಕ್ತಿಗಳ ನಿಯಂತ್ರಣಕ್ಕೆ ನೀಡಲಾಗುತ್ತಿದೆ. ವಿಪರ್ಯಾಸವೆಂದರೆ ಕಳೆದ 9 ವರ್ಷಗಳಲ್ಲಿ ಭಾರತೀಯರ ಆದಾಯವು ಕ್ಷೀಣಿಸುತಿದ್ದರೆ, ಮೋದಿಯ ಸ್ನೇಹಿತರಾದ ಅಂಬಾನಿ ಮತ್ತು ಅದಾನಿಯವರ ಆದಾಯ ಮಾತ್ರ ನೂರಾರು ಪಟ್ಟು ಹೆಚ್ಚುತ್ತಿದೆ.
ಜನರ ಅಗತ್ಯ ವಸ್ತುಗಳ ಬೆಲೆಯಂತು ಗಗನಕ್ಕೇರಿದೆ, ರೂಪಾಯಿಯು ಡಾಲರ್ ಮುಂದೆ ಮಂಡಿಯೂರಿ ಕೂತಿದೆ, ಪೆಟ್ರೋಲ್-ಡೀಸೆಲ್ ಅಂತೂ ಆಕಾಶದೆತ್ತರಕ್ಕೆ ಹಾರಿ ನಿಂತಿದೆ, ಚೀನಾ ನಮ್ಮ ದೇಶದ ಗಡಿಯೊಳಗೆ ತಮ್ಮ ಕಾಲೋನಿಗಳನ್ನೆ ನಿರ್ಮಿಸಿದೆ. ಆದರೆ ನಾವು ದೇಶ ಭಕ್ತರು, ದೇಶಕ್ಕಾಗಿ ಪ್ರಾಣ ಕೊಡುತ್ತೇವೆ ಎಂದು ಪುಂಗಿ ಊದುವ BJP ಮಾತ್ರ ಏನು ಆಗಿಲ್ಲಾ, ಭಾರತವು ವಿಶ್ವ ಗುರು ಆಗುವತ್ತ ಜಿಗಿಯುತ್ತಿದೆ ಎಂದು ಸುಳ್ಳು ಹೇಳಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಸಲುವಾಗಿ ಯೋಜನೆಗಳನ್ನು ರೂಪಿಸುವಲ್ಲಿ ಬ್ಯುಸಿಯಾಗಿದ್ದಾರೆ. ಪ್ರತಿಕ್ಷಣ BJPಯು ರಕ್ತಕ್ಕಾಗಿ ಹಪಿತಪಿಸುವ ಮಾರಿಯಾಗಿ ದೇಶದುದ್ದಕ್ಕು ಕೇಕೆ ಹಾಕಿ ತಿರುಗುತ್ತಿದೆ. ಭಾರತದ ಸತ್ಪ್ರೆಜೆಗಳು ಮಾತ್ರ Watsapp Universityಯಲ್ಲಿ ಪದವಿಗಳನ್ನು ತೆಗೆದುಕೊಳ್ಳುವಲ್ಲಿ ಕಾರ್ಯನಿರತರಾಗಿದ್ದಾರೆ! ಒಟ್ಟಾರೆ ಹೇಳಬೇಕಾದರೆ ಇಂದು ಭಾರತವು ಪ್ರೈವೇಟ್ ಲಿಮಿಟೆಡ್ ಕಂಪನಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ!
ಒಟ್ಟಾರೆ ಕಾಂಗ್ರೆಸ್ ಎಂಬ ಮಾಯೆಯೂ ಐದು ದಶಕಗಳ ಕಾಲ ಭಾರತೀಯರನ್ನು ಕೋಮಾದಲ್ಲಿಟ್ಟರೆ, ಈಗ ಬಿಜೆಪಿ ಎಂಬ ಮಾರಿಯು ಭಾರತೀಯರನ್ನು ತುಂಡು ತುಂಡಾಗಿ ಕತ್ತರಿಸಲು ತಯಾರಾಗಿ ನಿಂತಿದೆ! ಭಾರತೀಯರು ಎಚ್ಚರಗೊಳ್ಳದಿದ್ದರೆ ಭಾರತವೇ ಮಾಯವಾಗುವುದು ನಿಶ್ಚಿತ!
ಹರಿರಾಮ್. ಎ
ವಕೀಲರು