ಬಾಬಾಸಾಹೇಬ್ ಡಾ.ಅಂಬೇಡ್ಕರ್ ಎಂದರೆ ಇಡೀ ವಿಶ್ವ “ಜ್ಞಾನದ ಸಂಕೇತ” ಎಂದು ಪರಿಗಣಿಸಿದೆ. ಖುದ್ದು ವಿಶ್ವಸಂಸ್ಥೆ ಎಂಬ ವಿಶ್ವದ ಅತಿದೊಡ್ಡ ಸಂಘಟನೆ ಬಾಬಾಸಾಹೇಬರ ವಿದ್ದತ್ತು ಮತ್ತು ಮಾನವ ಕುಲಕ್ಕೆ ಅವರು ನೀಡಿದ ಜ್ಞಾನವನ್ನು ಅರಿತು ಅವರ ಜನ್ಮದಿನವನ್ನು “World Knowledge Day” ಎಂದು ಘೋಷಿಸಿದೆ. ಈ ಕ್ಷಣಕ್ಕೂ ಬಾಬಾಸಾಹೇಬರ ವಿದ್ಯಾರ್ಹತೆಗೆ ಸರಿಸಾಟಿಯಾದ ಒಬ್ಬನೇ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ! ಬಾಬಾಸಾಹೇಬರು ಬರೆದ ಭಾರತದ ಸಂವಿಧಾನವನ್ನು ಅತ್ಯಂತ ಶ್ರೇಷ್ಟ ಸಂವಿಧಾನ ಎಂದು ವಿಶ್ವವೇ ಕೊಂಡಾಡುತ್ತಿದೆ. ವಿಶ್ವದ ವಿದ್ವಾಂಸರುಗಳೇ ಬಾಬಾಸಾಹೇಬರನ್ನು ಆದರ್ಶವಾಗಿಸಿಕೊಂಡಿದ್ದಾರೆ.
ಈ ದೇಶದ ಬಹುಸಂಖ್ಯಾತ ಬಡಜನರ, ಮಹಿಳೆಯರ, ಕೃಷಿಕಾರ್ಮಿಕರನ್ನು ಗುಲಾಮಗಿರಿಯಿಂದ ವಿಮುಕ್ತಿಗೊಳಿಸಲು ಸ್ವಾಭೀಮಾನದ ಬದುಕು ಕೊಡಲು ತನ್ನಿಡೀ ಬದುಕನ್ನೇ ತ್ಯಾಗಮಾಡಿದ ದಾರ್ಶನಿಕ ಬಾಬಾಸಾಹೇಬ.
ಇಂತಹ ಘನತೆಯ ವ್ಯಕ್ತಿತ್ವವನ್ನು ಭಾರತದ ಕೀಳುಮನಸ್ಸಿನ ಕ್ರಿಮಿಗಳು ಕಾಲದಿಂದಲೂ ಕಡೆಗಣಿಸುತ್ತಲೇ ಬಂದಿವೆ. ಕಡೆಗಣಿಸಿದರೆ ಹಾಳಾಗಲಿ ಅದು ಅವರ ಸಂಕುಚಿತ ಮನೋಭಾವನೆ ಎಂದುಕೊಳ್ಳಬಹುದಿತ್ತು. ಆದರೆ ಅವರು ತಮಗಿಂತ ಕೆಳಗಿನ ಜಾತಿಯವರು, ಹಾಗಿದ್ದೂ ತಮಗಿಂತ ಹೆಚ್ಚು ಜ್ಞಾನ ಸಂಪಾದಿಸಿದರು ಅದಲ್ಲದೆ ತಮ್ಮ ಅದೀನದಲ್ಲಿದ್ದ ಬಡಜನರು, ಮಹಿಳೆಯರನ್ನು ವಿಮುಕ್ತಿಗೊಳಿಸಿದರು ಎಂಬ ಕಾರಣಕ್ಕೆ ಅವರ ವಿರುದ್ದ ಒಂದು ಷಡ್ಯಂತ್ರದ ಚಳವಳಿಯನ್ನೇ ಕೈಗೊಂಡರು. ಅವರ ಪ್ರತಿಮೆಗಳನ್ನು ಒಡೆಯುವುದು, ಅವರ ಕೃತಿಗಳನ್ನು ಸುಡುವುದು, ಅವರ ಸಂವಿಧಾನವನ್ನು ಲೇವಡಿ ಮಾಡುವುದು, ಅವರ ಬೆಂಬಲಿಗರನ್ನು ಬೆದರಿಸುವುದು, ಕೊಲ್ಲುವುದು ಹೀಗೆ ದೇಶದಾದ್ಯಂತ ಈ ದ್ವೇಷವನ್ನು ಹರಡಿದರು.
