ದೇಶದ ಅತಿ ದೊಡ್ಡ ಜಾತ್ಯಾತೀತ ಪಕ್ಷವೆಂಬ ಭ್ರಮೆಯನ್ನು ಬಿತ್ತುತ್ತಿರುವ ಕಾಂಗ್ರೆಸ್‌ ಎಂಬ ಮಾಯೆ; ಅದೇ ಕಾಂಗ್ರೆಸ್‌ನ ಕೃಪೆಯ ಮೂಲಕ ಅಧಿಕಾರಕ್ಕೆ ಬಂದು ಜನಪೀಡಕನಾಗಿರುವ ಬಿಜೆಪಿ ಎಂಬ ಮಾರಿಯ ಕುರಿತು ವಕೀಲರಾದ ಪ್ರೊ. ಹರಿರಾಂ ಅವರ ವಿಶ್ಲೇಷಣಾತ್ಮಕ ಬರಹದ ಮೊದಲ ಭಾಗ ಇಲ್ಲಿದೆ.

“Just because you do not take an interest in politics doesn’t mean politics won’t take an interest in you”
-Pericles-

ರಾಜಕಾರಣ ಎನ್ನುವುದು ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹುಟ್ಟಿನಿಂದ ಸಾವಿನ ತನಕ ನಮ್ಮ ಬದುಕನ್ನು ತೀರ್ಮಾನಿಸುವುದು ರಾಜಕಾರಣವೆ! ಸಮಾಜದ ವಿಕಸನದ ಜೊತೆಗೆ ಮಾನವನ ಸಮಸ್ಯೆಗಳು ಬಹಳಷ್ಟು ಸಂಕೀರ್ಣವಾಗ ತೊಡಗಿದವು, ಹಾಗಾಗಿ ಸರ್ಕಾರಗಳ ಅನಿವಾರ್ಯತೆಯು ಹೆಚ್ಚಾಯಿತು. ಅದರಲ್ಲೂ ಭಾರತದಂತಹ ಜಾತಿ ಪೀಡಿತ ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರವು ಅನಿವಾರ್ಯವಾಯಿತು.

ಭಾರತವು ಸ್ವಾತಂತ್ರ್ಯದ ಜೊತೆಗೆ ಪ್ರಜಾಪ್ರಭುತ್ವ ಸರ್ಕಾರವನ್ನು ಪಡೆದುಕೊಂಡು ಜನರಲ್ಲಿ ಹೆಚ್ಚಿನ ಭರವಸೆಗಳನ್ನು ಮೂಡಿಸಿತು. ಪರಕೀಯ ಸರ್ಕಾರಗಳು ಎಸಗಿದ ದಬ್ಬಾಳಿಕೆ ಮತ್ತು ಕ್ರೌರ್ಯವು ನಮ್ಮ ಸರ್ಕಾರಗಳ ಜನರಪರ ನೀತಿಗಳಿಂದ ಮಾಸಿ ಹೋಗಿ ಹೊಸ ಬದುಕನ್ನು ಕಟ್ಟುಕೊಡುತ್ತವೆ ಎಂಬ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡರು. ಆದರೆ, ನಮ್ಮ ಸರ್ಕಾರಗಳ ನಡವಳಿಕೆಗಳು ಬಹುಬೇಗನೆ ಆ ನಿರೀಕ್ಷೆಗಳನ್ನು ಹುಸಿ ಮಾಡಿದವು.