ಅದರ ಮುಂದುವರೆದ ಭಾಗವಾಗಿ ಇತ್ತೀಚಗೆ ನಡೆದ ಎರಡು ಪ್ರಕರಣಗಳಲ್ಲಿ ಭಾರತ ಭಾಗ್ಯ ವಿಧಾತ ಬಾಬಾಸಾಹೇಬರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗಿದೆ.
ಮೊದಲನೆಯದು ಬೆಂಗಳೂರಿನ ಜೈನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಮಾಡಿದ ‘ಹಾಸ್ಯ ಪ್ರಹಸನ’ದಲ್ಲಿ ಅವರು ಹಾಸ್ಯಕ್ಕೆ ಬಳಸಿಕೊಂಡಿದ್ದು ಅಂಬೇಡ್ಕರ್ ಅವಹೇಳನ, ಮೀಸಲಾತಿಯ ವ್ಯಂಗ್ಯ ಮತ್ತು ಎಸ್ಸಿ/ಎಸ್ಟಿಗಳ ವಿಡಂಬನೆ. ಎರಡನೆಯದು ಯಾವನೋ ಸಂಘಪರಿವಾರದ ಒಬ್ಬ ಗೂಂಡಾ ಪುಡಾರಿ “ಗಾಂಧಿಯನ್ನು ನಮ್ಮ ಗೂಡ್ಸೆ ಗುಂಡಿಕ್ಕಿ ಕೊಂದಂತೆ ನಾನು ಅಂಬೇಡ್ಕರ್ ಅವರನ್ನೂ ಗುಂಡಿಕ್ಕಿ ಕೊಲ್ಲುತ್ತಿದ್ದೆ” ಎಂದಿರುವ ಮಾತು.
ಇದರಲ್ಲಿ ತೀರಾ ಅಸಹ್ಯ ಎನಿಸಿದ್ದು ಜೈನ್ ವಿಶ್ವವಿದ್ಯಾನಿಲಯದ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ವರ್ತನೆ. ಇವರು ಕೀಳು ಅಭಿರುಚಿಯ ಪ್ರಹಸನ ಪ್ರದರ್ಶಿಸಿ ನೆರೆದ ವಿದ್ಯಾರ್ಥಿ ಸಮುದಾಯ ಮತ್ತು ಶಿಕ್ಷಕ ಸಮುದಾಯವನ್ನು ರಂಜಿಸುತ್ತಾರೆಂದರೆ ಇವರ ಶಿಕ್ಷಣ, ಇವರ ಪೋಷಕರು ಮತ್ತು ಇವರ ಶಿಕ್ಷಕರು ಇವರಿಗೆ ಕಲಿಸಿರುವ ವಿದ್ಯೆ ಮತ್ತು ಸಂಸ್ಕಾರ ಎಂತಹ ಹೀನವಾದುದು ನೋಡಿ.
ಈ ಪ್ರಹಸನವನ್ನು ನೋಡಿ ಅಲ್ಲಿ ನೆರೆದಿರುವ ಶಿಕ್ಷಿತರಾದ ಸಂಭಾವಿತರೆನಿಸಿಕೊಂಡವರೆಲ್ಲರೂ ಗಹಗಹಿಸಿ ನಗುತ್ತಾರೆ ಎಂದರೆ ಅವರೆಲ್ಲರ ವಿಕೃತ ಮನೋಭಾವವನ್ನು ಯಾವುದಕ್ಕೆ ಹೋಲಿಸಬೇಕು?
ಇವರ ಸಂಸ್ಕಾರಗಳಿಗೆ ಬೆಂಕಿಹಾಕಬೇಕು.
ಇದು ಇಂದಿನ ರೋಗವಲ್ಲ, ತಲೆತಲಾಂತರಗಳಿಂದ ತಾವೇ “ಮೇಲು” ತಾವೇ ‘ಶ್ರೇಷ್ಟ” ಎಂದು ಭ್ರಮಿಸಿಕೊಂಡು ಬಂದಿರುವವರ ಅನುವಂಶಿಕ ಮನುರೋಗ. ತಮ್ಮೊಳಗಿರುವ ಈ, ಮೇಲರಿಮೆಯ ರೋಗ, ಜನಾಂಗಿಯ ದ್ವೇಷ, ಇತರೆ ಸಹಮಾನವರ ಮೇಲಿನ ತಿರಸ್ಕಾರ ಧೋರಣೆಯನ್ನು ಅನೂಚಾನವಾಗಿ ತಮ್ಮ ಮುಂದಿನ ತಲೆಮಾರುಗಳಿಗೆ ತಪ್ಪದೆ ಪ್ರಜ್ಞಾಪೂರ್ವಕ ವಾಗಿ ದಾಟಿಸಿಕೊಂಡು ಬಂದಿರುವ ನಿಜವಾದ ಸಂಸ್ಕಾರ. ಇದನ್ನು ಅನ್ನ ತಿನ್ನುವ ಸಂಸ್ಕಾರ ಎನ್ನಲಾಗದು ಇದು ಹೊಟ್ಟೆಗೆ ಮಲ ತಿನ್ನುವ ಸಂಸ್ಕಾರ.
ಹಾಗಾಗಿಯೇ ಭಾರತದ ಒಡಲೊಳಗೆ ವಿನಾಕಾರಣವಾದ ಜನಾಂಗಿಯ ಅಸಹನೆ ಕುದಿಯುತ್ತಿದೆ ಮತ್ತು ಕೊಳೆತು ನಾರುತ್ತಿದೆ. ಇಂತಹ ಮನೋರೋಗವನ್ನೇ ಈ ಕಚಡಾಗಳು ಶಿಕ್ಷಣ,ಶುದ್ದತೆ ಮತ್ತು ಸಂಸ್ಕಾರ ಎಂದು ತಮ್ಮ ಮಕ್ಕಳಿಗೆ ಎಗ್ಗಿಲ್ಲದೆ ಕಲಿಸಿದ್ದಾರೆ. ಅದರ ಪರಿಣಾಮವೇ ಇಂತಹ ಅಪದ್ದಗಳು. ಹಳ್ಳಿಯ ಮೂಢರಿಂದ ಹಿಡಿದು ಪಟ್ಟಣದ ಉನ್ನತ ಶಿಕ್ಷಣ ಕಲಿತವರ ತನಕವೂ ಈ ಮನೋವ್ಯಾದಿ ಒಂದೇ ತರನಾಗಿದೆ. ಮತ್ತದು ನೂರಾರು ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಅಷ್ಟೇ ತೀವ್ರವಾಗಿ ಈ ತಂತ್ರಜ್ಞಾನದ ಪರಾಕಾಷ್ಟೆಯ ಕಾಲದಲ್ಲೂ ಇದೆ ಎಂದರೆ ಇವರು ಕಲಿತ ವಿದ್ಯೆ ಇಷ್ಟೆ. ಈ ಧರಿದ್ರ ವಿದ್ಯೆಯನ್ನೇ ಇವರು ಶಿಕ್ಷಣವೆಂದು ಭ್ರಮಿಸಿದ್ದಾರೆ.