ಸ್ವಾತಂತ್ರ ನಂತರದ ಮೊದಲ ಇಪ್ಪತ್ತು ವರ್ಷಗಳ ಕಾಲ ನಮ್ಮನ್ನಾಳಿದ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಆಶಯವಾದ ಯಾವುದೇ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲೇ ಇಲ್ಲ. ನೆಹರುವಿನ ನಂತರ ಇತರೆ ಕಾಂಗ್ರೆಸ್ಸಿಗರಿಗೆ ಅಧಿಕಾರದ ಅವಕಾಶ ಸಿಗಬಹುದೆಂದು ಕಾಯುತಿದ್ದ ಹಿರಿಯ ಕಾಂಗ್ರೆಸ್ಸಿಗರಿಗೆ ಆಘಾತವು ಕಾದಿತ್ತು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಅಲ್ಪಾವಧಿಯ ನಂತರ ಮತ್ತೆ ನೆಹರುರವರ ಕುಡಿ ಇಂದಿರಾ ಗಾಂಧಿಯವರರಿಗೆ ಅಧಿಕಾರದ ಗದ್ದುಗೆಯನ್ನು ನೀಡಲಾಯಿತು. ಅದರ ಜೊತೆಗೆ ಅವರ ಸರ್ವಾಧಿಕಾರಿ ಧೋರಣೆಯು ಕಾಂಗ್ರೆಸ್‌ ಮತ್ತು ಜನರ ನಡುವೆ ಸೇತುವೆಯಾಗಿ ಕಾಂಗ್ರೆಸ್ ಬುಟ್ಟಿಗೆ ಮತಗಳನ್ನು ಹಾಕಿಸುತಿದ್ದ ಹಿರಿಯ ಜಮಿನ್ದಾರಿ ಶೂದ್ರ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಕಾಂಗ್ರೆಸ್ ನಲ್ಲಿ ಒಡಕು ಮೂಡಿ ಇಂದಿರಾ ಗಾಂಧಿಯವರಿಂದ ಈ ಜಮೀನ್ದಾರಿ ಶೂದ್ರರು ಪ್ರತ್ಯೇಕಗೊಂಡ ಪರಿಣಾಮ 1969ರಲ್ಲಿ ಕಾಂಗ್ರೆಸ್(O) ಮತ್ತು ಕಾಂಗ್ರೆಸ್(R) ಎಂಬ ಬಣಗಳು ಸೃಷ್ಟಿಯಾದವು. ಜೊತೆಗೆ 1971ರ ಚುಣಾವಣೆಯಲ್ಲಿ ಇಂದಿರಾಗಾಂಧಿಯ ವಿರುದ್ಧ “ಇಂದಿರ ಹಠಾವೋ, ದೇಶ್ ಬಚಾವೋ” ಎಂಬ ದೇಶವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದರು.

ಇದರಿಂದ ವಿಚಲಿತಗೊಂಡ ಇಂದಿರಾಗಾಂಧಿಯವರು ಈ ಜಮೀನ್ದಾರಿ ಶೂದ್ರರನ್ನು ಮೀರಿ, ಹೇಗೆ ಜನ ಸಾಮಾನ್ಯರ ಮತಗಳನ್ನು ಗಳಿಸುವುದು ಎಂದು ಯೋಚಿಸಿ, ಜನಸಾಮಾನ್ಯರ ಓಟಿನ ಜೊತೆಗೆ ಜಮೀನ್ದಾರಿ ಶೂದ್ರರ ನಡ ಮರಿಯುವ ತಂತ್ರಗಾರಿಕೆಯನ್ನು ರೂಪಿಸಿ, “ಇಂದಿರ ಹಠಾವೋ ದೇಶ್ ಬಚಾವೋ” ಅಭಿಯಾನದ ವಿರುದ್ಧ “ಗರೀಭಿ ಹಠವೋ” ಎಂಬ ಅಭಿಯಾನವನ್ನು ‌ ಪ್ರಾರಂಭಿಸಿ, ಚುನಾವಣೆಯಲ್ಲಿ ಯಶಸ್ವಿಯೂ ಆದರು. ನಂತರ ಅವರು 20 ಅಂಶಗಳ ಕಾರ್ಯಕ್ರಮವನ್ನು ರೂಪಿಸುವುದರ ಜೊತೆಗೆ ಅವರ ಜೊತೆಗೆ ನಿಲ್ಲದ ಜಮೀನ್ದಾರಿ ಶೂದ್ರರನ್ನು ರಾಜಕೀಯವಾಗಿ ಮುಗಿಸಲು ‘ಭೂ ಸುಧಾರಣೆ ಕಾಯಿದೆ ‘ ತಂದು, ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಬಡವರಿಗೆ ನೀಡುವುದಾಗಿ ಕಾನೂನನ್ನು ಜಾರಿಮಾಡಿದರು. (ಈ ಕಾಯ್ದೆಯ ಅಡಿ ಎಷ್ಟು ಭೂಮಿ ದಾಖಲಾತಿಗಳೊಂದಿಗೆ ಬಡವರು ಅದರಲ್ಲೂ SC/ST ಗಳ ಪಾಲಾಗಿದೆ ಎಂಬ ಅಂಶಗಳ ಅಧ್ಯಯನವಾಗಬೇಕಿದೆ).