“ಮನುಷ್ಯ ಜಾತಿ ತಾನೊಂದೇ ವಲಂ” ಎಂದ ಪಂಪಕವಿ. ಈ ದೇಶದಲ್ಲಿ ಜನಿಸಿದ ಬುದ್ದ,ಬಸವಾದಿ ಶರಣರು, ಮಹಾತ್ಮ ಕಬೀರ,ಪರಮಹಂಸ, ವಿವೇಕಾನಂದ, ಪೆರಿಯಾರ್, ನಾರಾಯಣಗುರು ಎಲ್ಲರೂ ಹೇಳಿದ್ದು ಮಾನವರೆಲ್ಲಾ ಒಂದೇ ಎಂದೆ. ಅವರಿಡೀ ಹೋರಾಟ ಅಥವಾ ಚಳವಳಿ ನಡೆದುದೇ ಈ ಅಸಮತೆ ಎಂಬ ಮನುರೋಗದ ವಿರುದ್ದ. ದುರಂತವೆಂದರೆ ದಾರ್ಶನಿಕರ ಈ ಮಾತುಗಳು ಕೇವಲ ಓದಿ ಅಂಕಗಳಿಸಲು ಮಾತ್ರವೇ ಎಂದುಕೊಂಡು ತಮ್ಮ ಶ್ರೇಷ್ಟತೆಯ ವ್ಯಸನವನ್ನು ತಮ್ಮ ಮಕ್ಕಳಿಗೆ ಕಲಿಸುವುದನ್ನೇ ಸಂಪ್ರದಾಯ, ಧರ್ಮ ಮತ್ತು ಸಂಸ್ಕಾರವೆಂದುಕೊಂಡಿರುವ ಇಂತಹ ದುಷ್ಟ ಮನುರೋಗಿಗಳಿಂದಾಗಿಯೇ ಈ ದೇಶದಲ್ಲಿ ಜಾತಿಯತೆ, ಜಾತಿಯಾಧಾರಿತ ಅಸಮಾನತೆ ಈ ಕ್ಷಣಕ್ಕೂ ಅಷ್ಟೇ ಪ್ರಭಲವಾಗಿ ಉಳಿದುಕೊಂಡು ಬಂದಿದೆ.
ಅಷ್ಟಿಲ್ಲದಿದ್ದರೆ ಈ ತಿರುಬೋಕಿ ನನ್ಮಕ್ಕಳು ವಿದ್ಯಾರ್ಥಿಗಳಾಗಿರಲಿ, ಉದ್ಯೋಗದಲ್ಲಿರಲಿ, ಪುಡಾರಿಗಳಾಗಿರಲಿ, ಸನ್ಯಾಸಿಗಳಾಗಿರಲಿ ಅವರು ಯಾವುದೇ ಸ್ಥಾನಮಾನದಲ್ಲಿರಲಿ ಹಿಂದೆಮುಂದೆ ಯೋಚಿಸದೆ, ಪರಿಜ್ಞಾನ ಇಲ್ಲದೆ ಇಂತಹ ಮಾತುಗಳಾಡುತ್ತಿದ್ದರೆ? ಅಷ್ಟಿಲ್ಲದೆ ಇದನ್ನು ನೋಡುವರು, ಕೇಳುವವರು ಗಹಗಹಿಸಿ ನಗುತ್ತಿದ್ದರೆ? ಇದೇ ಇವರ ಸಂಸ್ಕಾರ. ಈ ಸಂಸ್ಕಾರವನ್ನು ಇವರ ಮಠಾಧೀಶರು, ಇವರ ಹಿರಿಯರು, ಇವರಿಗಿರುವ ಅಧಿಕಾರದ ಎಲ್ಲವೂ ಇನ್ನಷ್ಟು ಉದ್ದೀಪಿಸುತ್ತವೆಯೇ ಹೊರತು ಅದು ತಪ್ಪೆಂದು ಹತ್ತಿಕ್ಕುವುದಿಲ್ಲ!