ಈ ಬೆಳವಣಿಗೆಯ ನಂತರವಷ್ಟೇ ಕಾಂಗ್ರೆಸ್ ಒಂದಿಷ್ಟು ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿತು. ಆದರೆ ಆ ಕಾರ್ಯಕ್ರಮಗಳೆಲ್ಲವು ಮೀನು ಕೊಡುವ ಕಾರ್ಯಕ್ರಮಗಳಾಗಿದ್ದವೆ ಹೊರತು, ಮೀನು ಹಿಡಿಯುವುದನ್ನು ಕಲಿಸುವ ಕಾರ್ಯಕ್ರಮಗಳಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವು ಸಮಾಜ ಸೇವೆಯ ಕೆಲಸಗಳಾಗಿದ್ದವೆ ಹೊರತು ಸಮಾಜ ಪರಿವರ್ತನೆಯ ಕೆಲಸಗಳಾಗಿರಲಿಲ್ಲ! ಆದರೂ ಸಾಂವಿಧಾನಿಕವಾಗಿ ಸಿಕ್ಕ ಅಲ್ಪ ಅವಕಾಶಗಳನ್ನು ಬಳಸಿ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆದು ಸ್ವಾಭಿಮಾನಿ ಬದುಕನ್ನು ರೂಪಿಸಿಕೊಳ್ಳುವಲ್ಲಿ ಒಂದಿಷ್ಟು ಜನ- ಸಮುದಾಯಗಳು ಯಶಸ್ವಿಯಾದವು.

ಜೊತೆಗೆ ಸಂವಿಧಾನದ ಅನುಚ್ಛೇದ 340ರ ಆಶಯದಂತೆ ರೂಪಗೊಂಡ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಭಂದಿಸಿದ ಕಾಕ ಕಾಲೇಲ್ಕರ್ ಸಮಿತಿ ಮತ್ತು ನಂತರದ ಬಿ.ಪಿ.ಮಂಡಲ್ ರ ವರದಿಯ ಕಡತಗಳಿಗೆ ಧೂಳು ಇಡಿಸಲಾಗಿತ್ತು. ಆದರೆ 1990ರಲ್ಲಿ ಮಾನ್ಯವಾರ್ ಕಾನ್ಷಿರಾಂಜಿರವರ ಒತ್ತಾಯದ ಮೇರೆಗೆ ಮಾನ್ಯ V.P. ಸಿಂಗ್ ಸರ್ಕಾರ ಮಂಡಲ್ ವರದಿಯನ್ನು ಜಾರಿ ಮಾಡಿ, ಹಿಂದುಳಿದ ಜಾತಿಗಳಿಗೆ ಕೇಂದ್ರ ಮಟ್ಟದಲ್ಲಿ 27% ಮೀಸಲಾತಿಯನ್ನು ಜಾರಿ ಮಾಡಿತು. ಇದೇ ಸಂದರ್ಭದಲ್ಲಿ ಹಿಂದುಳಿದ ಜಾತಿಗಳ ಉನ್ನತಿಯನ್ನು ಸಹಿಸದ ಸಂಘ ಪರಿವಾರ ಮತ್ತು BJPಯು ಹಿಂದುಳಿದ ಜಾತಿಗಳ ಭವಿಷ್ಯವನ್ನು ರೂಪಿಸಲಿದ್ದ ಮಂಡಲ್ ಗೆ ವಿರುದ್ಧವಾಗಿ ಹಿಂದುಳಿದ ಜಾತಿಗಳ ಬದುಕಿಗೆ ಕೊಳ್ಳಿ ಇಡಲು, ಕಮಂಡಲ್ ತಂದು ಹಿಂದುಳಿದ ಜಾತಿಗಳನ್ನು ತಮಗೆ ಮೀಸಲಾತಿ ನೀಡುತಿದ್ದ ಮಂಡಲ್ ವಿರುದ್ದವೆ ನಿಲ್ಲುವಂತೆ ಮಾಡಿದರು! ಜೊತೆಗೆ ಅಂದಿನಿಂದಲೇ ಈ ಸಮುದಾಯಗಳನ್ನು ಬ್ರಾಹ್ಮಣಿಕರಿಸುವ ಮತ್ತು Hinduise ಮಾಡುವ ಕೆಲಸ ಪ್ರಾರಂಭಿಸಿದರು. ಅದರಂತೆಯೆ ಅವರನ್ನು ತಮ್ಮ ಕಾಲಾಳುಪಡೆಯನ್ನಾಗಿಸಿ ಇಂದು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯೂ ಆದರು.

1990ರಲ್ಲಿ ಜಾರಿಯಾದ ಮಂಡಲ್ ವರದಿಯಿಂದ ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗದ ಅವಕಾಶವು ದೊರಕಿತು. ಜೊತೆಗೆ ಮೊದಲಿನಿಂದಲೂ ಮೀಸಲಾತಿಯ ಮುಖಾಂತರ ಒಂದಿಷ್ಟು ನೌಕರಿ‌ಯನ್ನು ಪಡೆದಿದ್ದ ದಲಿತ ಸರ್ಕಾರಿ ನೌಕರರ ಸಹಾಯದಿಂದ, ಒಂದು ಹೊಸ ಚಳುವಳಿಯನ್ನು ಪ್ರಾರಂಭಿಸಿದ್ದ ಕಾನ್ಷಿರಾಂರವರು ರಾಜಕೀಯವಾಗಿ ಪ್ರಬಲರಾಗ ತೊಡಗಿದ್ದರು. ಜೊತೆಗೆ ಇವರಿಂದ ಪ್ರೇರಿತರಾಗಿ ಹಿಂದುಳಿದ ಜಾತಿಗಳಲ್ಲೂ ರಾಜಕೀಯ ಪ್ರಜ್ಞೆ ಮೂಡಿದ್ದ ಪರಿಣಾಮ ಒಂದಿಷ್ಟು ಪ್ರಾದೇಶಿಕ ರಾಜಕೀಯ ಪಕ್ಷಗಳು ಉದಯವಾಗಿದ್ದವು. ಇದರ ಪರಿಣಾಮ ಕಾಂಗ್ರೆಸ್ ನ ಮತ ಬ್ಯಾಂಕಾಗಿದ್ದ ದಲಿತ- ಹಿಂದುಳಿದ ಜಾತಿಗಳು ಪರ್ಯಾಯ ರಾಜಕಾರಣ ಮಾಡಲು ಪ್ರಾರಂಭಿಸಿದರು. ಇದರಿಂದ ಸಹಜವಾಗಿ ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳತೊಡಗಿತು. ಹಾಗಾಗಿ ದಲಿತ- ಹಿಂದುಳಿದ ಜಾತಿಗಳ ಮೇಲೆ ಕಾಂಗ್ರೆಸ್ ನ ಸಿಟ್ಟು ನೆತ್ತಿಗೇರಿ 1991ರ ನಂತರ ಪ್ರಧಾನಿ ಪಿ ವಿ ನರಸಿಂಹ ರಾವ್ ಮತ್ತು ಹಣಕಾಸಿನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಇಬ್ಬರೂ ಕೂಡಿ LPG ಎಂಬ ಮೋಹಿನಿಯ ಮೂಲಕ ಖಾಸಗೀಕರಣಕ್ಕೆ ನಾಂದಿ ಹಾಡಿ, ಸರಕಾರಿ ನೌಕರಿಯನ್ನು ಸರ್ವನಾಶ ಮಾಡಿದರು!