ಇಂತಹ ರೋಗಗ್ರಸ್ಥರಿಗಾಗಿಯೇ ಬಾಬಾಸಾಹೇಬರು “ಜಾತಿವಿನಾಶ” ಕೃತಿ ಬರೆದು ಮುಖಕ್ಕಿಡಿದು ನೀವು ನಿಜಕ್ಕೂ ಮನುಷ್ಯಕುಲದವರಾಗಿದ್ದರೆ ಇದನ್ನು ಅನುಸರಿಸಿ ಎಂದು ಸವಾಲು ಎಸೆದುದು. ಈ ಕ್ಷಣಕ್ಕೂ ಈ ಸವಾಲನ್ನು ಶ್ರೇಷ್ಟತೆಯ ವ್ಯಸನದ ಯಾವೊಬ್ಬನೂ ಸ್ವೀಕರಿಸಿಲ್ಲ. ಯಾಕೆಂದರೆ ಇವರ ಈ ಮನೋರೋಗವು ಇವರನ್ನು ಮಂಕುಮಾಡಿದೆ. ಇದರಲ್ಲಿ ಅವರು ಆನಂದಪಡುತ್ತಿದ್ದಾರೆ. ಈ ಮನುರೋಗ ಶಿಕ್ಷಣದಿಂದ ನಾಶವಾಗಬಹುದು ಎಂದುಕೊಂಡೆವು. ಆದರೆ ಅವರ ಶಿಕ್ಷಣ ಕ್ರಮವೂ ಈ ಮನೋರೋಗವನ್ನೇ ಶ್ರೇಷ್ಟ ಎಂದು ಬೋಧಿಸುತ್ತಿದೆ! ಇದೇ ಅಪಾಯಕಾರಿ. ಈ ಶಿಕ್ಷಣವೇ ಇಂತಹ ತಿರುಬೋಕಿ ವಿದ್ಯಾರ್ಥಿಗಳನ್ನು ಸೃಷ್ಟಿಸಿದೆ. ಇದನ್ನು ಬದಲಿಸದ ಹೊರತು ಇವರನ್ನು ಹದಕ್ಕೆ ತರಲಾಗುವುದಿಲ್ಲ.
ಇದೇ ಕಾರಣಕ್ಕೆ ನಾವು ಅಧಿಕಾರದ ದಂಡ ಹಿಡಿಯಬೇಕಿರೋದು ಎಂಬುದನ್ನು ನಾವು ನಮ್ಮ ಮಕ್ಕಳಿಗೆ ಕಲಿಸಬೇಕು. ಈ ತಿರುಬೋಕಿಗಳ ಶಿಕ್ಷಣ ಕ್ರಮ ಕೇವಲ ಅಕ್ಷರಸ್ಥರಾಗುವುದಕ್ಕೆ ಮಾತ್ರ ಬಳಸಿ ಇದನ್ನು ಜ್ಞಾನಾರ್ಜನೆ ಅಥವಾ ಸಂಸ್ಕಾರದ ಹಾದಿ ಎಂದು ಪರಿಗಣಿಸಬೇಡಿ ಎಂದು ಹೊಸತಲೆಮಾರಿನ ನಮ್ಮ ಮಕ್ಕಳಿಗೆ ಹೇಳದೇ ಹೋದರೆ ನಮ್ಮ ಮಕ್ಕಳೂ ಇದೇ ಮನುರೋಗಕ್ಕೆ ಗುರಿಯಾಗುತ್ತಾರೆ. ನಮಗಿರುವ ಬಹುದೊಡ್ಡ ಸವಾಲು ಎಂದರೆ ನಮ್ಮ ಜನರಿಗೆ ಮನುಷ್ಯತ್ವದ ಶಿಕ್ಷಣ ಕೊಡುವುದು ಮತ್ತು ಶ್ರೇಷ್ಟ ಕನಿಷ್ಟಗಳ ಅನಿಷ್ಟ ಮನಸ್ಥಿತಿಯನ್ನು ಹೊಡೆದುಹಾಕುವುದೇ ಆಗಿದೆ. ಇದೇ ಬಾಬಾಸಾಹೇಬರು ಹೇಳಿದ ಜಾಗೃತಿಯಾಗಿದೆ ಮತ್ತು ಈ ಮೂಲಕವೇ ನಾವು ಸಂಘಟಿತರಾಗಬೇಕಿದೆ ಮತ್ತು ಅಧಿಕಾರ ಹಿಡಿಯಬೇಕಿದೆ. ಇದೇ ಈ ಮನುರೋಗ ಪೀಡಿತ ಜನಸಮುದಾಯಕ್ಕೆ ನಾವು ಕೊಡುವ ಚಿಕಿತ್ಸೆಯಾಗಬೇಕಿದೆ.