ಇದರ ಜೊತೆಗೆ ಲೆಕ್ಕವಿಲ್ಲದಷ್ಟು ಜಾತಿ ಮತ್ತು ಕೋಮು ಗಲಭೆಗಳನ್ನು ನಾವು ಇವರ ಸುಮಾರು ಐವತ್ತು ವರ್ಷಗಳ ಆಳ್ವಿಕೆಯಲ್ಲಿ ಕಾಣಬಹುದು. ಅನೇಕ ದಲಿತ ಮತ್ತು ದುರ್ಬಲರ ಪರವಾದ ಕಾನೂನುಗಳನ್ನು ಮಾಡಿದರೂ, ಅವುಗಳಲ್ಲಿ ಬಹುತೇಕ ಕಾನೂನುಗಳು ಯಥಾವತ್ತಾಗಿ ಜಾರಿಯಾಗಲೇ ಇಲ್ಲ! ದಲಿತ ಮತ್ತು ಇತರೆ ಸಮುದಾಯಗಳ ಇಂದಿನ ಸ್ಥಿತಿಗತಿಗಳೇ ಇದಕ್ಕೆ ಸಾಕ್ಷಿ. ಉನ್ನತ ಹುದ್ದೆಗಳಲ್ಲಿ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂದಿಗೂ ಇವರ ಪ್ರಾತಿನಿಧ್ಯ ಬೆರಳೆಣಿಕೆಯಷ್ಟು ಇರಲು ಕಾರಣ ಯಾರು? ಎಂಬ ಪ್ರೆಶ್ನೆಗೆ ಕಾಂಗ್ರೆಸ್‌ನ ನಾಯಕರು ಹಾಗು ಬೆಂಬಲಿಗರೇ ಉತ್ತರಿಸಬೇಕಿದೆ!

ದುರಂತವೆಂದರೆ ಕಾಂಗ್ರೆಸ್ ಪಕ್ಷದ ಕೃಪೆಯಿಂದ, ದೇಶ ಮತ್ತು ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಸ್ಥಾನಗಳನ್ನು, ಅತಿ ಹೆಚ್ಚು ಮಂತ್ರಿ ಸ್ಥಾನಗಳನ್ನು, ದೇಶ ಮತ್ತು ರಾಜ್ಯದಲ್ಲಿ ಉದ್ಯೋಗ, ಭೂಮಿ ಮತ್ತು ಸಂಪತ್ತನ್ನು ಪಡೆದು ಶಾಶ್ವತವಾಗಿ ಆಳುವ ವರ್ಗಗಳಾಗಿ ಐಷಾರಾಮಿ ಜೀವನ ನಡೆಸುತ್ತಿರುವ ಸಮುದಾಯಗಳು ತಮಗೆ ಎಲ್ಲವನ್ನೂ ಕೊಟ್ಟ ಕಾಂಗ್ರೆಸ್ ಪಕ್ಷವನ್ನು ತಮ್ಮ ಎಡಗಾಲಲ್ಲಿ ಒದ್ದು, ಇಂದು ಮತ್ತೆ ಬೇರೆ ಪಕ್ಷದ ಮುಖಾಂತರ ಮತ್ತೆ ಎಲ್ಲವನ್ನೂ ಪಡೆದು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ನಿಂದ ಏನನ್ನು ಪಡೆಯದ ದಲಿತ- ಮುಸ್ಲಿಂ ಮತ್ತು ಸಣ್ಣಪುಟ್ಟ ಹಿಂದುಳಿದ ಸಮುದಾಯಗಳು ಮಾತ್ರ ಇನ್ನೂ ಕಾಂಗ್ರೆಸ್ಸಿನ ಓಟ್ ಬ್ಯಾಂಕ್ ಆಗಿ ಅದರ ಬಾಲ ಹಿಡಿದು ನೇತಾಡುತ್ತಿರುವುದು ವಿಪರ್ಯಾಸವೆ ಸರಿ! ಈ ಕಾಂಗ್ರೆಸ್ ಎಂಬ ಮಾಯೆಯ ನಶೆ ಇವರಿಗೆ ಇಳಿಯುವುದಾದರು ಎಂದು?

ಹರಿರಾಮ್. ಎ
ವಕೀಲರು

One thought on “ಕಾಂಗ್ರೆಸ್ ಎಂಬ ಮಾಯೆ!; ಬಿಜೆಪಿ ಎಂಬ ಮಾರಿ! ಭಾಗ -1”

Leave a Reply

Your email address will not be published. Required fields are marked *