ಹೀಗೆ ಮಾಡದೆ ನಾವು ಇಂತಹ ಮನೋರೋಗಿಗಳ ಪ್ರತಿಯೊಂದು ಘಟನೆಗಳಿಗೂ ಪ್ರತಿಭಟನೆ, ಮೆರವಣಿಗೆ, ದೂರುಗಳನ್ನು ಕೊಡುತ್ತಾ ಬುದ್ದಿಕಲಿಸಲು ಸಾಧ್ಯವಾಗದು. ಏಕೆಂದರೆ ಎಲ್ಲಾ ದೂರುಗಳನ್ನೂ ನಾವು ಶೋಷಕರ ಕೈಗೇ ಕೊಡುತ್ತಿದ್ದೇವೆ! ಅವರ ಕೈಯಲ್ಲಿರುವ ಅಧಿಕಾರದಿಂದ ಅವರದೇ ಜನರನ್ನು ಅವರು ಶಿಕ್ಷಿಸುತ್ತಾರೆ ಎಂದು ನಂಬಲಾಗುವುದೇ? ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಮಾಧ್ಯಮಾಂಗ, ಮಠಾಂಗ ಎಲ್ಲದರಲ್ಲಿಯೂ ಈ ಶ್ರೇಷ್ಟತೆಯ ಮನೋರೋಗದವರೇ ಬಹಳವಿದ್ದಾರೆ! ಹೀಗಿರುವುದರಿಂದಲೇ ಕಾನೂನುಗಳೂ ದುರ್ಬಲವಾಗಿವೆ.
ಈ ಕಾನೂನು ಜಾರಿಯಾದ ಕಾಲದಿಂದಲೂ ಇಂತಹ ಮನುರೋಗಿಗಳ ಮೇಲೆ ಯಾವುದೇ ಕ್ರಮವು ಜರುಗಿಲ್ಲ. ಜರುಗಿದ್ದರೂ ಇವರಿಗೆ ಬುದ್ದಿ ಬಂದಿಲ್ಲ. ಯಾಕೆಂದರೆ ಅವರ್ಯಾರಿಗೂ ಅದು ತಪ್ಪು, ಅದು ಅಪರಾಧ, ಅದು ಮಾನವ ವಿರೋಧಿ ಕೃತ್ಯ ಎಂದು ಅನಿಸಿಯೇ ಇಲ್ಲ. ಅನಿಸುತ್ತಲೂ ಇಲ್ಲ. ಇವರಿಗೆ ನಾವೇ ಸರಿಯಾದ ಮನುಷ್ಯತ್ವದ ಪಾಠ ಕಲಿಸಬೇಕಿದೆ.
ಕಡೆಯದಾಗಿ, ಈ ಸುದ್ದಿಯನ್ನು ಬಹುಶಃ ದಕ್ಷಿಣ ಭಾರತದಲ್ಲಿ ಮೊದಲು ಬ್ರೇಕ್ ಮಾಡಿದ ಹೆಮ್ಮೆ ನಮ್ಮ ʼಬಿಗ್ ಕನ್ನಡʼ. ಬಹುತೇಕ ಮೇನ್ ಸ್ಟ್ರೀಮ್ ಮಿಡೀಯಾಗಳು ಅಂಬೇಡ್ಕರ್ ಅವರ ವಿಚಾರಗಳು ಮುಖ್ಯವಲ್ಲವೆಂಬಂತೆ ವರ್ತಿಸುತ್ತಿರುವಾಗ, ಕೆಲವೊಂದಿಷ್ಟು ಪ್ಯಾರಲಲ್ ಮಿಡೀಯಾಗಳು ಹೀಗೆ ಸತ್ಯವನ್ನು ಬಗೆದು ತೋರಿಸುವುದು ಆಶಾದಾಯ ಬೆಳವಣಿಗೆ.